ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR-2026) ಕಾರ್ಯದಲ್ಲಿ ಕೊಡಗು ಜಿಲ್ಲೆ ಮಹತ್ವದ ಪ್ರಗತಿ ಸಾಧಿಸಿದ್ದು, ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 552 ಮತಗಟ್ಟೆಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಿಸುವ ಕಾರ್ಯದಲ್ಲಿ ಶೇ.98.86 (ಸುಮಾರು ಶೇ.99) ರಷ್ಟು ಸಾಧನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎಸ್ಐಆರ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ 4,68,657 ಮತದಾರರಿಗಾಗಿ ಅಷ್ಟೇ ಸಂಖ್ಯೆಯ ಗಣತಿ ನಮೂನೆಗಳನ್ನು ಮುದ್ರಿಸಲಾಗಿದ್ದು, ಇದರಲ್ಲಿ 4,63,301 ನಮೂನೆಗಳನ್ನು ಈಗಾಗಲೇ ಮತದಾರರಿಗೆ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಬೂತ್ ಮಟ್ಟದ ಅಧಿಕಾರಿಗಳು (BLO) ಸಂಗ್ರಹಿಸಿ ಬಿಎಲ್ಒ ಆ್ಯಪ್ ಮೂಲಕ ಡಿಜಿಟಲೀಕರಣ ಮಾಡುತ್ತಿರುವ ಕಾರ್ಯವೂ ಸಮಾನಾಂತರವಾಗಿ ಸಾಗುತ್ತಿದೆ. ಇದುವರೆಗೆ 1,21,226 ಗಣತಿ ನಮೂನೆಗಳನ್ನು ಸಂಗ್ರಹಿಸಿ ಡಿಜಿಟಲೀಕರಣ ಮಾಡಲಾಗಿದೆ. ಮನೆ ಮನೆಗೆ ಭೇಟಿ ನೀಡುವ ಅಭಿಯಾನ ಜುಲೈ 29ರವರೆಗೆ ಮುಂದುವರಿಯಲಿದ್ದು, ಅದೇ ಅವಧಿಯಲ್ಲಿ ಡಿಜಿಟಲೀಕರಣ ಕಾರ್ಯಕ್ಕೂ ವೇಗ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮತದಾರರು ಆನ್ಲೈನ್ ಮೂಲಕವೂ ಗಣತಿ ನಮೂನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಇದುವರೆಗೆ 952 ಮಂದಿ ಆನ್ಲೈನ್ ಮೂಲಕ ನಮೂನೆ ಸಲ್ಲಿಸಿದ್ದಾರೆ. ಇದೇ ವೇಳೆ ಪರಿಶೀಲನೆ ವೇಳೆ 70 ಮಂದಿ ಗೈರು, 2,228 ಕುಟುಂಬಗಳು ಸ್ಥಳಾಂತರಗೊಂಡಿರುವುದು, 1,629 ಮತದಾರರು ನಿಧನ ಹೊಂದಿರುವುದು, 274 ಡೂಪ್ಲಿಕೇಟ್ ಹಾಗೂ 14 ಇತರೆ ಪ್ರಕರಣಗಳು ಸೇರಿ ಒಟ್ಟು 4,215 ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಸಭೆಯಲ್ಲಿ ಅಧಿಕಾರಿಗಳಿಗೆ ಹಲವು ನಿರ್ದೇಶನ ನೀಡಿದ ಜಿಲ್ಲಾಧಿಕಾರಿ, ಬೂತ್ ಮಟ್ಟದ ಅಧಿಕಾರಿಗಳು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮನೆ ಮನೆಗೆ ಭೇಟಿ ನೀಡಬೇಕು ಎಂದು ಸೂಚಿಸಿದರು. ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ನೀಡಿರುವ ಸ್ಟಿಕ್ಕರ್ಗಳನ್ನು ಮನೆಗಳಿಗೆ ಅಂಟಿಸಿರುವುದನ್ನು ಪರಿಶೀಲಿಸಬೇಕು. ಬಾಗಿಲು ಮುಚ್ಚಿದ್ದ ಮನೆಗಳಿಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮತದಾರರಿಂದ ಪಡೆದ ಗಣತಿ ನಮೂನೆಗಳನ್ನು ಬಿಎಲ್ಒ ಆ್ಯಪ್ನಲ್ಲಿ ಕ್ರಮಬದ್ಧವಾಗಿ ಹಾಗೂ ನಿಗದಿತ ಅವಧಿಯೊಳಗೆ ಡಿಜಿಟಲೀಕರಣ ಮಾಡಬೇಕು. ಈ ಕಾರ್ಯವನ್ನು ನೋಡಲ್ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು. ಬಿಎಲ್ಒ ಕೇಂದ್ರಗಳು ಹಾಗೂ ಮತದಾರರ ಸಹಾಯ ಕೇಂದ್ರಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ಹೆಚ್ಚಿನ ಸಂಖ್ಯೆಯಲ್ಲಿ ನಮೂನೆಗಳನ್ನು ಸಂಗ್ರಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮತದಾರರ ಸ್ಥಳಾಂತರ, ಮರಣ, ಹೆಸರುಗಳ ಪುನರಾವರ್ತನೆ ಸೇರಿದಂತೆ ಇತರೆ ಪ್ರಕರಣಗಳ ಮಾಹಿತಿಯನ್ನು ಸಮರ್ಪಕವಾಗಿ ದಾಖಲಿಸಬೇಕು. ಬಿಎಲ್ಒಗಳು ಬಿಎಲ್ಎ ಸಭೆಗಳನ್ನು ನಡೆಸಿರುವುದನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಡಿಜಿಟಲೀಕರಣ ಸಂಬಂಧ ವಿಶೇಷ ಶಿಬಿರಗಳ ಪ್ರಗತಿಯನ್ನು ಪರಿಶೀಲಿಸಬೇಕು ಎಂದು ಹೇಳಿದರು.
