ಹಾಸನ ನಗರದ ಕಾಲೇಜಿನೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಿಶ್ಚಲಾನಂದ ಸ್ವಾಮಿ “ಎಡಪಂಥೀಯರು ಮೋಸ್ಟ್ ಡೇಂಜರಸ್” ಎಂದು ಹೇಳುವ ಮೂಲಕ ಯಾವುದೇ ಆಧಾರಗಳಿಲ್ಲದೆ ಎಡಪಂಥೀಯರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಸ್ವಾಮಿಜಿಯ ಈ ಹೇಳಿಕೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಸಿಪಿಐಎಂ ಹಾಸನ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಎಡಪಂಥೀಯರೆಂದರೆ ಅದರಲ್ಲಿ ಪ್ರಗತಿಪರರು, ಜಾತ್ಯಾತೀತವಾದಿಗಳು, ಪ್ರಜಾಪ್ರಭುತ್ವವಾದಿಗಳು, ಸಂವಿಧಾನದ ಪರವಾಗಿರುವವರು, ದಲಿತ, ರೈತ, ಕಾರ್ಮಿಕ, ಮಹಿಳಾ ಮತ್ತು ಜನಪರ ಹೋರಾಟಗಾರರು, ಮಾನವ ಹಕ್ಕುಗಳ ಪರವಾಗಿ ಕೆಲಸ ಮಾಡುವವರು, ಪತ್ರಕರ್ತರು, ಸಮಾಜವಾದಿಗಳು ಹಾಗೂ ಕಮ್ಯೂನಿಸ್ಟರು ಎಲ್ಲರೂ ಬರುತ್ತಾರೆ. ಎಡಪಂಥೀಯರು ಎಂದರೆ ವಿಶಾಲವಾದ ಅರ್ಥದಲ್ಲಿ ಆಡಳಿತ ವ್ಯವಸ್ಥೆಯ ಜನವಿರೋಧಿ ನೀತಿಗಳನ್ನು ವಿರೋಧಿಸುವವರು ಎಂದರ್ಥವಾಗುತ್ತದೆ.

ಎಡಪಂಥೀಯರು ಸ್ವಾಮಿಜಿಯವರು ಮಾತನಾಡಿರುವ ರೀತಿಯಲ್ಲಿ ತಮ್ಮ ಸ್ವಾರ್ಥಕ್ಕಾಗಿ ಜನರ ಹಿತವನ್ನು ಬಲಿಕೊಡುವವರಲ್ಲ. ಬದಲಿಗೆ ಜನರ ಹಿತಕ್ಕಾಗಿ ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡಿದವರಿದ್ದಾರೆ. ಎಡಪಂಥೀಯರು ಜನರ ಅದರಲ್ಲೂ ಸಮಾಜದ ತಳಸ್ಥರದಲ್ಲಿರುವ ಬಡಜನರು ರೈತರು, ಕಾರ್ಮಿಕರು, ದಲಿತರು, ಮಹಿಳೆಯರ ಜೀವನ ಮಟ್ಟವನ್ನು ಉತ್ತಮಗೊಳಿಸಲು ನಿರಂತರವಾಗಿ ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮಾತ್ರವಲ್ಲ, ಈ ಹೋರಾಟಗಳಿಂದ ಕೋಟ್ಯಾಂತರ ದುಡಿಯುವ ವರ್ಗಕ್ಕೆ ನ್ಯಾಯ ಒದಗಿಸುತ್ತಾ ಬಂದಿದ್ದಾರೆ. ಭಾರತದ ರಾಜಕೀಯ ಸಂದರ್ಭದಲ್ಲಿ ಎಡಪಂಥೀಯರು ಅಸ್ಪೃಷ್ಯತೆ, ಜಾತಿವಾದ, ಕೋಮುವಾದ, ಭ್ರಷ್ಟಾಚಾರ, ಮಹಿಳಾ ಶೋಷಣೆ ವಿರುದ್ಧ ಮತ್ತು ಪರಿಸರ ಉಳಿವಿಗಾಗಿ ಹಾಗೂ ಭಯೋತ್ಪಾದಕ ಶಕ್ತಿಗಳ ವಿರುದ್ಧ ದೇಶದ ಸಂವಿಧಾನ ಆಶಯಗಳಿಗಾಗಿ ತಮ್ಮ ಬದುಕು ಮತ್ತು ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ.
ನಿಶ್ಚಲಾನಂದ ಸ್ವಾಮೀಜಿ ಮಾತನಾಡುತ್ತ ಎಡ ಪಂಥೀಯರು ಸರ್ಕಾರದ ವಿರುದ್ಧ ಮಾತನಾಡುತ್ತಾರೆ. ಅವರು ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಎಂದು ಬೀಸು ಹೇಳಿಕೆಯನ್ನು ನೀಡಿದ್ದಾರೆ. ಎಡಪಂಥೀಯರು ಯಾವುದೇ ಸರ್ಕಾರದ ಜನವಿರೋಧಿ ನೀತಿಗಳನ್ನ ವಿರೋಧಿಸುವಲ್ಲಿ ಮತ್ತು ಅದನ್ನು ಪ್ರತಿಭಟಿಸುವಲ್ಲಿ ಮುಂಚೂಣಿಯಲ್ಲಿರುತ್ತಾರೆ. ಇದೇ ಸ್ವಾಮೀಜಿಗಳು ಜನರಿಗೆ ಸೇವೆಮಾಡಲು ಸಿಕ್ಕ ಸರಕಾರಿ ಅಧಿಕಾರಿಯ ಅವಕಾಶವನ್ನು ಬಿಟ್ಟು ಜನರಿಗೆ ಧರ್ಮಾಂದತೆಯನ್ನು ಬೋಧಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆಯೋ ಅಥವಾ ಜನರ ಬದುಕಿನ ಪ್ರಶ್ನೆಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡುವುದರಿಂದಲೋ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕಾರ್ಯದರ್ಶಿ ಹೆಚ್.ಆರ್. ನವೀನ್ ಕುಮಾರ್ ತಿಳಿಸಿದರು.
