ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಬದುಕಿರುವ ಯುವಕನೊಬ್ಬ ಕಳೆದ 25 ದಿನಗಳಿಂದ “ನಾನು ಜೀವಂತವಾಗಿದ್ದೇನೆ” ಎಂದು ದಾಖಲೆಗಳ ಸಮೇತ ಸಾಬೀತುಪಡಿಸಲು ಆಸ್ಪತ್ರೆ ಮತ್ತು ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿರುವ ವಿಚಿತ್ರ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಜೈಪುರ ನಿವಾಸಿ 31 ವರ್ಷದ ದಿನೇಶ್ ಸೈನಿ ಎಂಬುವವರೇ ಆಸ್ಪತ್ರೆಯ ಸಿಬ್ಬಂದಿಯ ಈ ಎಡವಟ್ಟಿಗೆ ಬಲಿಯಾದವರು. ಸವಾಯಿ ಮಾನ್ ಸಿಂಗ್ (SMS) ಆಸ್ಪತ್ರೆಯ ದಾಖಲೆಗಳಲ್ಲಿ ದಿನೇಶ್ ಸೈನಿ ಅವರನ್ನು ಮೃತಪಟ್ಟಿದ್ದಾರೆ ಎಂದು ನಮೂದಿಸಲಾಗಿದೆ.
ನವೆಂಬರ್ 3ರಂದು ದಿನೇಶ್ ಸೈನಿ ಅವರು ತಮ್ಮ ಕೈಬೆರಳಿನ ಸಣ್ಣ ಗಾಯಕ್ಕೆ ಚಿಕಿತ್ಸೆ ಪಡೆಯಲು ಎಸ್‌ಎಂಎಸ್ ಆಸ್ಪತ್ರೆಗೆ ತೆರಳಿದ್ದರು. ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ಮರಳಿದ ದಿನೇಶ್ ಅವರಿಗೆ ಅಂದು ಸಂಜೆಯೇ ಆಸ್ಪತ್ರೆಯ ಟ್ರಾಮಾ ಸೆಂಟರ್ ಮತ್ತು ಪೊಲೀಸರಿಂದ ಕರೆ ಬಂದಿದ್ದು, “ದಿನೇಶ್ ಎಂಬುವವರು ಮೃತಪಟ್ಟಿದ್ದಾರೆ, ಶವವನ್ನು ಕೊಂಡೊಯ್ಯಲು ಯಾರೂ ಬಂದಿಲ್ಲ” ಎಂದು ತಿಳಿಸಲಾಗಿತ್ತು.
ಇದನ್ನೂ ಓದಿ: ಕೊಲೆ ಪ್ರಕರಣ, ಯುಎಪಿಎ ಕಂಟಕದ ನಡುವೆ ಅನಂತ್ ಸಿಂಗ್ ಮಗಳ ಅದ್ದೂರಿ ಮದುವೆ!
ಈ ಮಾತು ಕೇಳಿ ಬೆಚ್ಚಿಬಿದ್ದ ದಿನೇಶ್, ಮರುದಿನ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದಾಗ, ಕರೌಲಿ ಮೂಲದ ಮತ್ತೊಬ್ಬ ರೋಗಿಯನ್ನು ತಮ್ಮ ಗುರುತಿನ ದಾಖಲೆಗಳ ಅಡಿಯಲ್ಲಿ ನೋಂದಾಯಿಸಿರುವುದು ಮತ್ತು ಆ ರೋಗಿ ಮೃತಪಟ್ಟಾಗ ದಿನೇಶ್ ಹೆಸರಿನಲ್ಲಿ ಮರಣ ದಾಖಲೆ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ.
ಈ ಗಂಭೀರ ಪ್ರಮಾದವನ್ನು ಸರಿಪಡಿಸುವಂತೆ ದಿನೇಶ್ ಕಳೆದ 25 ದಿನಗಳಿಂದ ಆಸ್ಪತ್ರೆಯ ಟ್ರಾಮಾ ಸೆಂಟರ್ ಮತ್ತು ವೈದ್ಯಕೀಯ ದಾಖಲೆಗಳ ವಿಭಾಗಕ್ಕೆ ಅಗತ್ಯ ದಾಖಲೆಗಳೊಂದಿಗೆ ನಿರಂತರವಾಗಿ ಪರದಾಡುತ್ತಿದ್ದಾರೆ. ಆದರೆ ಆಸ್ಪತ್ರೆ ಅಧಿಕಾರಿಗಳು ತಪ್ಪನ್ನು ಸರಿಪಡಿಸದ ಕಾರಣ, ನವೆಂಬರ್ 21ರಂದು ಕೂಡ ಮೃತರ ಪಟ್ಟಿಯಲ್ಲಿ ತಮ್ಮ ಹೆಸರಿರುವ ಮತ್ತೊಂದು ಸಂದೇಶ ಅವರಿಗೆ ಬಂದಿದೆ. ಅಷ್ಟೇ ಅಲ್ಲದೆ, ತಾವು ಬದುಕಿರುವುದಕ್ಕೆ ಸಾಕ್ಷಿಯಾಗಿ ಉಪವಿಭಾಗಾಧಿಕಾರಿಗಳಿಂದ (SDM) ‘ಜೀವಂತ ಪ್ರಮಾಣಪತ್ರ’ ತರುವಂತೆ ಅಧಿಕಾರಿಗಳು ಸೂಚಿಸಿರುವುದು ದಿನೇಶ್ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ದಾಖಲೆಗಳಲ್ಲಿ ಮೃತನೆಂದು ಘೋಷಿಸಲ್ಪಟ್ಟಿರುವುದರಿಂದ ತಮ್ಮ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಮತ್ತು ಇತರ ಸರ್ಕಾರಿ ಸೇವೆಗಳು ಸ್ಥಗಿತಗೊಳ್ಳುವ ಆತಂಕ ದಿನೇಶ್ ಅವರನ್ನು ಕಾಡುತ್ತಿದೆ. ಈ ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಎಸ್‌ಎಂಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ದೀಪಕ್ ಮಹೇಶ್ವರಿ ಅವರು ಸಿಬ್ಬಂದಿಯಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಈ ನಿರ್ಲಕ್ಷ್ಯಕ್ಕೆ ಕಾರಣರಾದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಭಾನುವಾರದೊಳಗೆ ದಿನೇಶ್ ಸೈನಿ ಅವರ ದಾಖಲೆಗಳನ್ನು ಸಂಪೂರ್ಣವಾಗಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.



