ಜನನುಡಿ – 2026 | ನಮ್ಮ ನಡುವೆ ಇರುವ ಫ್ಯಾಸಿಸ್ಟರ ಬಗ್ಗೆ ಸದಾ ಜಾಗೃತರಾಗಿರಬೇಕು : ಟಿ. ಎಲ್‌. ಕೃಷ್ಣೇಗೌಡ

Date:

ಫ್ಯಾಸಿಸ್ಟರು ನಮ್ಮ ನಡುವೆಯೇ ಸಾಮಾನ್ಯರಂತೆ, ಅತ್ಯಂತ ಅಮಾಯಕರಂತೆ ಇರುತ್ತಾರೆ. ಇಂತಹ ಅಮಾಯಕ ಮುಖವಾಡ ತೊಟ್ಟು ನಮ್ಮ ನಡುವೆ ಇರುವ ಎಲ್ಲ ಫ್ಯಾಸಿಸ್ಟರ ವಿರುದ್ಧ ಸದಾಕಾಲ ಜಾಗೃತರಾಗಿರುವುದು ಮಾತ್ರವೇ ಈ ಸಮಾಜವನ್ನು ಉಳಿಸಲು ಮತ್ತು ಬೆಳೆಸಲು ಸಾಧ್ಯ ಎಂದು ಟಿ.ಎಲ್‌. ಕೃಷ್ಣೇಗೌಡ ಹೇಳಿದರು. ಅವರು ಮಂಗಳೂರಿನಲ್ಲಿ ನಡೆಯುತ್ತಿರುವ ಜನನುಡಿ-2026 ರಲ್ಲಿ ನಡೆದ 9ನೇ ಗೋಷ್ಠಿಯಲ್ಲಿ “ಕೋಮುವಾದ-ಕ್ರೋನಿ ಕ್ಯಾಪಿಟಲಿಸಂ ಮೈತ್ರಿ-ಸವಾಲು” ವಿಷಯದ ಕುರಿತು ಮಾತನಾಡಿದರು.

- Advertisement -

ಜನನುಡಿಯಲ್ಲಿ ಟಿ. ಎಲ್. ಕೃಷ್ಣೇಗೌಡ ಅವರ ಭಾಷಣದ ಪೂರ್ಣಪಾಠ ಇಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷೇತ್ರ ಮರುವಿಂಗಡಣೆಯ ಹಿಂದಿರುವ ಬಲಪಂಥೀಯ ರಾಜಕಾರಣದ ಗುಪ್ತ ಕಾರ್ಯಸೂಚಿ

ಕ್ಷೇತ್ರ ಮರುವಿಂಗಡಣೆ ಕೇವಲ ಲೋಕಸಭಾ ಸ್ಥಾನಗಳ ಹೆಚ್ಚಳವಲ್ಲ; ಅದು ದೇಶದ ರಾಜಕೀಯ ಅಧಿಕಾರದ ಹಂಚಿಕೆ, ಒಕ್ಕೂಟ ವ್ಯವಸ್ಥೆ ಮತ್ತು ಸಾಮಾಜಿಕ ನ್ಯಾಯದ ಭವಿಷ್ಯವನ್ನು ನಿರ್ಧರಿಸುವ ಪ್ರಕ್ರಿಯೆ. ಕ್ಷೇತ್ರಗಳ ಗಡಿ ಬದಲಾವಣೆಯಿಂದ ಅಹಿಂದ, ದಲಿತ,...

ಗುಳೇದಗುಡ್ಡ | ತಾಲೂಕಾಗಿ ಹತ್ತು ವರ್ಷ ಕಳೆದರೂ ಭೂ...

ಗುಳೇದಗುಡ್ಡ ತಾಲೂಕು ರಚೆನೆಯಾಗಿ ಹತ್ತು ವರ್ಷ ಕಳೆದಿದೆ. ತಾಲೂಕು ವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮಗಳಿಗೆ ಸಂಬಂಧಿಸಿದ ಭೂದಾಖಲೆಗಳು ಬಾದಾಮಿ ತಹಸೀಲ್ದಾರ್ ಕಚೇರಿ ಮತ್ತು ಗದಗ ರಸ್ತೆಯ ಎಪಿಎಂಸಿ ಸಮೀಪದ ಕಚೇರಿಯಲ್ಲಿ ಸಂಗ್ರಹವಾಗಿವೆ....

ಸುಪ್ತ ಆಯಾಸದ ಹಿಂದೆ ಅಡಗಿರುವ ರಕ್ತಹೀನತೆ: ಕರ್ನಾಟಕದ ಅರ್ಧದಷ್ಟು...

ದೈನಂದಿನ ಒತ್ತಡ, ನಿದ್ರೆಯ ಕೊರತೆ ಅಥವಾ ಬಿಡುವಿಲ್ಲದ ಜೀವನಶೈಲಿಯೆಂದು ನಿರ್ಲಕ್ಷಿಸುವ ಆಯಾಸದ ಹಿಂದೆ ರಕ್ತಹೀನತೆ ಅಡಗಿರಬಹುದು. ಕರ್ನಾಟಕದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಶೇ. 50ಕ್ಕಿಂತ ಹೆಚ್ಚು ಮಂದಿ ರಕ್ತಹೀನತೆಯಿಂದ ಬಳಲುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ದೈನಂದಿನ...

