ಜನನುಡಿ 2026 | ಬಂಡವಾಳಶಾಹಿ ಮತ್ತು ರಾಜಕೀಯದ ಅಪವಿತ್ರ ಮೈತ್ರಿಯ ಕರಾಳ ಮುಖವೇ ಕೋಮುವಾದ: ಎ ನಾರಾಯಣ್‌

Date:

ಬಂಡವಾಳಶಾಹಿಗಳು ಮತ್ತು ರಾಜಕೀಯ ಅಧಿಕಾರದ ಮೈತ್ರಿಗಳು ಕೋಮುವಾದಿ ಶಕ್ತಿಗಳ ಜೊತೆ ಮಾಡಿಕೊಂಡಿರುವ ಅಪವಿತ್ರ ಮೈತ್ರಿಗಳು ಇಂದು ನಮ್ಮ ಸಮಾಜವನ್ನು ಆವರಿಸಿಕೊಂಡಿದೆ. ಈ ಅಪವಿತ್ರ ಮೈತ್ರಿಯ ಕರಾಳ ಮುಖವೇ ಭೀಕರ ಅಸಮಾನತೆ ಎಂದು ರಾಜಕೀಯ ವಿಶ್ಲೇಷಕ ಎ. ನಾರಾಯಣ್‌ ಅವರು ಹೇಳಿದರು. ಅವರು ಮಂಗಳೂರಿನಲ್ಲಿ ನಡೆಯುತ್ತಿರುವ ಜನನುಡಿ-2026 ರಲ್ಲಿ ನಡೆದ 9ನೇ ಗೋಷ್ಠಿಯಲ್ಲಿ “ಕೋಮುವಾದ-ಕ್ರೋನಿ ಕ್ಯಾಪಿಟಲಿಸಂ ಮೈತ್ರಿ-ಸವಾಲು” ವಿಷಯದ ಕುರಿತು ಮಾತನಾಡಿದರು.

- Advertisement -

ಜನನುಡಿಯಲ್ಲಿ ಎ. ನಾರಾಯಣ್‌ ಅವರ ಭಾಷಣದ ಪೂರ್ಣಪಾಠ ಇಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷೇತ್ರ ಮರುವಿಂಗಡಣೆಯ ಹಿಂದಿರುವ ಬಲಪಂಥೀಯ ರಾಜಕಾರಣದ ಗುಪ್ತ ಕಾರ್ಯಸೂಚಿ

ಕ್ಷೇತ್ರ ಮರುವಿಂಗಡಣೆ ಕೇವಲ ಲೋಕಸಭಾ ಸ್ಥಾನಗಳ ಹೆಚ್ಚಳವಲ್ಲ; ಅದು ದೇಶದ ರಾಜಕೀಯ ಅಧಿಕಾರದ ಹಂಚಿಕೆ, ಒಕ್ಕೂಟ ವ್ಯವಸ್ಥೆ ಮತ್ತು ಸಾಮಾಜಿಕ ನ್ಯಾಯದ ಭವಿಷ್ಯವನ್ನು ನಿರ್ಧರಿಸುವ ಪ್ರಕ್ರಿಯೆ. ಕ್ಷೇತ್ರಗಳ ಗಡಿ ಬದಲಾವಣೆಯಿಂದ ಅಹಿಂದ, ದಲಿತ,...

ಗುಳೇದಗುಡ್ಡ | ತಾಲೂಕಾಗಿ ಹತ್ತು ವರ್ಷ ಕಳೆದರೂ ಭೂ...

ಗುಳೇದಗುಡ್ಡ ತಾಲೂಕು ರಚೆನೆಯಾಗಿ ಹತ್ತು ವರ್ಷ ಕಳೆದಿದೆ. ತಾಲೂಕು ವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮಗಳಿಗೆ ಸಂಬಂಧಿಸಿದ ಭೂದಾಖಲೆಗಳು ಬಾದಾಮಿ ತಹಸೀಲ್ದಾರ್ ಕಚೇರಿ ಮತ್ತು ಗದಗ ರಸ್ತೆಯ ಎಪಿಎಂಸಿ ಸಮೀಪದ ಕಚೇರಿಯಲ್ಲಿ ಸಂಗ್ರಹವಾಗಿವೆ....

ಸುಪ್ತ ಆಯಾಸದ ಹಿಂದೆ ಅಡಗಿರುವ ರಕ್ತಹೀನತೆ: ಕರ್ನಾಟಕದ ಅರ್ಧದಷ್ಟು...

ದೈನಂದಿನ ಒತ್ತಡ, ನಿದ್ರೆಯ ಕೊರತೆ ಅಥವಾ ಬಿಡುವಿಲ್ಲದ ಜೀವನಶೈಲಿಯೆಂದು ನಿರ್ಲಕ್ಷಿಸುವ ಆಯಾಸದ ಹಿಂದೆ ರಕ್ತಹೀನತೆ ಅಡಗಿರಬಹುದು. ಕರ್ನಾಟಕದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಶೇ. 50ಕ್ಕಿಂತ ಹೆಚ್ಚು ಮಂದಿ ರಕ್ತಹೀನತೆಯಿಂದ ಬಳಲುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ದೈನಂದಿನ...

ಜನಸಾಮಾನ್ಯರಿಗೆ ಉಳಿದಿರುವ ಏಕೈಕ ಶಕ್ತಿಯೆಂದರೆ ಅದು ʻನುಡಿʼ ಮಾತ್ರ. ಅದನ್ನು ನಾವು ಯಾವ ಕಾರಣಕ್ಕೂ ಬಿಟ್ಟುಕೊಡಬಾರದು. ಕೋಮುವಾದ, ಬಂಡವಾಳಶಾಹಿಗಳು ಮತ್ತು ರಾಜಕೀಯ ಅಧಿಕಾರದ ಅಪವಿತ್ರ ಮೈತ್ರಿಯನ್ನು ಮುರಿಯುವುದಕ್ಕೆ ನಮಗಿರುವ ಏಕೈಕ ಅಸ್ತ್ರವೆಂದರೆ ನುಡಿ. ಆ ನುಡಿ ಸದಾ ʻಜನನುಡಿʼಯೇ ಆಗಿರಬೇಕು. ಇಂತಹ ಸಮಾರಂಭ, ಸಂವಾದಗಳಲ್ಲಿ ಹೊಮ್ಮುವ ಹೊಸ ಆಲೋಚನೆಗಳನ್ನು ಎದೆಯಲ್ಲಿ ತುಂಬಿಕೊಂಡು ಹೋಗುವ ನಮ್ಮ ಹೊಸ ತಲೆಮಾರಿನ ಯುವಜನತೆಯೇ ನಮಗೆ ಭರವಸೆಯ ಬೆಳಕಾಗಿದ್ದಾರೆ. ಇದರಿಂದ ದೇಶವನ್ನು ಹೊಸ ರೀತಿಯಲ್ಲಿ ಯೋಚಿಸಿ ಕಟ್ಟುವ ನಿಟ್ಟಿನಲ್ಲಿ ದೊಡ್ಡ ಕೊಡುಗೆ ಈ ಸಂವಾದಗಳು ನೀಡುತ್ತವೆ.

