“ಮುಂಡರಗಿ ತಾಲ್ಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ದಲಿತ ಮಾದಿಗ ಸಮುದಾಯದ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ 50ಕ್ಕೂ ಹೆಚ್ಚು ಜನ ಎಸ್. ಟಿ ಪಂಗಡಕ್ಕೆ ಸೇರಿದವರಾಗಿದ್ದು ಮೇಲ್ಜಾತಿಯವರ ಕುಮ್ಮಕ್ಕಿನಿಂದ ಸಹೋದರ ಮಾದಿಗ ಸಮುದಾಯದ ಮೇಲೆ ಹಲ್ಲೆ ನಡೆಸಿದೆ” ಎಂದು ಜಿಲ್ಲಾ ಚಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಆನಂದ ಶಿಂಗಾಡಿ ಹೇಳಿದರು.
ಗದಗ ಪಟ್ಟಣದ ಜಿಲ್ಲಾಸ್ಪತ್ರೆಯಲ್ಲಿ ಹಲ್ಲೆಗೋಳಗಾದ ಗಾಯಾಳುಗಳನ್ನು ಭೇಟಿ ಮಾಡಿ ವಿಚಾರಿಸಿ ಮಾತನಾಡಿದರು.
“ಎಸ್ ಟಿ ಸಮುದಾಯಕ್ಕೆ ಸೇರಿದವರ ಹೊಲದಲ್ಲಿ ಕೇಳದೆ ನೀರು ಕುಡಿದ ಎನ್ನುವ ಒಂದೇ ಒಂದು ಕಾರಣಕ್ಕೆ ಮಾದಿಗ ಸಮುದಾಯದ ಮೇಲೆ ಎಸ್ ಟಿ ಸಮುದಾಯದ ಯುವಕರು ಏಕಾಏಕಿ ಹಲ್ಲೆ ನಡೆಸಿದೆ. ಮೂರು ಜನರ ನಡುವೆ ನಡೆದ ಈ ಜಗಳದಲ್ಲಿ ಮೂವತ್ತಕ್ಕೂ ಹೆಚ್ಚು ಮಾದಿಗ ಸಮುದಾಯದ ಜನರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡುವ ಮೂಲಕ ಪುನಃ ಇದೇ ಸಮುದಾಯದ ಮೇಲೆ 122 ಜನರ ಮೇಲೆ ಕೇಸ್ ದಾಖಲಿಸಿದೆ. ಗ್ರಾಮದಲ್ಲಿ ಮಕ್ಕಳು ಮಹಿಳೆಯರೆನ್ನದೆ ಹಿಗ್ಗಾಮುಗ್ಗಾ ಥಳಿಸಿ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ” ಎಂದು ಹೇಳಿದರು.
“ದಲಿತ ಸಮುದಾಯಗಳ ಮೇಲೆ ಜಿಲ್ಲೆಯಲ್ಲಿ ಎಸ್ ಟಿ ಸಮುದಾಯದವರು ಮೇಲ್ಜಾತಿಯ ಕೆಲವು ಜಾತಿವಾದಿಗಳ ಕುಮ್ಮಕ್ಕಿನಿಂದ ಹಲ್ಲೆಗಳು ನಿರಂತರವಾಗಿ ನಡೆಯುತ್ತಲೇ ಇವೆ” ಎಂದು ಆರೋಪಿಸಿದರು.
“ಎಸ್ ಸಿ, ಎಸ್ ಟಿ ಪಟ್ಟಿಯಲ್ಲಿ ಬರುವ ಈ ಎರಡು ಸಮುದಾಯಗಳು ಜಿಲ್ಲೆಯಲ್ಲಿ ನಿರಂತರವಾಗಿ ಪರಸ್ಪರ ಹಲ್ಲೆಗೊಳಗಾಗುತ್ತಿವೆ. ಬಾಬಾಸಾಹೇಬ ಅಂಬೇಡ್ಕರ್ ಅವರ ಆಶಯಗಳನ್ನು ಮುಂದಿಟ್ಟುಕೊಂಡು ಹೋಗಬೇಕಾದ ಸಮುದಾಯ ಇವತ್ತು ಬೇರೆ ಬೇರೆ ಸಮುದಾಯದ ಒಡಕಿನ ನೀತಿಗೆ ಬಲಿಯಾಗುತ್ತಿದೆ” ಎಂದು ಹೇಳಿದರು.
