“ಬಗರ್ ಹುಕುಂ ಸಾಗುವಳಿ ರೈತರಿಗೆ ತಾವು ನೀಡಿದ್ದ ಆಶ್ವಾಸನೆ ಮರೆತ ರೋಣ ಶಾಸಕ ಜಿ.ಎಸ್. ಪಾಟೀಲ ಅವರ ಮನೆಗೆ ಇದೇ ಮೇ 29ರಂದು ಚಲೋ ಹಮ್ಮಿಕೊಳ್ಳಲಾಗಿದೆ’ ಎಂದು ಕಾರ್ಮಿಕ ಮುಖಂಡ ಪೀರು ರಾಠೋಡ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಸಿಪಿಐಎಂ ಕಾರ್ಯಾಲಯದಲ್ಲಿ ಕರ್ನಾಟಕ ಪ್ರಾಂ ರೈತ ಸಂಘ ವತಿಯಿಂದ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
“ತಾಲ್ಲೂಕಿನ ಬಗರ್ ಹುಕುಂ ಸಾಗುವಳಿದಾರರ ಸಾಗುವಳಿ ಚೀಟಿ ನೀಡುವುದು, ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ ರೈತರ ಬಾಕಿಯಿರುವ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವುದಾಗಿ ಚುನಾವಣೆ ಪೂರ್ವದಲ್ಲಿ ಶಾಸಕರು ಭರವಸೆ ನೀಡಿದ್ದರು. ಇದುವರೆಗೂ ಇದನ್ನು ಈಡೇರಿಸಲ್ಲ'”ಎಂದು ಆರೋಪಿಸಿದರು.
“ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ಬಗರ್ ಹುಕುಂ ಸಾಗುವಳಿದಾರರು ಉಳುಮೆ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ, ಸರಿಯಾದ ದಾಖಲೆ ನೀಡುತ್ತಿಲ್ಲ. ಈ ಹಿಂದೆ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಹಲವು ಹೋರಾಟಗಳ ಮೂಲಕ ಜಿಲ್ಲಾಧಿಕಾರಿ, ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರಿ ಆದೇಶಗಳನ್ನು ಗಾಳಿಗೆ ತೂರಿ, ಹುಸಿ ಭರವಸೆಗಳನ್ನು ನೀಡುವ ಮೂಲಕ ರೈತರನ್ನು ವಂಚಿಸಲಾಗುತ್ತಿದೆ” ಎಂದು ಆರೋಪಿಸಿದರು.
“ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಆಶ್ವಾಸನೆ ನೀಡಿದ್ದ ಶಾಸಕರು ಮರೆತಿದ್ದಾರೆ. ಹಾಗಾಗಿ ಇದೇ ಮೇ 29ರಂದು ಗಜೇಂದ್ರಗಡ ತಹಶೀಲ್ದಾರ್ ಕಚೇರಿ ಬಳಿ ಧರಣಿ ನಡೆಸಿ, ಸಂಜೆ ಪಾದಯಾತ್ರೆ ಮೂಲಕ ರೋಣದಲ್ಲಿರುವ ಶಾಸಕರ ಮನೆಗೆ ತೆರಳಲಾಗುವುದು” ಎಂದು ಹೇಳಿದರು.
ಸಭೆಯಲ್ಲಿ ರೈತ ಮುಖಂಡರಾದ ಬಾಲು ರಾಠೋಡ, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷರು ರೂಪೇಶ್ ಮಾಳೋತ್ತರ, ಪೀರು ರಾಠೋಡ, ಚನ್ನಪ್ಪ ಗುಗಳೋತ್ತರ, ಎಸ್ ಎಫ್ ಐ ಜಿಲ್ಲಾ ಅಧ್ಯಕ್ಷರು ಚಂದ್ರು ರಾಠೋಡ, ಮೆಹಬೂಬ್ ಹವಾಲ್ದಾರ್, ವೀರೇಶ ಮಾಳೋತ್ತರ, ಶಂಕ್ರವ್ವ ಮಾಳೋತ್ತರ, ದೇವಕ್ಕ ಗುಗ್ಲೊತ್ತರ್, ಶೀವವ್ವ, ಪೀರವ್ವ ರಾಠೋಡ, ಸಂಕ್ರವ್ವ, ವೀರೇಶ ರಾಠೋಡ, ದೀಪಲೇಪ್ಪ, ಗೋವಿಂದಪ್ಪ, ಮಂಜುನಾಥ್, ಕೃಷ್ಣಪ್ಪ ರಾಠೋಡ, ಮಾರುತಿ, ಮಂಜುನಾಥ್, ಹನಮಂತಪ್ಪ, ಶಿವಪ್ಪ ರಾಠೋಡ ಮುಂತಾದವರು ಇದ್ದರು.