ನಮ್ಮ ಸಂವಿಧಾನದ ಮುನ್ನುಡಿಯಲ್ಲಿ ಬರುವ ಪ್ರಮುಖ ನಾಮಪದ (Noun) ‘ರಿಪಬ್ಲಿಕ್’ (Republic). ನಾವು ಎಂತಹ ರಿಪಬ್ಲಿಕ್ ಕಟ್ಟಲು ಹೊರಟಿದ್ದೇವೆ ಎಂಬುದನ್ನು ವಿವರಿಸಲು ನಾಲ್ಕು ಪ್ರಮುಖ ವಿಶೇಷಣಗಳಿವೆ: ಸಾವರಿನ್ (ಸಾರ್ವಭೌಮ), ಸೋಷಿಯಲಿಸ್ಟ್ (ಸಮಾಜವಾದಿ), ಸೆಕ್ಯುಲರ್ (ಜಾತ್ಯತೀತ) ಮತ್ತು ಡೆಮಾಕ್ರೆಟಿಕ್ (ಪ್ರಜಾಸತ್ತಾತ್ಮಕ). ಈ ನಾಲ್ಕೂ ಗುಣವಾಚಿಗಳು ‘ರಿಪಬ್ಲಿಕ್’ ಎಂಬ ನಾಮಪದವನ್ನು ವ್ಯಾಖ್ಯಾನಿಸುತ್ತವೆ.

ಕನ್ನಡದಲ್ಲಿ ‘ರಿಪಬ್ಲಿಕ್’ ಅನ್ನು ‘ಗಣತಂತ್ರ’ ಎಂದು ಅನುವಾದಿಸಿಬಿಡುತ್ತೇವೆ. ಆದರೆ ‘ಗಣತಂತ್ರ’ದಲ್ಲಿರುವ ಆ ‘ಗಣ’ ಯಾವುದು ಎಂಬ ಸಂಶಯ ನನಗೆ ಸದಾ ಕಾಡುತ್ತದೆ. ಇಲ್ಲಿ ಭಾಷಾ ತಜ್ಞರಿದ್ದಾರೆ, ನಾನು ಅವರ ಮುಂದೆ ಹೆಚ್ಚು ಮಾತನಾಡಲಾರೆ. ಆದರೂ ನನ್ನ ಒಳಗಿರುವ ಅಸಮಾಧಾನವೆಂದರೆ, ರಿಪಬ್ಲಿಕ್ ಅನ್ನು ‘ಗಣತಂತ್ರ’ ಎನ್ನುವುದಕ್ಕಿಂತ ‘ಜನತಂತ್ರ’ ಎನ್ನಬೇಕಿತ್ತು. ಜನತಂತ್ರವೆಂದರೆ ಅಂತಿಮ ಸಾರ್ವಭೌಮ ಅಧಿಕಾರ ಜನರ ಕೈಯಲ್ಲಿರುವುದು. ಅಂದರೆ ಆ ಅಧಿಕಾರಕ್ಕಿಂತ ಮಿಗಿಲಾದ ಅಧಿಕಾರ ಆ ಪ್ರದೇಶದಲ್ಲಿ ಬೇರೊಂದಿಲ್ಲ. ಆದರೆ ನಾವು 1991ರ ಮೊದಲಿನ ಅಥವಾ ನಂತರದ ಭಾರತವನ್ನು ನೋಡಿದರೂ, ಜನತಂತ್ರವಾಗಬೇಕಿದ್ದ ನಮ್ಮ ವ್ಯವಸ್ಥೆ ಅಂತಿಮವಾಗಿ ಉಳಿದುಕೊಂಡಿದ್ದು ಮಾತ್ರ ‘ಹಣತಂತ್ರ’ವಾಗಿ! ಗಣತಂತ್ರ, ಜನತಂತ್ರ ಮತ್ತು ಹಣತಂತ್ರ—ಜನತಂತ್ರವಾಗಬೇಕಾಗಿದ್ದು ವಾಸ್ತವದಲ್ಲಿ ಹಣತಂತ್ರವಾಯಿತು.

ನಿನ್ನೆ ಶಿವಸುಂದರ್ ಅವರು ಮತ್ತು ಇಂದು ಕಿರಣ್ ಅವರು ಹೇಳಿದಂತೆ—ನೀವು ಬಂಡವಾಳಶಾಹಿ (ಕ್ಯಾಪಿಟಲಿಸಂ) ವ್ಯವಸ್ಥೆಯನ್ನು ಒಪ್ಪಿಕೊಂಡ ಮೇಲೆ, ಅದಕ್ಕೆ ಪ್ರತ್ಯೇಕವಾಗಿ ‘ಕ್ರೋನಿ ಕ್ಯಾಪಿಟಲಿಸಂ’ (ಆಪ್ತ ಬಂಡವಾಳಶಾಹಿ) ಎಂದು ಕರೆಯುವ ಅಗತ್ಯವೇ ಇರುವುದಿಲ್ಲ. ಈ ಹಣತಂತ್ರದ ಒಂದು ರೂಪವೇ ಕ್ರೋನಿ ಕ್ಯಾಪಿಟಲಿಸಂ; ಮತ್ತು ಅದರ ಅನಿವಾರ್ಯ ಉಪ-ಉತ್ಪನ್ನವೇ ಈ ಕೋಮುವಾದ.

