ಕಳೆಗುಂದಿದ ದರಿಯಾ ದೌಲತ್: ಟಿಪ್ಪು ಅರಮನೆಯ ಮೂಲ ಸೌಂದರ್ಯ ಉಳಿಸುವ ಹೊಣೆ ಯಾರದ್ದು?

Date:

ನೂರಾರು ವರ್ಷಗಳ ಇತಿಹಾಸವನ್ನು ತನ್ನೊಳಗೆ ಹುದುಗಿಸಿಕೊಂಡಿರುವ ಐತಿಹಾಸಿಕ ಸ್ಮಾರಕವೊಂದು ಮೂಲ ಸೌಂದರ್ಯವನ್ನು ಕಳೆದುಕೊಂಡ ಬಳಿಕ ದುರಸ್ತಿಪಡಿಸುವುದಕ್ಕೂ, ಅದರ ಸೌಂದರ್ಯ ಮತ್ತು ಐತಿಹಾಸಿಕ ಮಹತ್ವಕ್ಕೆ ಧಕ್ಕೆಯಾಗದಂತೆ ನಿರಂತರವಾಗಿ ಸಂರಕ್ಷಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಈ ವ್ಯತ್ಯಾಸಕ್ಕೆ ಸಾಕ್ಷಿಯಾಗಿರುವಂತಿದೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸುಲ್ತಾನನ ಪ್ರಸಿದ್ಧ ಬೇಸಿಗೆ ಅರಮನೆ ದರಿಯಾ ದೌಲತ್ ಬಾಗ್.

- Advertisement -

ಅರಮನೆಯ ಗೋಡೆಗಳ ಮೇಲಿನ ವರ್ಣಚಿತ್ರಗಳು ಮಸುಕಾಗಿರುವುದು, ಮರದ ಕಂಬಗಳು ಮತ್ತು ವಿನ್ಯಾಸಗಳು ಹಿಂದಿನ ಹೊಳಪನ್ನು ಕಳೆದುಕೊಂಡಿರುವುದು, ಒಳಭಾಗದ ಕೆಲವು ಕಡೆ ಧೂಳು ಹಾಗೂ ಪಾರಿವಾಳಗಳ ಗೂಡುಗಳಿಂದ ಉಂಟಾದ ಕೊಳಕು ಕಾಣಿಸುವುದು ಪ್ರವಾಸಿಗರ ಗಮನ ಸೆಳೆಯುತ್ತಿದೆ. ಹೊರಭಾಗದಲ್ಲಿ ‘Work in Progress’ ಫಲಕವೂ ಕಂಡುಬರುತ್ತದೆ. ಆದರೆ, ಯಾವ ಕಾಮಗಾರಿ ನಡೆಯುತ್ತಿದೆ? ಅದರ ಉದ್ದೇಶವೇನು? ಎಷ್ಟು ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ? ಯಾವಾಗ ಪೂರ್ಣಗೊಳ್ಳಲಿದೆ? ಎಂಬ ಪ್ರಶ್ನೆಗಳಿಗೆ ಸ್ಥಳದಲ್ಲಿ ಸ್ಪಷ್ಟ ಮಾಹಿತಿ ದೊರೆಯದಿರುವುದು ಆತಂಕಕ್ಕೆ ಕಾರಣವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪ್ರಜಾಪ್ರಭುತ್ವದ ಕಗ್ಗೊಲೆ: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ನೂರಾರು ವರ್ಷಗಳ ಹಿಂದೆ ನಿರ್ಮಾಣಗೊಂಡ ಕಟ್ಟಡ ಕಾಲದ ಪರಿಣಾಮವಾಗಿ ಸವಕಳಿಗೆ ಒಳಗಾಗುವುದು ಸಹಜ. ಆದರೆ, ಹಾನಿಯ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸಿ, ವೈಜ್ಞಾನಿಕ ವಿಧಾನಗಳ ಮೂಲಕ ಮೂಲ ವಸ್ತು ಮತ್ತು ವಿನ್ಯಾಸವನ್ನು ಉಳಿಸುವುದು ಸಂರಕ್ಷಣಾ ಸಂಸ್ಥೆಗಳ ಜವಾಬ್ದಾರಿಯಲ್ಲವೇ? ಅರಮನೆಯ ಇಂದಿನ ಸ್ಥಿತಿ ಈ ಪ್ರಶ್ನೆಯನ್ನು ಮುಂದಿಡುತ್ತದೆ.

