ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಅದು ಭದ್ರತೆಗೆ ಹೇಗೆ ಮಾರಕವಾಗುತ್ತದೊ ತಿಳಿಯದು. ದಸರಾಕ್ಕಾಗಿ ತಿಂಗಳ ಕಾಲ ಬೆವರು ಸುರಿಸುವ, ಅನ್ನ ನಿದ್ರೆ ದಣಿವುಗಳನ್ನು ಬದಿಗೊತ್ತಿ ಕೆಲಸ ಮಾಡುವ ಪೊಲೀಸರು ಅಂಬಾರಿಯ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವುದು ಅವರಿಗಿರುವ ಅತಿ ಸಣ್ಣ ಅವಕಾಶ.
ಮೈಸೂರು ದಸರಾ ಎಂಬುದೊಂದು ಹುಚ್ಚು ಮಳೆ. ಹತ್ತು ದಿನಗಳ ಕಾಲ ಅಬ್ಬರಿಸಿ ಮೈಸೂರನ್ನು ಮುಳುಗೇಳಿಸಿದ ಈ ಮಳೆ ಈಗ ನಿಂತಿದ್ದರೂ, ಅದರ ನೀರು ಇನ್ನೂ ಇಂಗಿಲ್ಲ; ಅಲ್ಲಲ್ಲಿ ಹರಿಯುತ್ತಲೂ ಇದೆ. ಈ ಮಳೆ ಎಷ್ಟೇ ಅಬ್ಬರಿಸಿದರೂ, ಜನ ಎಷ್ಟೇ ನೊಂದರೂ, ಅದು ನೀಡುವ ಮುದ ಲಕ್ಷಾಂತರ ಮನಸ್ಸುಗಳಲ್ಲಿ ಇನ್ನೂ ರಪರಪ ಸುರಿವ ಮಳೆಸದ್ದಿನ ಹಾಗೆಯೇ ಅನುರಣನವನ್ನು ಉಳಿಸಿಕೊಂಡಿದೆ.
ಅರಸರ ಕಾಲದ ದಸರಾಕ್ಕೆ ಒಂದು ಮೆರುಗು; ಹಳಬರ ಕಣ್ಣಲ್ಲಿ ಈಗಲೂ ಅದರ ಬಿಂಬಗಳು ಉಳಿದುಕೊಂಡಿರುವುದು ನಿಜ. ಆ ನೆನಪನ್ನು ಕೆದಕಿದರೆ ಸಾಕು ಹಿರಿಯರು ರೋಮಾಂಚನಗೊಳ್ಳುತ್ತಾರೆ; ದಸರಾ ವೈಭವವನ್ನು ಬಣ್ಣಿಸಲು ತೊಡಗುತ್ತಾರೆ. ಅದೊಂದು ಕಾಲ; ಅದೊಂದು ಗತವೈಭವ.
ಈಗ ಆ ಕಾಲ ಮುಗಿದಿದೆ. ಒಂದು ಕಾಲಕ್ಕೆ ನಾಡನ್ನು ಆಳಿದ ಅರಸು ಮನೆತನಗಳು ಈಗ ಜನಾಡಳಿತ ಕಾಲದಲ್ಲಿ ಎಲ್ಲ ಮನೆತನಗಳಲ್ಲಿ ಸೇರಿಹೋಗಿವೆ. ನಮ್ಮ ಸಂವಿಧಾನ ಕೊಟ್ಟಿರುವ ಸಮಾನತೆ ಮತ್ತು ಸ್ವಾತಂತ್ರ್ಯ ಎಲ್ಲರ ಪಾಲಿಗೂ ಒಂದೇ. ಮಾಜಿ ಅರಸರು, ಸಾಮಾನ್ಯ ಜನರು, ರಾಜಕಾರಣಿಗಳು, ಅಧಿಕಾರಿಗಳು ಎಲ್ಲರಿಗೂ ಸಮಾನ ಅವಕಾಶ. ಹಾಗೆಯೇ ಅರಮನೆಗಳೂ. ಅವು ಕಣ್ಣು ಕುಕ್ಕುವಂತೆ ಉಳಿದುಕೊಂಡಿದ್ದರೂ, ಅವು ಬಹುಪಾಲು ಜನತೆಯ ಅಂದರೆ ಸರ್ಕಾರದ ಅರಮನೆಗಳೇ.
