ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರೂ, ಆದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ‘ಶುದ್ಧೀಕರಣ’ ಮಾಡಿದ ಘಟನೆ ಖಂಡಿಸಿ ಔರಾದ್ನಲ್ಲಿ ಕಾಂಗ್ರೆಸ್ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ಮುಖಂಡ ಭೀಮಶೇನ್ರಾವ್ ಶಿಂಧೆ ನೇತ್ರತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪಟ್ಟಣದ ಕನ್ನಡಾಂಬೆ ವೃತ್ತದಲ್ಲಿ ಜಮಾಯಿಸಿದ ಔರಾದ್ ಹಾಗೂ ಕಮಲನಗರ ತಾಲೂಕಿನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ʼಶುದ್ಧೀಕರಣʼ ಘಟನೆಯನ್ನು ತೀವ್ರವಾಗಿ ಖಂಡಿಸಿದರು.
ಬಳಿಕ ರಾಷ್ಟ್ರಪತಿಗಳ ಹೆಸರಿಗೆ ಬರೆದ ಮನವಿ ಪತ್ರವನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಹೇಶ ಪಾಟೀಲ್ ಅವರಿಗೆ ಸಲ್ಲಿಸಿದರು.
ಮುಖಂಡ ಭೀಮಶೇನ್ರಾವ್ ಶಿಂಧೆ ಮಾತನಾಡಿ, “ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿರುವ ಘಟನೆ ಖಂಡನೀಯ. ಈ ಘಟನೆ ಇಡೀ ದೇಶದ ಜನರಿಗೆ ಅವಮಾನವಾಗಿದೆ. ಈ ಕೃತ್ಯದಲ್ಲಿ ಭಾಗಿಯಾದವರನ್ನು ಗಡಿಪಾರು ಮಾಡಬೇಕು. ಇಂತಹ ಘಟನೆ ಮರುಕಳಿಸದಂತೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು” ಎಂದರು.

ಮುಖಂಡ ಸುಧಾಕರ ಕೊಳ್ಳೂರ ಮಾತನಾಡಿ, “ಉತ್ತರಾಖಂಡದಲ್ಲಿ ಮನುವಾದಿಗಳು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣೆ ಮಾಡಿದ ಸ್ಥಳ ಶುದ್ಧೀಕರಣ ಮಾಡಿರುವುದು ಅಕ್ಷಮ್ಯ ಅಪರಾಧ ಕೃತ್ಯವಾಗಿದೆ. ಈ ಕೃತ್ಯದಲ್ಲಿ ಭಾಗವಹಿಸಿದ ಕಿಡಿಗೇಡಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಈ ಘಟನೆಯಿಂದ ಇಡೀ ದೇಶಕ್ಕೆ ಅಪಮಾನವಾಗಿದೆ. ಇಂತಹ ಘಟನೆ ನಡೆಯದಂತೆ ಎಚ್ಚರವಹಿಸಬೇಕು. ಇಲ್ಲದಿದ್ದರೆ ರಾಷ್ಟ್ರವ್ಯಾಪಿ ಹೋರಾಟ ನಡೆಸಲಾಗುವುದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬೀದರ್ | ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾದ ಇಬ್ಬರು ರೌಡಿಶೀಟರ್ಗಳಿಗೆ ಗಡಿಪಾರು
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಾಮಣ್ಣಾ ವಡೆಯಾರ, ಚೆನ್ನಪ್ಪ ಉಪ್ಪೆ, ಪ್ರಕಾಶ್ ಪಾಟೀಲ್, ಶರಣಪ್ಪಾ ಪಾಟೀಲ, ಅನೀಲ ಹೆಡೆ, ರಾಜು ಎಡವೆ, ಶಲ್ಲಾವುದ್ದಿನ್ ಜಮಗಿ, ಹರರಿದೇವ ಸಂಗನಾಳ, ದತ್ತು ಬಾಪೂರೆ, ಸತೀಷ ವಗ್ಗೆ, ಕೃಷ್ಣಾ ಕಾಂಬಳೆ, ಚೆಂದು ಡಿ.ಕೆ., ಮಲ್ಲಿಕಾರ್ಜುನ ಜೀರ್ಗೆ, ಪ್ರಶಾಂತ ಫುಲಾರೆ, ಅಂಜಾರೆಡ್ಡಿ, ಪ್ರಕಾಶ ಜಾಧವ್ ಸೇರಿದಂತೆ ಅನೇಕರಿದ್ದರು.




