ಉತ್ತರ ಪ್ರದೇಶ ವಿಧಾನ ಪರಿಷತ್ (ಎಂಎಲ್‌ಸಿ) ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ (ಎಸ್‌ಪಿ) ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿ ಗಮನಾರ್ಹ ಗೆಲುವು ದಾಖಲಿಸಿದೆ. ವಾರಣಾಸಿ ‘ಶಿಕ್ಷಕರ ಕ್ಷೇತ್ರ’ವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಎಸ್‌ಪಿ, ವಾರಾಣಸಿ ‘ಪದವೀಧರರ ಕ್ಷೇತ್ರ’ದಲ್ಲೂ ಭರ್ಜರಿ ಗೆಲುವಿನತ್ತ ದಾಪುಗಾಲಿಟ್ಟಿದೆ.
ಒಟ್ಟು 11 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದೇ ಈ ಫಲಿತಾಂಶವನ್ನು ವಿಶ್ಲೇಷಿಸಲಾಗುತ್ತಿದೆ. ಆಗ್ರಾ ಶಿಕ್ಷಕರ ಕ್ಷೇತ್ರವನ್ನೂ ಸಮಾಜವಾದಿ ಪಕ್ಷ ಗೆದ್ದುಕೊಂಡಿದೆ. ಆದರೆ, ಒಟ್ಟಾರೆ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿರುವ ಆಡಳಿತಾರೂಢ ಬಿಜೆಪಿ, ಲಖನೌ, ಮೀರತ್-ಸಹಾರನ್‌ಪುರ, ಬರೇಲಿ-ಮೊರಾದಾಬಾದ್ ಶಿಕ್ಷಕರ ಕ್ಷೇತ್ರಗಳು ಹಾಗೂ ಮೀರತ್-ಸಹಾರನ್‌ಪುರ ಪದವೀಧರರ ಕ್ಷೇತ್ರ ಸೇರಿದಂತೆ ಒಟ್ಟು ಐದು ಸ್ಥಾನಗಳಲ್ಲಿ ಜಯಗಳಿಸಿ, ಮತ್ತೊಂದರಲ್ಲಿ ಮುನ್ನಡೆ ಸಾಧಿಸಿದೆ.
ವಾರಾಣಸಿ ವಿಭಾಗವು ವಾರಣಾಸಿ, ಚಂದೌಲಿ, ಗಾಜೀಪುರ, ಜೌನ್‌ಪುರ, ಮಿರ್ಜಾಪುರ, ಸೋನಭದ್ರ, ಭದೋಹಿ ಮತ್ತು ಬಲ್ಲಿಯಾ ಜಿಲ್ಲೆಗಳನ್ನು ಒಳಗೊಂಡಿದೆ. ಪ್ರಧಾನಿಯವರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕಾರಣ ವಾರಣಾಸಿಯ ಎರಡು ಕ್ಷೇತ್ರಗಳ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿತ್ತು. ವಾರಾಣಸಿ ಶಿಕ್ಷಕರ ಕ್ಷೇತ್ರದಲ್ಲಿ ಎಸ್‌ಪಿಯ ಲಾಲ್ ಬಿಹಾರಿ ಯಾದವ್ ಅವರು ಬಿಜೆಪಿಯ ಪ್ರಮೋದ್ ಕುಮಾರ್ ಮಿಶ್ರಾ ಅವರನ್ನು 4,898 ಮತಗಳ ಅಂತರದಿಂದ ಮಣಿಸಿದ್ದಾರೆ. 2020ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಿಶ್ರಾ ಕೇವಲ 936 ಮತಗಳಿಂದ ಯಾದವ್ ವಿರುದ್ಧ ಸೋತಿದ್ದರು. ಇತ್ತ, ವಾರಾಣಸಿ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯ ಕೇದಾರ್ ನಾಥ್ ಸಿಂಗ್ ವಿರುದ್ಧ ಎಸ್‌ಪಿಯ ಅಶುತೋಷ್ ಸಿನ್ಹಾ ಅವರು ನಿರ್ಣಾಯಕ ಗೆಲುವಿನತ್ತ ಸಾಗಿದ್ದಾರೆ.
