2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ, ಚಮ್ಕೌರ್ ಸಾಹಿಬ್ ಕ್ಷೇತ್ರದ ಹಾಲಿ ಶಾಸಕ ಡಾ. ಚರಣ್‌ಜಿತ್ ಸಿಂಗ್ ಭಾನುವಾರ ಶಿರೋಮಣಿ ಅಕಾಲಿದಳಕ್ಕೆ (ಎನ್‌ಎಡಿ) ಸೇರ್ಪಡೆಯಾಗಿದ್ದಾರೆ.
ಚಂಡೀಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಅವರು ಡಾ. ಚರಣ್‌ಜಿತ್ ಸಿಂಗ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಚುನಾವಣೆಗೂ ಮುನ್ನವೇ ಆಡಳಿತಾರೂಢ ಎಎಪಿಗೆ ಇದು ಮತ್ತೊಂದು ದೊಡ್ಡ ರಾಜಕೀಯ ಹಿನ್ನಡೆಯಾಗಿದೆ.
ಇದನ್ನೂ ಓದಿ: ಪಂಜಾಬ್ | ಎಎಪಿಗೆ ಬಿಗ್ ಶಾಕ್: ಕನ್ವರ್ ವಿಜಯ್ ಪ್ರತಾಪ್ ರಾಜೀನಾಮೆ!
2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಸೋಲಿಸುವ ಮೂಲಕ ಡಾ. ಚರಣ್‌ಜಿತ್ ಸಿಂಗ್ ‘ಜೈಂಟ್ ಸ್ಲೇಯರ್’ ಎಂದೇ ಖ್ಯಾತಿ ಪಡೆದಿದ್ದರು. ಆದರೆ, ಮುಂಬರುವ ಚುನಾವಣೆಗಾಗಿ ಆಮ್ ಆದ್ಮಿ ಪಕ್ಷವು ಚಮ್ಕೌರ್ ಸಾಹಿಬ್ ಕ್ಷೇತ್ರದಿಂದ ಇವರಿಗೆ ಟಿಕೆಟ್ ನಿರಾಕರಿಸಿ, ಪಂಜಾಬ್ ಬಿಎಸ್‌ಪಿ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಪರಿಶಿಷ್ಟ ಜಾತಿ ಆಯೋಗದ ಮಾಜಿ ಅಧ್ಯಕ್ಷ ಜಸ್ವೀರ್ ಸಿಂಗ್ ಗರ್ಹಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಸಿಂಗ್, ಯಾವುದೇ ಬೆಲೆ ತೆತ್ತಾದರೂ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು.
ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಚರಣ್‌ಜಿತ್ ಸಿಂಗ್ ಅವರನ್ನು ಸ್ವಾಗತಿಸಿ ಮಾತನಾಡಿದ ಸುಖ್‌ಬೀರ್ ಸಿಂಗ್ ಬಾದಲ್, ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಇವರ ಸೇರ್ಪಡೆಯಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದು ಹೇಳಿದರು.
ಡಾ. ಚರಣ್‌ಜಿತ್ ಸಿಂಗ್ ಮತ್ತು ಅವರ ಬೆಂಬಲಿಗರಿಗೆ ಶಿರೋಮಣಿ ಅಕಾಲಿದಳದಲ್ಲಿ ಸೂಕ್ತ ಸ್ಥಾನಮಾನ ಹಾಗೂ ಜವಾಬ್ದಾರಿ ನೀಡಲಾಗುವುದು ಎಂದು ಭರವಸೆ ನೀಡಿದರು. ಅವರ ಆಗಮನದಿಂದ ಕ್ಷೇತ್ರದಲ್ಲಿ ಅಕಾಲಿದಳ ಮತ್ತಷ್ಟು ಬಲಗೊಳ್ಳಲಿದೆ ಎಂದು ಪಕ್ಷದ ನಾಯಕ ಎನ್.ಕೆ. ಶರ್ಮಾ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಕೆಲವು ತಿಂಗಳುಗಳಿಂದ ಪಂಜಾಬ್ ಎಎಪಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದ ಶಾಸಕರಾದ ಹರ್ಮೀತ್ ಸಿಂಗ್ ಪಠಾಣ್‌ಮಾಜ್ರಾ, ಚೇತನ್ ಸಿಂಗ್ ಜೌರಾಮಾಜ್ರಾ ಮತ್ತು ಕುನ್ವರ್ ವಿಜಯ್ ಪ್ರತಾಪ್ ಅವರು ಈಗಾಗಲೇ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಇದೀಗ ಟಿಕೆಟ್ ವಂಚಿತರಾದ ಡಾ. ಚರಣ್‌ಜಿತ್ ಸಿಂಗ್ ಕೂಡ ಅಕಾಲಿದಳದ ಕೈಹಿಡಿದಿರುವುದು 2027ರ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.



