ಉಪಗ್ರಹವನ್ನು ಸ್ಫೋಟಿಸದಿದ್ದರೂ ಬಾಹ್ಯಾಕಾಶದಲ್ಲಿ ಜಾಮರ್‌ಗಳು ಸಹ ಅತ್ಯಂತ ಮಾರಕವಾಗಿ ಪರಿಣಮಿಸಬಹುದು. ಇಂದಿನ ದಿನಗಳಲ್ಲಿ ಸಂಪರ್ಕ, ಹವಾಮಾನ ಮುನ್ಸೂಚನೆ, ವಿಮಾನ ಮತ್ತು ಹಡಗುಗಳ ಜಿಪಿಎಸ್ (GPS), ತುರ್ತು ಸೇವೆಗಳು ಮತ್ತು ಆರ್ಥಿಕ ಜಾಲಗಳು ಸಂಪೂರ್ಣವಾಗಿ ಉಪಗ್ರಹಗಳನ್ನು ಅವಲಂಬಿಸಿವೆ. ಒಂದು ಸಣ್ಣ ಸ್ಫೋಟವೂ ಇಲ್ಲದೆ ಅಥವಾ ಯಾವುದೇ ನಗರದ ಮೇಲೆ ಕ್ಷಿಪಣಿ ದಾಳಿ ಮಾಡದೆ, ಕೇವಲ ಜಾಮರ್‌ಗಳ ಮೂಲಕ ಉಪಗ್ರಹಗಳ ಸಂಪರ್ಕ ಕಡಿತಗೊಳಿಸಿದರೆ ಭೂಮಿಯ ಮೇಲೆ ಅಪಾರ ಸಾವು-ನೋವುಗಳು ಸಂಭವಿಸಲಿವೆ
ಬಾಹ್ಯಾಕಾಶ ಯುದ್ಧದ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇದೇ ಮೊದಲ ಬಾರಿಗೆ, ಅಮೆರಿಕವು ಭೂಮಿಯ ಕಕ್ಷೆಯಲ್ಲಿ ತನ್ನ ಶಸ್ತ್ರಾಸ್ತ್ರಗಳನ್ನು ನಿಯೋಜಿಸಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದೆ. ವಾಷಿಂಗ್ಟನ್ ನೀಡಿದ ಈ ಒಂದು ಹೇಳಿಕೆ, ಮುಗಿಲಿನಲ್ಲಿ ಹೊಸದೊಂದು ಶಸ್ತ್ರಾಸ್ತ್ರ ಸ್ಪರ್ಧೆಗೆ ಮುನ್ನುಡಿ ಬರೆದಿದೆ. ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳನ್ನು ನಿಯೋಜಿಸಿರುವ ವಿಷಯವು, ಬಾಹ್ಯಾಕಾಶ ಭದ್ರತಾ ತಜ್ಞರು ಬಹಳ ಹಿಂದಿನಿಂದಲೂ ಊಹಿಸಿದ್ದ ಆತಂಕವನ್ನು ನಿಜ ಮಾಡಿದೆ. ಭೂಮಿ ಮಾತ್ರವಲ್ಲ, ಇನ್ನು ಮುಂದೆ ಆಕಾಶವೂ ಶಸ್ತ್ರಾಸ್ತ್ರಗಳನ್ನು ಇರಿಸುವ ಹೊಸ ತಾಣವಾಗಲಿದೆ. ಈ ಕುರಿತು ‘ಟೈಮ್ಸ್ ಆಫ್ ಇಂಡಿಯಾ’ದ ಅಮೆರಿಕದ ಬಾತ್ಮೀದಾರರಾದ ಚಿದಾನಂದ್ ರಾಜ್‌ಘಟ್ಟ ವಿಶೇಷ ವರದಿ ಮಾಡಿದ್ದಾರೆ.