ತಮ್ಮ ಗೆಲುವಿನ ಕುರಿತು ಪ್ರತಿಕ್ರಿಯಿಸಿರುವ ಲಾಲ್ ಬಿಹಾರಿ ಯಾದವ್, “ಶಿಕ್ಷಕರು ಸಮಾಜವಾದಿ ಪಕ್ಷದೊಂದಿಗೆ ದೃಢವಾಗಿ ನಿಂತಿದ್ದಾರೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರ ಸಕಾರಾತ್ಮಕ ಧೋರಣೆಯಿಂದಾಗಿ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷವು ಪ್ರಬಲ ಪೈಪೋಟಿ ನೀಡಲು ಸಾಧ್ಯವಾಯಿತು” ಎಂದು ಶ್ರೇಯಸ್ಸು ಸಲ್ಲಿಸಿದ್ದಾರೆ. ಪಕ್ಷದ ಹಿರಿಯ ನಾಯಕ, ದಿವಂಗತ ಮುಲಾಯಂ ಸಿಂಗ್ ಯಾದವ್ (ನೇತಾಜಿ) ಅವರನ್ನು ಶಿಕ್ಷಕರ ನಾಯಕ ಎಂದೇ ಕರೆಯಲಾಗುತ್ತಿತ್ತು. ಈಗ ಅದೇ ಹಾದಿಯಲ್ಲಿ ಅಖಿಲೇಶ್ ಸಾಗುತ್ತಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ.
ಅಲ್ಲದೆ, ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಯುವ ಉದ್ದೇಶದ, ಪ್ರಸ್ತುತ ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ಎದುರಿಸುತ್ತಿರುವ ವಿವಾದಾತ್ಮಕ ‘ಯುಜಿಸಿ ಮಸೂದೆ’ ಈ ಚುನಾವಣೆಯಲ್ಲಿ ಯಾವುದೇ ಪ್ರಭಾವ ಬೀರಿಲ್ಲ; ಆ ವಿಚಾರದಲ್ಲಿ ಜನರಲ್ಲೇ ಒಮ್ಮತವಿರಲಿಲ್ಲ. ಆದರೆ ಉದ್ಯೋಗ ಭದ್ರತೆ ಬಯಸುವವರು ನಮ್ಮನ್ನು ಬೆಂಬಲಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಗೆಲುವನ್ನು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಣ್ಣಿಸಿರುವ ಎಸ್‌ಪಿ ನಾಯಕರು, ಬಿಜೆಪಿ ಭದ್ರಕೋಟೆಯಲ್ಲಿ ಜನರ ಒಲವು ಬದಲಾಗುತ್ತಿರುವುದರ ಸಂಕೇತವಿದು ಎಂದಿದ್ದಾರೆ. 2014 ಮತ್ತು 2019ಕ್ಕೆ ಹೋಲಿಸಿದರೆ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಗೆಲುವಿನ ಅಂತರ ಕಡಿಮೆಯಾಗಿದ್ದನ್ನು ಕೆಲವು ನಾಯಕರು ಉಲ್ಲೇಖಿಸಿದ್ದಾರೆ.
ವಾರಾಣಸಿಯಲ್ಲಿನ ಈ ಭರ್ಜರಿ ಗೆಲುವು ಅಖಿಲೇಶ್ ಯಾದವ್ ಮತ್ತು ಪಕ್ಷದ ಕಾರ್ಯಕರ್ತರಲ್ಲಿ 2027ರ ಮಹಾಸಮರಕ್ಕೂ ಮುನ್ನ ದೊಡ್ಡ ಮಟ್ಟದ ಮಾನಸಿಕ ಸ್ಥೈರ್ಯವನ್ನು ತುಂಬಿದೆ. “ಬಿಜೆಪಿಯಿಂದ ಶಿಕ್ಷಕರು ಕೇವಲ ಅವಮಾನವನ್ನಷ್ಟೇ ಎದುರಿಸಿದ್ದಾರೆ. ಹುಲ್ಲು ಸಂಗ್ರಹಿಸುವಂತಹ ಬೇಡದ ಕೆಲಸಗಳಿಗೂ ಅವರನ್ನು ಬಳಸಿಕೊಂಡಿದ್ದನ್ನು ಯಾವ ಶಿಕ್ಷಕರೂ ಮರೆಯುವುದಿಲ್ಲ. 2027ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಅವರು ತಮ್ಮ ‘ಗುರು ಸಂಕಲ್ಪ’ವನ್ನು ಈಡೇರಿಸಲಿದ್ದಾರೆ” ಎಂದು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ಶ್ರೀವತ್ಸ ಕೂಡ ಪ್ರತಿಕ್ರಿಯಿಸಿದ್ದು, “ಯುಪಿ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಪ್ರಧಾನಿ ಅವರ ಸ್ವಂತ ಕ್ಷೇತ್ರದಲ್ಲೇ, ಅದೂ ಸುಶಿಕ್ಷಿತ ಪದವೀಧರರು ಮತ್ತು ಶಿಕ್ಷಕರಿಂದ ಬಿಜೆಪಿ ತಿರಸ್ಕೃತಗೊಂಡಿರುವುದು ದೊಡ್ಡ ಬೆಳವಣಿಗೆ. ಇದು ಮಧ್ಯಮ ವರ್ಗದ ಅಸಮಾಧಾನವನ್ನು ತೋರಿಸುತ್ತಿದೆ” ಎಂದಿದ್ದಾರೆ.





