ಕಲಬುರಗಿಯಲ್ಲಿ ಒಳ್ಳೆಯ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಹಲವರಿಂದ 23 ಲಕ್ಷ ರೂ. ವಂಚಿಸಿದ್ದ ಆರೋಪದ ಮೇಲೆ ಕಂಪ್ಯೂಟರ್ ತರಬೇತಿ ಕೇಂದ್ರದ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಕಂಪ್ಯೂಟರ್ ತರಬೇತಿಗೆ ಬರುತ್ತಿದ್ದ ಅಭ್ಯರ್ಥಿಗಳಿಗೆ ಕೆಲಸ ಕೊಡಿಸುತ್ತೇನೆಂದು ಕೋಟನೂರ(ಡಿ) ಗ್ರಾಮದ ರಷ್ಮಿ ಕಂಪ್ಯೂಟರ್ ತರಬೇತಿ ಕೇಂದ್ರದ ಚೇತನ್ ಹಣಮಂತ ಬಿರಾದಾರ ಎಂಬವರು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಚನ್ನವೀರ ನಗರದ ನಿವಾಸಿ ರೇಷ್ಮಾ ಮದು ಚವ್ಹಾಣ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಕಲಬುರಗಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಪ್ಯೂಟರ್ ತರಬೇತಿಗೆ ಹೋಗುತ್ತಿದ್ದ ರೇಷ್ಮಾ, ಅಶ್ವಿನಿ ಪ್ರವೀಣ್, ಗಣೇಶ ಹಣಮಂತ, ಅಬ್ದುಲ್ ಮುಲ್ಲಾ ಹಾಗೂ ಇತರರಿಗೆ ಚೇತನ್ ಎಂಬಾತ ಒಳ್ಳೆಯ ಉದ್ಯೋಗ ಕೊಡಿಸುತ್ತೇನೆ ಎಂದು ಆಮಿಷವೊಡ್ಡಿದ್ದಾನೆ. ಅದಕ್ಕಾಗಿ ಇವರೆಲ್ಲರಿಂದ 23 ಲಕ್ಷ ರೂ. ಹಣ ಪಡೆದುಕೊಂಡಿದ್ದಾನೆ. ಆದರೆ, ಕೆಲಸ ಕೊಡಿಸದೆ ಸತಾಯಿಸಿದ್ದು, ಹಣವನ್ನೂ ವಾಪಸ್ ಕೊಟ್ಟಿಲ್ಲ. ಆತನೂ ಪತ್ತೆಯಾಗಿಲ್ಲ ಎಂದು ಆರೋಪಿಸಲಾಗಿದೆ.