ಯಾವುದೇ ದೂರುಗಳು ಬಂದಲ್ಲಿ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡಿರುವ ಬಗ್ಗೆ ದಾಖಲೆಗಳನ್ನು ನಿರ್ವಹಿಸಬೇಕು. ಸಂಗ್ರಹಿಸಿದ ಗಣತಿ ನಮೂನೆಗಳು ಹಾಗೂ ದಾಖಲೆಗಳನ್ನು ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳ ಕಚೇರಿಗೆ ಸಮಯಕ್ಕೆ ಸರಿಯಾಗಿ ಸಲ್ಲಿಸಬೇಕು. ಚುನಾವಣಾ ಆಯೋಗದ ಸೂಚನೆಗಳಂತೆ ಕ್ಷೇತ್ರ ಮಟ್ಟದಲ್ಲಿ ಎಲ್ಲಾ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆಯುವಂತೆ ನೋಡಲ್ ಅಧಿಕಾರಿಗಳು ಕಟ್ಟುನಿಟ್ಟಿನ ಮೇಲ್ವಿಚಾರಣೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ರಾಜಕೀಯ ಪಕ್ಷಗಳೊಂದಿಗೆ ಸಭೆಗಳನ್ನು ನಡೆಸಿ ಎಸ್ಐಆರ್ ಕುರಿತು ಮಾಹಿತಿ ಹಂಚಿಕೊಳ್ಳಬೇಕು. ವಿಶೇಷವಾಗಿ ಹಾಡಿ ಹಾಗೂ ದೂರದ ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ಗಣತಿ ನಮೂನೆ ಭರ್ತಿ ಹಾಗೂ ಡಿಜಿಟಲೀಕರಣ ಕಾರ್ಯವನ್ನು ವೇಗಗೊಳಿಸಬೇಕು ಎಂದು ಸಲಹೆ ನೀಡಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ದಲಿತ ರೈತನ ಭೂಮಿ ಕಬಳಿಕೆ ಆರೋಪ: ಕಂದಾಯ ದಾಖಲೆ ತಿದ್ದುಪಡಿ ಕುರಿತು ತನಿಖೆಗೆ ಆಗ್ರಹ
ವಿತರಿಸಲು ಬಾಕಿ ಇರುವ ಗಣತಿ ನಮೂನೆಗಳನ್ನು ಶೀಘ್ರದಲ್ಲಿ ವಿತರಿಸಿ, ಗುರುತಿಸುವ ಕಾರ್ಯ ಪೂರ್ಣಗೊಳಿಸುವುದರ ಜೊತೆಗೆ ಎಲ್ಲ ದಾಖಲೆಗಳನ್ನು ನಿಯಮಾನುಸಾರ ನಿರ್ವಹಿಸುವುದು ಅತ್ಯಗತ್ಯವಾಗಿದೆ. ಭಾರತ ಚುನಾವಣಾ ಆಯೋಗ ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಎಲ್ಲಾ ಚುನಾವಣಾ ಪೂರ್ವ ಕಾರ್ಯಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಕ್ಷೇತ್ರ ಮಟ್ಟದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಎಸ್ಐಆರ್ ಕಾರ್ಯವನ್ನು ಯಶಸ್ವಿಯಾಗಿ ಮುನ್ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?“ಮಳೆಯಿದೆ… ಆದರೆ ಅದು ಕೊಡಗಿನ ಮಳೆಯಲ್ಲ!”
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್. ಹಾದಿಮನಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಎಸ್ಐಆರ್ ನೋಡಲ್ ಅಧಿಕಾರಿಗಳು ಇದ್ದರು.