ನಾನು ಚಿಕ್ಕವನಿದ್ದಾಗ ಕೇಳುತ್ತಿದ್ದ ಒಂದು ಹಾಡು ನೆನಪಾಗುತ್ತದೆ. ಬಹುಶಃ ಸಿದ್ಧಲಿಂಗಯ್ಯನವರದ್ದಿರಬೇಕು: “ಎಲ್ಲಿಗೆ ಬಂತು, ಯಾರಿಗೆ ಬಂತು 47ರ ಸ್ವಾತಂತ್ರ್ಯ?” ಅದರಲ್ಲಿ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಆಯಾಮಗಳಿದ್ದವು. ಆರ್ಥಿಕ ಆಯಾಮದ ಸಾಲೊಂದು ಹೀಗಿತ್ತು: “ಟಾಟಾ ಬಿರ್ಲಾರ ಜೇಬಿಗೆ ಬಂತು!” ಆ ಸಾಲು ಕೇಳಿದಾಗ ನಮಗೆ ಎದೆಗೆ ನಾಟುವಂತಿತ್ತು. ಬಂಡವಾಳಶಾಹಿ ಮತ್ತು ಪ್ರಜಾಪ್ರಭುತ್ವದ ರಾಜಕೀಯ ಅಧಿಕಾರದ ನಡುವಿನ ಮೈತ್ರಿ ಎಂದರೆ ಏನು ಎಂಬುದನ್ನು ಆ ಒಂದೇ ಸಾಲು ಅತ್ಯಂತ ತೀಕ್ಷ್ಣವಾಗಿ ಅರ್ಥೈಸಿಬಿಡುತ್ತಿತ್ತು.

ಆದರೆ ಅಂದಿನ ಅಪವಿತ್ರ ಮೈತ್ರಿಗೂ, ಇವತ್ತಿನ ಅಪವಿತ್ರ ಮೈತ್ರಿಗೂ ಸ್ವರೂಪದಲ್ಲಿ ಬಹಳ ದೊಡ್ಡ ವ್ಯತ್ಯಾಸವಿದೆ. 1991ರ ನಂತರ ಈ ಮೈತ್ರಿ ಅಗಾಧವಾಗಿ ಬೆಳೆದು ಇಡೀ ಭಾರತೀಯ ಗಣರಾಜ್ಯದ ಅಸ್ತಿತ್ವಕ್ಕೇ ಕೊಳ್ಳಿ ಇಡುತ್ತಿದ್ದರೂ, ನಮ್ಮ ದೈನಂದಿನ ನುಡಿಗಳಲ್ಲಿ, ಜನಪದದಲ್ಲಿ, ಸಾಹಿತ್ಯದಲ್ಲಿ ಅಥವಾ ಹಾಸ್ಯಗಳಲ್ಲಿ ಈ ಗಂಭೀರತೆ ದಾಖಲಾಗುತ್ತಿಲ್ಲ. ಇವತ್ತಿನ ಕವಿಗೋಷ್ಠಿಯಲ್ಲಿ ರೇಣುಕಾ ಮೇಡಂ ಮತ್ತು ಇತರ ಗೆಳೆಯರ ಕವನಗಳಲ್ಲಿ ಇದು ಸುಳಿದರೂ, ಒಟ್ಟಾರೆಯಾಗಿ ಸಾಹಿತ್ಯ ಮತ್ತು ಜನನುಡಿಯಲ್ಲಿ ಇದರ ತೀವ್ರತೆ ಇನ್ನಷ್ಟು ವ್ಯಾಪಕವಾಗಿ ಬರಬೇಕಿದೆ.

2G ಸ್ಪೆಕ್ಟ್ರಮ್ ಇರಬಹುದು, ಬಳ್ಳಾರಿಯ ಗಣಿಗಾರಿಕೆ ಹಗರಣವಿರಬಹುದು, ಕಲ್ಲಿದ್ದಲು ಗಣಿಗಳ ಹರಾಜಿರಬಹುದು, ಅಥವಾ ಇತ್ತೀಚಿನ ಎಲೆಕ್ಟೋರಲ್ ಬಾಂಡ್ ಹಗರಣವಿರಬಹುದು—ಈ ಅಪವಿತ್ರ ಮೈತ್ರಿಯ ನಿದರ್ಶನಗಳನ್ನು ಆಳವಾಗಿ ಗಮನಿಸಿದರೆ, ಅಲ್ಲಿ ಅಧಿಕಾರ ದುರುಪಯೋಗದ ಮಹಾ ದುರಂತ ಕಾವ್ಯಗಳೇ ಸೃಷ್ಟಿಯಾಗುತ್ತವೆ! ನಾವು ಮಕ್ಕಳಿಗೆ ಹೇಳುವ ಪುರಾಣ-ಮಹಾಕಾವ್ಯಗಳೆಲ್ಲವೂ ಈ ನೈಜ ಹಗರಣಗಳ ತಂತ್ರಗಾರಿಕೆಯ ಮುಂದೆ ಮಂಕಾಗಿ ಕಾಣಿಸುತ್ತವೆ. ಇದನ್ನು ಶೈಕ್ಷಣಿಕ ವಲಯದಾಚೆಗೆ ಕತೆ, ಕಾದಂಬರಿ, ಸಿನಿಮಾ ಮತ್ತು ನಾಟಕಗಳ ಭಾಗವಾಗಿ ಕಟ್ಟಿಕೊಡಬೇಕಾದ ತುರ್ತು ಅಗತ್ಯವಿದೆ.

1991ರ ಮೊದಲು ನಮ್ಮಲ್ಲಿ ‘ಮಿಶ್ರ ಆರ್ಥಿಕತೆ’ (Mixed economy) ಇತ್ತು. ಅದನ್ನು ಹಳಿಯುವವರು ‘ಲೈಸೆನ್ಸ್-ಪರ್ಮಿಟ್-ಕೋಟಾ ರಾಜ್’ ಎಂದು ಕರೆದರು. ಉದ್ಯಮ ರಂಗದ ಚೈತನ್ಯವನ್ನು ಅದುಮಿಡಲಾಗಿದೆ, ಅದನ್ನು ಮುಕ್ತಗೊಳಿಸಿದರೆ ದೇಶದಲ್ಲಿ ಹಾಲು-ಜೇನು ಹರಿಯುತ್ತದೆ ಎಂಬ ಭ್ರಮೆಯನ್ನು ಬಿತ್ತಲಾಯಿತು. ಆ ಕಾಲದಲ್ಲಿ ಲೈಸೆನ್ಸ್ ಕೊಡುವಾಗ ರಾಜಕೀಯ ಪಕ್ಷಗಳಿಗೆ ಯಾರು ಆಪ್ತರೋ, ಯಾರಿಂದ ಪಕ್ಷಕ್ಕೆ ಲಾಭವಾಗುತ್ತದೋ ಅಂತಹವರಿಗೆ ಲೈಸೆನ್ಸ್ ನೀಡುವ ಮೂಲಕ ಮೈತ್ರಿ ನಡೆಯುತ್ತಿತ್ತು.

