ಬೆಳೆ ವಿಮಾ ಯೋಜನೆಯ ಗೊಂದಲಗಳನ್ನು ನಿವಾರಿಸಬೇಕು. ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಬೇಕು. ಬೀಜ ಹಾಗೂ ರಸಗೊಬ್ಬರಗಳು ಅಧಿಕೃತ ಬೆಲೆಯಲ್ಲಿ ರೈತರಿಗೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಒತ್ತಾಯಿಸಿದರು.
ಹಾವೇರಿ ಪಟ್ಟಣದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಚಂದ್ರಶೇಖರ ಕೋಡಿಹಳ್ಳಿ ಬಣ) ವತಿಯಿಂದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗಳ ಗೊಂದಲ ನಿವಾರಣೆ ಹಾಗೂ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಅನಿಲ್ ಡೊಳ್ಳಿನ ಮಾತನಾಡಿ, “ಹಾವೇರಿ ಜಿಲ್ಲೆಯ ಅತೀ ಹೆಚ್ಚು ಅಡಿಕೆ ಬೆಳೆಗಾರರು ಹಾನಗಲ್ ತಾಲೂಕಿನಲ್ಲಿ ಇದ್ದು, ಅಡಿಕೆ ಮಾರುಕಟ್ಟೆಯನ್ನು ಹಾನಗಲ್ ಮಾರುಕಟ್ಟೆಯಲ್ಲಿ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗಲು ಮಾರುಕಟ್ಟೆಯನ್ನು ತೆರೆಯಬೇಕು” ಎಂದು ಆಗ್ರಹಿಸಿದರು.
“ರೈತರು ಟ್ರ್ಯಾಕ್ಟರ್ ಖರೀದಿಸಲು ಆಧಾರ್ ಕಾರ್ಡ್, ಆರ್‌ಟಿಸಿ ಉತಾರ ಇದ್ದರೂ ಕೂಡಾ ರೈತರಿಗೆ ಬೋನಫೈಡ್ ಸರ್ಟಿಫಿಕೇಟ್ ಕೇಳುತ್ತಿದ್ದು, ಸದರ ಸರ್ಟಿಫಿಕೇಟ್ ಪಡೆಯಲು ಕಚೇರಿಗಳಿಗೆ ಅಲೆದಾಡುವಂತಾಗಿದೆ. ಮತ್ತು 2ರಿಂದ 3 ಸಾವಿರ ಹಣ ವಸೂಲಿ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಆಧಾರ್ ಕಾರ್ಡ್ ಮತ್ತು ಆರ್‌ಟಿಸಿ ಉತಾರದ ಮೇಲೆಯೇ ಆರ್‌ಟಿಒ ಆಫೀಸಿನಲ್ಲಿ ಟ್ರ್ಯಾಕ್ಟರ್‌ಗಳ ನೋಂದಣಿಗೆ ಅವಕಾಶ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಟಿ.ಡಿ. ಬಸವರಾಜ ಮಾತನಾಡಿ, “ರೈತರು ಜಮೀನಿನಲ್ಲಿ ಆಕಸ್ಮಿಕವಾಗಿ ಹಾವು ಕಚ್ಚಿ, ಸಿಡಿಲಿನಿಂದ ಸಾವನ್ನಪ್ಪಿದರೆ ಕೂಡಲೇ ಅವರ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೊಡಬೇಕು. ರೈತರು ಟ್ರೇಲರ್ ತೆಗೆದುಕೊಳ್ಳುವಾಗ ಟ್ರೇಲರಿಗೆ 1,70,000 ರೂಪಾಯಿಗಳಿದ್ದು, ಅದಕ್ಕೆ ಚಾಸಿ ನಂಬರ್ (ವಿಐಎನ್) ನೀಡುವ ಮುಖಾಂತರ ರಿಜಿಸ್ಟರ್ ಮಾಡಲು ಅನುಕೂಲವಿದೆ. ಆದರೆ, 2ರಿಂದ 4 ಲಕ್ಷ ಹಣ ಕೊಟ್ಟು ಕಾಳು ಹಸನು ಮಾಡುವ ಯಂತ್ರವನ್ನು ತೆಗೆದುಕೊಂಡಲ್ಲಿ ಅದಕ್ಕೆ ಚಾಸಿ ನಂಬರ್ ಕೊಡುವುದಿಲ್ಲ. ಟ್ರೇಲರಿಗೆ ಚಾಸಿ ನಂಬರ್ ಕೊಡುವ ಹಾಗೆಯೇ ಕಾಳು ಹಸನು ಮಾಡುವ ಯಂತ್ರಕ್ಕೂ ಚಾಸಿ ನಂಬರ್ ನೀಡಬೇಕು” ಎಂದು ಬೇಡಿಕೆ ಇಟ್ಟರು.
ಈ ಸಂದರ್ಭದಲ್ಲಿ ಎಂ. ಅರಳಿಮರದ, ಜಿಲ್ಲಾ ಕಾರ್ಯಾಧ್ಯಕ್ಷರು ಬಸವಂತಪ್ಪ ಶಂಕ್ರಪ್ಪ ಮೆಳ್ಳಿಹಳ್ಳಿ, ಹಾವೇರಿ ನಗರ ಜಿಲ್ಲಾಧ್ಯಕ್ಷರು ಚನ್ನವೀರಪ್ಪ ಕರೆಯಣ್ಣನವರ, ಹಾವೇರಿ ತಾಲೂಕು ಅಧ್ಯಕ್ಷರು ಚಂದ್ರಪ್ಪ ವಾಯ್ ಬಂಕಾಪುರ, ಹಾನಗಲ್ ತಾಲೂಕು ಅಧ್ಯಕ್ಷರು ಚನಬಸಪ್ಪ ಹಾವಣಗಿ, ಶಿಗ್ಗಾಂವ ತಾಲೂಕು ಅಧ್ಯಕ್ಷರು ಆನಂದ ಕೆಳಗಿನಮನಿ, ರಾಣೇಬೆನ್ನೂರು ತಾಲೂಕು ಅಧ್ಯಕ್ಷ ಚಂದು ಪಾಟೀಲ್, ಸವಣೂರು ತಾಲೂಕು ಅಧ್ಯಕ್ಷ ಬಸವರಾಜ ಸಾಲವಡಗಿ, ಹಿರೇಕೆರೂರು ತಾಲೂಕು ಅಧ್ಯಕ್ಷ ಹಜರತ್ ಅಲಿ ಪಟ್ಟಣಶೆಟ್ಟಿ, ಮಾರ್ತಂಡಪ್ಪ ಮೈಲಾರಪ್ಪ ನೆಗಳೂರ ಉಪಸ್ಥಿತರಿದ್ದರು.




