ಕಣದಲ್ಲಿ ಸಂಗ್ರಹಿಸಿಟ್ಟಿದ್ದ ಅಂದಾಜು 17 ಟ್ರ್ಯಾಕ್ಟರ್ ಮೆಕ್ಕೆಜೋಳದ ತೆನೆಯ ರಾಶಿಗೆ ಬೆಂಕಿ ತಗುಲಿ ಅಂದಾಜು ಏಳು ಲಕ್ಷ ರೂ. ಮೌಲ್ಯದ ಮೆಕ್ಕೆಜೋಳ ಸುಟ್ಟು ಭಸ್ಮವಾಗಿರುವ ಘಟನೆ ಹಾವೇರಿಯ ನಾಗೇಂದ್ರನ ಮಟ್ಟಿಯಲ್ಲಿರುವ ಕಣಿಯ ಬಳಿ ಭಾನುವಾರ (ಜ.14) ನಡೆದಿದೆ.
ನಾಗೇಂದ್ರ ಮಟ್ಟಿಯಲ್ಲಿ ಭಾನುವಾರ ಸಿದ್ದರಾಮೇಶ್ವರ ಜಾತ್ರೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು. ಈ ವೇಳೆ ಯಾರೋ ದುಷ್ಕರ್ಮಿಗಳು ಮೆಕ್ಕೆಜೋಳದ ಬಣವಿಗೆ ಬೆಂಕಿ ಹಚ್ಚಿದ ಕಾರಣ ಶಿವಬಸಪ್ಪ ಮುದ್ದಿ ಎನ್ನುವವರಿಗೆ ಸೇರಿದ್ದ ಮೆಕ್ಕೆಜೋಳದ ರಾಶಿ ಸುಟ್ಟು ಹೋಗಿದೆ.
ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ, ಬೆಂಕಿಯ ಕೆನ್ನಾಲಿಗೆ ಮೆಕ್ಕೆಜೋಳದ ರಾಶಿಯನ್ನು ಸಂಪೂರ್ಣ ಆವರಿಸಿದ್ದರಿಂದ ಮೆಕ್ಕೆಜೋಳದ ತೆನೆಗಳು ಸುಟ್ಟು ಹೋಗಿದ್ದವು. ಬೆಂಕಿ ನಂದಿಸಲು ಸ್ಥಳೀಯರು ಸಹ ಕೈಜೋಡಿಸಿದ್ದರೂ ಬೆಂಕಿ ಹತೋಟಿಗೆ ಬರಲಿಲ್ಲ.
17 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸುಟ್ಟು ಹೋಗಿದೆ. ಆಕಸ್ಮಿಕವಾಗಿ ಬೆಂಕಿ ತಗಲಿ ಅಂದಾಜು ₹7 ಲಕ್ಷ ಮೌಲ್ಯದ ಮೆಕ್ಕೆಜೋಳ ಹಾಳಾಗಿದ್ದು ರೈತ ಸಂಕಷ್ಟ ಅನುಭವಿಸುವಂತಾಗಿದೆ. ಜಿಲ್ಲಾಡಳಿತ ಸೂಕ್ತ ಪರಿಹಾರವನ್ನು ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.