ಸೌಂದರ್ಯ ಕಳೆದುಹೋದ ಬಳಿಕ ದುರಸ್ತಿ ಮಾಡುವುದೇ ಪರಿಹಾರವೇ?

ದರಿಯಾ ದೌಲತ್ ಅರಮನೆ ಕೇವಲ ಒಂದು ಹಳೆಯ ಕಟ್ಟಡವಲ್ಲ. ಇದು ಕರ್ನಾಟಕದ ಇತಿಹಾಸ, ವಾಸ್ತುಶಿಲ್ಪ ಮತ್ತು ಕಲಾ ಪರಂಪರೆಯ ಮಹತ್ವದ ಭಾಗ. ಟಿಪ್ಪು ಸುಲ್ತಾನನ ಆಡಳಿತ, ಬ್ರಿಟಿಷರ ವಿರುದ್ಧದ ಸಂಘರ್ಷಗಳು ಮತ್ತು ಹದಿನೆಂಟನೇ ಶತಮಾನದ ಸಾಂಸ್ಕೃತಿಕ ಬದುಕಿನ ನೆನಪುಗಳನ್ನು ಹೊತ್ತಿರುವ ಈ ಅರಮನೆ ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಆದರೆ, ಇಂತಹ ಮಹತ್ವದ ಸ್ಮಾರಕದ ಸಂರಕ್ಷಣೆಯಲ್ಲಿ ಅಗತ್ಯವಾದ ಮುತುವರ್ಜಿ ವಹಿಸಲಾಗುತ್ತಿದೆಯೇ ಎಂಬುದು ಈಗಿನ ಪ್ರಶ್ನೆ. ಉದ್ಯಾನವನವನ್ನು ಸ್ವಚ್ಛವಾಗಿಡುವುದು, ಹಸಿರು ಪರಿಸರವನ್ನು ಕಾಪಾಡುವುದು ಮತ್ತು ಪ್ರವೇಶ ಮಾರ್ಗಗಳನ್ನು ನಿರ್ವಹಿಸುವುದು ಮುಖ್ಯವಾದರೂ, ಅರಮನೆಯ ಒಳಭಾಗದ ಕಲಾಕೃತಿಗಳು, ಮರದ ಕಂಬಗಳು, ಕೆತ್ತನೆಗಳು, ಮೇಲ್ಛಾವಣಿ ಹಾಗೂ ಐತಿಹಾಸಿಕ ವಸ್ತುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.

ತೇಗದ ಮರದ ಅರಮನೆ: ಅಪರೂಪದ ವಾಸ್ತುಶಿಲ್ಪ

ದರಿಯಾ ದೌಲತ್ ಬಾಗ್‌ನ ನಿರ್ಮಾಣ ಕಾರ್ಯವನ್ನು ಹೈದರ್ ಅಲಿ 1778ರಲ್ಲಿ ಆರಂಭಿಸಿ, ಪುತ್ರ ಟಿಪ್ಪು ಸುಲ್ತಾನ 1784ರಲ್ಲಿ ಪೂರ್ಣಗೊಳಿಸಿದರು ಎಂಬುದು ಸಾಮಾನ್ಯವಾಗಿ ಉಲ್ಲೇಖವಾಗುವ ಇತಿಹಾಸ. ಪರ್ಷಿಯನ್ ಮೂಲದ ‘ದರಿಯಾ ದೌಲತ್’ ಎಂಬ ಹೆಸರನ್ನು ‘ಸಮುದ್ರದ ಸಂಪತ್ತು’ ಎಂದು ಅರ್ಥೈಸಲಾಗುತ್ತದೆ.

ಅರಮನೆಯ ವಿಶಿಷ್ಟತೆಯೆಂದರೆ ತೇಗದ ಮರದ ಬಳಕೆ, ಎತ್ತರದ ಜಗತಿ, ಆಯತಾಕಾರದ ವಿನ್ಯಾಸ, ತೆರೆದ ಜಗುಲಿಗಳು ಹಾಗೂ ಮರದ ಕಂಬಗಳ ಕೆತ್ತನೆಗಳು. ಆ ಕಾಲದ ನಿರ್ಮಾಣ ಕೌಶಲ್ಯವನ್ನು ಪ್ರತಿಬಿಂಬಿಸುವ ಈ ಕಟ್ಟಡವನ್ನು ಸಂರಕ್ಷಿಸುವುದು ಸಾಮಾನ್ಯ ಕಟ್ಟಡವೊಂದನ್ನು ದುರಸ್ತಿಪಡಿಸಿದಂತಲ್ಲ.

