ಟಾಟಾ ಸಮೂಹದಲ್ಲಿ ನಡೆಯುತ್ತಿರುವ ಆಂತರಿಕ ಬಿಕ್ಕಟ್ಟಿನ ಬೆನ್ನಲ್ಲೇ, ಉಪ್ಪಿನಿಂದ ಹಿಡಿದು ಸಾಫ್ಟ್‌ವೇರ್‌ವರೆಗೆ ವಿಸ್ತರಿಸಿರುವ ಈ ಬೃಹತ್ ಸಂಸ್ಥೆಯನ್ನು ‘ಕ್ರಿಮಿನಲ್’ ರೀತಿಯಲ್ಲಿ ನಾಶಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ಟಾಟಾ ಸಂಸ್ಥೆಯನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ. ಆದರೆ, ಇದನ್ನು ಪ್ರಶ್ನಿಸುವ ಧೈರ್ಯವನ್ನು ಉದ್ಯಮ ವಲಯದ ನಾಯಕರು ತೋರುತ್ತಿಲ್ಲ. ಭಾರತದ ಉದ್ಯಮ ವಲಯವು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಆಟದ ವಸ್ತುವಲ್ಲ. ಉದ್ಯಮಿಗಳಿಗೆ ಧೈರ್ಯವಿಲ್ಲದಿರಬಹುದು, ಆದರೆ ನಮಗಿದೆ. ಈ ಅಪರಾಧಗಳಿಗೆ ನಾವು ನ್ಯಾಯ ಒದಗಿಸುತ್ತೇವೆ,” ಎಂದು ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಟಾಟಾ ಸನ್ಸ್‌ನ ನಾಯಕತ್ವದ ವಿಚಾರವಾಗಿ ಟಾಟಾ ಟ್ರಸ್ಟ್‌ಗಳ ಆಡಳಿತ ಮಂಡಳಿಯಲ್ಲಿ ಭಿನ್ನಾಭಿಪ್ರಾಯಗಳು ಸ್ಫೋಟಗೊಂಡಿರುವ ಹೊತ್ತಿನಲ್ಲೇ ರಾಹುಲ್ ಅವರ ಈ ಹೇಳಿಕೆ ಹೊರಬಿದ್ದಿದೆ. ದೇಶದ ಅತಿದೊಡ್ಡ ಉದ್ಯಮ ಸಮೂಹವಾಗಿರುವ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಅವರನ್ನು ಮರುನೇಮಕ ಮಾಡಿ ಸೆಪ್ಟೆಂಬರ್ 17ರಂದು ಅಂಗೀಕರಿಸಲಾದ ನಿರ್ಣಯವನ್ನು ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ಪ್ರಶ್ನಿಸಿದ್ದಾರೆ. ಅಲ್ಲದೆ, ಆರ್‌ಬಿಐ ನಿರ್ದೇಶನದ ಮೇರೆಗೆ ಟಾಟಾ ಸನ್ಸ್ ಅನ್ನು ಷೇರುಪೇಟೆಯಲ್ಲಿ (Stock Exchange) ಲಿಸ್ಟಿಂಗ್ ಮಾಡುವ ವಿಚಾರದಲ್ಲೂ ಆಡಳಿತ ಮಂಡಳಿಯಲ್ಲಿ ತೀವ್ರ ಭಿನ್ನಾಭಿಪ್ರಾಯಗಳಿವೆ ಎನ್ನಲಾಗಿದೆ.
ಈ ತಿಂಗಳ ಆರಂಭದಲ್ಲಿ, ಚುನಾವಣಾ ಆಯೋಗಕ್ಕಾಗಿ ಇಸಿಐನೆಟ್ (ECINet) ತಂತ್ರಾಂಶ ಅಭಿವೃದ್ಧಿಪಡಿಸುವಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಪಾತ್ರದ ಬಗ್ಗೆಯೂ ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದರು. ಹೊಸ ಮತದಾರರ ನೋಂದಣಿಗೆ ಬಳಸುವ ‘ಫಾರ್ಮ್ 6’ರಲ್ಲಿ ಅಕ್ರಮ ಬದಲಾವಣೆಗಳನ್ನು ಮಾಡಲು ಕಂಪನಿಗೆ ಆದೇಶಿಸಿದವರು ಯಾರು ಮತ್ತು ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿತ್ತೇ ಎಂದು ಅವರು ಪ್ರಶ್ನಿಸಿದ್ದರು. ಇಸಿಐನೆಟ್ ನಿರ್ವಹಣೆ ಬಗ್ಗೆ ಚುನಾವಣಾ ಆಯೋಗ ಪಾರದರ್ಶಕತೆ ಕಾಯ್ದುಕೊಂಡಿಲ್ಲ ಎಂದು ಆರೋಪಿಸಿದ್ದ ಕಾಂಗ್ರೆಸ್, ಟಾಟಾ ಸಮೂಹದ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಪ್ರಸ್ತುತ ಹೋರಾಟಕ್ಕೂ ಹಾಗೂ ಇದಕ್ಕೂ ಏನಾದರೂ ಸಂಬಂಧವಿದೆಯೇ ಎಂದು ಅನುಮಾನ ವ್ಯಕ್ತಪಡಿಸಿತ್ತು.
ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಬೆಂಬಲಿಸಿ ಕಾಂಗ್ರೆಸ್‌ನ ಹಲವು ಹಿರಿಯ ನಾಯಕರು ಧ್ವನಿಗೂಡಿಸಿದ್ದಾರೆ. ಟಾಟಾ ಸ್ವಾತಂತ್ರ್ಯ ಪೂರ್ವದಿಂದಲೂ ಕಟ್ಟಿಬೆಳೆಸಿದ ಬ್ರಾಂಡ್ ಆಗಿದ್ದು, ಇದರ ನಾಶವು ಬೇರೊಂದು ಕಾರ್ಪೊರೇಟ್ ಸಂಸ್ಥೆಯ ಸ್ವಾಧೀನಕ್ಕೆ ದಾರಿ ಮಾಡಿಕೊಡುವ ತಂತ್ರವೇ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರಶ್ನಿಸಿದ್ದಾರೆ. “ಯಾವ ಕೈಗಾರಿಕೆಯೂ ರಾಜಕೀಯ ಒತ್ತಡಕ್ಕೆ ಮಣಿಯಬಾರದು. ಇಂದಿನ ಮೌನ ನಾಳೆಯ ದೊಡ್ಡ ನಿಯಂತ್ರಣಕ್ಕೆ ಆಹ್ವಾನ ನೀಡುತ್ತದೆ” ಎಂದು ಹಿರಿಯ ನಾಯಕಿ ಕುಮಾರಿ ಸೆಲ್ಜಾ ಹೇಳಿದ್ದಾರೆ. ಕೆಲವು ಬಂಡವಾಳಶಾಹಿಗಳ ಪರವಾಗಿ ನೀತಿಗಳನ್ನು ರೂಪಿಸಿ ಏಕಸ್ವಾಮ್ಯ ಸೃಷ್ಟಿಸಲಾಗುತ್ತಿದ್ದು, ಇಡೀ ಉದ್ಯಮ ವಲಯ ಮೂಕಪ್ರೇಕ್ಷಕನಾಗಿದೆ ಎಂದು ಸುಪ್ರಿಯಾ ಶ್ರಿನೇಟ್ ಆರೋಪಿಸಿದ್ದಾರೆ.
ವಿವಿಧ ರಾಜ್ಯಗಳ ಕಾಂಗ್ರೆಸ್ ಘಟಕಗಳೂ ರಾಹುಲ್ ಗಾಂಧಿ ನಿಲುವಿಗೆ ಬೆಂಬಲ ವ್ಯಕ್ತಪಡಿಸಿವೆ. ಉದ್ಯಮಗಳು ರಾಷ್ಟ್ರಕ್ಕೆ ಸೇರಿದೆಯೇ ಹೊರತು ಅಧಿಕಾರದಲ್ಲಿರುವವರಿಗಲ್ಲ, ಅನ್ಯಾಯದ ವಿರುದ್ಧ ಮೌನ ವಹಿಸುವುದು ಅದನ್ನು ಪ್ರೋತ್ಸಾಹಿಸಿದಂತೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ನಾಯಕಿ ಆರಾಧನಾ ಮಿಶ್ರಾ ಹೇಳಿದ್ದಾರೆ. ಇನ್ನು, ಗೋವಾ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡಂಕರ್ ಪ್ರತಿಕ್ರಿಯಿಸಿ, ಪಾರಂಪರಿಕ ರಾಷ್ಟ್ರೀಯ ಸಂಸ್ಥೆಯನ್ನು ದುರ್ಬಲಗೊಳಿಸಿ ಏಕಸ್ವಾಮ್ಯ ವಿಸ್ತರಣೆಗೆ ಮುಂದಾಗುವುದು ಮತ್ತು ನ್ಯಾಯಸಮ್ಮತ ಮಾರುಕಟ್ಟೆ ಸ್ಪರ್ಧೆಯನ್ನು ನಾಶಪಡಿಸುವುದು ಭಾರತದ ಆರ್ಥಿಕ ಸಾರ್ವಭೌಮತ್ವಕ್ಕೆ ಕೊಡಲಿಯೇಟು ನೀಡಿದಂತೆ ಎಂದಿದ್ದಾರೆ.
ಭಾರತದ ಕೈಗಾರಿಕಾ ವಲಯವು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ವೈಯಕ್ತಿಕ ಜಹಗೀರಲ್ಲ ಎಂದು ಹಿಮಾಚಲ ಪ್ರದೇಶ ಕಾಂಗ್ರೆಸ್ ಕಿಡಿಕಾರಿದೆ. ಸತ್ಯದ ಪರ ನಿಲ್ಲುವ ಧೈರ್ಯ ನಮಗಿದೆ ಮತ್ತು ಈ ಅನ್ಯಾಯದ ವಿರುದ್ಧ ನಾವು ನಿರಂತರವಾಗಿ ಧ್ವನಿ ಎತ್ತುತ್ತೇವೆ ಎಂದು ಹೇಳಿದೆ. ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕವು, “ಅವರು ನಿಮ್ಮನ್ನು ಖರೀದಿಸುವವರೆಗೂ ನೀವು ಮೌನವಾಗಿರುತ್ತೀರಾ? ಭಾರತೀಯ ಉದ್ಯಮ ರಂಗವು ಮೋದಿ ಹಾಗೂ ಶಾ ಆಟದ ಬೊಂಬೆಯಲ್ಲ, ಈ ಅಪರಾಧದ ವಿರುದ್ಧ ನಾವು ನ್ಯಾಯ ಒದಗಿಸುತ್ತೇವೆ” ಎಂದು ಎಕ್ಸ್ ಖಾತೆಯಲ್ಲಿ ಬರೆಯುವ ಮೂಲಕ ರಾಹುಲ್ ಬೆಂಬಲಕ್ಕೆ ನಿಂತಿದೆ.





