ಕಾರವಾರ: ನಕಲಿ ದಾಖಲೆಗಳ ಮೂಲಕ ಭೂಮಿ ಖರೀದಿ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಗೋವಾ ಮೂಲದ ಉದ್ಯಮಿ ಸುಲೇಮಾನ್ ಖಾನ್ ಅಲಿಯಾಸ್ ಸಿದ್ದಿಕ್ ಖಾನ್‌ಗೆ ಸಂಬಂಧಿಸಿದ ಕಾರವಾರದ ನಾಲ್ಕು ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಂಗಳವಾರ ಶೋಧ ನಡೆಸಿದರು.
ಗೋವಾದಿಂದ ಆಗಮಿಸಿದ್ದ ಇಡಿ ಅಧಿಕಾರಿಗಳ ತಂಡ ಕಾರವಾರದ ಕೋಡಿಬಾಗದಲ್ಲಿರುವ ಖಾಸಗಿ ಅಪಾರ್ಟ್‌ಮೆಂಟ್‌ನ ನಾಲ್ಕು ಫ್ಲ್ಯಾಟ್‌ಗಳಲ್ಲಿ ಪರಿಶೀಲನೆ ನಡೆಸಿತು. ಆಸ್ತಿ ಖರೀದಿ, ಹಣಕಾಸಿನ ವಹಿವಾಟು ಹಾಗೂ ಸಂಬಂಧಿತ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಜನರ ಮನೆ ಬಾಗಿಲಿಗೆ ಜಾತಿ–ಆದಾಯ ಪ್ರಮಾಣಪತ್ರ: 9.60 ಲಕ್ಷ ವಿತರಣೆ, ಶೇ.85.76 ಸಾಧನೆ
ಮೂಲತಃ ಶಿವಮೊಗ್ಗದವರು ಎನ್ನಲಾಗಿರುವ ಸಿದ್ದಿಕ್ ಖಾನ್ ಸುಮಾರು ಐದು ವರ್ಷಗಳ ಕಾಲ ಕಾರವಾರದಲ್ಲಿ ವಾಸವಿದ್ದು, ನಂತರ ಗೋವಾಕ್ಕೆ ತೆರಳಿದ್ದರು. ಅವರ ಕುಟುಂಬ ಸದಸ್ಯರು ಕಾರವಾರದಲ್ಲೇ ನೆಲೆಸಿದ್ದರು ಎಂದು ತಿಳಿದುಬಂದಿದೆ.
ಗೋವಾದಲ್ಲಿ ಮೃತಪಟ್ಟವರ ಆಸ್ತಿಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಆರೋಪ ಸಿದ್ದಿಕ್ ಖಾನ್ ವಿರುದ್ಧ ಕೇಳಿಬಂದಿತ್ತು. ಈ ಪ್ರಕರಣದ ತನಿಖೆ ನಡೆಸಿದ ಗೋವಾ ಎಸ್‌ಐಟಿ 2024ರಲ್ಲಿ ಅವರನ್ನು ಬಂಧಿಸಿತ್ತು. ಬಳಿಕ ಜೈಲಿನಿಂದ ತಪ್ಪಿಸಿಕೊಂಡಿದ್ದ ಅವರನ್ನು ಕೇರಳದಲ್ಲಿ ಮತ್ತೆ ಬಂಧಿಸಲಾಗಿತ್ತು.
ಪ್ರಕರಣದ ತನಿಖೆಯ ಭಾಗವಾಗಿ ಎಸ್‌ಐಟಿ ಅಧಿಕಾರಿಗಳು ಕಾರವಾರಕ್ಕೆ ಬಂದು ಸಿದ್ದಿಕ್ ಖಾನ್‌ಗೆ ಸೇರಿದ ಫ್ಲ್ಯಾಟ್‌ಗಳನ್ನು ವಶಕ್ಕೆ ಪಡೆದಿದ್ದರು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪದ ಕುರಿತು ಇಡಿ ತನಿಖೆ ಮುಂದುವರಿಸಿದೆ.
ಸುಮಾರು ₹300 ಕೋಟಿ ಮೌಲ್ಯದ 25 ಹೆಕ್ಟೇರ್ ಭೂಮಿಯನ್ನು ಅಕ್ರಮ ಹಣದ ಮೂಲಕ ಖರೀದಿಸಿರುವ ಆರೋಪದ ಹಿನ್ನೆಲೆಯಲ್ಲಿ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇದೇ ತನಿಖೆಯ ಮುಂದುವರಿದ ಭಾಗವಾಗಿ ಕಾರವಾರದ ಆಸ್ತಿಗಳ ಮೇಲೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ.