ಭಾರತದಲ್ಲಿರುವ ಎಲ್ಲ ಅರಮನೆಗಳೂ ಈಗ ಖಾಸಗೀ ಸ್ವತ್ತುಗಳಾಗಿ ಉಳಿದಿಲ್ಲ. ಬಹುಪಾಲು ಅರಮನೆಗಳು ಸಾರ್ವಜನಿಕರ ಸ್ವತ್ತು. ನ್ಯಾಯಾಲಯಗಳನ್ನು ಹೊಕ್ಕು ಹೊರಬಂದರೂ ಅರಮನೆಗಳು ರಾಜಮನೆತನಗಳ ಸಂಪೂರ್ಣ ಸ್ವತ್ತುಗಳಾಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅರಸು ಮನೆತನಗಳು ಒಪ್ಪಿಕೊಂಡಿವೆ. ಒಪ್ಪಿಕೊಳ್ಳುವುದು ಅನಿವಾರ್ಯವೂ ಹೌದು. ರಾಜಮನೆತನಗಳಿಗೆ ಸೇರಿದ ಹೊಸ ತಲೆಮಾರಿನ ಹಲವರು ಚುನಾವಣೆಗಳಲ್ಲಿ ಸ್ಪರ್ಧಿಸಿ, ಗೆದ್ದು, ಜನಪ್ರತಿನಿಧಿಗಳಾಗಿ ನಮ್ಮ ಸಂಸತ್ತಿನಲ್ಲಿ ಮತ್ತು ವಿಧಾನಸಭೆಗಳಲ್ಲಿ ಎಲ್ಲ ಜನ ಪ್ರತಿನಿಧಿಗಳ ಜೊತೆಯಲ್ಲಿ ಸಮಾನವಾಗಿ ಕುಳಿತು ಸಕ್ರಿಯ ರಾಜಕಾರಣಿಗಳಾಗಿದ್ದಾರೆ. ಕರ್ನಾಟಕ ಇದಕ್ಕೆ ಹೊರತೇನೂ ಅಲ್ಲ.
ಅರಸರ ಮೈಸೂರು ದಸರಾ ಮುಗಿದು, ಈಗ ಜನದಸರಾ ಜಾರಿಯಲ್ಲಿದೆ. ಮೈಸೂರು ಅರಮನೆಯ ಒಂದು ಭಾಗ ಮೈಸೂರು ಅರಸು ಮನೆತನದವರಿಗೆ ಸೇರಿದೆ. ಅದರಲ್ಲಿಯೇ ಅವರ ʼದರ್ಬಾರುʼ ದಸರೆಯ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಇದು ಖಾಸಗೀ ಆಚರಣೆ. ಸಾರ್ವಜನಿಕರಿಗೆ ಅಲ್ಲಿ ಮುಕ್ತ ಪ್ರವೇಶವಿಲ್ಲ. ಟಿಕೆಟ್ಟೊ, ಪಾಸೊ ಅಥವಾ ಉಚಿತ ಪ್ರವೇಶವೊ ಅದು ಅರಸು ಮನೆತನಕ್ಕೆ ಸೇರಿದ ವಿಚಾರ. ಆದರೆ, ಮೈಸೂರು ಅರಮನೆಯ ಆವರಣದಲ್ಲಿ ಮತ್ತು ಇಡೀ ಮೈಸೂರು ನಗರದ ಅನೇಕ ತಾಣಗಳಲ್ಲಿ ಮತ್ತು ಚಾಮುಂಡಿಬೆಟ್ಟದಲ್ಲಿ ನಡೆಯುವ ದಸರಾ ಜನತೆಯ ದಸರಾ; ಸರ್ಕಾರದ ದಸರಾ. ಎಷ್ಟೊ ಕಾಲ ನಿಂತು ಹೋಗಿದ್ದ ಈ ದಸರಾ ಮತ್ತೆ ಆರಂಭವಾದದ್ದು 1972 ರಿಂದ. ಅಲ್ಲಿಂದ ಇಲ್ಲಿಯವರೆಗೆ ಈ ದಸರಾ ಮುಕ್ತವಾಗಿ, ವೈಭವವನ್ನು ಮೆರೆಸುವಂತೆ ನಡೆಯುತ್ತಲೇ ಬಂದಿದೆ.