ಮರದ ತೇವಾಂಶ, ಕೀಟಗಳ ಬಾಧೆ, ಹವಾಮಾನ ಬದಲಾವಣೆ, ನೀರಿನ ಸೋರಿಕೆ, ಧೂಳು ಮತ್ತು ನಿರಂತರ ಮಾನವ ಸಂಚಾರದಿಂದ ಉಂಟಾಗುವ ಸವಕಳಿಯನ್ನು ಗಮನದಲ್ಲಿಟ್ಟುಕೊಂಡು ನಿರ್ವಹಣೆ ಮಾಡಬೇಕು. ಮರದ ಹೊಳಪು ಕಡಿಮೆಯಾಗಿದೆ ಎಂಬ ಕಾರಣಕ್ಕೆ ಹೊಸ ಪಾಲಿಶ್ ಅಥವಾ ಬಣ್ಣ ಬಳಿಯುವುದೇ ಪರಿಹಾರವಲ್ಲ. ಮೂಲ ವಸ್ತುವಿನ ಸ್ಥಿತಿಯನ್ನು ಪರಿಶೀಲಿಸಿ, ಅದಕ್ಕೆ ಹೊಂದುವ ವೈಜ್ಞಾನಿಕ ಸಂರಕ್ಷಣಾ ವಿಧಾನಗಳನ್ನು ಅನುಸರಿಸುವುದು ಅಗತ್ಯ.

ಅರಮನೆಯ ಜೀವಾಳವಾದ ವರ್ಣಚಿತ್ರಗಳ ಸ್ಥಿತಿ ಏನು?

ದರಿಯಾ ದೌಲತ್ ಅರಮನೆಯ ಪ್ರಮುಖ ಆಕರ್ಷಣೆ ಅದರ ಗೋಡೆಗಳು ಮತ್ತು ಮೇಲ್ಛಾವಣಿಯ ಮೇಲಿರುವ ವರ್ಣಚಿತ್ರಗಳು. ರಾಜಮನೆತನದ ದೃಶ್ಯಗಳು, ಮೆರವಣಿಗೆಗಳು ಹಾಗೂ ಯುದ್ಧದ ಸನ್ನಿವೇಶಗಳನ್ನು ಬಿಂಬಿಸುವ ಚಿತ್ರಗಳು ಆ ಕಾಲದ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಪರಿಚಯಿಸುತ್ತವೆ. ಪೊಲ್ಲಿಲೂರು ಯುದ್ಧದಂತಹ ಸಂಘರ್ಷಗಳಿಗೆ ಸಂಬಂಧಿಸಿದ ಚಿತ್ರಗಳು ಅರಮನೆಯ ಐತಿಹಾಸಿಕ ಮಹತ್ವವನ್ನು ಹೆಚ್ಚಿಸಿವೆ. ಈ ಚಿತ್ರಗಳು ಕೇವಲ ಅಲಂಕಾರಗಳಲ್ಲ; ಒಂದು ಕಾಲಘಟ್ಟದ ದೃಶ್ಯ ದಾಖಲೆಗಳು. ಅವುಗಳ ಬಣ್ಣಗಳು ಮತ್ತು ವಿವರಗಳು ನಾಶವಾದರೆ, ಮೂಲ ಸ್ವರೂಪವನ್ನು ಯಥಾವತ್ತಾಗಿ ಮರುಪಡೆಯುವುದು ಕಷ್ಟ.

