ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಸಾಕ್ಷರತೆ ಹಾಗೂ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸುವುದರ ಜೊತೆಗೆ, ತಂತ್ರಜ್ಞಾನವನ್ನು ಶಿಕ್ಷಣ, ಸಂವಹನ ಮತ್ತು ದೈನಂದಿನ ಜೀವನದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮನೋಭಾವ ರೂಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್ ಬುರಡಿ ಹೇಳಿದರು.
ಮಾಹಿತಿ ತಂತ್ರಜ್ಞಾನ, ವಿಜ್ಞಾನ ತಂತ್ರಜ್ಞಾನ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗದಗ ಬೆಟಗೇರಿಯ ಸೇಂಟ್ ಜಾನ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಜರುಗಿದ ಜಿಲ್ಲಾ ಮಟ್ಟದ ಟಿಸಿಎಸ್ ಗ್ರಾಮೀಣ ಐಟಿ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಗ್ರಾಮೀಣ ವಿದ್ಯಾರ್ಥಿಗಳಿಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿಭೆ ಪ್ರದರ್ಶಿಸಲು ಸೂಕ್ತ ಅವಕಾಶಗಳು ದೊರೆಯಬೇಕು. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವುದರೊಂದಿಗೆ ತಾರ್ಕಿಕ ಚಿಂತನೆ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ, ಸೃಜನಶೀಲತೆ ಮತ್ತು ಆತ್ಮವಿಶ್ವಾಸವನ್ನು ವೃದ್ಧಿಸುತ್ತವೆ” ಎಂದರು.
“ವಿದ್ಯಾರ್ಥಿಗಳು ಕಂಪ್ಯೂಟರ್ ಮತ್ತು ಇಂಟರ್ನೆಟ್‌ನ ಮೂಲಭೂತ ಜ್ಞಾನ ಪಡೆದುಕೊಳ್ಳುವುದರ ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು. ಡಿಜಿಟಲ್ ಜ್ಞಾನವು ಪರೀಕ್ಷೆ ಅಥವಾ ಸ್ಪರ್ಧೆಗಳಿಗೆ ಮಾತ್ರ ಸೀಮಿತವಾಗದೆ, ಭವಿಷ್ಯದ ಶಿಕ್ಷಣ, ಉದ್ಯೋಗ ಹಾಗೂ ಜೀವನದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲು ನೆರವಾಗಬೇಕು. ಗ್ರಾಮೀಣ ಮಕ್ಕಳ ಪ್ರತಿಭೆಗೆ ತಂತ್ರಜ್ಞಾನದ ರೆಕ್ಕೆಗಳನ್ನು ನೀಡುವಲ್ಲಿ ಗ್ರಾಮೀಣ ಐಟಿ ಕ್ವಿಜ್ ಮಹತ್ವದ ವೇದಿಕೆಯಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ನೋಡಲ್ ಅಧಿಕಾರಿ ಶ್ರೀಧರ ಬಡಿಗೇರ, ಗದಗ ಕ್ಷೇತ್ರ ಸಮನ್ವಯಾಧಿಕಾರಿ ಎಸ್. ಪಿ. ಪ್ರಭಯ್ಯನಮಠ, ವಿಷಯ ಪರೀಕ್ಷಕರಾದ ಸರೋಜಿನಿ ಬಂಡಿವಡ್ಡರ, ಗೀತಾ ಕುಲಕರ್ಣಿ, ಆರ್. ಜಿ. ಕವಲಗೇರಿ, ಎಚ್. ಬಿ. ಬೀರಣ್ಣವರ, ಸುಧಾ ಮನ್ನಾಪುರ, ಮುಖ್ಯೋಪಾಧ್ಯಾಯಿನಿ ಮೇರಿ, ಸಿಆರ್‌ಪಿಗಳಾದ ತನು ಹೂಗಾರ, ದೀಪಾ ಬೇವಿನಮರದ, ಹೆಗ್ಗಣ್ಣವರ, ಎಸ್. ಸಿ. ಹಿರೇಮಠ, ಆರ್. ಎಸ್. ಕಲಗುಡಿ ಹಾಗೂ ವೈ. ಎಸ್. ದೊಡ್ಡವಾಡ ಉಪಸ್ಥಿತರಿದ್ದರು. ಜಿಲ್ಲೆಯ ನೂರಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಿಕ್ಷಕ ಎಂ. ಎಚ್. ಸವದತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಐಟಿ ಕ್ವಿಜ್‌ನ ಉದ್ದೇಶ, ಮಹತ್ವ ಹಾಗೂ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಜ್ಞಾನ ಬೆಳೆಸುವಲ್ಲಿ ಇಂತಹ ಸ್ಪರ್ಧೆಗಳ ಪಾತ್ರವನ್ನು ವಿವರಿಸಿದರು. ವಿಜ್ಞಾನ ಶಿಕ್ಷಕ ಏಕಾಂತ ಅವರು ಐಟಿ ಕ್ವಿಜ್ ಸ್ಪರ್ಧೆಯ ರೂಪುರೇಷೆ, ನಿಯಮಗಳು ಮತ್ತು ಸ್ಪರ್ಧೆಯ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಸೇಂಟ್ ಜಾನ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಶ್ರೀಧರ ಬಡಿಗೇರ ಸ್ವಾಗತಿಸಿದರು. ಎಂ. ಎಚ್. ಸವದತ್ತಿ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.
ಗ್ರಾಮೀಣ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಜ್ಞಾನ ವಿಸ್ತರಿಸುವುದು, ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದು ಹಾಗೂ ಡಿಜಿಟಲ್ ಯುಗದ ಸವಾಲುಗಳನ್ನು ಎದುರಿಸಲು ಅವರನ್ನು ಸಜ್ಜುಗೊಳಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಗ್ರಾಮೀಣ ಐಟಿ ಕ್ವಿಜ್ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ವಿವಿಧ ಶಾಲೆಗಳ ಮಾರ್ಗದರ್ಶಕ ಶಿಕ್ಷಕರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.