ಭಾರತದ ಜಾತಿಗ್ರಸ್ಥ ಶ್ರೇಣೀಕೃತ ಸಮಾಜದಲ್ಲಿ ಶೂದ್ರ ಸಮುದಾಯಕ್ಕೆ ಸೇರಿದ ಮಠದ ಸ್ವಾಮಿಯಾಗಿ ಆ ಸಮಾಜದ ಬಡವರ ಬಗ್ಗೆ ರೈತ, ಕಾರ್ಮಿಕರ ಬದುಕಿನ ಬಗ್ಗೆ ಎಂದಾದರೂ ಚಿಂತಿಸಿದ್ದೀರ, ಅವರ ಸಂಕಷ್ಟಗಳ ಪರ ಎಂದಾದರೂ ಮಾತಮಾಡಿದ್ದೀರ, ನೀವು ಪ್ರತಿನಿಧಿಸುವ ಸಮುದಾಯದ ದುಡಿಯುವ ವರ್ಗದ ವಿರುದ್ಧದ ನೀತಿಗಳನ್ನು ಯಾವುದೇ ಪಕ್ಷದ ಕೇಂದ್ರ ರಾಜ್ಯ ಸರ್ಕಾರಗಳು ಜಾರಿಗೆ ತಂದಾಗ ಅವುಗಳ ವಿರುದ್ಧ ಎಂದಾದರೂ ಧ್ವನಿ ಎತ್ತುವ ಕೆಲಸ ಮಾಡಿದ್ದೀರ. ಇವ್ಯಾವುಗಳನ್ನೂ ನೀವು ಮಾಡಿಲ್ಲವೆಂದರೆ ಎಡಪಂಥೀಯರ ಬಗ್ಗೆ ಮಾತನಾಡಲು ನಿಮಗೆ ಯಾವುದೇ ನೈತಿಕತೆ ಇಲ್ಲ. ನೀವು ಎಡಪಂಥೀಯರನ್ನು ಡೇಂಜರಸ್ ಎನ್ನುವ ಮೂಲಕ ಶೋಷಕ ಆಳುವ ವರ್ಗದ ಪರವಾಗಿ ನಿಂತು ಜಾತಿವಾದಿ ಮತ್ತು ಕೋಮುವಾದಿಗಳ ಜೊತೆ ಸೇರಿ ಬಲಪಂಥೀಯರಾಗಿದ್ದೀರಿ. ಆ ಮೂಲಕ ನಮ್ಮ ಸಂವಿಧಾನದ ಮೂಲ ಆಶಯಗಳಾದ ಸಮಾಜವಾದಿ ಮತಧರ್ಮ ಪ್ರಜಾಸತ್ತಾತ್ಮಕ ಗಣತಂತ್ರ ಭಾರತದ ವಿರುದ್ಧವಾಗಿದ್ದೀರಿ ಎನ್ನುವುದನ್ನು ತೋರ್ಪಡಿಸಿಕೊಂಡಿದ್ದೀರಿ. ನಿಮ್ಮಂತಹ ಸಂವಿಧಾನ ವಿರೋಧಿ ಬಲಪಂಥೀಯರ ಬಾಯಿಂದ ಎಡಪಂಥೀಯರ ಕುರಿತು ಇನ್ನೆಂತಹ ಅಭಿಪ್ರಾಯಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕೆಎಸ್ಆರ್ಟಿಸಿ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳ ಪರದಾಟ
ಕಾಲೇಜು ಮಕ್ಕಳನ್ನು ಉದ್ದೇಶಿಸಿ ಕಾರ್ಯಕ್ರಮದ ಆಶಯಗಳಿಗೆ ಹಾಗೂ ತಮ್ಮ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡದೆ ಅನಗತ್ಯ ವಿಷಯಗಳನ್ನು ಪ್ರಸ್ತಾಪ ಮಾಡುವ ಮೂಲಕ ತಮ್ಮ ಭೌದಿಕ್ಕ ದಾರಿದ್ರ್ಯತನವನ್ನು ತಾವೇ ಪ್ರದರ್ಶನ ಮಾಡಿಕೊಂಡಿದ್ದಾರೆ. ಇಂತಹ ಬೀಸು ಹೇಳಿಕೆಗಳನ್ನು ವಾಪಸ್ ಪಡೆಯಬೇಕೆಂದು ಸಿಪಿಐಎಂ ಹಾಸನ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ. ಹಾಗೂ ಆ ಕಾರ್ಯಕ್ರಮದ ಆಯೋಜಕರೂ ಕೂಡ ಈ ಕುರಿತು ಸಾರ್ವಜನಿಕವಾಗಿ ಹೇಳಿಕೆ ನೀಡಿ ಸ್ವಾಮೀಜಿ ಅವರ ವಯಕ್ತಿಕ ಅಭಿಪ್ರಾಯದಿಂದ ಅಂತರ ಕಾಯ್ದುಕೊಳ್ಳಬೇಕೆಂದು ಜಿಲ್ಲಾ ಕಾರ್ಯದರ್ಶಿ ಹೆಚ್.ಆರ್. ನವೀನ್ ಕುಮಾರ್ ಒತ್ತಾಯಿಸಿದ್ದಾರೆ.