ಜನತೆಯ ದಸರಾ ಆದರೂ ಅದು ಬೇಕಾಬಿಟ್ಟಿಯಾಗಿ ನಡೆಯುವುದಿಲ್ಲ. ಅರಸರು ನಡೆಸುತ್ತಿದ್ದ ದಸರಾದ ಅತ್ಯುತ್ತಮ ಅಂಶಗಳನ್ನು ಉಳಿಸಿಕೊಂಡು, ಸರ್ವರ ಸಮಾನತೆಗೆ ಒತ್ತುಕೊಟ್ಟು ಈ ದಸರಾವನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಕ್ರೀಡೆ, ಮನರಂಜನೆ, ಶಾಸ್ತ್ರೀಯ ಸಂಗೀತ ಮತ್ತು ನೃತ್ಯ, ವಸ್ತುಪ್ರದರ್ಶನ, ಆಹಾರ ಮೇಳ, ಪುಸ್ತಕ ಪ್ರದರ್ಶನ, ಕಲಾಕೃತಿಗಳ ಪ್ರದರ್ಶನ, ಕುಸ್ತಿ ಇತ್ಯಾದಿ ಪ್ರಜಾಪ್ರಭುತ್ವ ಮಾನ್ಯ ಮಾಡುವ ಹಲವಾರು ಕಾರ್ಯಕ್ರಮಗಳು ಈ ವಿಖ್ಯಾತ ದಸರಾದ ಭಾಗಗಳು. ಜನರೂ ಯಾವ ಮೇಲು-ಕೀಳು ಭಾವ ಇಲ್ಲದೆ ಸಮಾನವಾಗಿ ಭಾಗವಹಿಸುತ್ತಾ ದಸರಾ ನಮ್ಮದು, ಎಲ್ಲರದು ಎಂದು ಸಾರಿದ್ದಾರೆ.
ದಸರಾದ ಅತ್ಯಂತ ಜನಪ್ರಿಯ ಮತ್ತು ಆಕರ್ಷಣೆಯ ಸಂಗತಿಗಳೆಂದರೆ ಜಂಬೂ ಸವಾರಿ ಮತ್ತು ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯಿತು. ಈ ಎರಡು ಕಾರ್ಯಕ್ರಮಗಳಿಗೆ ರಾಷ್ಟ್ರದ ಅನೇಕ ಭಾಗಗಳಿಂದ ಮತ್ತು ವಿದೇಶಗಳಿಂದ ರಸಿಕರು ಧಾವಿಸುತ್ತಾರೆ. ಪ್ರವಾಸೋದ್ಯಮಕ್ಕೂ ಈ ದಸರಾ ಬಹುದೊಡ್ಡ ಕೊಡುಗೆಯನ್ನು ನೀಡಿದೆ.
ಅರಸು ಮನೆತನದ ಹಿರಿಯರಾಗಿರುವ ಪ್ರಮೋದಾ ದೇವಿ ಅವರು, ಈ ಬಾರಿಯ ದಸರಾದಲ್ಲಿ ಅರಮನೆ ಮತ್ತು ಸರ್ಕಾರಿ ಅಧಿಕಾರಿಗಳ ಹಾಗೂ ಪೊಲೀಸರ ನಡುವೆ ಸಮನ್ವಯ ಸರಿಯಾಗಿರಲಿಲ್ಲ ಎಂದು ಹೇಳಿದ್ದಾರೆ. ಸಮನ್ವಯ ಇರಬೇಕಾದದ್ದು ಅಪೇಕ್ಷಣೀಯವೇ. ಸಂಬಂಧಿಸಿದವರ ನಡುವಣ ಸಮನ್ವಯ ಇದ್ದಾಗಲೇ ಯಾವುದೇ ಕಾರ್ಯಕ್ರಮ ಯಶಸ್ವಿಯಾಗುವುದು. ಈ ಸಲಹೆಯನ್ನು ಯಾರೇ ಕೊಡಲಿ, ಅದನ್ನು ಗೌರವಿಸಬೇಕು.