1991ರ ನಂತರ ಲೈಸೆನ್ಸ್ ರಾಜ್ ಮುಕ್ತವಾಯಿತು, ಉದ್ಯಮಶೀಲತೆ ಮುಕ್ತವಾಗಿ ಬೆಳೆಯುತ್ತದೆ, ಮುಕ್ತ ಸ್ಪರ್ಧೆ ಏರ್ಪಡುತ್ತದೆ ಎಂದು ವಾದಿಸಲಾಯಿತು. ಆದರೆ ವಾಸ್ತವದಲ್ಲಿ ನಿಯಂತ್ರಣದ ಸ್ವರೂಪವಷ್ಟೇ ಬದಲಾಯಿತು! ಲೈಸೆನ್ಸ್ ಬದಲಿಗೆ ಭೂಮಿ ಮಂಜೂರು ಮಾಡುವಲ್ಲಿ, ದೊಡ್ಡ ದೊಡ್ಡ ಸರ್ಕಾರಿ ಕಾಂಟ್ರಾಕ್ಟ್‌ಗಳನ್ನು ನೀಡುವಲ್ಲಿ ಮತ್ತು ತೆರಿಗೆ ರಿಯಾಯಿತಿಗಳನ್ನು ಕೊಡುವಲ್ಲಿ ರಾಜಕಾರಣ ಮತ್ತು ಉದ್ಯಮಪತಿಗಳ ಪರಸ್ಪರ ಅವಲಂಬನೆ ಇನ್ನಷ್ಟು ಭೀಕರವಾಯಿತು. 1991ರ ಷೇರು ಮಾರುಕಟ್ಟೆ ಹರ್ಷನ್ ಮೆಹ್ತಾ ಹಗರಣದಿಂದ ಹಿಡಿದು ಇತ್ತೀಚಿನ ಎಲೆಕ್ಟೋರಲ್ ಬಾಂಡ್‌ವರೆಗೆ ಆರ್ಥಿಕ ಉದಾರೀಕರಣದ ಇತಿಹಾಸವು ಈ ಅಪವಿತ್ರ ಮೈತ್ರಿಯ ಇತಿಹಾಸವಾಗಿಯೇ ದಾಖಲಾಗಿದೆ.

ಜನ ಇದನ್ನು ಯಾಕೆ ಸಹಜವೆಂದು ಒಪ್ಪಿಕೊಳ್ಳುತ್ತಿದ್ದಾರೆಂದರೆ, ಇವತ್ತಿನ ರಾಜಕೀಯ ವ್ಯವಸ್ಥೆಯೇ ಹಣ ಕೇಂದ್ರಿತವಾಗಿದೆ. ಪಂಚಾಯತ್ ಚುನಾವಣೆಯಿಂದ ಹಿಡಿದು ಎಂಎಲ್ಎ, ಎಂಪಿ ಚುನಾವಣೆವರೆಗೆ ಗೆಲ್ಲಲು ಅಗಾಧವಾದ ಹಣ ಬೇಕು. ಕಳೆದ ವಾರ ಹಿಂದಿನ ಚುನಾವಣೆಯಲ್ಲಿ ಸೋತ, ಮುಂದಿನ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವ ಒಬ್ಬ ರಾಜಕಾರಣಿಯ ಜೊತೆ ಮಾತನಾಡುತ್ತಿದ್ದೆ. ಅವರು ಬಹಳ ಸಹಜವಾಗಿ ಹೇಳಿದರು: “ನಾನು ದಿನಕ್ಕೆ ಸರಾಸರಿ ಎರಡುವರೆ ಲಕ್ಷ ರೂಪಾಯಿ ಹಂಚಬೇಕಾಗುತ್ತದೆ!” ಅವರು ಇನ್ನೂ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಣೆಯಾಗಿಲ್ಲ; ಕೇವಲ ಟಿಕೆಟ್ ಆಕಾಂಕ್ಷಿಯಾಗಿ, ತನ್ನ ರಾಜಕೀಯ ಪ್ರೊಫೈಲ್ ಬೆಳೆಸಿಕೊಳ್ಳಲು ದಿನಕ್ಕೆ ಎರಡುವರೆ ಲಕ್ಷ ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ! ಇಡೀ ರಾಜಕೀಯ ಪಕ್ಷವೊಂದನ್ನು ನಡೆಸಲು ಎಷ್ಟು ಅಪಾರ ಪ್ರಮಾಣದ ಹಣ ಬೇಕಾಗಬಹುದು ಎಂಬುದನ್ನು ಊಹಿಸಿಕೊಳ್ಳಿ.

ಈ ಅಗಾಧ ಹಣ ಎಲ್ಲಿಂದ ಬರುತ್ತದೆ? ಅಪವಿತ್ರ ಮೈತ್ರಿ ಏರ್ಪಡುವುದೇ ಇಲ್ಲಿ. ರಾಜಕಾರಣಿಗಳು ಹಣ ಸಂಗ್ರಹಿಸಲು ತಮಗೆ ಅನುಕೂಲಕರವಾದ, ಒಂದೇ ತರಂಗಾಂತರದಲ್ಲಿರುವ (same wavelength) ಸಮಾನ ಮನಸ್ಕ ಬಂಡವಾಳಗಾರರನ್ನು ಹುಡುಕುತ್ತಾರೆ. ಇಂದು ಕ್ರೋನಿ ಕ್ಯಾಪಿಟಲಿಸಂ ಎಂದ ತಕ್ಷಣ ಇಡೀ ದೇಶದಲ್ಲಿ ಎರಡೋ ಮೂರೋ ಹೆಸರುಗಳು ನಮ್ಮ ಮನಸ್ಸಿನಲ್ಲಿ ಹೊಳೆಯುತ್ತವೆ. ಆ ಹೆಸರುಗಳು ರಾಜಕೀಯ ಅಧಿಕಾರಕ್ಕೆ ಇಷ್ಟೊಂದು ಹತ್ತಿರವಾಗಲು ಕಾರಣ—ರಾಜಕೀಯಕ್ಕೆ ಬೇಕಾದ ಹಣವನ್ನು ಒದಗಿಸುವವರು ಅವರೇ.

ಇಂದು ‘ಒಂದು ದೇಶ, ಒಂದು ಭಾಷೆ, ಒಂದು ಧರ್ಮ’ ಎನ್ನುವಂತೆ ಮಂಗಳೂರು ವಿಮಾನ ನಿಲ್ದಾಣದಿಂದ ಹಿಡಿದು ದೇಶದ ಉದ್ದಗಲಕ್ಕೂ ‘ಒಂದು ದೇಶ, ಒಬ್ಬ ಉದ್ಯಮಿ’ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ! ಇದು ಪ್ರಜಾಪ್ರಭುತ್ವದ ಆರೋಗ್ಯದ ಬಗ್ಗೆ ಕಾಳಜಿಯಿರುವ ಯಾರನ್ನಾದರೂ ಆತಂಕಕ್ಕೀಡುಮಾಡಲೇಬೇಕು.

