ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಕಲಬುರಗಿಯ ಹೈಕೋರ್ಟ್ ಕಾನೂನು ಸೇವಾ ಸಮಿತಿಯ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 188 ವಿವಿಧ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಯಶಸ್ವಿಯಾಗಿ ಇತ್ಯರ್ಥಪಡಿಸಿ, ₹6.04 ಕೋಟಿಗೂ ಅಧಿಕ ಪರಿಹಾರ ಮೊತ್ತವನ್ನು ಸಂತ್ರಸ್ತರು ಹಾಗೂ ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು.
‘ಹೈಕೋರ್ಟ್ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಕುಮಾರ್ ಬಿ.ಆರ್. ಪ್ರಕಟಣೆ ನೀಡಿ, ಲೋಕ ಅದಾಲತ್‌ನಲ್ಲಿ ಒಟ್ಟು 188 ಪ್ರಕರಣಗಳು ಸೌಹಾರ್ದಯುತ ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ. ಪ್ರಕರಣಗಳ ಇತ್ಯರ್ಥದೊಂದಿಗೆ ಒಟ್ಟು ₹6,04,47,920 ಪರಿಹಾರ ಮೊತ್ತವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಲೋಕ ಅದಾಲತ್‌ನ ಸುಗಮ ನಿರ್ವಹಣೆಗಾಗಿ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ವಿಶೇಷ ಸಂಧಾನ ಪೀಠಗಳನ್ನು ರಚಿಸಲಾಗಿತ್ತು. ನ್ಯಾಯಮೂರ್ತಿಗಳಾದ ಕೆ.ಎನ್. ಕೇಶವನಾರಾಯಣ ಹಾಗೂ ಬಿ.ಎನ್. ಬಜಂತ್ರಿ ಅವರ ನೇತೃತ್ವದಲ್ಲಿ ನಡೆದ ಸಂಧಾನ ಪ್ರಕ್ರಿಯೆಯಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಸಿವಿಲ್, ಕ್ರಿಮಿನಲ್ ಸೇರಿದಂತೆ ವಿವಿಧ ಸ್ವರೂಪದ ಪ್ರಕರಣಗಳನ್ನು ಉಭಯ ಪಕ್ಷಗಳ ಸಮ್ಮತಿಯೊಂದಿಗೆ ಬಗೆಹರಿಸಲಾಯಿತು.
ಇದನ್ನು ಓದಿದ್ದೀರಾ? ವರದಕ್ಷಿಣೆ ನಿರ್ಮೂಲನೆಗೆ ಬಂಜಾರ ಸಮಾಜದ ಐತಿಹಾಸಿಕ ಹೆಜ್ಜೆ; ಜು.12ರಂದು ಯಾದಗಿರಿಯಲ್ಲಿ ಮಹಾಸಭೆ
ಲೋಕ ಅದಾಲತ್ ಮೂಲಕ ಪ್ರಕರಣಗಳ ತ್ವರಿತ ಇತ್ಯರ್ಥದಿಂದ ನ್ಯಾಯಾಲಯಗಳ ಮೇಲಿನ ವ್ಯಾಜ್ಯಗಳ ಒತ್ತಡ ಕಡಿಮೆಯಾಗುವುದರ ಜೊತೆಗೆ, ಸಾರ್ವಜನಿಕರು ಹಾಗೂ ಪಕ್ಷಕಾರರಿಗೆ ಕಡಿಮೆ ವೆಚ್ಚದಲ್ಲಿ ಶೀಘ್ರ ನ್ಯಾಯ ದೊರೆಯುವಂತಾಗಿದೆ. ಪರ್ಯಾಯ ನ್ಯಾಯ ವ್ಯವಸ್ಥೆಯಾದ ಲೋಕ ಅದಾಲತ್‌ನ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಕಾರ್ಯದರ್ಶಿ ಕುಮಾರ್ ಬಿ.ಆರ್. ತಿಳಿಸಿದ್ದಾರೆ.





