ಬಗರ್ ಹುಕುಂ ರೈತರಿಗೆ ಸಾಗುವಳಿ ಚೀಟಿ ಕಲ್ಪಿಸುವಂತೆ ಶಾಸಕರ ಮನೆಗೆ ಚಲೋ ಹಮ್ಮಿಕೊಂಡಿದ್ದೇವು. ನಮ್ಮ ಹೋರಾಟಕ್ಕೆ ಮಣಿದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ರೈತರಿಗೆ ಲಿಖಿತ ಭರವಸೆ ನೀಡಿ, ಜೂನ್ 6ಕ್ಕೆ ಸಭೆ ಕರೆದಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಮುಖಂಡರು ಪೀರು ರಾಠೋಡ್ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘ ವತಿಯಿಂದ ಬಗರ್ ಹುಕುಂ ಸಾಗುವಳಿದಾರರಿಗೆ ಚೀಟಿ ಕಲ್ಪಿಸುವಂತೆ ರೈತರು ಸತ್ಯಾಗ್ರಹ ಧರಣಿ ನಡೆಸಲಾಯಿತು, ಪ್ರತಿಭಟನೆಯಲ್ಲಿ ಪೀರು ರಾಠೋಡ್ ಮಾತನಾಡಿ, “ಈ ಸಭೆಗೆ ರೈತರು ಹಾಗೂ ರೈತ ಮುಖಂಡರನ್ನು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಬಗರ್ ಹುಕುಂ ಸಾಗುವಳಿದಾರರ ಸಾಗುವಳಿ ಚೀಟಿ ಕಲ್ಪಿಸಲು, ಅಕ್ರಮ ಸಕ್ರಮ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ರೈತರ ಫಾರ್ಮ್ ನಂಬರ್ 50,53, 57 ರಲ್ಲಿ ಇರುವ ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡುವ ಬಗ್ಗೆ ಚರ್ಚಿಸಿ ಜಾರಿ ಮಾಡಲು ರೈತರು ಹಾಗೂ ಜಿಲ್ಲಾಧಿಕಾರಿಗಳು ಒಳಗೊಂಡ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಮಾನ್ಯ ಶಾಸಕರು ಸಭೆಯಲ್ಲಿ ಹಾಜರು ಇರುವರೆಂದು ಮಾಹಿತಿ ನೀಡಿದ್ದಾರೆ” ಎಂದು ತಿಳಿಸಿದರು.
“ಗಜೇಂದ್ರಗಡ ತಾಲೂಕಿನಲ್ಲಿ ನೂರು ವರ್ಷಗಳಿಂದ ಬಗರ್ ಹುಕುಂ ಸಾಗುವಳಿದಾರ ರೈತರು ಭೂಮಿ ಉಳುಮೆ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ ಸರಿಯಾದ ದಾಖಲಾತಿಗಳನ್ನು ಒದಗಿಸುತ್ತಿಲ್ಲ, 2017 ರಲ್ಲಿ ಭೂ ಮಾಪನ ಇಲಾಖೆಗೆ ಆದೇಶ ಮಾಡಲಾಗಿದೆ. ಸರ್ವೆ ಮಾಡಿ ಸರಿಯಾದ ದಾಖಲಾತಿಗಳನ್ನು ಪರಿಶೀಲಿಸಿ ರೈತರಿಗೆ ಹಕ್ಕು ಪತ್ರ ಮತ್ತು ಎಲ್ಲಾ ಭೂ ಸಂಬಂಧಿತ ದಾಖಲಾತಿಗಳನ್ನು ಸರಿಪಡಿಸಿ ಕೊಡಲು ಸರ್ಕಾರ ಹಪೊರಡಿಸಿದ್ದ ಆದೇಶವನು ಗಾಳಿಗೆ ತೂರಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಈ ಹಿಂದೆ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಸಾಕಷ್ಟು ಬಾರಿ ಅನಿರ್ಧಿಷ್ಟಾವಧಿ ಹೋರಾಟ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ, ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳು ಹುಸಿ ಭರವಸೆಗಳನ್ನು ನೀಡಿ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಗಾಯದ ಮೇಲೆ ಬರಿ ಹಾಕಿದಂತಾಗಿದೆ” ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷರು ರೂಪೇಶ್ ಮಾಳೋತ್ತರ, ಕಾರ್ಯದರ್ಶಿ ಎಂ ಎಸ್ ಹಡಪದ, ಮುಖಂಡರು ಬಾಲು ರಾಠೋಡ, ಚನ್ನಪ್ಪ ಗುಗಳೋತ್ತರ, ಎಸ್ ಎಫ್ ಐ ನ ತಾಲೂಕು ಅಧ್ಯಕ್ಷರ ಅನಿಲ ಆರ್, ಮೆಹಬೂಬ್ ಹವಾಲ್ದಾರ್, ವೀರೇಶ ಮಾಳೋತ್ತರ, ಶಂಕ್ರವ್ವ ಮಾಳೋತ್ತರ, ದೇವಕ್ಕ ಗೂಗಲೋತ್ತರ, ಶೀವವ್ವ, ಪೀರವ್ವ ರಾಠೋಡ, ಸಂಕ್ರವ್ವ , ವೀರೇಶ ರಾಠೋಡ, ದೀಪಲೇಪ್ಪ, ಗೋವಿಂದಪ್ಪ, ಮಂಜುನಾಥ್, ಕೃಷ್ಣಪ್ಪ ರಾಠೋಡ, ಮಾರುತಿ, ಮಂಜುನಾಥ್, ಹನಮಂತಪ್ಪ, ಶಿವಪ್ಪ ರಾಠೋಡ ಮುಂತಾದವರು ಇದ್ದರು.