ಆದರೆ, ಪ್ರಮೋದಾದೇವಿ ಅವರು ಅರಮನೆಯ ಹಕ್ಕಿನ ಮಿತಿಯನ್ನು ಅರ್ಥಮಾಡಿಕೊಳ್ಳದೆ, ದಸರಾ ಹೇಗೆ ಆಚರಣೆಯಾಗಬೇಕೆಂದು ಸೂಚಿಸಿದ್ದಾರೆ. ಅರಮನೆಯ ಆವರಣವನ್ನು ಒಂದು ದಿನ ಮುಕ್ತ ಮಾಡಿ ಅರಸು ಮನೆತನದ ದಸರಾ ಆಚರಣೆಗೆ ಅವಕಾಶ ಮಾಡಿ ಎಂಬ ಸೂಚನೆಯನ್ನೂ ಅವರು ನೀಡಿದ್ದಾರೆ. ಹಾಗೆಯೇ ಅಂಬಾರಿ ಮೆರವಣಿಗೆ ಯಾವತ್ತು ನಡೆಯಬೇಕು ಎಂಬ ಸಲಹೆಯೂ ಅವರಿಂದ ಬಂದಿದೆ. ಚಿನ್ನದ ಅಂಬಾರಿಯ ಹತ್ತಿರ ಪೊಲೀಸರು ನಿಂತು ಸೆಲ್ಫಿ ತೆಗೆದುಕೊಳ್ಳುವುದರ ಬಗೆಗೂ ಅವರು ಆಕ್ಷೇಪ ಎತ್ತಿದ್ದಾರೆ. ಅದು ಅಂಬಾರಿಯ ಭದ್ರತೆಗೆ ತೊಂದರೆ ತರುತ್ತದೆ ಎಂಬ ಮಾತನ್ನೂ ಅವರು ಆಡಿದ್ದಾರೆ. ಅರಮನೆಯ ಜಟ್ಟಿಗಳ ಗುಂಪಿಗೆ ಈ ಬಾರಿ ದಸರಾದಲ್ಲಿ ಅರಮನೆಯ ಆವರಣ ಪ್ರವೇಶಿಸಲು ಸಾಧ್ಯವಾಗದೆ ತೊಂದರೆಯಾಯಿತು ಎಂಬುದೂ ಅವರ ಆಕ್ಷೇಪಗಳಲ್ಲಿ ಒಂದು.
ಅರಸುಮನೆತನದ ಖಾಸಗೀ ದರ್ಬಾರು ಹೇಗೆ ನಡೆಯಬೇಕು, ಅಲ್ಲಿನ ಧಾರ್ಮಿಕ ವಿಧಿ-ವಿಧಾನಗಳು ಸ್ವರೂಪ ಯಾವುದು ಇತ್ಯಾದಿ ಸಂಗತಿಗಳನ್ನು ತೀರ್ಮಾನಿಸುವ ಹಕ್ಕು ಪ್ರಮೋದಾ ದೇವಿ ಅವರಿಗಿದೆ. ಆದರೆ ಜನತೆಯ ದಸರಾ ಹೇಗಿರಬೇಕೆಂಬುದನ್ನು ಸರ್ಕಾರ, ಜನತೆಯ ಪ್ರತಿನಿಧಿಗಳು ನಿರ್ಧರಿಸುತ್ತಾರೆ. ಈ ವರ್ಷ ಹೊಸದಾಗಿ ದಸರಾ ಆಚರಣೆ ಜಾರಿಗೆ ಬಂದಿಲ್ಲ ಮೂರೂವರೆ ದಶಕಗಳಷ್ಟು ದೀರ್ಘಕಾಲದಿಂದ ಇದು ನಡೆದುಕೊಂಡು ಬಂದಿದೆ. ಯಾವತ್ತು ಜಂಬೂ ಸವಾರಿ, ಯಾವತ್ತು ಬನ್ನಿಮಂಟಪದ ಪಂಜಿನ ಕವಾಯತು, ಅರಮನೆಯ ಆವರಣದಲ್ಲಿ ಯಾವ ಕಾರ್ಯಕ್ರಮ ಹೇಗೆ ನಡೆಯಬೇಕು ಇವೆಲ್ಲವನ್ನೂ ಸರ್ಕಾರ ಎಂದೋ ನಿರ್ಧರಿಸಿ ಅದರಂತೆ ನಡೆಸಿಕೊಂಡು ಬರುತ್ತಿದೆ. ಲಕ್ಷಾಂತರ ಮಂದಿ ಸೇರುವಲ್ಲಿ ಕೆಲವು ಕೊರತೆಗಳು, ಲೋಪಗಳು ಎದುರಾಗುವುದು ಸಹಜ. ಅದನ್ನು ತಿದ್ದಿಕೊಳ್ಳಬೇಕಾದದ್ದು ಮತ್ತು ಜನತೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದದ್ದು ಸರ್ಕಾರದ ಹೊಣೆಗಾರಿಕೆ. ನಿಜಕ್ಕೂ ಸರ್ಕಾರ ನಡೆಸುವ ದಸರಾದಲ್ಲಿ ಲೋಪಗಳಿದ್ದರೆ ಅದನ್ನು ಸರಿಪಡಿಸಿಕೊಳ್ಳುವಂತೆ ಸರ್ಕಾರಕ್ಕೆ ಹೇಳುವ ಹಕ್ಕು ಎಲ್ಲರಿಗೂ ಇದೆ. ಈ ರಾಷ್ಟ್ರದ ಪ್ರಜೆಯಾಗಿ ಪ್ರಮೋದಾದೇವಿಯವರಿಗೂ ಇದೆ. ಆದರೆ ತಾವಿನ್ನೂ ಅರಮನೆಯವರೆಂದು ಭಾವಿಸಿ, ಹಕ್ಕನ್ನು ಚಲಾಯಿಸುವಂತೆ ಸರ್ಕಾರಕ್ಕೆ ಸೂಚನೆ ನೀಡುವ ಹಕ್ಕು ಅವರಿಗಿಲ್ಲ. ಇದು ಅವರಿಗೆ ಗೊತ್ತಿರುವ ಸಂಗತಿಯೇ.

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಅದು ಭದ್ರತೆಗೆ ಹೇಗೆ ಮಾರಕವಾಗುತ್ತದೊ ತಿಳಿಯುವುದಿಲ್ಲ.
ದಸರಾಕ್ಕಾಗಿ ತಿಂಗಳ ಕಾಲ ಬೆವರು ಸುರಿಸುವ, ಅನ್ನ ನಿದ್ರೆ ದಣಿವುಗಳನ್ನು ಬದಿಗೊತ್ತಿ ಕೆಲಸ ಮಾಡುವ ಪೊಲೀಸರು ಅಂಬಾರಿಯ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವುದು ಅವರಿಗಿರುವ ಅತಿ ಸಣ್ಣ ಅವಕಾಶ. ಇದಕ್ಕೆ ನಾವೆಲ್ಲ ಹೆಮ್ಮೆ ಪಡಬೇಕು. ಅಂಬಾರಿಗೆ ಧಕ್ಕೆ ಮಾಡುವುದು ಅವರ ಉದ್ದೇಶವಾಗಿರುವುದು ಹೇಗೆ ಸಾಧ್ಯ? ಅವರು ಕೂಡಾ ಎಲ್ಲವೂ ಅಚ್ಚುಕಟ್ಟಾಗಿ ನಡೆಯಬೇಕೆಂದು ದುಡಿಯುವವರಲ್ಲಿ ಮುಖ್ಯರು. ಅದನ್ನು ನಾವು ಗೌರವಿಸಬೇಕು.