ಇಟಾಲಿಯನ್ ತತ್ವಜ್ಞಾನಿ ಉಂಬರ್ಟೋ ಇಕೋ (Umberto Eco) ಒಂದು ಕಡೆ ಹೇಳುತ್ತಾರೆ: “ಫ್ಯಾಸಿಸ್ಟರು ನಮ್ಮ ನಡುವೆಯೇ ಇದ್ದಾರೆ. ಯಾರಾದರೂ ಒಬ್ಬ ಫ್ಯಾಸಿಸ್ಟ್ ಬಂದು, ನಾನು ಖಾಕಿ ಚಡ್ಡಿ ಹಾಕಿ ಮೆರವಣಿಗೆ ಮಾಡುತ್ತೇನೆ, ಹಿಂದುತ್ವಕ್ಕಾಗಿ ಪ್ರಾಣ ಕೊಡುತ್ತೇನೆ ಎಂದು ಘೋಷಿಸಿಕೊಂಡು ಬಂದರೆ ನಾವು ಆತನನ್ನು ಸುಲಭವಾಗಿ ಗುರುತಿಸಬಹುದು. ಆದರೆ ಅನೇಕ ಸಂದರ್ಭಗಳಲ್ಲಿ ಫ್ಯಾಸಿಸ್ಟರು ನಮ್ಮ ನಡುವೆಯೇ ಸಾಮಾನ್ಯರಂತೆ, ಅತ್ಯಂತ ಅಮಾಯಕರಂತೆ ಇರುತ್ತಾರೆ. ಇಂತಹ ಅಮಾಯಕ ಮುಖವಾಡ ತೊಟ್ಟು ನಮ್ಮ ನಡುವೆ ಇರುವ ಎಲ್ಲ ಫ್ಯಾಸಿಸ್ಟರ ವಿರುದ್ಧ ಸದಾಕಾಲ ಜಾಗೃತರಾಗಿರುವುದು ಮಾತ್ರವೇ ಈ ಸಮಾಜವನ್ನು ಉಳಿಸಲು ಮತ್ತು ಬೆಳೆಸಲು ಸಾಧ್ಯ.”

ಮತ್ತೊಂದೆಡೆ, ಬ್ರಿಟನ್ನಿನ ಖ್ಯಾತ ಅರ್ಥಶಾಸ್ತ್ರಜ್ಞೆ ಕ್ಲಾರಾ ಮ್ಯಾಟೆಯಿ (Clara Mattei) ತಮ್ಮ ಇತ್ತೀಚಿನ ಪುಸ್ತಕದಲ್ಲಿ ಉಲ್ಲೇಖಿಸುತ್ತಾರೆ: “ಜಗತ್ತಿನ ಒಟ್ಟು ಸಂಪತ್ತಿನ ಶೇಕಡಾ 41ರಷ್ಟನ್ನು ಕೇವಲ 12 ಜನ ಶ್ರೀಮಂತ ವ್ಯಕ್ತಿಗಳು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ.”

ಈ ಎರಡು ಸಮಕಾಲೀನ ಚಿತ್ರಣಗಳ ನಡುವೆ ನಾವು ಇಂದು ಕೋಮುವಾದ ಮತ್ತು ಕ್ರೋನಿ ಕ್ಯಾಪಿಟಲಿಸಂ (ಆಪ್ತ ಬಂಡವಾಳಶಾಹಿ) ನಡುವಿನ ಸಂಬಂಧವನ್ನು ವಿಶ್ಲೇಷಿಸಬೇಕಾಗಿದೆ. ಕೋಮುವಾದ ಎಂದರೆ ಒಂದು ಧರ್ಮ, ಜನಾಂಗ ಅಥವಾ ಅಸ್ಮಿತೆಯ ಆಧಾರದಲ್ಲಿ ಸಮಾಜವನ್ನು ವಿಭಜಿಸಿ, ತನ್ನ ಕಾರ್ಯಸೂಚಿಗೆ ತಕ್ಕಂತೆ ನಿಯಂತ್ರಿಸುವ ಹುನ್ನಾರ. ಇಂಥ ಕೋಮುವಾದಿಗಳು ಎಲ್ಲ ಆಧುನಿಕ ಸಮಾಜಗಳಲ್ಲೂ ಇರುತ್ತಾರೆ. ಭಾರತದ ಸ್ವಾತಂತ್ರ್ಯ ಚಳವಳಿಯ ಕಾಲಘಟ್ಟದಲ್ಲಿ ಹಾಗೂ ಸ್ವಾತಂತ್ರ್ಯ ನಂತರದ ಬೆಳವಣಿಗೆಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಭೀಷ್ಮ ಸಾಹ್ನಿಯವರ ‘ತಮಸ್’ ಕಾದಂಬರಿಯನ್ನು ಓದಿದರೆ, ಕೋಮುವಾದಿಗಳು ಕತ್ತಲಲ್ಲಿ ಹೇಗೆಲ್ಲ ಕೆಲಸ ಮಾಡುತ್ತಿದ್ದರು ಮತ್ತು ಈ ದೇಶದ ಬದುಕಿಗೆ ಹೇಗೆ ಕತ್ತಲೆಯನ್ನು ತುಂಬಿದರು ಎಂಬುದು ತಿಳಿಯುತ್ತದೆ. ಕೋಮುವಾದಿಗಳು ಎಂದರೆ ಕೇವಲ ಬಿಜೆಪಿ ಅಥವಾ ಆರೆಸ್ಸೆಸ್ ಅಸ್ತಿತ್ವಕ್ಕೆ ಬಂದ ನಂತರ ಉದ್ಭವಿಸಿದವರಲ್ಲ; ಅವರೆಲ್ಲರೂ ಇದರ ಪರಮ ಅಭಿವ್ಯಕ್ತಿ (Super manifestation) ಅಷ್ಟೇ.