ಲಂಡನ್‌ನ ‘ದಿ ಎಕನಾಮಿಸ್ಟ್’ (The Economist) ಪತ್ರಿಕೆ ‘ಕ್ರೋನಿ ಕ್ಯಾಪಿಟಲಿಸಂ ಇಂಡೆಕ್ಸ್’ ಎಂಬ ಸೂಚ್ಯಂಕವನ್ನು ಪ್ರಕಟಿಸುತ್ತದೆ. ಪತ್ರಿಕಾ ಸ್ವಾತಂತ್ರ್ಯ, ಹಸಿವಿನ ಸೂಚ್ಯಂಕ ಅಥವಾ ಪರಿಸರ ಸೂಚ್ಯಂಕಗಳಲ್ಲಿ ಭಾರತ 100, 115ರ ಆಸುಪಾಸಿನಲ್ಲಿದ್ದರೆ, ಕ್ರೋನಿ ಕ್ಯಾಪಿಟಲಿಸಂ ಪಟ್ಟಿಯಲ್ಲಿ ನಾವು ವಿಶ್ವದಲ್ಲೇ 10ನೇ ಸ್ಥಾನದಲ್ಲಿದ್ದೇವೆ! ಅಂದರೆ ಭ್ರಷ್ಟ ಬಂಡವಾಳಶಾಹಿ ಮೈತ್ರಿಯಲ್ಲಿ ನಾವು ಜಾಗತಿಕವಾಗಿ ಅತ್ಯಂತ ಮುಂಚೂಣಿಯಲ್ಲಿದ್ದೇವೆ.

ಇದನ್ನು ಕೆಲವರು ಸಮರ್ಥಿಸುತ್ತಾ, “ಕೊರಿಯಾ, ಜಪಾನ್, ಅಮೆರಿಕ ಬೆಳೆದಿದ್ದೇ ಹೀಗೆ; ಅಲ್ಲಿನ ಸರ್ಕಾರಗಳು ದೊಡ್ಡ ಬ್ರಾಂಡ್‌ಗಳ ಪರವಾಗಿ ನಿಂತಿದ್ದರಿಂದ ಜಾಗತಿಕ ಕಂಪನಿಗಳು ಬೆಳೆದವು, ಭಾರತಕ್ಕೂ ಅಂತಹ ಬ್ರಾಂಡ್ ಬೇಡವೇ?” ಎಂದು ವಿಚಿತ್ರ ವಾದ ಮಂಡಿಸುತ್ತಾರೆ. ಆದರೆ ಭಾರತದಲ್ಲಿ ನಿಯಮಗಳನ್ನು ಮೀರಿ ಕೆಲವು ಉದ್ಯಮಿಗಳಿಗೆ ಎಲ್ಲಾ ಸವಲತ್ತುಗಳನ್ನು ನೀಡುತ್ತಿರುವ ಈ ಕ್ರೋನಿ ಸಂಬಂಧವನ್ನು ಇನ್ನೊಂದು ನೂರು ವರ್ಷ ಬೆಳೆಸಿದರೂ ಜಾಗತಿಕ ಮಟ್ಟದ ಆರೋಗ್ಯಕರ ಬ್ರಾಂಡ್ ಬರಲು ಸಾಧ್ಯವಿಲ್ಲ.

ಇದರ ಬಗ್ಗೆ ನಾವೇಕೆ ತಲೆಕೆಡಿಸಿಕೊಳ್ಳಬೇಕು? ಏಕೆಂದರೆ ಈ ಅಪವಿತ್ರ ಮೈತ್ರಿಗೆ ಮತ್ತೊಂದು ಕರಾಳ ಮುಖವಿದೆ—ಅದುವೇ ಭೀಕರ ಅಸಮಾನತೆ.

ಜೆಎನ್‌ಯುನ ಖ್ಯಾತ ಅರ್ಥಶಾಸ್ತ್ರಜ್ಞೆ ಜಯತಿ ಘೋಷ್ ಅವರು ಇತ್ತೀಚೆಗೆ ಅತ್ಯಂತ ಅರ್ಥಪೂರ್ಣವಾದ ಪದವೊಂದನ್ನು ಬಳಸಿದ್ದಾರೆ: ‘ಇನಿಕ್ವಾಲಿಟಿ ಎಮರ್ಜೆನ್ಸಿ’ (ಅಸಮಾನತೆಯ ತುರ್ತು ಪರಿಸ್ಥಿತಿ). ದೇಶದಲ್ಲಿ ಇಂದು ಸಾಂವಿಧಾನಿಕ ತುರ್ತು ಪರಿಸ್ಥಿತಿಗಿಂತಲೂ ಅಪಾಯಕಾರಿಯಾದ ಅಸಮಾನತೆಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.

ಅಂಕಿ-ಅಂಶಗಳನ್ನು ನೋಡುವುದಾದರೆ :

ಇಂದು ದೇಶದ ಕೇವಲ ಶೇಕಡಾ ಒಂದರಷ್ಟು (1%) ಸಿರಿವಂತರ ಬಳಿ ಶೇಕಡಾ 62ರಷ್ಟು ಸಂಪತ್ತು ಕೇಂದ್ರೀಕೃತವಾಗಿದೆ! 1900ರಲ್ಲಿ ಇದು ಶೇಕಡಾ 16ರಷ್ಟಿತ್ತು. 1991ರಲ್ಲಿ ಮುಕ್ತ ಮಾರುಕಟ್ಟೆಯಿಂದ ಸಮಾನತೆ ಬರುತ್ತದೆ ಎಂದು ಹೇಳಿದಾಗಲೂ ಶೇಕಡಾ ಒಂದರಷ್ಟು ಜನರ ಬಳಿ ಇದ್ದ ಸಂಪತ್ತು 16% ಮಾತ್ರ.