ಚಿನ್ನದ ಅಂಬಾರಿಯನ್ನು ಹೊರುವ ಆನೆಯ ವಿವರವನ್ನು ಮುಚ್ಚಿಡಲಾಗಿತ್ತು ಎಂದು ಪ್ರಮೋದಾದೇವಿ ಅವರು ಹೇಳಿದ್ದಾರೆ. ಅದು ಅರಣ್ಯ ಇಲಾಖೆಗೆ ಬಿಟ್ಟ ವಿಚಾರ. ಆನೆಗಳನ್ನಂತೂ ಇಲಾಖೆ ಮುಚ್ಚಿಟ್ಟಿರಲಿಲ್ಲ. ಯಾವ ಆನೆ ಅಂಬಾರಿ ಹೊರುತ್ತದೆ, ಯಾವ ಯಾವ ಆನೆಗಳು ಕುಮ್ಕಿ ಆನೆಗಳಾಗಿ ಜೊತೆಯಲ್ಲಿ ಇರುತ್ತವೆ ಇತ್ಯಾದಿ ಸಂಗತಿಗಳ ಬಗ್ಗೆ ಅರಣ್ಯ ಇಲಾಖೆ ಮತ್ತು ಮಾವುತರು ವಿವರವಾಗಿ ಅಧ್ಯಯನ ನಡೆಸಿ ತೀರ್ಮಾನಿಸಿರುತ್ತಾರೆ. ಅಂಬಾರಿ ಹೊರುವುದು ಒಂದು ತಾಲೀಮಿನಂತೆ, ದಸರಾದ ಪೂರ್ವ ಸಿದ್ಧತೆಯಾಗಿ ನಿತ್ಯ ಮೈಸೂರಿನ ಬೀದಿಗಳಲ್ಲಿ ನಡೆದಿರುತ್ತದೆ. ಇದರಲ್ಲಿ ಗುಟ್ಟೇನು ಬಂತು. ಪ್ರಮೋದಾದೇವಿ ಅವರಿಗೆ ಆನೆಗಳ ವಿವರವನ್ನು ಯಾರು ಕೊಡಬೇಕು ಮತ್ತು ಯಾಕಾಗಿ? ಎಂಬ ಪ್ರಶ್ನೆಯೂ ಇರುತ್ತದೆಯಲ್ಲವೇ? ಸರ್ಕಾರ ಈ ಪ್ರಶ್ನೆಗೆ ಉತ್ತರವನ್ನೂ ಹೇಳಿರಬಹುದು.
ಈ ಬಾರಿ ಅಂಬಾರಿಯನ್ನು ಹೊತ್ತ ಆನೆ ಅದೆಷ್ಟು ಗಂಭೀರವಾಗಿ ಹೆಜ್ಜೆ ಹಾಕಿ ಜನತೆಯ ಮನವನ್ನು ಗೆದ್ದಿತಲ್ಲಾ!
ದಸರಾ ನಾಡಹಬ್ಬ; ಜನತೆಯ ಹಬ್ಬ. ಅದು ಹೆಜ್ಜೆ ತಪ್ಪಿದರೆ ಅದನ್ನು ಸರಿಪಡಿಸುವ ಹೊಣೆ ಜನತೆಯದು; ಜನರ ಸರ್ಕಾರದ್ದು. ದಸರಾದಲ್ಲಿ ನೂರು ತಪ್ಪುಗಳು ಆಗಿರಬಹುದು. ಅದನ್ನು ಸರಿಪಡಿಸಲು ಸಲಹೆಕೊಡುವ ಅಧಿಕಾರ ಜನರಿಗಿದೆ; ಪ್ರಮೋದಾದೇವಿಯವರಿಗೂ ಇದೆ. ಜನತೆಯಲ್ಲಿ ಒಬ್ಬರಾಗಿ ಅವರು ಯಾವುದೇ ಸಲಹೆಯನ್ನು ಕೊಡಬಹುದು. ಅರಮನೆಗಳೇ ಇಲ್ಲದ ಸನ್ನಿವೇಶದಲ್ಲಿ, ಅರಸು ಮನೆತನದ ಹಕ್ಕು ಚಲಾಯಿಸುವ ಅಧಿಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಖಂಡಿತಾ ಯಾರಿಗೂ ಇಲ್ಲ.





