“ರಾಜ್ಯದ ಶೋಷಿತ ಸಮುದಾಯಗಳ ಹಕ್ಕುಗಳ ರಕ್ಷಣೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಜುಲೈ 3ಕ್ಕೆ ಶುಕ್ರವಾರ ಮಧ್ಯಾಹ್ನ 12:00 ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) ಬೃಹತ್ ದಲಿತ ಜನಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ” ಎಂದು ಡಿಎಸ್ಎಸ್ ಜಿಲ್ಲಾ ಸಂಚಾಲಕ ಬಾಲರಾಜ ಅರಬರ್ ಹೇಳಿದರು.
ಗದಗ ಪಟ್ಟಣದ ಪತ್ರಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಮತ್ತು ಡಿ.ಸಿ.ಆರ್.ಇ ಬಲವರ್ಧನೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ವಿಶೇಷ ಘಟಕ ಯೋಜನೆಯ ಹಣವನ್ನು ನಿಯಮಬಾಹಿರವಾಗಿ ಸಾರಿಗೆ ಇಲಾಖೆಯ ಸಿಬ್ಬಂದಿಗಳ ವೇತನಕ್ಕೆ ನೀಡಿರುವ 200 ಕೋಟಿಗೂ ಅಧಿಕ ಹಣವನ್ನು ಮರು ವಸೂಲಿ ಮಾಡಬೇಕು ಹಾಗೂ ಇದಕ್ಕೆ ಕಾರಣರಾದ ಹಣಕಾಸು ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಡಿಎಸ್ಎಸ್ ರೋಣ ತಾಲೂಕು ಸಂಚಾಲಕ ಹನಮಂತ ಚಲವಾದಿ ಮಾತನಾಡಿ, “ವಿಶೇಷ ಘಟಕ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಏಕಗವಾಕ್ಷಿ ನೀತಿಯನ್ನು ಜಾರಿಗೊಳಿಸಬೇಕು. ವಿಶೇಷ ಘಟಕ ಯೋಜನೆ ಕಾಯ್ದೆಯ ಸೆಕ್ಷನ್ 7(2)ಕ್ಕೆ ತಿದ್ದುಪಡಿ ತಂದು, ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಮಾತ್ರ ಬಳಸಿಕೊಳ್ಳುವಂತೆ ಮಾಡಬೇಕು. ಪರಿಶಿಷ್ಟ ಜಾತಿಯ ಪ್ರತಿ ಭೂ ರಹಿತ ಕೃಷಿ ಕಾರ್ಮಿಕರ ಕುಟುಂಬಕ್ಕೆ ಕನಿಷ್ಠ 2 ಎಕರೆ ಭೂಮಿಯನ್ನು ಒದಗಿಸಬೇಕು ಮತ್ತು ನೆನೆಗುದಿಗೆ ಬಿದ್ದಿರುವ ಭೂ ಒಡೆತನ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸಬೇಕು” ಎಂದರು.
ಡಿಎಸ್ಎಸ್ ಹಿರಿಯ ಮುಖಂಡರು ಡಿ.ಎಚ್ ಪೂಜಾರ ಮಾತನಾಡಿ, “ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಮತ್ತು ಕರ್ನಾಟಕ ಬೌದ್ಧ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಅನುದಾನ ಒದಗಿಸಬೇಕು. ದಲಿತ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಹೆಚ್ಚಿನ ಅನುದಾನ ನೀಡಿ, ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಹಾಸ್ಟೆಲ್ ಕ್ಯಾಂಪಸ್‌ಗಳನ್ನು ನಿರ್ಮಿಸಬೇಕು” ಎಂದು ಹೇಳಿದರು.
”ಸರ್ಕಾರದ ದಲಿತ ವಿರೋಧಿ ಹಾಗೂ ಶೋಷಿತ ಸಮುದಾಯಗಳ ಮೇಲಿನ ನಿರುತ್ಸಾಹದ ಧೋರಣೆಗಳನ್ನು ಖಂಡಿಸಿ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಗದಗ ಜಿಲ್ಲೆಯ ಹಾಗೂ ರಾಜ್ಯದಾದ್ಯಂತ ಇರುವ ಪ್ರಗತಿಪರ ಚಿಂತಕರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು” ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿಯು ಪತ್ರಿಕಾಗೋಷ್ಠಿಯ ಮೂಲಕ ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಎಸ್ಎಸ್ ಮುಖಂಡರು ಎಚ್.ಡಿ.ಪೂಜಾರ್, ಸತೀಶ್ ಪಾಸಿ, ನಾಗರಾಜ್ ಗೋಕಾವಿ, ಬಾಲರಾಜ್ ಅರಬರ, ಪೂಜಾ ಬೇವೂರು, ಹನುಮಂತ್ ಚಲವಾದಿ, ಚೇತನಾ ಬೆಟಗೇರಿ, ಮುತ್ತಪ್ಪ ಭಜಂತ್ರಿ, ಸಂತೋಷ್ ಬಣಕಾರ್, ಕೆಂಚಪ್ಪ ಮ್ಯಾಗಿರಿ, ಮಂಜುನಾಥ್ ಚಲವಾದಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




