ನಿನ್ನೆ ಸಂಜೆ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹಲವು ಭಾಗಗಳು ಜಲಾವೃತಗೊಂಡು ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬಿರುಗಾಳಿ ಸಹಿತ ಸುರಿದ ಈ ಭಾರೀ ಮಳೆಗೆ ತಗ್ಗು ಪ್ರದೇಶಗಳು, ಅಂಡರ್ಪಾಸ್ಗಳು ನದಿಗಳಂತಾಗಿದ್ದು, ವಾಹನ ಸವಾರರು ಮತ್ತು ನಾಗರಿಕರು ಪರದಾಡುವಂತಾಗಿದೆ.
ಶ್ರೀರಾಮಪುರ, ದಯಾನಂದನಗರ, ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಶಿವಾಜಿನಗರ, ರೆಸಿಡೆನ್ಸಿ ರಸ್ತೆ, ಕಮಿಷರಿಯಟ್ ರಸ್ತೆ ಮತ್ತು ಎಚ್.ಬಿ.ಆರ್ ಲೇಔಟ್ ಸೇರಿದಂತೆ ನಗರದ ಪ್ರಮುಖ ಮತ್ತು ಒಳ ರಸ್ತೆಗಳಲ್ಲಿ ಮಳೆನೀರು ಮೊಣಕಾಲಿನುದ್ದಕ್ಕೆ ನಿಂತು ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು. ವಿಜಯನಗರ ಕ್ಲಬ್ನ ಕಾಂಪೌಂಡ್ ಗೋಡೆ ಕುಸಿದು ಅದರ ಕೆಳಗೆ ಸಿಲುಕಿ ಆಟೋ ಚಾಲಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನು ಓದಿದ್ದೀರಾ? Breaking News- ಬೆಂಗಳೂರು | ಭಾರೀ ಮಳೆ; ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಮೂವರು ಮಕ್ಕಳು ಸೇರಿ 8 ಮಂದಿ ಸಾವು
ಇನ್ನು ಮುಂಜಾಗ್ರತಾ ಕ್ರಮವಾಗಿ ಮತ್ತು ನೀರಿನ ಅಬ್ಬರ ಹೆಚ್ಚಾಗಿದ್ದರಿಂದ ನಗರದ ಪ್ರಮುಖ ಅಂಡರ್ಪಾಸ್ಗಳಲ್ಲಿ ವಾಹನ ಸಂಚಾರವನ್ನು ಸ್ವಲ್ಪ ಸಮಯ ನಿರ್ಬಂಧಿಸಲಾಗಿತ್ತು. ಸಾಯಿ ಲೇಔಟ್ ಹಾಗೂ ಹಲವು ತಗ್ಗು ಪ್ರದೇಶಗಳ ಸ್ಲಮ್ಗಳ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು.
ಬಿರುಗಾಳಿಯ ಹೊಡೆತಕ್ಕೆ ನಗರದ ಹಲವು ಕಡೆಗಳಲ್ಲಿ ಮರಗಳು ಮತ್ತು ಮರದ ಕೊಂಬೆಗಳು ಮುರಿದು ರಸ್ತೆ ಹಾಗೂ ವಾಹನಗಳ ಮೇಲೆ ಬಿದ್ದಿವೆ. ಇನ್ನು ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ಫಾರ್ಮರ್ಗಳಿಗೆ ಹಾನಿಯಾಗಿದ್ದರಿಂದ ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.