ಭೂಮಿಯ ಮೇಲಿನ ಯುದ್ಧ ಮತ್ತು ಶಸ್ತ್ರಾಸ್ತ್ರ ಪೈಪೋಟಿ ಇದೀಗ ಅಧಿಕೃತವಾಗಿ ಮುಗಿಲನ್ನು ಮುಟ್ಟಿದೆ. ಇದೇ ಮೊದಲ ಬಾರಿಗೆ, ಅಮೆರಿಕವು ಭೂಮಿಯ ಕಕ್ಷೆಯಲ್ಲಿ ತನ್ನ ಶಸ್ತ್ರಾಸ್ತ್ರಗಳನ್ನು ನಿಯೋಜಿಸಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದೆ. ಇದು ಬಾಹ್ಯಾಕಾಶ ಭದ್ರತಾ ತಜ್ಞರು ಬಹಳ ಹಿಂದಿನಿಂದಲೂ ಊಹಿಸಿದ್ದ ಆತಂಕವನ್ನು ನಿಜ ಮಾಡಿದೆ. ಭೂಮಿ ಮಾತ್ರವಲ್ಲ, ಇನ್ನು ಮುಂದೆ ಆಕಾಶವೂ ಶಸ್ತ್ರಾಸ್ತ್ರಗಳನ್ನು ಇರಿಸುವ ಹೊಸ ತಾಣವಾಗಲಿದೆ.
ವಾಷಿಂಗ್ಟನ್ ಬಳಿ ನಡೆದ ಏರ್, ಸ್ಪೇಸ್ ಮತ್ತು ಸೈಬರ್ ಸಮ್ಮೇಳನದಲ್ಲಿ ಮಾತನಾಡಿದ ಅಮೆರಿಕದ ವಾಯುಪಡೆ ಕಾರ್ಯದರ್ಶಿ ಟ್ರಾಯ್ ಮೈಂಕ್, “ಶತ್ರುಗಳ ಪ್ರತಿಕೂಲ ಕ್ರಮಗಳ ವಿರುದ್ಧ ಜಂಟಿ ಪಡೆಯನ್ನು ರಕ್ಷಿಸುವ ಸಾಮರ್ಥ್ಯವಿರುವ ಬಾಹ್ಯಾಕಾಶ ನಿಯಂತ್ರಣ ಶಸ್ತ್ರಾಸ್ತ್ರಗಳನ್ನು ಅಮೆರಿಕ ಈಗ ಕಕ್ಷೆಯಲ್ಲಿ ಹೊಂದಿದೆ” ಎಂದು ಬಹಿರಂಗಪಡಿಸಿದ್ದಾರೆ. ಚೀನಾ ಮತ್ತು ರಷ್ಯಾಗಳು ಅಭಿವೃದ್ಧಿಪಡಿಸುತ್ತಿರುವ ಪ್ರತಿ-ಬಾಹ್ಯಾಕಾಶ (counterspace) ಸಾಮರ್ಥ್ಯಗಳಿಗೆ ಪ್ರತಿಯಾಗಿ, ರಕ್ಷಣೆ ಮತ್ತು ಎಚ್ಚರಿಕೆಯ ಉದ್ದೇಶದಿಂದ ಈ ಶಸ್ತ್ರಾಸ್ತ್ರಗಳನ್ನು ನಿಯೋಜಿಸಲಾಗಿದೆ ಎಂದು ಅಮೆರಿಕ ಸಮರ್ಥಿಸಿಕೊಂಡಿದೆ. ಮಾಸ್ಕೋ, ಬೀಜಿಂಗ್ ಹಾಗೂ ನವದೆಹಲಿ ಕೂಡ ಶೀಘ್ರದಲ್ಲೇ ಈ ನಿಟ್ಟಿನಲ್ಲಿ ಹೆಜ್ಜೆ ಹಾಕುವ ನಿರೀಕ್ಷೆಯಿದೆ.