ಕಳೆದ 30-35 ವರ್ಷಗಳಲ್ಲಿ ಈ ಅಸಮಾನತೆ ಕಡಿಮೆಯಾಗುವ ಬದಲು, ಶೇಕಡಾ 1ರಷ್ಟು ಜನರ ಬಳಿ ಸಂಪತ್ತು 62%ಗೆ ಏರಿಕೆಯಾಗಿದೆ ಎಂದರೆ ಇದು ಅಸಮಾನತೆಯ ತುರ್ತು ಪರಿಸ್ಥಿತಿಯಲ್ಲದೆ ಮತ್ತೇನು? ಕೆಲವು ಕಲ್ಯಾಣ ಯೋಜನೆಗಳಿಂದಾಗಿ ಜನ ಹಸಿವಿನಿಂದ ರಸ್ತೆಯಲ್ಲಿ ಸಾಯುತ್ತಿಲ್ಲದಿರಬಹುದು; ಆದರೆ ಜನ ಹಸಿವಿನಿಂದ ಸಾಯುತ್ತಿಲ್ಲ ಎಂಬ ಮಾತ್ರಕ್ಕೆ ಅಸಮಾನತೆಯ ದಾರುಣತೆ ಕಡಿಮೆಯಾಗಿದೆ ಎಂದರ್ಥವಲ್ಲ.

ಸಂಪತ್ತು ಕೇವಲ ನಾಲ್ಕೈದು ಜನರ ಕೈಯಲ್ಲಿ ಸೀಮಿತವಾದಾಗ ಜನರಿಗೆ ಇಡೀ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ವ್ಯವಸ್ಥೆಯ ಮೇಲೆಯೇ ನಂಬಿಕೆ ಹೊರಟುಹೋಗುತ್ತದೆ. ನಮ್ಮ ನ್ಯಾಯಾಲಯಗಳು, ಪೊಲೀಸರು, ಮಾಧ್ಯಮಗಳು, ರಾಜಕಾರಣಿಗಳು ಮತ್ತು ಸ್ವಾಮೀಜಿಗಳು ನಡೆದುಕೊಳ್ಳುವ ರೀತಿಗೆ ಜನ ಈಗಾಗಲೇ ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಳ್ಳಬೇಕಿತ್ತು. ಆದರೆ ಈ ತೀವ್ರ ಅಸಮಾನತೆಯು ‘ಒಂಟೆಯ ಬೆನ್ನಿನ ಮೇಲಿನ ಕೊನೆಯ ಹುಲ್ಲುಕಡ್ಡಿ’ಯಂತೆ (The last straw on the camel’s back) ಕೆಲಸ ಮಾಡಿ, ಜನ ಸಿಡಿದೇಳುವಂತೆ ಮಾಡಬಹುದು.

ಇನ್ನು ನನ್ನ ಎರಡನೇ ಪ್ರಮುಖ ವಿಷಯ: ಈ ಅಪವಿತ್ರ ಮೈತ್ರಿ ಕೋಮುವಾದವನ್ನು ಏಕೆ ಪೋಷಿಸುತ್ತದೆ?

ಬಂಡವಾಳಶಾಹಿ ಮತ್ತು ರಾಜಕೀಯ ಶಕ್ತಿಯ ನಡುವೆ ಒಂದು ನೀಚ ಮಟ್ಟದ ಸಮತೋಲನ (Low-level equilibrium) ಏರ್ಪಟ್ಟಿರುತ್ತದೆ. “ನನಗೆ ಬೇಕಾದಷ್ಟು ಚುನಾವಣಾ ನಿಧಿ ನೀಡು, ನೀನು ಹೇಗೆ ಬೇಕಾದರೂ ಹಣ ಮಾಡಿಕೊ, ದೇಶದ ಸಂಪತ್ತು ನಿನ್ನ ಬಳಿಯೇ ಕೇಂದ್ರೀಕೃತವಾದರೂ ನಾನು ಕೇಳುವುದಿಲ್ಲ” ಎಂಬುದು ಆ ಒಪ್ಪಂದ. ಇದು ಒಳಗೆ ಹೋದರೆ ಸುರಕ್ಷಿತ, ಹೊರಬಂದರೆ ಅಪಾಯವಿರುವ ಚಕ್ರವ್ಯೂಹ. ಈ ಮೈತ್ರಿಯ ಪಾಲುದಾರ ಉದ್ಯಮಿಗೆ ತನ್ನ ರಕ್ಷಣಾ ಕೋಟೆಯನ್ನು ಕಾಯ್ದುಕೊಳ್ಳಲು ಇದೇ ಪಕ್ಷ ಮತ್ತು ಇದೇ ನಾಯಕ ಅಧಿಕಾರದಲ್ಲಿ ಶಾಶ್ವತವಾಗಿ ಇರಬೇಕಾದ ಅನಿವಾರ್ಯತೆ ಇರುತ್ತದೆ.

ಒಂದೇ ಪಕ್ಷವನ್ನು ನಿರಂತರವಾಗಿ ಅಧಿಕಾರದಲ್ಲಿಡಲು ಇಂದಿನ ಭಾರತದಲ್ಲಿ ಕಂಡುಕೊಂಡಿರುವ ಅತ್ಯಂತ ಸರಳ ಸೂತ್ರವೇ ಕೋಮುವಾದ.

ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ಈ ಅಪಾಯವನ್ನು ಮೊದಲೇ ಎಚ್ಚರಿಸಿದ್ದರು. ಭಾರತದಲ್ಲಿ ಪ್ರಜಾಪ್ರಭುತ್ವ ಜಾರಿಯಾದಾಗ ಎರಡು ಸಾಧ್ಯತೆಗಳಿರುತ್ತವೆ:

