ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ಹಾವೇರಿಯಲ್ಲಿ ರೈತರ ಆಕ್ರೋಶ ತೀವ್ರಗೊಂಡಿದ್ದು, ಜಿಲ್ಲಾಧಿಕಾರಿ ಕಚೇರಿಯನ್ನೇ ರೈತರು ದಿಗ್ಬಂಧನ ಮಾಡಿದ್ದಾರೆ. ಪ್ರತಿ ಟನ್ ಕಬ್ಬಿಗೆ ₹3,100 ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರು ಮುಂದಾಗಿದ್ದರೆ, ₹3,600 ನೀಡಲೇಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ದರ ಘೋಷಣೆ ಆಗುವವರೆಗೂ ಜಿಲ್ಲಾಧಿಕಾರಿ ಕಚೇರಿ ಗೇಟ್ ತೆರೆಯುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರು ಜಿಲ್ಲಾಧಿಕಾರಿ ಕಚೇರಿಯ ಒಳಗೆ ಸಭೆ ನಡೆಸುತ್ತಿದ್ದರೆ, ಹೊರಗೆ ರೈತರು ಅಕ್ಷರಶಃ ದಿಗ್ಬಂಧನ ಹಾಕಿದ್ದಾರೆ. ಕಚೇರಿ ಸುತ್ತ ಮುಳ್ಳಿನ ಬೇಲಿ ಹಾಕಿ, ಸಚಿವರು ಹಾಗೂ ಕಾರ್ಖಾನೆ ಮಾಲೀಕರು ಹೊರಬರದಂತೆ ತಡೆದಿರುವ ರೈತರು, ಕಚೇರಿಯಿಂದ ಮನೆಗೆ ತೆರಳುವ ರಸ್ತೆಯನ್ನೂ ಬಂದ್ ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಮೊದಲ ಮಹಡಿಯ ಸಭಾಂಗಣದಲ್ಲಿ ಸಚಿವ ರುದ್ರಪ್ಪ ಲಮಾಣಿ, ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ, ಜಿಲ್ಲಾಧಿಕಾರಿ ಹಾಗೂ ಎಸ್ಪಿ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಸಭಾಂಗಣದ ಹೊರಭಾಗವನ್ನೂ ರೈತರು ಬಂದ್ ಮಾಡಿದ್ದು, ಕಬ್ಬಿನ ದರದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಸ್ಥಳದಲ್ಲಿ ಎರಡು ಡಿಆರ್ ವಾಹನಗಳನ್ನು ನಿಯೋಜಿಸಲಾಗಿದ್ದು, ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಈ ವೇಳೆ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಅವರು ಕಾರ್ಖಾನೆ ಮಾಲೀಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, “ಹಾವೇರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಶುಗರ್ ಲಾಬಿ ರೈತರನ್ನು ಶೋಷಿಸುತ್ತಿದೆ. ಜಗತ್ತಿನಲ್ಲೇ ಇಂತಹ ಲಾಬಿ ಎಲ್ಲೂ ಇಲ್ಲ ಎನ್ನುವ ರೀತಿಯಲ್ಲಿ ಕಾರ್ಖಾನೆ ಮಾಲೀಕರು ವರ್ತಿಸುತ್ತಿದ್ದಾರೆ. ಜಿಲ್ಲೆಯ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಅನ್ಯಾಯವಾಗುತ್ತಿದೆ” ಎಂದು ಕಿಡಿಕಾರಿದರು.
ಜಿಲ್ಲಾಧಿಕಾರಿ ಕಚೇರಿಯನ್ನೇ ರೈತರು ಸಂಪೂರ್ಣ ಬಂದ್ ಮಾಡಿದ್ದಾರೆ. ಕಬ್ಬಿನ ದರ ಘೋಷಣೆಯಾಗುವವರೆಗೂ ಗೇಟ್ ತೆರೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕಾರ್ಖಾನೆ ಮಾಲೀಕರ ಮನವೊಲಿಸುವ ಸಾಮರ್ಥ್ಯ ಸಚಿವರಿಗಿಲ್ಲ ಎಂದು ಟೀಕಿಸಿದರು. ರೈತರ ಸಮಸ್ಯೆ ಇತ್ಯರ್ಥವಾಗಬೇಕಾದರೆ ಮುಖ್ಯಮಂತ್ರಿ ಅವರು ನೇರವಾಗಿ ಮಧ್ಯಪ್ರವೇಶಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಬ್ಬಿನ ಬೆಲೆ ವಿಚಾರದಲ್ಲಿ ಹಾವೇರಿಯಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಂಡುಬಂದಿದ್ದು, ರೈತರ ಬೇಡಿಕೆಗೆ ಸರ್ಕಾರ ಹಾಗೂ ಕಾರ್ಖಾನೆ ಮಾಲೀಕರು ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.