ಹಾಗಾದರೆ ಈ ಕೋಮುವಾದಿಗಳು ಬಾಲ ಬಿಚ್ಚಲು ಹಾಗೂ ಪ್ರವರ್ಧಮಾನಕ್ಕೆ ಬರಲು ಯಾವಾಗ ಶುರು ಮಾಡುತ್ತಾರೆ? ಯಾವಾಗ ಕೋಮುವಾದಿಗಳಿಗೆ ಏಕಸ್ವಾಮ್ಯ ಬಂಡವಾಳದ (Monopoly Capital) ಬೆಂಬಲ ಸಿಗುತ್ತದೆಯೋ, ಯಾವಾಗ ಅವರಿಗೆ ಕಾರ್ಪೊರೇಟ್ ಮಾಧ್ಯಮಗಳ ಸಂಪೂರ್ಣ ಪ್ರಚಾರ ಮತ್ತು ಕುಮ್ಮಕ್ಕು ಸಿಗುತ್ತದೆಯೋ, ಆ ಮೂಲಕ ಅವರಿಗೆ ಸಾಮಾಜಿಕ ಮನ್ನಣೆ ಮತ್ತು ರಾಜಕೀಯ ಶಕ್ತಿ ಲಭ್ಯವಾಗುತ್ತದೆಯೋ, ಆಗ ಅವರು ಅಟ್ಟಹಾಸ ಮೆರೆಯಲು ಆರಂಭಿಸುತ್ತಾರೆ.

ಭಾರತದಲ್ಲೂ ಆಗುತ್ತಿರುವುದು ಇದೇ. ಭಾರತದಲ್ಲಿ ಕೋಮುವಾದಿಗಳು ಈ ಮಟ್ಟಕ್ಕೆ ವಿಜೃಂಭಿಸಲು ಕಾರಣವಾದ ಕಾಲಘಟ್ಟ ಯಾವುದು? ನಾರಾಯಣ ಅವರು ಸರಿಯಾಗಿಯೇ ಗುರುತಿಸಿದಂತೆ, ಅದು 1991ರ ಕಾಲಘಟ್ಟ. 1991ರ ಹೊತ್ತಿಗೆ ಭಾರತ ಗಂಭೀರವಾದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತ್ತು—ತೀವ್ರ ನಿರುದ್ಯೋಗ, ಕುಸಿಯುತ್ತಿದ್ದ ಕೊಳ್ಳುವ ಶಕ್ತಿ ಮತ್ತು ಇನ್ನೊಂದೆಡೆ ಏಕಸ್ವಾಮ್ಯ ಬಂಡವಾಳಿಗರ ಕೈಯಲ್ಲಿ ಅಪಾರವಾಗಿ ಶೇಖರಣೆಗೊಂಡಿದ್ದ ಬಂಡವಾಳ. ಆ ಬಂಡವಾಳದ ವಿಸ್ತರಣೆಗೆ ಹೊಸ ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸಬೇಕಾದ ಅನಿವಾರ್ಯತೆ ಇತ್ತು. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಜನಸಾಮಾನ್ಯರಲ್ಲಿ ಮಡುಗಟ್ಟಿದ್ದ ಆಕ್ರೋಶ ಮತ್ತು ಅಸಂತೃಪ್ತಿಯನ್ನು ಬೇರೆಡೆಗೆ ತಿರುಗಿಸಲು, ಅವರ ಸಿಟ್ಟಿಗೆ ಒಂದು ಪ್ರತಿಗಾಮಿ (Reactionary) ದಿಕ್ಕನ್ನು ತೋರಿಸುವ ತಂತ್ರವಾಗಿ ಕೋಮುವಾದಿ ಶಕ್ತಿಗಳು ಮುನ್ನೆಲೆಗೆ ಬಂದವು.