ಹಳೆಯ ಚಿತ್ರಕಲೆಗಳ ಸಂರಕ್ಷಣೆಗೆ ಬಣ್ಣದ ಪದರಗಳು ಉದುರುವುದನ್ನು ತಡೆಯುವುದು, ತೇವಾಂಶ ನಿಯಂತ್ರಿಸುವುದು, ಗೋಡೆಯ ಮೇಲ್ಮೈಯನ್ನು ಪರಿಶೀಲಿಸುವುದು ಮತ್ತು ಸೂಕ್ತ ವಿಧಾನದಲ್ಲಿ ಸ್ವಚ್ಛಗೊಳಿಸುವುದು ಮುಖ್ಯ. ಪರಿಣತರ ಪರಿಶೀಲನೆಯಿಲ್ಲದೆ ಹೊಸ ಬಣ್ಣ ಬಳಿಯುವುದು ಅಥವಾ ಸಾಮಾನ್ಯ ಸ್ವಚ್ಛತಾ ವಿಧಾನಗಳನ್ನು ಅನುಸರಿಸುವುದು ಹಾನಿಯನ್ನು ಹೆಚ್ಚಿಸಬಹುದು. ಹೀಗಾಗಿ, ಅರಮನೆಯ ಚಿತ್ರಕಲೆಗಳ ಹಾನಿಯ ಪ್ರಮಾಣವನ್ನು ತಜ್ಞರು ಮೌಲ್ಯಮಾಪನ ಮಾಡಿದ್ದಾರೆಯೇ? ಅವುಗಳನ್ನು ಉಳಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ? ತಕ್ಷಣದ ಸಂರಕ್ಷಣೆಯ ಅಗತ್ಯವಿರುವ ಭಾಗಗಳು ಯಾವುವು? ಎಂಬುದಕ್ಕೆ ಸಂಬಂಧಪಟ್ಟ ಇಲಾಖೆ ಉತ್ತರಿಸಬೇಕಿದೆ.

‘ಅರಮನೆ ನೋಡಲು ಜನ ಬರುತ್ತಾರೆ, ಆದರೆ ಹಿಂದಿನಂತಿಲ್ಲ’

ಸ್ಥಳೀಯರೊಬ್ಬರು ಈದಿನ.ಕಾಮ್‌ಗೆ ಮಾತನಾಡಿ, “ದರಿಯಾ ದೌಲತ್ ನೋಡಲು ಜನ ಬರುತ್ತಾರೆ. ಆದರೆ, ಮುಂಚಿನ ಹಾಗೆ ಇಲ್ಲ. ಆರ್ಕಿಯಾಲಜಿ ಡಿಪಾರ್ಟ್‌ಮೆಂಟ್‌ನವರು ಏನೋ ಕೆಲಸ ಮಾಡುತ್ತಿದ್ದೇವೆ ಅಂತ ಮಾಡುತ್ತಿದ್ದಾರೆ. ಅದೇನು ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುವುದಿಲ್ಲ. ನೀವೇ ಸ್ಥಳಕ್ಕೆ ಭೇಟಿ ನೀಡಿ ನೋಡಿ” ಎಂದು ತಿಳಿಸಿದರು. ಈ ಮಾಹಿತಿ ಹಿನ್ನೆಲೆಯಲ್ಲಿ ಅರಮನೆಗೆ ಭೇಟಿ ನೀಡಿ ಒಳಭಾಗ ಮತ್ತು ಹೊರಭಾಗವನ್ನು ವೀಕ್ಷಿಸಿದಾಗ, ಕೆಲವು ಗೋಡೆಗಳ ಮೇಲಿನ ಚಿತ್ರಗಳು ಮಸುಕಾಗಿರುವುದು, ಮರದ ಭಾಗಗಳ ಹೊಳಪು ಕಡಿಮೆಯಾಗಿರುವುದು ಹಾಗೂ ಕೆಲವು ಕಡೆ ಧೂಳು ಮತ್ತು ಕೊಳಕು ಸಂಗ್ರಹವಾಗಿರುವುದು ಗಮನಕ್ಕೆ ಬಂದಿತು.

‘ಪ್ರತಿ ವರ್ಷ ಮೈಸೂರಿನಲ್ಲಿ ಬದಲಾವಣೆ ಕಾಣುತ್ತದೆ; ಶ್ರೀರಂಗಪಟ್ಟಣದಲ್ಲಿ ಹಾಗಿಲ್ಲ’