ರಾಜಕೀಯ ಬಹುಮತ (Political Majority): ಜನರು ಆಡಳಿತ ಪಕ್ಷದ ಕೆಲಸ, ಸಾಧನೆ-ವೈಫಲ್ಯಗಳನ್ನು ಪರಿಶೀಲಿಸಿ, ತೃಪ್ತಿಕರವಾಗಿದ್ದರೆ ಅಧಿಕಾರ ಮುಂದುವರಿಸುವುದು, ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಬದಲಾಯಿಸುವುದು. ಇದು ಪ್ರಜಾಪ್ರಭುತ್ವದ ಲಕ್ಷಣ.
ಕೋಮು ಬಹುಮತ (Communal Majority): ಇದು ಅತ್ಯಂತ ಅಪಾಯಕಾರಿ. ಇಲ್ಲಿ ಆಡಳಿತಗಾರರು ಕೆಲಸ ಮಾಡಲಿ, ಬಿಡಲಿ; ಆರ್ಥಿಕವಾಗಿ ಧ್ವಂಸ ಮಾಡಲಿ; “ಇವರು ನಮ್ಮ ಧರ್ಮದವರು, ನಮ್ಮವರ ಹಿತರಕ್ಷಣೆ ಇವರಿಂದ ಮಾತ್ರ ಸಾಧ್ಯ” ಎಂಬ ಭಾವನೆಯಿಂದ ಜನರು ಕಣ್ಣುಮುಚ್ಚಿ ಮತ ಹಾಕುವುದು.
ಇದು ಫ್ಯಾಸಿಸಂನ ಆರಂಭದ ಹಂತ. ಮಂಗಳೂರು ಭಾಗದ ಪೆಟ್ರೋಲ್ ಬಂಕ್ ಒಂದರಲ್ಲಿ ವ್ಯಕ್ತಿಯೊಬ್ಬ, “ಪೆಟ್ರೋಲ್ ಬೆಲೆ 600 ರೂಪಾಯಿ ಆದರೂ ಪರವಾಗಿಲ್ಲ, ನಾನು ಅವರಿಗೇ ವೋಟು ಹಾಕುತ್ತೇನೆ” ಎಂದಿದ್ದ ವೀಡಿಯೊ ವೈರಲ್ ಆಗಿತ್ತು. ಇದು ಕೋಮು ಬಹುಮತದ ನೈಜ ಪ್ರತಿಫಲನ. ಈ ಕೋಮು ಬಹುಮತವನ್ನು ಕರಾವಳಿಯಿಂದ ಇಡೀ ರಾಜ್ಯ ಮತ್ತು ದೇಶಕ್ಕೆ ವಿಸ್ತರಿಸಲು ಬಂಡವಾಳಶಾಹಿಗಳ ಅಗಾಧ ಬೆಂಬಲವಿದೆ.

ಕೋಮುವಾದವನ್ನು ಪೋಷಿಸಲು ಇರುವ ಎರಡು ಪ್ರಮುಖ ಕಾರಣಗಳು:

ಯಥಾಸ್ಥಿತಿಯ ರಕ್ಷಣೆ: ಕಮ್ಯೂನಲ್ ಮೆಜಾರಿಟಿ ಸೃಷ್ಟಿಯಾದರೆ ಸರ್ಕಾರ ಬದಲಾಗುವುದಿಲ್ಲ, ತಮ್ಮ ಸಂಪತ್ತಿನ ಲೂಟಿ ಯಥಾವತ್ತಾಗಿ ಮುಂದುವರಿಯುತ್ತದೆ.
ಪ್ರಶ್ನಿಸದಂತೆ ಜನರಿಗೆ ಅರವಳಿಕೆ (Anaesthesia): ಸಂಪತ್ತಿನ ಕೇಂದ್ರೀಕರಣದಿಂದ ಜನರು ಅನುಭವಿಸುತ್ತಿರುವ ನೋವು ಮತ್ತು ಅಸಮಾನತೆಯ ವಿರುದ್ಧ ಅವರು ಸಿಡಿದೇಳದಂತೆ ತಡೆಯಲು ಕೋಮುವಾದ ಅತ್ಯುತ್ತಮ ಔಷಧ. ನಮ್ಮ ಡಾ. ವಾಸು ಅವರು ಹೇಳುವಂತೆ—ಕೋಮುವಾದವೆಂದರೆ ಅರವಳಿಕೆ ಮದ್ದು (Anaesthesia) ಇದ್ದಂತೆ! ಒಮ್ಮೆ ಅರವಳಿಕೆ ಕೊಟ್ಟುಬಿಟ್ಟರೆ ದೇಹದ ಯಾವ ಭಾಗವನ್ನು ಹೇಗೆ ಬೇಕಾದರೂ ಕೊಯ್ಯಬಹುದು, ನೋವೇ ಗೊತ್ತಾಗುವುದಿಲ್ಲ. ಜನರನ್ನು ಪ್ರಶ್ನಿಸದಂತೆ ಮಾಡಲು ಇವರಿಬ್ಬರಿಗೂ ಕೋಮುವಾದದ ಇಂಜೆಕ್ಷನ್ ಬೇಕು.
ಆದರೆ 2024ರ ಚುನಾವಣೆಯಲ್ಲಿ ಜನರು ಕೋಮುವಾದದ ಮೂಲಕ 400 ಸೀಟು ಗೆಲ್ಲುವ ಹುನ್ನಾರಕ್ಕೆ ತಕ್ಕಮಟ್ಟಿನ ಬ್ರೇಕ್ ಹಾಕಿದರು. ಹಾಗೆಂದು ಅವರು ಸುಮ್ಮನಾಗಿಲ್ಲ; ಈಗ ಎರಡನೇ ಅಧ್ಯಾಯ ಪ್ರಾರಂಭವಾಗಿದೆ. ಚುನಾವಣಾ ಆಯೋಗ, ನ್ಯಾಯಾಂಗ, ಮಾಧ್ಯಮಗಳಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರದಲ್ಲಿ ಶಾಶ್ವತವಾಗಿ ಉಳಿಯುವ ಹುನ್ನಾರ ಮುಂದುವರಿದಿದೆ. ಕ್ಷೇತ್ರ ಪುನರ್ವಿಂಗಡಣೆ (Delimitation) ಕೂಡ ಇದರ ಮುಂದುವರಿದ ಭಾಗವೇ ಆಗಿದೆ.

80% ಸಾಕ್ಷರತೆ ಇರುವ ದೇಶದಲ್ಲಿ, ಇಡೀ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಧ್ವಂಸ ಮಾಡುತ್ತಿದ್ದರೂ ಜನರಿಗೆ ನೋವೇ ಆಗುತ್ತಿಲ್ಲವೆಂದರೆ ಅದಕ್ಕೆ ಕಾರಣ—ಮೊದಲೇ ನೀಡಿರುವ ಈ ಕೋಮುವಾದದ ಅರವಳಿಕೆ ಮದ್ದು!

ಹಾಗಾದರೆ ಇದಕ್ಕೆ ಪರಿಹಾರವೇನು? ನಾವು ಏನು ಮಾಡಬೇಕು?

ಕೇವಲ ಸರ್ಕಾರಗಳನ್ನು ಅಥವಾ ಪಕ್ಷಗಳನ್ನು ಬದಲಾಯಿಸಿದರೆ ಈ ಸಮಸ್ಯೆಗೆ ಮುಕ್ತಿ ಸಿಗುವುದಿಲ್ಲ. ನಾವು ಎರಡು ಮೂಲಭೂತ ಬದಲಾವಣೆಗಳ ಕುರಿತು ಯೋಚಿಸಬೇಕು:

ಚುನಾವಣಾ ರಾಜಕೀಯ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆ: ಕೋಟ್ಯಂತರ ರೂಪಾಯಿ ಹಣದ ಹೊಳೆಯಿಲ್ಲದೆ ಚುನಾವಣೆಗಳನ್ನು ಗೆಲ್ಲಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಇರುವವರೆಗೂ ಈ ಅಪವಿತ್ರ ಮೈತ್ರಿ ಮುಂದುವರಿಯುತ್ತದೆ. ಚುನಾವಣೆ ಗೆಲ್ಲಲು ಬಳಸಲಾಗುವ ಈ ಭ್ರಷ್ಟ ಹಣದ ಪರಿಕರಗಳನ್ನು ವ್ಯವಸ್ಥೆಯಿಂದ ಸಂಪೂರ್ಣವಾಗಿ ಕಿತ್ತೊಗೆಯುವಂತಹ ಸುಧಾರಣೆಗಳು ಆಗಬೇಕು.

