ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಬಿಜೆಪಿ ಅಧಿಕಾರಕ್ಕೇರಿದೆ. ಅದಾದ ಬಳಿಕ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ರಾಜ್ಯದಲ್ಲಿ ಮುಖ್ಯ ವಿರೋಧ ಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಂತಿಯುತವಾಗಿ ಪ್ರತಿಭಟನೆ ನಡೆಸಲೂ ಅವಕಾಶ ಇಲ್ಲದಂತಾಗಿದೆ. ಇತ್ತೀಚೆಗೆ ಟಿಎಂಸಿ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯ ಮೇಲೆ ಆಡಳಿತಾರೂಢ ಬಿಜೆಪಿ ಕಾರ್ಯಕರ್ತರು ಭಾರಿ ದಾಳಿ ನಡೆಸಿದ್ದಾರೆ.
ಬಾರೂಯಿಪುರದಲ್ಲಿ ನಡೆದ ಅಪ್ರಾಪ್ತೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಕಲ್ಕತ್ತಾ ಹೈಕೋರ್ಟ್ ಅನುಮತಿ ಪಡೆದು ಟಿಎಂಸಿ ಕೋಲ್ಕತಾದಲ್ಲಿ ರ್‍ಯಾಲಿ ಹಮ್ಮಿಕೊಂಡಿತ್ತು. ಆದರೆ ಈ ರ್‍ಯಾಲಿ ವೇಳೆ ಬಿಜೆಪಿ ಕಾರ್ಯಕರ್ತರು ಟಿಎಂಸಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದು, ಹಿಂಸಾಚಾರ ಭುಗಿಲೆದ್ದಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ | ಸುಳ್ಳು ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತನ ಬಂಧನ
ದಕ್ಷಿಣ ಕೋಲ್ಕತಾದ ಬಾಲಿಗಂಜ್‌ನಿಂದ ಹಜ್ರಾ ಕ್ರಾಸಿಂಗ್‌ವರೆಗೆ ಶಾಂತಿಯುತ ಮೆರವಣಿಗೆಯ ಹಮ್ಮಿಕೊಳ್ಳಲಾಗಿತ್ತು. ಆದರೆ ಮಾರ್ಗದುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದರು. ಪ್ರತಿಭಟನಾಕಾರರ ದಾರಿಗೆ ಮಾನವ ಸರಪಳಿ ನಿರ್ಮಿಸಿ ಅಡ್ಡಿಪಡಿಸಿದ ಬಿಜೆಪಿ ಕಾರ್ಯಕರ್ತರು, ಟಿಎಂಸಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಇದು ಉಭಯ ಪಕ್ಷಗಳ ನಡುವೆ ತೀವ್ರ ಕೈಕೈ ಮಿಲಾಯಿಸುವಿಕೆಗೆ ಕಾರಣವಾಯಿತು.
ಈ ಘಟನೆಯಲ್ಲಿ ಮಹಿಳಾ ಕಾರ್ಯಕರ್ತೆಯರೂ ಸೇರಿದಂತೆ ಕನಿಷ್ಠ 41 ಟಿಎಂಸಿ ಕಾರ್ಯಕರ್ತರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಪೊಲೀಸರ ವಿರುದ್ಧ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶ
ಈ ಹಿಂಸಾಚಾರದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಟಿಎಂಸಿ ಮುಖ್ಯಸ್ಥೆ ಹಾಗೂ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಕೋರ್ಟ್ ಅನುಮತಿ ಪಡೆದು ನಡೆಸುತ್ತಿದ್ದ ರ್‍ಯಾಲಿಯ ಮೇಲೆಯೇ ಬಿಜೆಪಿ ಗೂಂಡಾಗಳು ವ್ಯವಸ್ಥಿತವಾಗಿ ದಾಳಿ ನಡೆಸಿದ್ದಾರೆ” ಎಂದು ನೇರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ | ಟಿಎಂಸಿ ಶಾಸಕಾಂಗ ಸಭೆಗೆ 60 ಶಾಸಕರು ಗೈರು; ಮಮತಾ ಪಕ್ಷಕ್ಕೆ ಪಕ್ಷಾಂತರದ ಭೀತಿ?
“ನಮ್ಮ ಮಹಿಳಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಯುತ್ತಿದ್ದರೂ, ರಕ್ತಸಿಕ್ತವಾಗಿ ಕಾರ್ಯಕರ್ತರು ಬೀಳುತ್ತಿದ್ದರೂ ಪೊಲೀಸರು ಮೂಕಸಾಕ್ಷಿಗಳಾಗಿ ನಿಂತಿದ್ದರು. ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರು ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ನಾಶವಾಗಿದೆ,” ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದರೊಂದಿಗೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ಎರಡು ತಿಂಗಳಲ್ಲೇ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿದ್ದು, ಗೂಂಡಾರಾಜ್ ತಲೆದೋರಿದೆ ಎಂದು ವಿಪಕ್ಷಗಳು ಜರೆದಿವೆ. ಮತ್ತೊಂದೆಡೆ, ಪ್ರತಿಭಟನೆಗಳನ್ನು ಹತ್ತಿಕ್ಕಲು ಇತ್ತೀಚೆಗೆ ಮಂಡಿಸಲಾದ ‘ಸಾರ್ವಜನಿಕ ಸುರಕ್ಷತಾ ಮಸೂದೆ 2026’ ನಾಗರಿಕರ ಹಕ್ಕುಗಳನ್ನು ಕಸಿಯುವ ಪ್ರಯತ್ನ ಎಂದು ಕಳವಳ ವ್ಯಕ್ತಪಡಿಸಿದೆ.