ಕೇರಳ ಮೂಲದ ಪ್ರವಾಸಿ ಶೌಕತ್ ಪೆರಂಬು ಮಾತನಾಡಿ, “ನಾನು ಪ್ರತಿ ವರ್ಷವಾದರೂ ಕುಟುಂಬ ಸಮೇತ ಮೈಸೂರು ಪ್ರವಾಸಕ್ಕೆ ಬರುತ್ತೇನೆ. ಮೈಸೂರಿಗೆ ಬಂದಾಗಲೆಲ್ಲ ಏನಾದರೂ ಬದಲಾವಣೆ ಕಾಣುತ್ತದೆ. ಇನ್ನೂ ಚೆನ್ನಾಗಿ ಮಾಡಿದ್ದಾರೆ ಎಂದು ಅನಿಸುತ್ತದೆ. ಆದರೆ, ಶ್ರೀರಂಗಪಟ್ಟಣಕ್ಕೆ ಬಂದಾಗ ಪ್ರತಿ ವರ್ಷ ನೋಡಿದಂತೆಯೇ ಅನಿಸುತ್ತದೆ. ಪ್ರವಾಸಿಗರಿಂದ ಹಣ ಪಡೆಯುತ್ತಾರೆ. ಅದಕ್ಕೆ ತಕ್ಕಂತೆ ನಿರ್ವಹಣೆಯೂ ಇರಬೇಕು. ಮೈಸೂರಿನ ಪಾರಂಪರಿಕ ಕಟ್ಟಡಗಳ ನಿರ್ವಹಣೆಗೂ ಶ್ರೀರಂಗಪಟ್ಟಣದ ನಿರ್ವಹಣೆಗೂ ಬಹಳ ವ್ಯತ್ಯಾಸವಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅದೇ ರೀತಿ, ಅರಮನೆಗೆ ಭೇಟಿ ನೀಡಿದ್ದ ಭೂಸೇನೆಯ ಯೋಧರ ತಂಡದ ಸದಸ್ಯ ಅನೂಪ್ ಮುದಾಲನ್, “ನನಗೆ ಚಿಕ್ಕ ವಯಸ್ಸಿನಿಂದಲೂ ಶ್ರೀರಂಗಪಟ್ಟಣ ಎಂದರೆ ತುಂಬಾ ಇಷ್ಟ. ಈಗ ಮಿಲಿಟರಿ ತರಬೇತಿಯಲ್ಲಿದ್ದೇವೆ. ಸಂಗಡಿಗರಿಗೂ ಇಲ್ಲಿನ ಐತಿಹಾಸಿಕ ಸ್ಥಳಗಳನ್ನು ತೋರಿಸೋಣ ಎಂದು ಬಂದಿದ್ದೇವೆ. ಆದರೆ, ಅರಮನೆಯನ್ನು ಹೀಗೆ ನಿರ್ಲಕ್ಷ್ಯ ಮಾಡಿದರೆ ಮುಂದೆ ನೋಡಲು ಏನೂ ಉಳಿಯುವುದಿಲ್ಲವೇನೋ ಅನಿಸುತ್ತದೆ. ಅರಮನೆಯಲ್ಲಿ ಪ್ರದರ್ಶನಕ್ಕಿಟ್ಟಿರುವ ವಸ್ತ್ರಗಳು ಧೂಳು ಹಿಡಿದಿರುವಂತೆ ಕಂಡವು. ಪ್ರವೇಶ ದ್ವಾರ, ಅಂತಸ್ತುಗಳು ಕಳೆಗುಂದಿವೆ. ಸ್ಪಷ್ಟವಾಗಿ ಅರಮನೆ ನಶಿಸುವತ್ತ ಸಾಗುತ್ತಿದೆ ಎನಿಸಿತು” ಎಂದರು.

‘ಕೆಲಸ ನಡೆಯುತ್ತಿದೆ’ ಎಂಬ ಫಲಕದ ಆಚೆಗೆ ಏನಿದೆ?