ದಲಿತ ಮುಖಂಡರು ಮುತ್ತು ಬಿಳಿಯಲಿ ಮಾತನಾಡಿ, “ಎಸ್ ಟಿ ಸಮುದಾಯದಿಂದ ಮಾರಾಣಾಂತಿಕವಾಗಿ ಹಲ್ಲೆಗೊಳಗಾದ ಮಾದಿಗ ಸಮುದಾಯದ 28 ಜನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮುಂಡರಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಎಸ್.ಟಿ ಸಮುದಾಯದ 8 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಒಟ್ಟು 122 ಜನರ ಮೇಲೆ ಕೇಸ್ ದಾಖಲಿಸಿದ್ದಾರೆ. ಈ 122 ಜನರಲ್ಲಿ 4 ಜನ ಸುಮಾರು ವರ್ಷಗಳ ಹಿಂದೆ ತಿರಿಹೋಗಿದ್ದಾರೆ. ನೈಜವಾಗಿ ಪ್ರಕರಣ ದಾಖಲಿಸಬೇಕಿದ್ದರೆ ಹಲ್ಲೆಗೊಳಗಾದವರ ಮೇಲೆ ದಾಖಲಿಸಬಹುದಿತ್ತು, ತೀರಿ ಹೋದವರು, ಊರಲ್ಲಿ ಇಲ್ಲದಿರುವವರು ಕಾಲೇಜ್ ಹೋಗಿರುವವರು, ಕೆಲಸಕ್ಕೆ ಹೋಗಿದ್ದವರ ಮೇಲೆ ಪ್ರಕರಣ ದಾಖಲಿಸಿರುವುದನ್ನು ನೋಡಿದರೆ ಇದರಲ್ಲಿ ಮಾದಿಗ ಸಮುದಾಯದ ವಿರುದ್ದ ಕೆಲವು ಮೇಲ್ಜಾತಿ ಸಮುದಾಯಗಳು ಷಡ್ಯಂತ್ರ ಮಾಡುತ್ತಿರುವುದು ಎದ್ದು ಕಾಣುತ್ತದೆ” ಎಂದು ಕಿಡಿಕಾರಿದರು.
“ಹೀಗಾಗಿ ಇಂತಹ ಘಟನೆಗಳು ಸಂಭವಿಸಿದಾಗ ಎರಡು ಸಮುದಾಯಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳವುದನ್ನು ಬಿಟ್ಟು ಮೇಲ್ಜಾತಿಯ ಕುಮ್ಮಕ್ಕಿನಿಂದ ಹಲ್ಲೆ ಮಾಡಿ ಅವರ ಮೇಲೆ ಪ್ರಕರಣ ದಾಖಲಿಸಿವುದು ಸಂವಿಧಾನಕ್ಕೆ ಮತ್ತು ಬಾಬಾಸಾಹೇಬ ಅಂಬೇಡ್ಕರ್ ಅವರ ಆಶಯಕ್ಕೆ ಧಕ್ಕೆ ತರುವಂತೆ ಮಾಡಿದೆ” ಎಂದರು.
ದಲಿತ ಮುಖಂಡರು ಬಸವರಾಜ ಕಡೆಮನಿ ಮಾತನಾಡಿ, “ಇಂತಹ ಘಟನೆಯನ್ನು ಗದಗ ಜಿಲ್ಲಾ ಛಲಾವಾದಿ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ. ಹಲ್ಲೆಗೊಳಗಾದ ಅಸ್ಪ್ರಶ್ಯ ಸಮುದಾಯಕ್ಕೆ ಹೆಚ್ಚುವರಿ ಚಿಕಿತ್ಸೆ ನೀಡಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದು.
ಆಸ್ಪತ್ರೆಗೆ ತೆರಳಿ ಹಲ್ಲೆಗೊಳಗಾದವರ ಯೋಗ ಕ್ಷೇಮ ವಿಚಾರಿಸಿದ ಸಂದರ್ಭದಲ್ಲಿ ಗದಗ ಜಿಲ್ಲಾ ಛಲವಾದಿ ಅನಿಲ ಕಾಳೆ ಬಸವರಾಜ ಬಿಳೆಯಲಿ ಮುತ್ತು ಚೌಡಣ್ಣವರ ಪರಶು ಕಾಳೆ ಶರೀಫ್ ಬಿಳೆಯಲಿ ಸೇರಿದಂತೆ ಅನೇಕ ಮುಖಂಡರು ಘಟನೆಯನ್ನು ಖಂಡಿಸಿದ್ದಾರೆ.