ಅಮೆರಿಕ ಕಕ್ಷೆಯಲ್ಲಿ ನಿಖರವಾಗಿ ಯಾವ ರೀತಿಯ ಆಯುಧಗಳನ್ನು ಇರಿಸಿದೆ ಎಂಬುದು ರಹಸ್ಯವಾಗಿದೆ. ಆದರೆ, ಸಂಭವನೀಯ ಪ್ರತಿ-ಬಾಹ್ಯಾಕಾಶ ಆಯುಧಗಳಲ್ಲಿ ಜಾಮರ್‌ಗಳು, ಸಂವೇದಕಗಳನ್ನು (sensors) ಕುರುಡು ಮಾಡುವ ವ್ಯವಸ್ಥೆಗಳು, ಸೈಬರ್ ಸಾಮರ್ಥ್ಯಗಳು ಮತ್ತು ಹೆಚ್ಚು ವಿವಾದಾತ್ಮಕವಾದ, ಉಪಗ್ರಹಗಳನ್ನು ಹೊಡೆದುರುಳಿಸುವ ಕಿನೆಟಿಕ್ (kinetic) ಆಯುಧಗಳು ಸೇರಿರಬಹುದು.

ಈ ಆಯುಧಗಳ ನಡುವಿನ ವ್ಯತ್ಯಾಸ ಅತ್ಯಂತ ಮುಖ್ಯವಾಗಿದೆ. ಏಕೆಂದರೆ, ಉಪಗ್ರಹವನ್ನು ನಾಶಪಡಿಸುವ ಕಿನೆಟಿಕ್ ಆಯುಧವು ಬಾಹ್ಯಾಕಾಶದಲ್ಲಿ ಸಾವಿರಾರು ಅವಶೇಷಗಳನ್ನು ಸೃಷ್ಟಿಸುತ್ತದೆ. ಇದು ಅತ್ಯಂತ ವೇಗವಾಗಿ ಚಲಿಸುವುದರಿಂದ ಇತರ ಉಪಗ್ರಹಗಳಿಗೂ ಮತ್ತು ಬಾಹ್ಯಾಕಾಶ ನೌಕೆಗಳಿಗೂ ಮಾರಣಾಂತಿಕ ಅಪಾಯ ತಂದೊಡ್ಡಬಲ್ಲದು. ಹೀಗಾಗಿ, ಅಮೆರಿಕವು ಜಾಮರ್‌ಗಳಂತಹ ನಾನ್-ಕಿನೆಟಿಕ್ (non-kinetic) ವ್ಯವಸ್ಥೆಗಳನ್ನು ನಿಯೋಜಿಸಿರುವ ಸಾಧ್ಯತೆಯೇ ಹೆಚ್ಚು ಎಂದು ಕೆಲವು ತಜ್ಞರು ನಂಬಿದ್ದಾರೆ.
ಹೊಸದಾಗಿ ಒಪ್ಪಿಕೊಳ್ಳಲಾದ ಅಮೆರಿಕದ ವ್ಯವಸ್ಥೆಗಳು ಬಾಹ್ಯಾಕಾಶ ಆಧಾರಿತ ಜಾಮರ್‌ಗಳಾಗಿರಬಹುದು ಎಂದು ‘ಸೆಕ್ಯೂರ್ ವರ್ಲ್ಡ್ ಫೌಂಡೇಶನ್’ನ ಬಾಹ್ಯಾಕಾಶ ಭದ್ರತೆಯ ಮುಖ್ಯ ನಿರ್ದೇಶಕಿ ವಿಕ್ಟೋರಿಯಾ ಸ್ಯಾಮ್ಸನ್ ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕ ಈಗಾಗಲೇ ಕನಿಷ್ಠ ಒಂದು ಆಕ್ರಮಣಕಾರಿ ಪ್ರತಿ-ಬಾಹ್ಯಾಕಾಶ ವ್ಯವಸ್ಥೆಯನ್ನು ನಿಯೋಜಿಸಿದೆ ಮತ್ತು ಮತ್ತೊಂದನ್ನು ಹೊಂದಿದೆ ಎಂದು ನಂಬಲಾಗಿದೆ; ಅವೆರಡನ್ನೂ ಜಾಮರ್‌ಗಳು ಎಂದು ಗುರುತಿಸಲಾಗಿದೆ ಎಂದು ಫೌಂಡೇಶನ್‌ನ 2025ರ ವರದಿ ಹೇಳಿದೆ.