ಸ್ಥಳದಲ್ಲಿ ಕಾಮಗಾರಿಯ ಸ್ವರೂಪ, ಅವಧಿ ಮತ್ತು ಪೂರ್ಣಗೊಳ್ಳುವ ದಿನಾಂಕದ ಕುರಿತು ಸ್ಪಷ್ಟ ಮಾಹಿತಿ ದೊರೆಯಲಿಲ್ಲ. ವಿಚಾರಿಸಿದಾಗ ಕೆಲವರು ಸಂಬಂಧಪಟ್ಟವರನ್ನು ಕೇಳುವಂತೆ ಸೂಚಿಸಿದರೆ, ಇನ್ನು ಕೆಲವರು ತಮಗೆ ಮಾಹಿತಿ ಇಲ್ಲ ಎಂದು ತಿಳಿಸಿದರು. ವರದಿಗಾರರು ಭೇಟಿ ನೀಡಿದ ಸಂದರ್ಭದಲ್ಲಿ ಸಂಬಂಧಪಟ್ಟ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಲಭ್ಯವಿರಲಿಲ್ಲ. ಟಿಕೆಟ್ ವಿತರಣೆ ಮತ್ತು ಪರಿಶೀಲನೆಯ ಕಾರ್ಯದಲ್ಲಿದ್ದ ಸಿಬ್ಬಂದಿ ತಾವು ತಾಂತ್ರಿಕ ಮಾಹಿತಿಯನ್ನು ಹೊಂದಿಲ್ಲ ಎಂದು ತಿಳಿಸಿದರು.

ಇಲಾಖೆಯ ಹೊಣೆಗಾರಿಕೆ ಮತ್ತು ಸಾರ್ವಜನಿಕರ ಪ್ರಶ್ನೆಗಳು

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ದೇಶದ ಅನೇಕ ಪ್ರಮುಖ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದರಿಯಾ ದೌಲತ್ ಅರಮನೆಯಂತಹ ಸ್ಮಾರಕದಲ್ಲಿ ನಿಯಮಿತ ತಪಾಸಣೆ, ಹಾನಿಯ ದಾಖಲೀಕರಣ, ಸೂಕ್ತ ದುರಸ್ತಿ ಮತ್ತು ಮೂಲ ಸ್ವರೂಪದ ರಕ್ಷಣೆ ನಿರಂತರವಾಗಿ ನಡೆಯಬೇಕಾದ ಕಾರ್ಯಗಳು.

ಈ ಹಿನ್ನೆಲೆಯಲ್ಲಿ ಇಲಾಖೆಯ ಮೈಸೂರು ಘಟಕ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೆಲವು ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಬೇಕಾಗಿದೆ. ಅರಮನೆಯ ಪ್ರಸ್ತುತ ಸ್ಥಿತಿಯ ಕುರಿತು ತಾಂತ್ರಿಕ ಪರಿಶೀಲನೆ ನಡೆದಿದೆಯೇ? ಇತ್ತೀಚಿನ ವರ್ಷಗಳಲ್ಲಿ ಯಾವ ಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ? ಈಗ ನಡೆಯುತ್ತಿರುವ ಕಾಮಗಾರಿಯ ಉದ್ದೇಶ ಮತ್ತು ವೆಚ್ಚ ಎಷ್ಟು? ಅದಕ್ಕೆ ನಿಗದಿಪಡಿಸಿರುವ ಅವಧಿ ಯಾವುದು? ಚಿತ್ರಕಲೆ, ಮರದ ಭಾಗಗಳು ಮತ್ತು ಐತಿಹಾಸಿಕ ವಸ್ತುಗಳನ್ನು ಉಳಿಸಲು ಯಾವ ವಿಧಾನಗಳನ್ನು ಅನುಸರಿಸಲಾಗುತ್ತಿದೆ? ಕಾಮಗಾರಿಯ ವಿವರ, ವೆಚ್ಚ, ಅವಧಿ ಮತ್ತು ಜವಾಬ್ದಾರಿಯುತ ಅಧಿಕಾರಿಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವುದು ಸೂಕ್ತ.

ಇತಿಹಾಸವನ್ನು ಉಳಿಸುವ ಹೊಣೆ ಯಾರದ್ದು?

ದರಿಯಾ ದೌಲತ್ ಅರಮನೆಯ ಸಂರಕ್ಷಣೆ ಕೇವಲ ಕಟ್ಟಡವನ್ನು ದುರಸ್ತಿಪಡಿಸುವ ಕೆಲಸವಲ್ಲ. ಅದು ಕರ್ನಾಟಕದ ಇತಿಹಾಸ, ಕಲಾ ಪರಂಪರೆ ಮತ್ತು ಮುಂದಿನ ಪೀಳಿಗೆಯ ಹಕ್ಕನ್ನು ಉಳಿಸುವ ಜವಾಬ್ದಾರಿ. ಉದ್ಯಾನವನದ ಸೌಂದರ್ಯ, ಪ್ರವೇಶ ವ್ಯವಸ್ಥೆ ಮತ್ತು ಸ್ವಚ್ಛತೆಯ ಜೊತೆಗೆ ಅರಮನೆಯ ಮೂಲ ಚಿತ್ರಕಲೆ, ಮರದ ವಿನ್ಯಾಸಗಳು ಹಾಗೂ ಐತಿಹಾಸಿಕ ವಸ್ತುಗಳ ರಕ್ಷಣೆಯೂ ಸಮಾನ ಆದ್ಯತೆ ಪಡೆಯಬೇಕು.

