ವಿದ್ಯಾಕಾಶಿ ಧಾರವಾಡಕ್ಕೆ ಅನೇಕ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಅವರಿಗೆ ಸರ್ಕಾರ ಉಚಿತ ಹಾಸ್ಟೆಲ್ ವ್ಯವಸ್ಥೆಯನ್ನೂ ಮಾಡುತ್ತಿದೆ. ಆದರೆ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಹಾಸ್ಟೆಲ್ ಈಗ ಮಳೆಯಿಂದ ಸೋರುತ್ತಿದೆ. ಅಲ್ಲದೆ ಅಲ್ಲಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್ ಕೂಡ ಆಗುತ್ತಿದ್ದು, ವಿದ್ಯಾರ್ಥಿಗಳು ಜೀವ ಭಯದಿಂದ ತಂಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಿದ್ಯಾಕಾಶಿ ಧಾರವಾಡ ಎಂದೊಡನೆ ಇಲ್ಲಿರುವ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ಕಣ್ಣೆದುರು ಬರುತ್ತವೆ. ಈ ವಿದ್ಯಾಕಾಶಿಗೆ ರಾಜ್ಯಾದ್ಯಂತದ ವಿದ್ಯಾರ್ಥಿಗಳು ಹೆಚ್ಚಿನ ಅಭ್ಯಾಸಕ್ಕಾಗಿ ಬರುತ್ತಾರೆ. ಹೀಗಾಗಿ ಪ್ರತಿವರ್ಷ ಇಲ್ಲಿ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಮಸ್ಯೆ ಎದುರಾಗುತ್ತದೆ. ಇದಕ್ಕಾಗಿಯೇ ಸರ್ಕಾರ ಇಲ್ಲಿ ಬರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಹಾಸ್ಟೆಲ್ ವ್ಯವಸ್ಥೆ ಮಾಡುತ್ತ ಬಂದಿದೆ. ಅದೇ ರೀತಿ ಧಾರವಾಡ ಹೊರವಲಯದ ತಪೋವನ ನಗರ ಬಳಿ ಮೆಟ್ರಿಕ್ ನಂತರದ ನೂತನ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ. ಸುಮಾರು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಿಸಲಾಗಿದ್ದು, ಒಂದೇ ಕೇವಲ ಸೋರುವುದಷ್ಟೇ ಅಲ್ಲ; ಅಲ್ಲಲ್ಲಿ ಕಟ್ಟಡದ ಗೋಡೆಗಳು ತೇವಗೊಂಡ ಪರಿಣಾಮ ಕರೆಂಟ್ ಶಾಕ್ ಹೊಡೆಯುತ್ತಿದೆ.
ಸುಮಾರು 3.5 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾದ ಈ ಹಾಸ್ಟೆಲ್ ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಿ ಇನ್ನೂ ಎರಡು ತಿಂಗಳು ಕೂಡ ಕಳೆದಿಲ್ಲ, ಇಲ್ಲಿ ಸುಮಾರು 13 ಕೊಠಡಿಗಳವಿದ್ಯಾರ್ಥಿ ನಿಲಯದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಕಳೆದ ತಿಂಗಳು ಇಲ್ಲಿ ಪ್ರವೇಶ ಪಡೆದಿದ್ದಾರೆ. ಆದರೆ ಒಂದೇ ಮಳೆಗೆ ಹಾಸ್ಟೆಲ್‌ನ ಗೋಡೆಗಳು ಸಂಪೂರ್ಣ ತೇವಗೊಂಡಿದೆ. ವಿದ್ಯುತ್ ಶಾಕ್ ಹೊಡೆಯುತ್ತಿದ್ದು, ವಿದ್ಯಾರ್ಥಿಗಳು ಗೋಡೆಗಳಿಂದ ದೂರದಲ್ಲಿ ತಮ್ಮ ಕಾಟ್‌ಗಳನ್ನು ಇಟ್ಟು ಮಲಗುವಂತಾಗಿದೆ.
ಇಲ್ಲಿ ಸುಮಾರು 230 ವಿದ್ಯಾರ್ಥಿಗಳಿಗೆ ವಸತಿ ಅವಕಾಶ ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಹಾಸ್ಟೆಲ್‌ನ್ನು ಹಸ್ತಾಂತರ ಮಾಡಿಕೊಳ್ಳುವ ಮುನ್ನ ಕಾಮಗಾರಿಯ ಬಗ್ಗೆ ಪರಿಶೀಲನೆ ಮಾಡಬೇಕಿತ್ತು. ಆದರೆ ಗುತ್ತಿಗೆದಾರರು ಮಾಡಿದ ಕೆಲಸವೇ ಸರಿ ಎಂದು ಹಸ್ತಾಂತರ ಮಾಡಿಕೊಂಡು ಈಗ ಮೌನವಾಗಿದ್ದು ವಿದ್ಯಾರ್ಥಿಗಳಿಗೆ ವಸತಿ ನೀಡಿದ್ದಾರೆ. ವಾರ್ಡನ್‌ಗೆ ವಿದ್ಯುತ್ ಶಾಕ್ ಬಗ್ಗೆ ಹೇಳಿದರೆ ತನಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದು, ವಿದ್ಯಾರ್ಥಿಗಳು ಜೀವಭಯದಲ್ಲಿ ಇಲ್ಲಿ ವಾಸಿಸುತ್ತಿದ್ದಾರೆ.
ಸದ್ಯ ಇದಕ್ಕೆ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವರೇ ಉತ್ತರ ಕೊಡಬೇಕಾಗಿದೆ. ಒಮ್ಮೆ ಇಂತಹ ಕಾಮಗಾರಿ ಮಾಡಿದವರ ಮೇಲೆ ಕ್ರಮ ಕೈಗೊಂಡರೆ ಮಾತ್ರ ಉಳಿದ ಕಾಮಗಾರಿಗಳು ಸರಿಯಾಗಿ ನಡೆಯುತ್ತವೆ. ಈ ಬಗ್ಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.




