ಕರ್ನಾಟಕದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಸುಮಾರು 1.07 ಕೋಟಿ ಮತದಾರರ ಹೆಸರನ್ನು ಕೈಬಿಡಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ವೇಣುಗೋಪಾಲ್ ಅವರು, ರಾಜ್ಯದ ಮತದಾರರ ಪಟ್ಟಿಯಿಂದ ಸುಮಾರು ಶೇ. 23 ರಷ್ಟು ಅಂದರೆ 1 ಕೋಟಿಗೂ ಅಧಿಕ ಮತದಾರರ ಹೆಸರನ್ನು ನಿಯಮಬಾಹಿರವಾಗಿ ಡಿಲೀಟ್ ಮಾಡಲಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಡಿ ಕೆ ಶಿವಕುಮಾರ್ ಪರ ಘೋಷಣೆ ಕೂಗಿ ಕೆ.ಸಿ. ವೇಣುಗೋಪಾಲ್‌ಗೆ ಸ್ವಾಗತ
ಫಾರ್ಮ್-7 ರ ವ್ಯಾಪಕ ದುರುಪಯೋಗದಿಂದಾಗಿ ಅರ್ಹ ಮತದಾರರ, ವಿಶೇಷವಾಗಿ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು (OBC) ಮತ್ತು ಅಲ್ಪಸಂಖ್ಯಾತ ಮತದಾರರ ಹೆಸರನ್ನು ವ್ಯವಸ್ಥಿತವಾಗಿ ತೆಗೆದುಹಾಕಲಾಗಿದೆ ಎಂದು ದೂರಿದ್ದಾರೆ.
ಈ ಸಂದರ್ಭದಲ್ಲೇ ನಿಜವಾದ ಕಾರಣದಿಂದಾಗಿ ಡಿಲೀಟ್ ಮಾಡಿದ್ದರೆ ಯಾರಿಗೂ ಸಮಸ್ಯೆ ಅನಿಸುತ್ತಿರಲಿಲ್ಲ. ಆದರೆ ಕಳೆದ ನಾಲ್ಕೈದು ವರ್ಷದಿಂದ ಚುನಾವಣಾ ಆಯೋಗದ ಕ್ರಮಗಳನ್ನು ನೋಡುತ್ತಿದ್ದೇವೆ. ನಮಗೆ ಸರಿಯಾದ ಉತ್ತರವನ್ನೂ ನೀಡುತ್ತಿಲ್ಲ. ಚುನಾವಣೆಗಳನ್ನು ಜನರ ಆದೇಶದ ಮೂಲಕ ಗೆಲ್ಲಬೇಕೇ ಹೊರತು ‘ವೋಟ್ ಚೋರಿ’ (ಮತಗಳ ಕಳ್ಳತನ) ಮೂಲಕ ಅಲ್ಲ ಎಂದು ಕೇಂದ್ರದ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಬಿಡುಗಡೆ ಮಾಡಿರುವ SIR ಕರಡು ಮತದಾರರ ಪಟ್ಟಿಯ ಪ್ರಕಾರ, ರಾಜ್ಯದಲ್ಲಿ ಒಟ್ಟು 1,07,96,339 (1.07 ಕೋಟಿ) ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಭಾರಿ ಕಡಿತದ ನಂತರ ಕರ್ನಾಟಕದ ಕರಡು ಮತದಾರರ ಪಟ್ಟಿಯಲ್ಲಿ ಸದ್ಯ 4.46 ಕೋಟಿ ಮತದಾರರು ಮಾತ್ರ ಬಾಕಿ ಉಳಿದಿದ್ದಾರೆ.