ಇನ್ನು ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಿರುವಂತೆ, ಕ್ರೋನಿ ಕ್ಯಾಪಿಟಲಿಸಂ ಮತ್ತು ಕೋಮುವಾದದ ಸಂಬಂಧವೇನು? ಶಿವಸುಂದರ್ ಸೇರಿದಂತೆ ಪ್ರಜ್ಞಾವಂತ ಅರ್ಥಶಾಸ್ತ್ರಜ್ಞರು ಸ್ಪಷ್ಟಪಡಿಸುವಂತೆ, ನಾವು ಬರೀ ‘ಕ್ರೋನಿ ಬಂಡವಾಳ’ ಎಂದು ಕರೆದುಬಿಟ್ಟರೆ, ಉಳಿದ ಸಾಮಾನ್ಯ ಬಂಡವಾಳಶಾಹಿ ವ್ಯವಸ್ಥೆ ಜನಪರವಾಗಿದೆ ಎಂದು ಭಾವಿಸಿ ಅದರ ಅಪಾಯದ ತೀವ್ರತೆಯನ್ನು ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ. ಆದರೆ ವಾಸ್ತವದಲ್ಲಿ ಬಂಡವಾಳಶಾಹಿಯು ಸದಾ ‘ಕ್ರೋನಿ’ ಸ್ವರೂಪದ್ದೇ ಆಗಿದೆ. ಕ್ರೋನಿಸಂ ಎಂದರೆ ಅಧಿಕಾರಸ್ಥ ಆಡಳಿತ ಮತ್ತು ವ್ಯಾಪಾರದ ನಡುವಿನ ಒಂದು ‘ಗಳಸ್ಯ-ಕಂಠಸ್ಯ’ ಅಕ್ರಮ ಮೈತ್ರಿ. ಭಾರತದ ಬಂಡವಾಳಶಾಹಿ ಬೆಳವಣಿಗೆಯ ಚರಿತ್ರೆಯನ್ನು ನೋಡಿದರೆ, ಆಳುವ ವರ್ಗವು ಯಾವಾಗಲೂ ಬಂಡವಾಳಶಾಹಿಗಳ ಜೊತೆ ಇಂತಹ ಮೈತ್ರಿಯನ್ನೇ ಕಾಯ್ದುಕೊಂಡು ಬಂದಿದೆ. ಹಾಗಾಗಿಯೇ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಕೆಲವೇ ನೂರು ಕೋಟಿಗಳಷ್ಟಿದ್ದ ಬಂಡವಾಳ, 1985-90ರ ಹೊತ್ತಿಗೆ ಏಳೆಂಟು ಬಿಲಿಯನ್ ಡಾಲರ್‌ಗಳಷ್ಟು ಬೃಹತ್ತಾಗಿ ಬೆಳೆಯಲು ಸಾಧ್ಯವಾಯಿತು.

ಸಾಮಾನ್ಯವಾಗಿ ಒಂದು ವ್ಯವಹಾರ ಅಥವಾ ಕಾಂಟ್ರಾಕ್ಟ್ ಮಾಡುವಾಗ ನಿಯಮಗಳು ಇರುತ್ತವೆ: ಅರ್ಹತೆ ಇರುವವರೇ ಬಿಡ್‌ನಲ್ಲಿ ಭಾಗವಹಿಸಬೇಕು, ನ್ಯಾಯಯುತವಾಗಿ ಗೆಲ್ಲಬೇಕು. ಆದರೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಎಲ್ಲರೂ ಪರೀಕ್ಷೆ ಬರೆದು ಪಾಸ್ ಆದರೂ, ಇಂಟರ್ವ್ಯೂ ಹಂತಕ್ಕೆ ಬರುವಾಗ ಅಸಲಿ ಭ್ರಷ್ಟಾಚಾರ ಮತ್ತು ಪಕ್ಷಪಾತ ಶುರುವಾಗುವಂತೆ, ಬಂಡವಾಳಶಾಹಿ ವ್ಯವಸ್ಥೆಯಲ್ಲೂ ಅಧಿಕಾರಕ್ಕೆ ಹತ್ತಿರವಿರುವ ಕೆಲವೇ ವ್ಯಕ್ತಿಗಳಿಗೆ ಪರಭಾರೆ ಮಾಡುವುದನ್ನೇ ‘ಕ್ರೋನಿ ವ್ಯವಹಾರ’ ಎನ್ನುತ್ತೇವೆ. ಭಾರತದಲ್ಲಿ ಮುಕ್ತ ಸ್ಪರ್ಧೆ ಅಥವಾ ಆಡಳಿತ-ವ್ಯಾಪಾರದ ನಡುವೆ ಪಾರದರ್ಶಕ ಅಂತರ ಎಂದಿಗೂ ಇರಲಿಲ್ಲ. ನಾವು ಈ ಸೂಕ್ಷ್ಮವನ್ನು ಗ್ರಹಿಸದಿದ್ದರೆ, ಏಕಸ್ವಾಮ್ಯ ಬಂಡವಾಳಶಾಹಿಯ ಒಟ್ಟು ಅಪಾಯವನ್ನು ಅರಿಯುವಲ್ಲಿ ವಿಫಲರಾಗುತ್ತೇವೆ.

ಜನರ ಆರ್ಥಿಕ ಆಕ್ರೋಶದ ದಿಕ್ಕು ತಪ್ಪಿಸುವುದು ಎಂದರೆ ಏನು? ಮುಖ್ಯವಾಗಿ ಸಮಾಜದಲ್ಲಿ ದ್ವೇಷವನ್ನು ಬಿತ್ತುವುದು; ಅಸಹಾಯಕ ಧಾರ್ಮಿಕ, ಭಾಷಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರನ್ನು ‘ಶತ್ರುಗಳು’ ಎಂದು ಬಿಂಬಿಸುವುದು. ಆ ಮೂಲಕ ಒಂದು ಕೃತಕ ಶತ್ರುವನ್ನು (Pseudo-enemy) ಸೃಷ್ಟಿಸಿ, ಅವರ ಮೇಲೆ ಹಿಂಸಾತ್ಮಕ ದಾಳಿಗಳನ್ನು ನಡೆಸಿ ಧ್ರುವೀಕರಣದ ಮೂಲಕ ಅಧಿಕಾರ ಹಿಡಿಯುವುದು. ಅಧಿಕಾರಕ್ಕೆ ಬಂದ ತಕ್ಷಣ ಇವರು ಮಾಡುವುದೇನು? ಅಲ್ಪಸಂಖ್ಯಾತರು, ಪ್ರಗತಿಪರ ಚಿಂತಕರು, ಸಾಂವಿಧಾನಿಕ ಬುದ್ಧಿಜೀವಿಗಳು ಮತ್ತು ರಾಜಕೀಯ ವಿರೋಧಿಗಳ ಮೇಲೆ ಇಡಿ, ಐಟಿ ಸೇರಿದಂತೆ ಸಾಂಸ್ಥಿಕ ತನಿಖಾ ಸಂಸ್ಥೆಗಳನ್ನು ಛೂಬಿಟ್ಟು ವ್ಯವಸ್ಥಿತ ದಬ್ಬಾಳಿಕೆ ನಡೆಸುವುದು.

