ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಕೆಗಳ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ಕೂಲಿ ಕಾರ್ಮಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಅರಿವು ಕಾರ್ಯಕ್ರಮವನ್ನು ಶನಿವಾರ ಕಾಳಗಿ ತಾಲೂಕಿನ ಜೀವನಮಾರಡಗಿ ಗ್ರಾಮದ ಹೊರವಲಯದಲ್ಲಿ ಆಯೋಜಿಸಲಾಯಿತು.
ಜನ ಶಕ್ತಿ ಎಜುಕೇಶನ್ ಆ್ಯಂಡ್ ರೂರಲ್ ಡೆವಲಪ್ಮೆಂಟ್ ಸರ್ವಿಸ್ ಟ್ರಸ್ಟ್ (ರಿ), ಕಲಬುರಗಿ ಯೂತ್ ಅಡ್ವೆಂಚರ್ ಸ್ಪೋರ್ಟ್ಸ್ ಅಸೋಸಿಯೇಷನ್ (ರಿ), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಕಲಬುರಗಿ, ತಾಲೂಕು ಪಂಚಾಯತ್ ಕಾಳಗಿ, ಗ್ರಾಮ ಪಂಚಾಯತ್ ಹಾಗೂ ಬೆಳಕು ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಮಹಿಳಾ ಶಿಕ್ಷಣ ಸೇವಾ ಸಂಸ್ಥೆ (ರಿ) ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಘಟಕ ಹಾಗೂ ಹೆಬ್ಬಾಳ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿಯೇ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಮಧುಮೇಹ (ಸಕ್ಕರೆ ಕಾಯಿಲೆ), ರಕ್ತದೊತ್ತಡ (ಬಿಪಿ) ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ತಪಾಸಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಲಬುರಗಿ ಯೂತ್ ಅಡ್ವೆಂಚರ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ದೇವರಾಜ್ ಕನ್ನಡಗಿ, “ಎಲ್ಲರೂ ಆರೋಗ್ಯ ಸದೃಢವಾಗಿದ್ದರೆ ಮಾತ್ರ ಕೆಲಸ ಮಾಡಲು ಸಾಧ್ಯ. ಆದ್ದರಿಂದ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಂಡು ಬಳಸಬೇಕು” ಎಂದು ಮನವಿ ಮಾಡಿದರು.

ಬಯಲು ಶೌಚದಿಂದ ಪರಿಸರ ಮಾಲಿನ್ಯ ಉಂಟಾಗಿ ಮಾನವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದರು. ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಮಳೆಗಾಲದಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ ಎಂದು ಹೇಳಿದರು.
ಪ್ಲಾಸ್ಟಿಕ್ ವಸ್ತುಗಳನ್ನು ಸುಡುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಅಲ್ಲದೆ, ಹೊರಗಡೆ ಎಸೆಯುವ ಪ್ಲಾಸ್ಟಿಕ್ನ್ನು ಪ್ರಾಣಿಗಳು ಸೇವಿಸುವುದರಿಂದ ದನಕರುಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಸಾರ್ವಜನಿಕರು ಜಾಗೃತರಾಗಿ ಪ್ಲಾಸ್ಟಿಕ್ ಬಳಕೆ ಹಾಗೂ ಘನತ್ಯಾಜ್ಯ ವಸ್ತುಗಳ ಅನಿಯಂತ್ರಿತ ವಿಲೇವಾರಿಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಮಾತನಾಡಿದ ಕಾಳಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸಲಿಂಗಪ್ಪ ಡಿಗ್ಗಿ, “ಬಡ ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ಒಳಗಾದರೆ ಆರ್ಥಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕು” ಎಂದು ಹೇಳಿದರು.

ಇದನ್ನು ಓದಿದ್ದೀರಾ? ಯಾದಗಿರಿ | ಹೊರಗುತ್ತಿಗೆ ನೌಕರರ ವೇತನದಲ್ಲಿ ಲಕ್ಷಾಂತರ ರೂ. ವಂಚನೆ ಆರೋಪ: ದೀಕ್ಷಾ ಏಜೆನ್ಸಿ ವಿರುದ್ಧ ದಸಂಸ ಪ್ರತಿಭಟನೆ
ಶಿಬಿರದಲ್ಲಿ 60ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಬಸವರಾಜ ಪಾಟೀಲ್, ಎನ್ಸಿಡಿ ಸಿಬ್ಬಂದಿಗಳಾದ ರೂಪಾ ಮತ್ತು ಮಹೇಶ್, ಗ್ರಾಮ ಪಂಚಾಯತ್ ಸದಸ್ಯ ಮಲ್ಲಿಕಾರ್ಜುನ ಕಂಠಿ, ಬೆಳಕು ಸಂಸ್ಥೆಯ ನಿರ್ದೇಶಕ ಅನಜುಮ್ ಮಾಳಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