ಉಪಗ್ರಹವನ್ನು ಸ್ಫೋಟಿಸದಿದ್ದರೂ ಜಾಮರ್‌ಗಳು ಸಹ ಅತ್ಯಂತ ಮಾರಕವಾಗಿ ಪರಿಣಮಿಸಬಹುದು. ಇಂದಿನ ದಿನಗಳಲ್ಲಿ ಸಂಪರ್ಕ, ಹವಾಮಾನ ಮುನ್ಸೂಚನೆ, ವಿಮಾನ ಮತ್ತು ಹಡಗುಗಳ ಜಿಪಿಎಸ್ (GPS), ತುರ್ತು ಸೇವೆಗಳು ಮತ್ತು ಆರ್ಥಿಕ ಜಾಲಗಳು ಸಂಪೂರ್ಣವಾಗಿ ಉಪಗ್ರಹಗಳನ್ನು ಅವಲಂಬಿಸಿವೆ. ಒಂದು ಸಣ್ಣ ಸ್ಫೋಟವೂ ಇಲ್ಲದೆ ಅಥವಾ ಯಾವುದೇ ನಗರದ ಮೇಲೆ ಕ್ಷಿಪಣಿ ದಾಳಿ ಮಾಡದೆ, ಕೇವಲ ಜಾಮರ್‌ಗಳ ಮೂಲಕ ಉಪಗ್ರಹಗಳ ಸಂಪರ್ಕ ಕಡಿತಗೊಳಿಸಿದರೆ ಭೂಮಿಯ ಮೇಲೆ ಅಪಾರ ಸಾವು-ನೋವುಗಳು ಸಂಭವಿಸಲಿವೆ.
ಚಂದ್ರಯಾನದಿಂದ ಹಿಡಿದು ಬಾಹ್ಯಾಕಾಶದಲ್ಲಿ ಆಯುಧ ಇರಿಸುವವರೆಗಿನ ಅಮೆರಿಕದ ಈ ಪಯಣ ಅನಿರೀಕ್ಷಿತವೇನಲ್ಲ. ಕಳೆದ ಆರು ದಶಕಗಳಿಂದ ಬಾಹ್ಯಾಕಾಶವನ್ನು ಮಿಲಿಟರಿ ಉದ್ದೇಶಗಳಿಗೆ ಬಳಸುವುದಿಲ್ಲ, ಅಮೆರಿಕ ಮೊದಲು ಅಲ್ಲಿ ಶಸ್ತ್ರಾಸ್ತ್ರಗಳನ್ನು ಇರಿಸುವುದಿಲ್ಲ ಎಂಬ ರಾಜತಾಂತ್ರಿಕ ನಿಲುವನ್ನು ವಾಷಿಂಗ್ಟನ್ ಕಾಪಾಡಿಕೊಂಡು ಬಂದಿತ್ತು. ರಷ್ಯಾ ಮತ್ತು ಇತ್ತೀಚೆಗೆ ಚೀನಾ ಕೂಡ ಇದೇ ರೀತಿಯ ಮಾತುಗಳನ್ನಾಡಿದ್ದವು.