ಹಿಂದೆ ಇಂತಹ ಹೊಂದಾಣಿಕೆಗಳು ಸ್ವಲ್ಪ ಮುಚ್ಚುಮರೆಯಲ್ಲಾದರೂ ನಡೆಯುತ್ತಿದ್ದವು. ಆದರೆ ಇವತ್ತಿನ ನವ-ಏಕಸ್ವಾಮ್ಯ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಯಾವುದೇ ನಾಚಿಕೆ, ಲಜ್ಜೆ ಇಲ್ಲದೆ ಮುಕ್ತವಾಗಿ, ಕುಲ್ಲಂಕುಲ್ಲಾವಾಗಿ ತಮಗೆ ಬೇಕಾದ ಆಯ್ದ ವ್ಯಾಪಾರಿ ಕುಟುಂಬಗಳಿಗೆ ಬೆಂಬಲ ನೀಡಲಾಗುತ್ತಿದೆ. ಜರ್ಮನ್ ಅರ್ಥಶಾಸ್ತ್ರಜ್ಞ ಡೇನಿಯಲ್ ಗುರಿನ್ (Daniel Guérin) ತಮ್ಮ ‘ಫ್ಯಾಸಿಸಂ ಅಂಡ್ ಬಿಗ್ ಬಿಸಿನೆಸ್’ ಕೃತಿಯಲ್ಲಿ ವಿವರಿಸುವಂತೆ: “ಹೊಸದಾಗಿ ಉದ್ಭವಿಸುವ ಏಕಸ್ವಾಮ್ಯ ಬಂಡವಾಳವು ನಿರ್ದಿಷ್ಟವಾಗಿ ಫ್ಯಾಸಿಸ್ಟರನ್ನು ಪ್ರಾಯೋಜಿಸುತ್ತದೆ.”

1930ರ ನಾಜಿ ಜರ್ಮನಿಯಲ್ಲಿ ಹಿಟ್ಲರನ ಉದಯಕ್ಕೆ ಅಲ್ಲಿನ ನವ-ಏಕಸ್ವಾಮ್ಯ ಬಂಡವಾಳಶಾಹಿಗಳು ಬೆಂಬಲ ನೀಡಿದಂತೆಯೇ, ಇವತ್ತು ಭಾರತದಲ್ಲೂ ಟಾಟಾ, ಬಿರ್ಲಾ ಯುಗವನ್ನು ದಾಟಿ ಬಂದಿರುವ ಇಂದಿನ ಅದಾನಿ-ಅಂಬಾನಿ ಅಧಿಪತ್ಯವು ಆಡಳಿತಕ್ಕೆ ಬಹಿರಂಗ ಬೆಂಬಲ ನೀಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಖ್ಯಾತ ಅರ್ಥಶಾಸ್ತ್ರಜ್ಞ ಮೈಕಲ್ ಕಲೆಕಿ (Michał Kalecki) ನಾಜಿ ಆಡಳಿತವನ್ನು ವಿಶ್ಲೇಷಿಸುತ್ತಾ, “ಇಟ್ ಇಸ್ ಎ ಪಾರ್ಟ್‌ನರ್‌ಶಿಪ್ ಬಿಟ್ವೀನ್ ಫ್ಯಾಸಿಸ್ಟ್ ಅಪ್‌ಸ್ಟಾರ್ಟ್ಸ್ ಅಂಡ್ ಬಿಗ್ ಬಿಸಿನೆಸ್” (ಫ್ಯಾಸಿಸ್ಟ್ ಪಟ್ಟಭದ್ರರು ಮತ್ತು ಬೃಹತ್ ಬಂಡವಾಳಿಗರ ನಡುವಿನ ಅಪವಿತ್ರ ಮೈತ್ರಿ) ಎಂದಿದ್ದರು. ಭಾರತದಲ್ಲೂ ಇದು ನಿಖರವಾಗಿ ಗೋಚರಿಸುತ್ತಿದೆ.

