ಕೇಂದ್ರ ಸರ್ಕಾರದ ಪರಿಷ್ಕೃತ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಮಸೂದೆಯನ್ನು ವಿರೋಧಿಸುವಂತೆ ಡಿಎಂಕೆ ಅಧ್ಯಕ್ಷ, ತಮಿಳುನಾಡು ಮಾಜಿ ಸಿಎಂ ಎಂ.ಕೆ ಸ್ಟಾಲಿನ್ ಅವರ ಮನವೊಲಿಸಲು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಇಂಡಿಯಾ ಮೈತ್ರಿಕೂಟದ ನಾಯಕರು ಚೆನ್ನೈಗೆ ತೆರಳಿದ್ದಾರೆ. ಸಂಸತ್ತಿನ ಸ್ಥಾನಗಳನ್ನು 850ಕ್ಕೆ ಹೆಚ್ಚಿಸುವ ಈ ಪ್ರಸ್ತಾವನೆಯು ಭಾರತದಲ್ಲಿ ಪ್ರಜಾಪ್ರಭುತ್ವವನ್ನೇ ಅಂತ್ಯಗೊಳಿಸಲಿದೆ ಎಂದು ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ. ಆದಾಗ್ಯೂ, ಸ್ಟಾನಿಲ್ ಅವರು ತಮ್ಮ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಸ್ಟಾಲಿನ್ ಅವರನ್ನು ಉದ್ದೇಶಿಸಿ ‘ಡಿಲಿಮಿಟೇಶನ್’ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಸಂಸತ್ತಿನ ಸ್ಥಾನಗಳನ್ನು 850ಕ್ಕೆ ವಿಸ್ತರಿಸುವುದರಿಂದ ಭಾರತದ ಪ್ರಜಾಪ್ರಭುತ್ವ ಕೊನೆಗೊಳ್ಳುತ್ತದೆ. ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಇಡೀ ದೇಶದ ಚುನಾವಣಾ ನಕ್ಷೆಯನ್ನು ಮರುರಚಿಸಲು ಹೆಚ್ಚಿನ ಅವಕಾಶ ನೀಡುತ್ತದೆ” ಎಂದು ಆರೋಪಿಸಿದ್ದಾರೆ.
ಅಲ್ಲದೆ, ತಮಿಳು ವಿರೋಧಿ ಶಕ್ತಿಗಳ ವಿರುದ್ಧ ‘ಸಹೋದರ’ ಸ್ಟಾಲಿನ್ ಅವರು ಯಾವಾಗಲೂ ಬಂಡೆಯಂತೆ ನಿಂತಿದ್ದಾರೆ ಎಂದು ಉಲ್ಲೇಖಿಸಿರುವ ರಾಹುಲ್, “ರಾಷ್ಟ್ರದ ಹಿತಾಸಕ್ತಿ, ತಮಿಳುನಾಡಿನ ಹಿತಾಸಕ್ತಿ ಹಾಗೂ ಸಂವಿಧಾನವನ್ನು ರಕ್ಷಿಸಲು ನಾವೆಲ್ಲರೂ ಒಟ್ಟಾಗಿ ಈ ಮಸೂದೆಯನ್ನು ಸೋಲಿಸಬೇಕು” ಎಂದು ಕರೆ ನೀಡಿದ್ದಾರೆ.
ರಾಹುಲ್ ಗಾಂಧಿ ಅವರ ಈ ಮನವಿಗೆ ಪ್ರತಿಕ್ರಿಯಿಸಿರುವ ಎಂ.ಕೆ. ಸ್ಟಾಲಿನ್, ರಾಹುಲ್ ಅವರನ್ನು ‘ಸಹೋದರ’ ಎಂದೇ ಸಂಬೋಧಿಸಿ ಧನ್ಯವಾದ ಅರ್ಪಿಸಿದ್ದಾರೆ. ಆದರೆ, ಮಸೂದೆಯನ್ನು ಬೆಂಬಲಿಸುವ ತಮ್ಮ ಪಕ್ಷದ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಸಂವಿಧಾನ ಮತ್ತು ರಾಜ್ಯಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ಡಿಎಂಕೆಯ ಐತಿಹಾಸಿಕ ಪಾತ್ರವನ್ನು ಗುರುತಿಸಿದ್ದಕ್ಕಾಗಿ ರಾಹುಲ್ ಅವರಿಗೆ ಕೃತಜ್ಞತೆಗಳು. ತಮಿಳುನಾಡು ಮತ್ತು ತಮಿಳು ಜನರ ಹಿತಾಸಕ್ತಿಯನ್ನು ಮೊದಲ ಆದ್ಯತೆಯಾಗಿಟ್ಟುಕೊಂಡೇ ನಾವು ಪ್ರತಿ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಈ ಹಾದಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಇತಿಹಾಸವು ನಮ್ಮನ್ನು ‘ಎಟ್ಟಪ್ಪನ್’ (ದ್ರೋಹಿ)ಗಳೆಂದು ಅಲ್ಲ, ಬದಲಿಗೆ ವೀರ ‘ಕಟ್ಟಬೊಮ್ಮನ್’ಗಳೆಂದು ಗುರುತಿಸಲಿದೆ ಎಂಬ ವಿಶ್ವಾಸವಿದೆ” ಎಂದು ಸ್ಟಾಲಿನ್ ಹೇಳಿದ್ದಾರೆ.
ಈ ನಡುವೆ, ಮೇ ತಿಂಗಳಲ್ಲಿ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬೆನ್ನಲ್ಲೇ ದಶಕಗಳ ಹಳೆಯ ಕಾಂಗ್ರೆಸ್-ಡಿಎಂಕೆ ಮೈತ್ರಿ ಮುರಿದುಬಿದ್ದಿದ್ದನ್ನು ಉಲ್ಲೇಖಿಸಿ ಡಿಎಂಕೆ ಐಟಿ ವಿಭಾಗವು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದೆ.
ಸಂಸತ್ತಿನ ವಿಶೇಷ ಅಧಿವೇಶನವು ನಾಳೆಯಿಂದ ಡಿಸೆಂಬರ್ 3ರವರೆಗೆ ನಡೆಯಲಿದ್ದು, ಶುಕ್ರವಾರವಷ್ಟೇ ಕೇಂದ್ರ ಸಚಿವ ಸಂಪುಟವು ಪರಿಷ್ಕೃತ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ ಅವರು ಇಂದು ಮಧ್ಯಾಹ್ನ 2 ರಿಂದ 5 ಗಂಟೆಯವರೆಗೆ ಚೆನ್ನೈನಲ್ಲಿ ಸ್ಟಾಲಿನ್ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಬಳಿಕ ರಾತ್ರಿ 8 ಗಂಟೆಗೆ ಮುಂಬೈಗೆ ತೆರಳಿ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಲಿದ್ದಾರೆ. ಈ ನಿಯೋಗದಲ್ಲಿ ರೇವಂತ್ ರೆಡ್ಡಿ, ಡಿ.ಕೆ. ಶಿವಕುಮಾರ್, ತೃಣಮೂಲ ಕಾಂಗ್ರೆಸ್ ನಾಯಕರಾದ ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷದ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಇತ್ತ ಸಮಾಜವಾದಿ ಪಕ್ಷ ಮತ್ತು ಶಿವಸೇನೆ (ಯುಬಿಟಿ) ತಮ್ಮ ಲೋಕಸಭಾ ಸದಸ್ಯರಿಗೆ ಈಗಾಗಲೇ ವಿಪ್ ಜಾರಿಗೊಳಿಸಿವೆ.