1967ರ ‘ಔಟರ್ ಸ್ಪೇಸ್ ಒಪ್ಪಂದ’ವು (Outer Space Treaty) ಕಕ್ಷೆಯಲ್ಲಿ ಪರಮಾಣು ಮತ್ತು ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ನಿಷೇಧಿಸುತ್ತದೆಯೇ ಹೊರತು, ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನಲ್ಲ. ಹಾಗಾಗಿ ಕಾನೂನಿನ ಬಾಗಿಲು ಯಾವತ್ತೂ ಸಂಪೂರ್ಣವಾಗಿ ಮುಚ್ಚಿರಲಿಲ್ಲ. ಈ ಕಾನೂನಿನ ಲೋಪವನ್ನೇ ಬಳಸಿಕೊಂಡು ಇದೀಗ ಶೀತಲ ಸಮರದ ಮಾದರಿಯಲ್ಲಿ ಎಲ್ಲರೂ ‘ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಪೈಪೋಟಿ ಬೇಡ’ ಎನ್ನುತ್ತಲೇ, ಓಟಕ್ಕೆ ಸಿದ್ಧರಾಗುತ್ತಿದ್ದಾರೆ.

ಅಮೆರಿಕದ ಈ ಬೆಳವಣಿಗೆಗೆ ಮಂಗಳವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚೀನಾ, ಬಾಹ್ಯಾಕಾಶದಲ್ಲಿ ಯುದ್ಧಕ್ಕೆ ಸಜ್ಜಾಗುವುದನ್ನು ನಿಲ್ಲಿಸುವಂತೆ ಆಗ್ರಹಿಸಿದೆ. ಆಕಾಶವನ್ನು ಯುದ್ಧಭೂಮಿಯನ್ನಾಗಿ ಮಾಡದಂತೆ ಮತ್ತು ಹೊಸ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ಪ್ರಚೋದಿಸದಂತೆ ಎಚ್ಚರಿಸಿದೆ. ರಷ್ಯಾ ಕೂಡ ಬಾಹ್ಯಾಕಾಶವನ್ನು ಶಸ್ತ್ರಾಸ್ತ್ರ ಮುಕ್ತವಾಗಿಡುವಂತೆ ಕರೆ ನೀಡಿದೆ ಹಾಗೂ ಅದರ ಮಿಲಿಟರೀಕರಣವನ್ನು ತಡೆಯುವ ಅಗತ್ಯವನ್ನು ಪ್ರತಿಪಾದಿಸಿದೆ.
ಆದರೆ ವಾಸ್ತವದಲ್ಲಿ, ಈ ಎರಡೂ ದೇಶಗಳು ತಮ್ಮದೇ ಆದ ಗಣನೀಯ ಪ್ರತಿ-ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಹೊಂದಿವೆ. ಚೀನಾ ಈಗಾಗಲೇ ನೇರ-ಆರೋಹಣದ ಆಂಟಿ-ಸ್ಯಾಟಲೈಟ್ (ASAT) ತಂತ್ರಜ್ಞಾನವನ್ನು ಪ್ರದರ್ಶಿಸಿದೆ. ಜೊತೆಗೆ ನಿಖರ ಕಾರ್ಯಾಚರಣೆಗಳನ್ನು ನಡೆಸಬಲ್ಲ ಅತ್ಯಾಧುನಿಕ ಉಪಗ್ರಹಗಳನ್ನು ಅಭಿವೃದ್ಧಿಪಡಿಸಿದೆ. ಆರ್ಥಿಕ ಮುಗ್ಗಟ್ಟು, ಏಕಾಂಗಿತನ ಮತ್ತು ಉಡ್ಡಯನ ಚಟುವಟಿಕೆಗಳ ಕುಸಿತದ ನಡುವೆಯೂ ರಷ್ಯಾ ಎಲೆಕ್ಟ್ರಾನಿಕ್ ವಾರ್‌ಫೇರ್ ಮತ್ತು ಆಂಟಿ-ಸ್ಯಾಟಲೈಟ್ ತಂತ್ರಜ್ಞಾನದಲ್ಲಿ ಬಲಿಷ್ಠವಾಗಿದೆ.
ಈ ಬಾಹ್ಯಾಕಾಶ ಶಸ್ತ್ರಾಸ್ತ್ರ ಕ್ಲಬ್‌ಗೆ ಭಾರತ ನಾಲ್ಕನೇ ಮತ್ತು ಸದ್ದಿಲ್ಲದ ಪ್ರವೇಶಾತಿಯಾಗಿದೆ. ಮಾರ್ಚ್ 2019 ರಲ್ಲಿ ‘ಮಿಷನ್ ಶಕ್ತಿ’ ಮೂಲಕ ಕೆಳ-ಕಕ್ಷೆಯಲ್ಲಿರುವ ತನ್ನದೇ ಆದ ಉಪಗ್ರಹವನ್ನು ಹೊಡೆದುರುಳಿಸುವ (ASAT) ಸಾಮರ್ಥ್ಯವನ್ನು ಭಾರತ ಸಾಬೀತುಪಡಿಸಿದೆ. ಕೇವಲ ಉಪಗ್ರಹಗಳನ್ನು ನಾಶಪಡಿಸುವ ಬದಲು, ಬಾಹ್ಯಾಕಾಶದ ಪರಿಸ್ಥಿತಿಯ ಅರಿವು (Space situational awareness), ಉಪಗ್ರಹಗಳ ರಕ್ಷಣೆ ಮತ್ತು ಅತ್ಯಾಧುನಿಕ ಕಕ್ಷೀಯ ಕಾರ್ಯಾಚರಣೆಗಳತ್ತ ಭಾರತ ಹೆಚ್ಚು ಗಮನ ಹರಿಸುತ್ತಿದೆ.

ತನ್ನ ಬಾಹ್ಯಾಕಾಶ ಸ್ವತ್ತುಗಳನ್ನು ರಕ್ಷಿಸುವ ಸಾಮರ್ಥ್ಯವನ್ನು ಈ ಪರೀಕ್ಷೆ ಸಾಬೀತುಪಡಿಸಿದೆ ಎಂದು ಆಗ ನವದೆಹಲಿ ಹೇಳಿತ್ತು. ಭಾರತದ 2025ರ ಸ್ಪಾಡೆಕ್ಸ್ (SpaDeX) ಮಿಷನ್ ಉಪಗ್ರಹಗಳ ಸ್ವಯಂಚಾಲಿತ ಡಾಕಿಂಗ್ ಮತ್ತು ಅನ್‌ಡಾಕಿಂಗ್ ತಂತ್ರಜ್ಞಾನವನ್ನು ಪ್ರದರ್ಶಿಸಿದೆ. ಇದು ಉಪಗ್ರಹ ಸೇವೆಗಳಂತಹ ಶಾಂತಿಯುತ ಉದ್ದೇಶಗಳನ್ನು ಹೊಂದಿದ್ದರೂ, ಭವಿಷ್ಯದಲ್ಲಿ ಮಿಲಿಟರಿ ಬಳಕೆಗೂ ಸಹಕಾರಿಯಾಗಿದೆ. ಡಿಆರ್‌ಡಿಒ (DRDO) ಕೂಡ ಬಾಹ್ಯಾಕಾಶ ಆಧಾರಿತ ಲೇಸರ್‌ಗಳು, ಸ್ಯಾಟಲೈಟ್ ಜಾಮಿಂಗ್, ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್, ಕಣ್ಗಾವಲು ವ್ಯವಸ್ಥೆಯ ಮೇಲೆ ಕಾರ್ಯನಿರ್ವಹಿಸುತ್ತಿದೆ. ಒಂದು ಕಡೆ ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ತಡೆಯಲು ಮಾತುಕತೆಗಳನ್ನು ಬೆಂಬಲಿಸುತ್ತಲೇ, ಭಾರತ ತನ್ನ ಬಾಹ್ಯಾಕಾಶ ಭದ್ರತೆಯನ್ನು ಅತ್ಯಂತ ವ್ಯವಸ್ಥಿತವಾಗಿ ಬಲಪಡಿಸಿಕೊಳ್ಳುತ್ತಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರತಿಸ್ಪರ್ಧಿ ಮತ್ತು ರಷ್ಯಾ ಆಯ್ದ ಕ್ಷೇತ್ರಗಳಲ್ಲಿ ಬಲವಾದ ಸಾಮರ್ಥ್ಯವನ್ನು ಹೊಂದಿದೆ. ಭಾರತ ಇನ್ನೂ ಪರಿಧಿಯಲ್ಲಿದೆ. ಆದರೆ, ಅಮೆರಿಕವೇ ಅತ್ಯಂತ ಸಮಗ್ರ ಬಾಹ್ಯಾಕಾಶ ಶಕ್ತಿಯಾಗಿ ಉಳಿದಿದೆ. ಮಿಲಿಟರಿ ಉಪಗ್ರಹಗಳು, ಗುಪ್ತಚರ, ನ್ಯಾವಿಗೇಷನ್, ಕ್ಷಿಪಣಿ ಎಚ್ಚರಿಕೆ ವ್ಯವಸ್ಥೆ, ಉಡ್ಡಯನ ಸಾಮರ್ಥ್ಯ, ವಾಣಿಜ್ಯ ಮೂಲಸೌಕರ್ಯವು ಅಮೆರಿಕದ ಬಲವಾಗಿದೆ. ಅದರ ಖಾಸಗಿ ಬಾಹ್ಯಾಕಾಶ ವಲಯವು (Commercial Space Sector) ವಾಷಿಂಗ್ಟನ್‌ಗೆ ಮತ್ತೊಂದು ಅನುಕೂಲವನ್ನು ನೀಡಿದ್ದು, ಖಾಸಗಿ ಕಂಪನಿಗಳ ಮೂಲಕ ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಬಲ್ಲದು.
ಅಮೆರಿಕದ ಈ ಘೋಷಣೆಯು ನೇರ ಯುದ್ಧದ ಬದಲಾಗಿ ಮಾನಸಿಕ ಮೇಲುಗೈ ಸಾಧಿಸುವ ತಂತ್ರವಾಗಿ ಕಾಣುತ್ತಿದೆ. ರಷ್ಯಾ ಮತ್ತು ಚೀನಾದ ಶಸ್ತ್ರಾಸ್ತ್ರ ಅಭಿವೃದ್ಧಿಯ ಹಿನ್ನಡೆಗಳ ನಡುವೆ ತಾಂತ್ರಿಕ ಶ್ರೇಷ್ಠತೆಯನ್ನು ಪ್ರದರ್ಶಿಸುವ ಉದ್ದೇಶ ಸೋಮವಾರದ ಘೋಷಣೆಯ ಹಿಂದಿದೆ ಎಂದು ಕೆಲವು ತಜ್ಞರು ನಂಬಿದ್ದಾರೆ. ಆದರೆ, ಭವಿಷ್ಯದಲ್ಲಿ ಅಮೆರಿಕದ ಈ ಒಪ್ಪಿಕೊಳ್ಳುವಿಕೆಯನ್ನೇ ನೆಪವಾಗಿಟ್ಟುಕೊಂಡು ಬೀಜಿಂಗ್ ಮತ್ತು ಮಾಸ್ಕೋ ಬಾಹ್ಯಾಕಾಶ ಶಸ್ತ್ರಾಸ್ತ್ರಗಳ ಮೇಲೆ ಮತ್ತಷ್ಟು ಹೂಡಿಕೆ ಮಾಡಲಿವೆ. ಇದು ಖಂಡಿತವಾಗಿಯೂ ಮುಗಿಲಿನಲ್ಲಿ ಹೊಸದೊಂದು ‘ಶಸ್ತ್ರಾಸ್ತ್ರ ಸ್ಪರ್ಧೆ’ ಉಂಟಾಗುವುದು ಖಚಿತ.




