ಉತ್ತರ ಕನ್ನಡ: ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡಿ, ಅರ್ಜಿ ಸಲ್ಲಿಸಿ, ಪರಿಶೀಲನೆ ಪೂರ್ಣಗೊಳ್ಳುವವರೆಗೆ ಕಾಯಬೇಕಾದ ಪರಿಸ್ಥಿತಿಗೆ ಸರ್ಕಾರ ಇದೀಗ ತೆರೆ ಎಳೆದಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಉಚಿತವಾಗಿ ಡಿಜಿಟಲ್ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ತಲುಪಿಸುವ ಕಾರ್ಯಕ್ರಮ ಜಾರಿಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 9,60,218 ಪ್ರಮಾಣಪತ್ರಗಳನ್ನು ವಿತರಿಸಿ ಶೇ.85.76ರಷ್ಟು ಸಾಧನೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 11,17,946 ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಉಚಿತವಾಗಿ ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಈಗಾಗಲೇ 9.60 ಲಕ್ಷಕ್ಕೂ ಅಧಿಕ ಪ್ರಮಾಣಪತ್ರಗಳನ್ನು ವಿತರಿಸಲಾಗಿದ್ದು, ಉಳಿದ ಅರ್ಹ ಫಲಾನುಭವಿಗಳಿಗೂ ಪ್ರಮಾಣಪತ್ರಗಳನ್ನು ತಲುಪಿಸುವ ಕಾರ್ಯ ಮುಂದುವರಿದಿದೆ.
ತಾಲೂಕುವಾರು ವಿತರಣೆ: ಹೊನ್ನಾವರ – 1,09,188, ಸಿದ್ದಾಪುರ – 56,659, ಯಲ್ಲಾಪುರ – 57,407, ಕಾರವಾರ – 1,04,426, ಜೋಯ್ಡಾ – 54,318, ಅಂಕೋಲಾ – 1,22,805, ಹಳಿಯಾಳ – 56,702, ಶಿರಸಿ – 94,509, ಮುಂಡಗೋಡು – 75,019, ಭಟ್ಕಳ – 43,699, ಕುಮಟಾ – 1,65,025, ದಾಂಡೇಲಿ – 23,461
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಹನೂರು ರೈತರ ಎನ್ಕೌಂಟರ್ ಪ್ರಕರಣ: ನ್ಯಾಯಾಂಗ ತನಿಖೆಗೆ ಆಗ್ರಹ
ಸಿಬ್ಬಂದಿ ಕೊರತೆ, ಸರ್ವರ್ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು ವಾರಗಟ್ಟಲೆ, ಕೆಲವೊಮ್ಮೆ ತಿಂಗಳುಗಟ್ಟಲೆ ಕಾಯಬೇಕಾಗುತ್ತಿತ್ತು. ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜು ಪ್ರವೇಶ, ವಿದ್ಯಾರ್ಥಿವೇತನ ಹಾಗೂ ಇತರ ಸೌಲಭ್ಯಗಳ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪ್ರಮಾಣಪತ್ರ ವಿಳಂಬದಿಂದ ಸಮಸ್ಯೆಯಾಗುತ್ತಿದ್ದ ಹಿನ್ನೆಲೆಯಲ್ಲಿ, ಸರ್ಕಾರ ಸೇವೆಯನ್ನೇ ಜನರ ಮನೆ ಬಾಗಿಲಿಗೆ ತಲುಪಿಸುವ ಕ್ರಮ ಕೈಗೊಂಡಿದೆ.
ಡಿಜಿಟಲ್ ದಾಖಲೆಗಳ ಆಧಾರದಲ್ಲಿ ಪ್ರಮಾಣಪತ್ರಸರ್ಕಾರದ ಬಳಿ ಈಗಾಗಲೇ ಲಭ್ಯವಿರುವ ಕಂದಾಯ ದಾಖಲೆಗಳು, ಜಾತಿ ಗಣತಿ ಮಾಹಿತಿ ಹಾಗೂ ಆಧಾರ್ ಸಂಪರ್ಕದ ಮಾಹಿತಿಯನ್ನು ಬಳಸಿಕೊಂಡು ಅರ್ಹ ಫಲಾನುಭವಿಗಳಿಗೆ ನೇರವಾಗಿ ಪ್ರಮಾಣಪತ್ರ ಸಿದ್ಧಪಡಿಸಿ ವಿತರಿಸಲಾಗುತ್ತಿದೆ.