ಯುಪಿಎ ಕಾಲಘಟ್ಟದಲ್ಲಿ ‘ಗುಜರಾತ್ ಮಾಡೆಲ್’ ಎಂದು ಕಾರ್ಪೊರೇಟ್ ಮಾಧ್ಯಮಗಳ ಮೂಲಕ ಸುಳ್ಳು ಚಿತ್ರಣ ಕಟ್ಟಿ, ಫೋಟೋಶಾಪ್ ಮಾಡಿ, ಮೋದಿ ಅವರೇ ಅಂತಿಮ ಮಾದರಿ ಎಂದು ಬಿಂಬಿಸಲಾಯಿತು. ಇದರ ಫಲವೇ ಇಂದಿನ ಕಾರ್ಪೊರೇಟ್ ಮತ್ತು ಹಿಂದುತ್ವದ ಮೈತ್ರಿ—ಇನ್ನೂ ಸರಳವಾಗಿ ಹೇಳುವುದಾದರೆ ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿಯ ನಡುವಿನ ನೇರ ಸಹಚರ್ಯ. ರಫೇಲ್ ಯುದ್ಧ ವಿಮಾನಗಳ ಒಪ್ಪಂದದ ಸಂದರ್ಭದಲ್ಲಿ ಫ್ರೆಂಚ್ ಕಂಪನಿಯೊಂದಿಗೆ ಅನಿಲ್ ಅಂಬಾನಿ ಕಂಪನಿಯನ್ನು ಪಾಲುದಾರರನ್ನಾಗಿ ಮಾಡಲು ಸರ್ಕಾರವೇ ಮುಂದಾದದ್ದು ಇದಕ್ಕೆ ಸಾಕ್ಷಿ. ಹಿಂಡನ್‌ಬರ್ಗ್ ವರದಿ ಬಂದು ಅದಾನಿ ಸಮೂಹದ ಷೇರು ಅಕ್ರಮಗಳು ಜಗಜ್ಜಾಹೀರಾದರೂ ಸರ್ಕಾರ ಕನಿಷ್ಠ ತನಿಖೆಗೂ ಮುಂದಾಗಲಿಲ್ಲ. ಫ್ಯಾಸಿಸ್ಟರು ಕಾರ್ಪೊರೇಟ್‌ಗಳಿಗೆ ಸಾಮ್ರಾಜ್ಯ ಕಟ್ಟಲು ನೆರವಾದರೆ, ಕಾರ್ಪೊರೇಟ್‌ಗಳು ಫ್ಯಾಸಿಸ್ಟರಿಗೆ ಅಧಿಕಾರದಲ್ಲಿ ಉಳಿಯಲು ಧನಬಲ ಒದಗಿಸುತ್ತಿದ್ದಾರೆ.

ಈ ಮೈತ್ರಿಯ ಪರಿಣಾಮವೇನು? 1982ರಲ್ಲಿ ಭಾರತದ ಮೇಲ್ವರ್ಗದ ಶೇಕಡಾ 1ರಷ್ಟು ಜನರ ಬಳಿ ಜಿಡಿಪಿಯ ಶೇ. 6ರಷ್ಟು ಸಂಪತ್ತಿತ್ತು ಎಂದು ಪ್ರಭಾತ್ ಪಟ್ನಾಯಕ್ ಬರೆಯುತ್ತಾರೆ. ಆದರೆ 2014ರ ಹೊತ್ತಿಗೆ ಅದೇ ಶೇಕಡಾ 1ರಷ್ಟು ಜನರ ಬಳಿ ಶೇಕಡಾ 22ರಷ್ಟು ಸಂಪತ್ತು ಕ್ರೋಡೀಕರಣಗೊಂಡಿದೆ! 2012ರಲ್ಲಿ 7.6 ಬಿಲಿಯನ್ ಡಾಲರ್ ಇದ್ದ ಗೌತಮ್ ಅದಾನಿ ಅವರ ಆಸ್ತಿ, 2025ರ ಹೊತ್ತಿಗೆ ಕೆಲ ಅಂಕಿಅಂಶಗಳ ಪ್ರಕಾರ 56 ಬಿಲಿಯನ್, ಇನ್ನು ಕೆಲ ವರದಿಗಳಂತೆ 116 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ—ಅಂದರೆ ಬರೋಬ್ಬರಿ 7ರಿಂದ 16 ಪಟ್ಟು ಹೆಚ್ಚಳ! ಮುಖೇಶ್ ಅಂಬಾನಿ ಅವರ ಆಸ್ತಿಯೂ 22.3 ಬಿಲಿಯನ್‌ನಿಂದ 92.5 ಬಿಲಿಯನ್ ಡಾಲರ್‌ಗೆ ಜಿಗಿದಿದೆ.