ಅಭಿವೃದ್ಧಿ ಮತ್ತು ಆರ್ಥಿಕತೆಯ ಬಗೆಗಿನ ಕಲ್ಪನೆಯ ಮರುಚಿಂತನೆ: ‘ರಾಷ್ಟ್ರೀಯತೆ’ ಮತ್ತು ‘ಅಭಿವೃದ್ಧಿ’—ಇವೆರಡೂ ಅತ್ಯಂತ ಅಪಾಯಕಾರಿಯಾಗಿ ದುರುಪಯೋಗವಾಗುತ್ತಿರುವ ಪದಗಳು. ಅಭಿವೃದ್ಧಿಯ ಹೆಸರಿನಲ್ಲಿ ಇಂದು ಪ್ರಕೃತಿಯ ಲೂಟಿ, ಜನರ ಒಕ್ಕಲೆಬ್ಬಿಸುವಿಕೆ ಮತ್ತು ಸಂಪತ್ತಿನ ಕೇಂದ್ರೀಕರಣವನ್ನು ಪ್ರಶ್ನಿಸದೆ ಒಪ್ಪಿಕೊಳ್ಳಲಾಗುತ್ತಿದೆ. ಸಂಪತ್ತು ಯಾರ ಕೈಯಲ್ಲಿರಬೇಕು, ಪ್ರಕೃತಿ-ಮಾನವ ಕೇಂದ್ರಿತ ಆರ್ಥಿಕತೆ ಹೇಗಿರಬೇಕು ಎಂಬ ಬಗ್ಗೆ ಹೊಸ ಚಿಂತನೆ ಮತ್ತು ಮಾದರಿಗಳು ರೂಪುಗೊಳ್ಳಬೇಕು.

ಈ ಎರಡೂ ಬದಲಾವಣೆಗಳು ಏಕಕಾಲದಲ್ಲಿ ಒಟ್ಟಾಗಿ ನಡೆಯದಿದ್ದರೆ ಈ ವಿಷವರ್ತುಲಕ್ಕೆ ಶಾಶ್ವತ ಪರಿಹಾರ ಸಿಗಲು ಸಾಧ್ಯವಿಲ್ಲ.

ಇದು ಅತ್ಯಂತ ಅಗಾಧವಾದ ಕೆಲಸ, ಕೇವಲ ಆದರ್ಶದ ಮಾತು ಎಂದು ಯಾರಾದರೂ ಭಾವಿಸಬಹುದು. ಆದರೆ ನೆನಪಿಡಿ—ಪ್ರತಿಯೊಂದು ಮಹಾನ್ ಪಯಣವೂ ಆರಂಭವಾಗುವುದು ಮೊದಲ ಹೆಜ್ಜೆಯಿಂದಲೇ (A great journey begins with the first step). ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡುವಾಗ ‘ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಎದುರಿಸುವುದು ಹೇಗೆ’ ಎಂದು ನಮ್ಮ ಹಿರಿಯರು ಕೈಚೆಲ್ಲಿ ಕುಳಿತಿದ್ದರೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ.

ಸಮಸ್ಯೆಯ ಅಗಾಧತೆಯು ನಮ್ಮನ್ನು ನಿರಾಶಾವಾದಕ್ಕೆ ತಳ್ಳಬಾರದು. ಹೊಸ ಆಲೋಚನೆಗಳಿಗೆ ಮತ್ತು ಜನಪರ ಪ್ರಯೋಗಗಳಿಗೆ ‘ಜನನುಡಿ’ಯಂತಹ ಮುಕ್ತ ವೇದಿಕೆಗಳು ನಿರಂತರವಾಗಿ ಪ್ರೇರಣೆಯಾಗಲಿ. ಇಲ್ಲಿ ಹೊಮ್ಮುವ ಸಣ್ಣ ಕಿಡಿ ಯಾರದೋ ಎದೆಯಲ್ಲಿ ಬಿದ್ದು ನಾಳಿನ ದೊಡ್ಡ ಜನಚಳವಳಿಯಾಗಿ ಮಾರ್ಪಡಲಿ ಎಂದು ಆಶಿಸುತ್ತಾ, ನನ್ನ ಮಾತುಗಳನ್ನು ಮುಗಿಸುತ್ತೇನೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮ್ಯಾನ್ಮಾರ್‌ನಲ್ಲಿ ಸೇನೆಯ ಭೀಕರ ವೈಮಾನಿಕ ದಾಳಿ: ಮಕ್ಕಳು ಸೇರಿ 70ಕ್ಕೂ ಹೆಚ್ಚು ಮಂದಿ ಬಲಿ

ಮ್ಯಾನ್ಮಾರ್‌ನಲ್ಲಿ ಅಲ್ಲಿನ ಸೇನೆಯು ಎರಡು ಪ್ರತ್ಯೇಕ ದಿನಗಳಲ್ಲಿ ನಡೆಸಿದ ಭೀಕರ ವೈಮಾನಿಕ...

ಗುಳೇದಗುಡ್ಡ | ತಾಲೂಕಾಗಿ ಹತ್ತು ವರ್ಷ ಕಳೆದರೂ ಭೂ ದಾಖಲೆಗೆ ಬದಾಮಿಗೆ ಎಡತಾಕುತ್ತಿರುವ ರೈತರು!

ಗುಳೇದಗುಡ್ಡ ತಾಲೂಕು ರಚೆನೆಯಾಗಿ ಹತ್ತು ವರ್ಷ ಕಳೆದಿದೆ. ತಾಲೂಕು ವ್ಯಾಪ್ತಿಯ...

ಏಕರೂಪ ಶಿಕ್ಷಣಕ್ಕಾಗಿ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ

ರಾಜ್ಯದ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಿ, ಬಡವರು ಮತ್ತು ಶ್ರೀಮಂತರ ಮಕ್ಕಳೆನ್ನದೆ...