ಖಾಕಿ ಧರಿಸಿ ರಕ್ಷಣೆ ಮಾಡಬೇಕಾದವರೇ ಅಪರಾಧ ಕೃತ್ಯಕ್ಕೆ ಇಳಿದಿರುವ ಘಟನೆ ಗೃಹ ಸಚಿವರ ತವರು ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯೊಬ್ಬರು ನೀಡಿದ ದೂರಿನಿಂದ ಕೋಪಗೊಂಡ ಪೊಲೀಸ್ ಕಾನ್ಸ್ಟೇಬಲ್, ಠಾಣೆಯ ಪಿಎಸ್‌ಐ ಅವರ ವೈಯಕ್ತಿಕ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ತೀವ್ರ ಸಂಚಲನ ಮೂಡಿಸಿದೆ.
ಮಹಾಗಾವ್ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾಗಾವ್ ಕ್ರಾಸ್ (ಕಮಲಾಪುರ ತಾಲೂಕು) ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪ್ರಸ್ತುತ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಪಿ ಕಾನ್ಸ್ಟೇಬಲ್ ರಾಜಶೇಖರ ವರನಾಳ್, ಈ ಹಿಂದೆ ಮಹಾಗಾವ್ ಪೊಲೀಸ್ ಠಾಣೆಯಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದ.
ಆರೋಪಿಯು ಮಹಾಗಾವ್ ಕ್ರಾಸ್‌ನಲ್ಲಿರುವ ಮಹಿಳೆಯೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನೆಂದು ಆರೋಪವಿದೆ. ಮಹಿಳೆಯ ಸಂಬಂಧಿಕರು ದೂರು ನೀಡಿದ್ದರಿಂದ ಚಿಂಚೋಳಿಗೆ ವರ್ಗಾಯಿಸಲಾಗಿತ್ತು. ಆದರೆ ಮಕ್ಕಳ ವಿದ್ಯಾಭ್ಯಾಸದ ನೆಪ ಹೇಳಿ ಮಹಾಗಾವ್ ಕ್ರಾಸ್‌ನಲ್ಲೇ ವಾಸ ಮುಂದುವರಿಸಿದ್ದ ಎನ್ನಲಾಗಿದೆ.
ಸೆಪ್ಟೆಂಬರ್ 13ರಂದು ಆರೋಪಿ ಮಹಿಳೆಯನ್ನು ರಸ್ತೆಯಲ್ಲಿ ಹಲ್ಲೆ ಮಾಡಿ, ಮನೆಗೆ ನುಗ್ಗಿ ಬಾಗಿಲು ಒಡೆದು, ಮನೆಯಲ್ಲಿದ್ದ ಕೆಲವು ವಸ್ತುಗಳಿಗೆ ಬೆಂಕಿ ಹಚ್ಚಿ, ತಾನು ನೀಡಿದ್ದ 10 ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣಗಳನ್ನು ಹಿಂತಿರುಗಿಸುವಂತೆ ಒತ್ತಾಯಿಸಿ ರಂಪಾಟ ನಡೆಸಿದ್ದ ಎಂದು ಆರೋಪಿಸಿ ಮಹಿಳೆ ಮಹಾಗಾವ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ತನ್ನ ವಿರುದ್ಧ ದೂರು ದಾಖಲಾಗಿದ್ದಕ್ಕೆ ಸಿಟ್ಟಾಗಿದ್ದ ಕಾನ್ಸ್ಟೇಬಲ್ ರಾಜಶೇಖರ್, ಮಹಾಗಾವ್ ಪೊಲೀಸ್ ಠಾಣೆಯ ಪಿಎಸ್‌ಐ ಬಸವರಾಜ್ ಚಿತ್ತಕೋಟೆ ಅವರ ವೈಯಕ್ತಿಕ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆರಂಭದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂದು ಅನುಮಾನಿಸಲಾಗಿತ್ತು. ಆದರೆ ಸಿಸಿಟಿವಿ ಫುಟೇಜ್ ಪರಿಶೀಲನೆಯಲ್ಲಿ ಆರೋಪಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ದೃಢಪಟ್ಟಿದೆ.
ಮಹಿಳೆಯ ಮನೆಗೆ ಬೆಂಕಿ ಹಚ್ಚಿದ ಪ್ರಕರಣ ಹಾಗೂ ಪಿಎಸ್‌ಐ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕಮಲಾಪುರ ಸರ್ಕಲ್ ಇನ್‌ಸ್ಪೆಕ್ಟರ್ ಶಿವಶಂಕರ್ ಸಾಹು ಮತ್ತು ಪಿಎಸ್‌ಐ ಬಸವರಾಜ್ ಚಿತ್ತಕೋಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸ್ ಇಲಾಖೆಯಲ್ಲೇ ಇಂತಹ ಘಟನೆ ನಡೆದಿರುವುದರಿಂದ ಸಾರ್ವಜನಿಕರಲ್ಲಿ ತೀವ್ರ ಕಳವಳ ವ್ಯಕ್ತವಾಗಿದೆ. ತನಿಖೆ ಮುಂದುವರಿದಿದೆ.