ಇನ್ನೊಂದೆಡೆ ಡಾ. ಉತ್ಸಾ ಪಟ್ನಾಯಕ್ ನೀಡುವ ಅಂಕಿಅಂಶಗಳ ಪ್ರಕಾರ, 1993-94ರಲ್ಲಿ ದೇಶದಲ್ಲಿದ್ದ ಶೇಕಡಾ 58ರಷ್ಟಿದ್ದ ಬಡತನದ ಪ್ರಮಾಣ, 2011-12ರ ಹೊತ್ತಿಗೆ ಶೇಕಡಾ 68ಕ್ಕೆ ಏರಿಕೆಯಾಗಿದೆ. ಒಂದು ಕಡೆ ಏಕಸ್ವಾಮ್ಯ ಬಂಡವಾಳಿಗರ ಸಂಪತ್ತಿನಲ್ಲಿ ಅತಿರೇಕದ ಏರಿಕೆ, ಇನ್ನೊಂದೆಡೆ ಜನಸಾಮಾನ್ಯರ ಬಡತನದಲ್ಲಿ ತೀವ್ರ ಹೆಚ್ಚಳ. ಇಂತಹ ಗಂಭೀರ ಆರ್ಥಿಕ ವೈರುಧ್ಯದಿಂದಾಗಿ ಜನರಲ್ಲಿ ಅಸಂತೃಪ್ತಿ ಸ್ಫೋಟಗೊಳ್ಳುತ್ತದೆ, ಬೀದಿ ಹೋರಾಟಗಳು ಭುಗಿಲೇಳುತ್ತವೆ. ಆ ಬೀದಿ ಹೋರಾಟಗಳು ಸಂಸತ್ತು ಮತ್ತು ವಿಧಾನಸೌಧದ ಕಡೆಗೆ ನುಗ್ಗದಂತೆ ತಡೆಯಲು ಆಳುವ ವರ್ಗಕ್ಕೆ ‘ಫ್ಯಾಸಿಸಂ’ ಒಂದು ಅನಿವಾರ್ಯ ಅಸ್ತ್ರವಾಗಿದೆ.

ನಮ್ಮ ಮಳವಳ್ಳಿ ಭಾಗದಲ್ಲಿ ನೋಡಿದರೆ, ದಿನವೂ ಜನ ಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೋಗುತ್ತಾರೆ; ಮದುವೆಗೆ ಹೆಣ್ಣು ಸಿಗುತ್ತಿಲ್ಲವೆಂದೋ, ತೀವ್ರ ಬಡತನದ ಸಂಕಷ್ಟವೆಂದೋ ಹರಕೆ ಹೊತ್ತು ಸಾಗುತ್ತಾರೆ. ಜನರಿಗೆ, “ನೀವು ಬೆಟ್ಟಕ್ಕೆ ಬದಲಾಗಿ ನಿಮ್ಮ ಹಕ್ಕುಗಳಿಗಾಗಿ ವಿಧಾನಸೌಧ ಮತ್ತು ಪಾರ್ಲಿಮೆಂಟ್ ಕಡೆಗೆ ಪಾದಯಾತ್ರೆ ಮಾಡಿ, ಪರಿಹಾರ ಸಿಗುತ್ತದೆ” ಎಂದರೆ, “ಇಲ್ಲ, ಮಾದಪ್ಪನೇ ಪರಿಹಾರ ಕೊಡುತ್ತಾನೆ” ಎಂದು ತೆರಳುತ್ತಾರೆ! ಜನರ ನಿಜವಾದ ಆಕ್ರೋಶದ ದಿಕ್ಕು ತಪ್ಪಿಸುವುದು ಎಂದರೆ ಇದೇ.

ಕಮ್ಯುನಿಸ್ಟ್ ಇಂಟರ್‌ನ್ಯಾಷನಲ್‌ನಲ್ಲಿ ಜಾರ್ಜಿ ಡಿಮಿಟ್ರೋವ್ (Georgi Dimitrov) ಫ್ಯಾಸಿಸಂ ಅನ್ನು ವ್ಯಾಖ್ಯಾನಿಸುತ್ತಾ: “ಫ್ಯಾಸಿಸಂ ಈಸ್ ದ ಓಪನ್ ಟೆರರಿಸ್ಟಿಕ್ ಡಿಕ್ಟೇಟರ್‌ಶಿಪ್ ಆಫ್ ದ ಮೋಸ್ಟ್ ರಿಯಾಕ್ಷನರಿ ಕ್ಲಾಸಸ್” (ಅತ್ಯಂತ ಪ್ರತಿಗಾಮಿ ವರ್ಗಗಳ ಮುಕ್ತ ಭಯೋತ್ಪಾದಕ ಸರ್ವಾಧಿಕಾರ) ಎಂದಿದ್ದರು. ಇವತ್ತು ದೇಶದಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು, ಸಂಸತ್ತನ್ನು ಅಣಕಿಸಲಾಗುತ್ತಿದೆ. ಪ್ರಧಾನಿಯನ್ನು ಪೀಠಾಧಿಪತಿ ಮಾಡಿ, ಸಂಸತ್ತನ್ನೇ ಒಂದು ಮಠವನ್ನಾಗಿ ಪರಿವರ್ತಿಸಿ ಶಾಶ್ವತ ಸರ್ವಾಧಿಕಾರ ಸ್ಥಾಪಿಸುವ ಹುನ್ನಾರಗಳು ನಡೆಯುತ್ತಿವೆ.

ಆದ್ದರಿಂದ ನಾವು ಇಂದು ಫ್ಯಾಸಿಸಂ ವಿರುದ್ಧ ಹೋರಾಡಬೇಕೆಂದರೆ, ಕೇವಲ ಸಾಂಸ್ಕೃತಿಕ ನೆಲೆಯಲ್ಲಿ ಎದುರಿಸಿದರೆ ಸಾಲದು. ಫ್ಯಾಸಿಸಂ ಎಂಬುದು ಬಂಡವಾಳಶಾಹಿಯ ಆಳವಾದ ಬಿಕ್ಕಟ್ಟಿನಿಂದ ಹುಟ್ಟಿದ ರಾಜಕೀಯ ಉತ್ಪನ್ನ. ಹೀಗಾಗಿ, ನವ-ಉದಾರವಾದಿ ಆರ್ಥಿಕ ನೀತಿಗಳನ್ನು ಹಾಗೂ ಏಕಸ್ವಾಮ್ಯ ಬಂಡವಾಳಶಾಹಿಯನ್ನು ಸೈದ್ಧಾಂತಿಕವಾಗಿ ಸೋಲಿಸದೆ ಫ್ಯಾಸಿಸಂ ಅನ್ನು ಬುಡಸಮೇತ ಕಿತ್ತೊಗೆಯಲು ಸಾಧ್ಯವಿಲ್ಲ. ಸರ್ಕಾರಗಳನ್ನು ಬದಲಾಯಿಸುವುದು ಮೊದಲ ಹೆಜ್ಜೆಯಷ್ಟೇ; ಏಕೆಂದರೆ ಸಂವಿಧಾನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಹೋರಾಟದ ಹಕ್ಕನ್ನು ಉಳಿಸಿಕೊಳ್ಳಲು ಸರ್ಕಾರ ಬದಲಾವಣೆ ಅಗತ್ಯ. ಆದರೆ ಅಂತಿಮ ಪರಿಹಾರವಿರುವುದು ನವ-ಉದಾರವಾದದ ಸೋಲಿನಲ್ಲಿ.

ಇವತ್ತು ಕೋಮುವಾದವು ಜನರಲ್ಲಿ ಒಂದು ಕೃತಕ ‘ಕಾಮನ್ ಸೆನ್ಸ್’ (Common Sense) ಆಗಿಬಿಟ್ಟಿದೆ; “ನಾನು ಹಿಂದೂ, ನಾವೇ ಶ್ರೇಷ್ಠ, ನಾವೇ ಗೆಲ್ಲಬೇಕು” ಎಂಬ ಭಾವನೆ ಜನಸಾಮಾನ್ಯರಲ್ಲಿ ಬೇರೂರಿದೆ. ಆದರೆ, ಬೀದಿಯಲ್ಲಿರುವ ಜನಸಾಮಾನ್ಯರ ನಿಜವಾದ ‘ಕಾಮನ್ ಎಕ್ಸ್‌ಪೀರಿಯನ್ಸ್’ (Common Experience) ಏನು? ತೀವ್ರ ಬಡತನ, ನಿರುದ್ಯೋಗ, ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು, ರೈತರ ಆತ್ಮಹತ್ಯೆ ಮತ್ತು ವೇತನ ಕುಸಿತ.

ಈ ವಾಸ್ತವ ಅನುಭವಗಳ (Common Experience) ಆಧಾರದ ಮೇಲೆ ನಾವು ಜನರ ಈ ಸುಳ್ಳು ‘ಕಾಮನ್ ಸೆನ್ಸ್’ ಅನ್ನು ಭೇದಿಸಬೇಕಾಗಿದೆ. ‘ಜನನುಡಿ’ಯಂತಹ ವೇದಿಕೆಗಳು ಈ ಜನಪರ ಅನುಭವಗಳ ಮುಖಾಮುಖಿಯ ಮೂಲಕ ಜನರನ್ನು ಜಾಗೃತಗೊಳಿಸುವ ಮಹತ್ತರ ಕೆಲಸವನ್ನು ಮಾಡುತ್ತವೆ. ಈ ನವ-ಫ್ಯಾಸಿಸಂ ಮತ್ತು ಏಕಸ್ವಾಮ್ಯ ಬಂಡವಾಳಶಾಹಿಯ ನಡುವಿನ ಅಪವಿತ್ರ ಮೈತ್ರಿಯನ್ನು ಅರ್ಥಮಾಡಿಕೊಂಡು, ಜನರನ್ನು ಸಂಘಟಿಸುವುದು ಇಂದಿನ ಕಾಲಘಟ್ಟದ ಅತ್ಯಂತ ತುರ್ತು ಅಗತ್ಯವಾಗಿದೆ ಎಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ವಿರೋಧ: ವಿಜಯೇಂದ್ರ ವಿರುದ್ಧ ಭುಗಿಲೆದ್ದ ಆಕ್ರೋಶ

ಬಸವಕಲ್ಯಾಣದಲ್ಲಿ ಶನಿವಾರ ನಡೆದ 47ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ...

ಜೀವಂತವಾಗಿರುವಾತನನ್ನು ಮೃತನೆಂದು ಘೋಷಿಸಿದ ಆಸ್ಪತ್ರೆ: ‘ಬದುಕಿದ್ದೇನೆ’ ಎಂದು ಸಾಬೀತುಪಡಿಸಲು ಜೈಪುರ ಯುವಕನ ಪರದಾಟ!

ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಬದುಕಿರುವ ಯುವಕನೊಬ್ಬ ಕಳೆದ 25 ದಿನಗಳಿಂದ...

ಹಿರಿಯ ಕವಯಿತ್ರಿ ಸ. ಉಷಾ ನಿಧನ: ಕನ್ನಡ ಮಹಿಳಾ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ

ಹಿರಿಯ ಕವಯಿತ್ರಿ ಹಾಗೂ ಸಾಹಿತಿ ಸ. ಉಷಾ ಅವರು ಅನಾರೋಗ್ಯದಿಂದ ನಿಧನರಾಗಿರುವುದು...