ಹಲವು ತಿಂಗಳ ಸಿದ್ಧತೆ ಹಾಗೂ ವಿವಿಧ ಇಲಾಖೆಗಳ ಸಮನ್ವಯದ ಫಲವಾಗಿ ಈ ವ್ಯವಸ್ಥೆ ಜಾರಿಗೆ ಬಂದಿದೆ. ಮನೆ ಬಾಗಿಲಿಗೆ ಪ್ರಮಾಣಪತ್ರ ವಿತರಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಫಲಾನುಭವಿಯ ಕುಟುಂಬದ ಸದಸ್ಯರಿಗೆ ಪ್ರಮಾಣಪತ್ರ ಹಸ್ತಾಂತರಿಸುವಂತೆ ಸೂಚಿಸಲಾಗಿದ್ದು, ವಿತರಣೆಯ ದೃಢೀಕರಣಕ್ಕಾಗಿ ಜಿ.ಪಿ.ಎಸ್ ಫೋಟೋ ಕೂಡ ತೆಗೆದುಕೊಳ್ಳಲಾಗುತ್ತಿದೆ. ಕಾರ್ಯಕ್ರಮದ ಉದ್ದೇಶ ಯಾವುದೇ ಹಂತದಲ್ಲೂ ವಿಫಲವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಅರಿವುಜಾತಿ ಮತ್ತು ಆದಾಯ ಪ್ರಮಾಣಪತ್ರ ವಿತರಿಸುವ ಸಂದರ್ಭದಲ್ಲೇ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ–2026 ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಅಗತ್ಯವಿದ್ದಲ್ಲಿ ಭಾರತ ಚುನಾವಣಾ ಆಯೋಗವು ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ನೋಟಿಸ್ ನೀಡಿ ಹೆಚ್ಚುವರಿ ದಾಖಲೆ ಅಥವಾ ಮಾಹಿತಿಯನ್ನು ಕೇಳಬಹುದು.
ಅಂತಹ ಸಂದರ್ಭದಲ್ಲಿ ಚುನಾವಣಾ ಆಯೋಗ ಸೂಚಿಸಿರುವ 11 ದಾಖಲೆಗಳ ಪೈಕಿ ಅನ್ವಯಿಸುವ ಯಾವುದೇ ಒಂದು ದಾಖಲೆಯನ್ನು, ಜಾತಿ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿ ತಮ್ಮ ಅರ್ಹತೆಯನ್ನು ದೃಢೀಕರಿಸಿಕೊಳ್ಳಬಹುದಾಗಿದೆ. ಬಾರ್‌ಕೋಡ್ ಹೊಂದಿರುವ ಈ ಡಿಜಿಟಲ್ ಪ್ರಮಾಣಪತ್ರಗಳನ್ನು ಅಧಿಕಾರಿಗಳು ಆನ್‌ಲೈನ್ ವ್ಯವಸ್ಥೆಯಲ್ಲಿ ಸಿಂಕ್ ಮಾಡುವುದರಿಂದ ಪ್ರಮಾಣಪತ್ರದ ವಿತರಣೆ ಹಾಗೂ ದಾಖಲೆಗಳ ದೃಢೀಕರಣಕ್ಕೆ ಹೆಚ್ಚಿನ ವಿಶ್ವಾಸಾರ್ಹತೆ ದೊರೆಯಲಿದೆ
ಒಟ್ಟಾರೆ, ಶಾಲಾ ಪ್ರವೇಶದಿಂದ ಉದ್ಯೋಗ, ಸರ್ಕಾರಿ ಸೌಲಭ್ಯಗಳು ಹಾಗೂ ವಿವಿಧ ಕಲ್ಯಾಣ ಯೋಜನೆಗಳವರೆಗೆ ಜೀವನದ ಹಲವು ಹಂತಗಳಲ್ಲಿ ಅಗತ್ಯವಾಗುವ ಪ್ರಮುಖ ದಾಖಲೆಗಳನ್ನು ಸರ್ಕಾರವೇ ಜನರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುತ್ತಿರುವುದು ಸಾರ್ವಜನಿಕರಿಗೆ ಅನುಕೂಲವಾಗಿದೆ.