ಅರಮನೆಯ ಪ್ರಸ್ತುತ ಸ್ಥಿತಿಯನ್ನು ತಜ್ಞರಿಂದ ಮೌಲ್ಯಮಾಪನ ಮಾಡಿಸಿ, ತಕ್ಷಣದ ಸಂರಕ್ಷಣಾ ಕ್ರಮಗಳು ಮತ್ತು ದೀರ್ಘಕಾಲೀನ ನಿರ್ವಹಣಾ ಯೋಜನೆ ರೂಪಿಸಬೇಕು. ಕಾಮಗಾರಿಯ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಿ, ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ‘Work in Progress’ ಎಂಬ ಫಲಕವಿರುವುದಕ್ಕಿಂತ, ನಡೆಯುತ್ತಿರುವ ಕೆಲಸದ ಗುಣಮಟ್ಟ ಮತ್ತು ಅದರ ಫಲಿತಾಂಶವೇ ಮುಖ್ಯ. ಅರಮನೆಯ ಮೂಲ ಸೌಂದರ್ಯ ಸಂಪೂರ್ಣವಾಗಿ ಕಳೆದುಹೋಗುವವರೆಗೆ ಕಾಯಬೇಕೇ? ಅಥವಾ ಉಳಿದಿರುವ ಇತಿಹಾಸವನ್ನು ವೈಜ್ಞಾನಿಕವಾಗಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕೇ?

ಈ ಸುದ್ದಿ ಓದಿದ್ದೀರಾ? ಪ್ರಜಾಪ್ರಭುತ್ವದ ಉಳಿವಿಗೆ ಸ್ವತಂತ್ರ ರಾಜಕೀಯ ಪರ್ಯಾಯ ಅನಿವಾರ್ಯ: ಡಾ. ಎಚ್.ವಿ. ವಾಸು

ಇದು ಕೇವಲ ಪ್ರವಾಸಿಗರ ಪ್ರಶ್ನೆಯಲ್ಲ; ಕರ್ನಾಟಕದ ಐತಿಹಾಸಿಕ ಪರಂಪರೆಯ ಬಗ್ಗೆ ಕಾಳಜಿ ಹೊಂದಿರುವ ಪ್ರತಿಯೊಬ್ಬರ ಪ್ರಶ್ನೆ. ಈಗಲಾದರೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮೈಸೂರು ಘಟಕ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ದರಿಯಾ ದೌಲತ್ ಅರಮನೆಯ ಮೂಲ ಸೌಂದರ್ಯ ಹಾಗೂ ಐತಿಹಾಸಿಕ ಅಸ್ಮಿತೆಯನ್ನು ಉಳಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದುನೋಡಬೇಕಿದೆ.

ಸಂಚಿಕೆ ಮುಂದುವರೆಯುತ್ತದೆ…

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | 10 ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ತುಂಗಭದ್ರಾ ನೀರಾವರಿ ಇಲಾಖೆ ಕಾರ್ಮಿಕರ ಧರಣಿ

ತುಂಗಭದ್ರಾ ನೀರಾವರಿ ಇಲಾಖೆಯ ಮಾನ್ವಿ ಉಪವಿಭಾಗದ ಕಾರ್ಮಿಕರಿಗೆ ಕಳೆದ 10 ತಿಂಗಳಿನಿಂದ...

ರಾಯಚೂರು | ಸರ್ವಿಸ್ ರಸ್ತೆ ನಿರ್ಮಿಸಲು ರೈತರು, ಗ್ರಾಮಸ್ಥರು ಪ್ರತಿಭಟನೆ

ಸಿರವಾರ ತಾಲ್ಲೂಕಿನ ಗೋಲದಿನ್ನಿ ಗ್ರಾಮದ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ...