ದಲಿತ ರೈತನ ಭೂಮಿ ಕಬಳಿಕೆ ಆರೋಪ: ಕಂದಾಯ ದಾಖಲೆ ತಿದ್ದುಪಡಿ ಕುರಿತು ತನಿಖೆಗೆ ಆಗ್ರಹ

Date:

ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯ ಕೊಳಗಟ್ಟ ಗ್ರಾಮದ ದಲಿತ ರೈತ ಸೋಮಯ್ಯ ಅವರ ಕುಟುಂಬ ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಸರ್ಕಾರಿ ಮಂಜೂರಾತಿ ಭೂಮಿಯ ದಾಖಲೆಗಳಲ್ಲಿ ಅಕ್ರಮವಾಗಿ ಹೆಸರು ಬದಲಾವಣೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ದಲಿತ ಸಂಘರ್ಷ ಸಮಿತಿ (ದ.ಸಂ.ಸ) ಆಗ್ರಹಿಸಿದೆ.

- Advertisement -

ಕೊಳಗಟ್ಟ ಗ್ರಾಮದ ಸರ್ವೇ ನಂ.69ರಲ್ಲಿರುವ 1 ಎಕರೆ 13 ಗುಂಟೆ ಜಮೀನನ್ನು ಸುಮಾರು 70 ವರ್ಷಗಳ ಹಿಂದೆ ಸೋಮಯ್ಯ ಅವರ ತಂದೆ ಕರಿಯಯ್ಯ ಅವರಿಗೆ ಸರ್ಕಾರ ಮಂಜೂರು ಮಾಡಿತ್ತು ಎನ್ನಲಾಗಿದೆ. ಕರಿಯಯ್ಯ ಕಾಡು ತೆರವುಗೊಳಿಸಿ ಭೂಮಿಯನ್ನು ಕೃಷಿಗೆ ಯೋಗ್ಯಗೊಳಿಸಿ ಜೀವನೋಪಾಯ ಮಾಡಿಕೊಂಡಿದ್ದು, ನಂತರ ಸೋಮಯ್ಯ ಅವರ ಕುಟುಂಬವೂ ಇದೇ ಭೂಮಿಯನ್ನು ನಿರಂತರವಾಗಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದೆ. ಜಮೀನಿನಲ್ಲಿ ತೆಂಗಿನ ತೋಟ ಬೆಳೆಸಲಾಗಿದ್ದು, ಇಂದಿಗೂ ಅದರ ಆದಾಯವೇ ಕುಟುಂಬದ ಪ್ರಮುಖ ಆಧಾರವಾಗಿದೆ ಎಂದು ತಿಳಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಸಾಗುವಳಿ ಪತ್ರ, ಮೂಲ ಮಂಜೂರಾತಿ ದಾಖಲೆ, ಆರ್.ಆರ್. ಸಂಖ್ಯೆ 5 ಮತ್ತು 6, ಹಳೆಯ ಫಹಣಿಗಳು ಸೇರಿದಂತೆ ಹಲವು ಕಂದಾಯ ದಾಖಲೆಗಳಲ್ಲಿ ಕರಿಯಯ್ಯ ಅವರ ಹೆಸರೇ ದಾಖಲಾಗಿರುವ ದಾಖಲೆಗಳು ತಮ್ಮ ಬಳಿ ಇವೆ ಎಂದು ಕುಟುಂಬ ಹೇಳಿಕೊಂಡಿದೆ. 1985ರವರೆಗೆ ಫಹಣಿಯಲ್ಲೂ ಕರಿಯಯ್ಯ ಅವರ ಹೆಸರೇ ಮುಂದುವರಿದಿದ್ದು, ನಂತರ ಏಕಾಏಕಿ ಬೆಂಗಳೂರು ನಿವಾಸಿ ಬಿ.ಎಸ್. ರಮೇಶ್ ಬಿನ್ ಸಿದ್ದರಾಜು ಅವರ ಹೆಸರು ಸೇರ್ಪಡೆಯಾಗಿದೆ ಎಂದು ಆರೋಪಿಸಲಾಗಿದೆ.

ಇತ್ತೀಚೆಗೆ ಈ ವಿಷಯ ಬೆಳಕಿಗೆ ಬಂದ ಬಳಿಕ ರಮೇಶ್ ಅವರ ಪತ್ನಿ ಹಾಗೂ ಮಕ್ಕಳ ಹೆಸರನ್ನೂ ದಾಖಲೆಗಳಲ್ಲಿ ಸೇರಿಸಲಾಗಿದೆ ಎಂದು ಆರೋಪಿಸಿರುವ ದ.ಸಂ.ಸ, ಕಂದಾಯ ಅಧಿಕಾರಿಗಳ ಸಹಕಾರದಿಂದ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ (Fabricated Documents) ಹೆಸರು ಬದಲಾವಣೆ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದೆ.

ಸೋಮಯ್ಯ ಅವರು ಹಲವು ಬಾರಿ ಕಂದಾಯ ಇಲಾಖೆಗೆ ಮನವಿ ಸಲ್ಲಿಸಿ ದಾಖಲೆ ತಿದ್ದುಪಡಿಗೆ ಪ್ರಯತ್ನಿಸಿದರೂ ಇದುವರೆಗೆ ನ್ಯಾಯ ದೊರೆತಿಲ್ಲ ಎಂದು ದೂರಲಾಗಿದೆ. ಇದರಿಂದ ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿ ಕುಟುಂಬ ಜೀವನ ನಡೆಸುತ್ತಿದೆ ಎಂದು ತಿಳಿಸಲಾಗಿದೆ.

ಕಂದಾಯ ಮತ್ತು ಕಾನೂನು ಅಂಶಗಳು

ಭೂಮಿಯ ಫಹಣಿ (RTC) ದಾಖಲೆ ಮಾತ್ರ ಮಾಲೀಕತ್ವವನ್ನು ಅಂತಿಮವಾಗಿ ಸಾಬೀತುಪಡಿಸುವ ದಾಖಲೆ ಅಲ್ಲ. ಮೂಲ ಮಂಜೂರಾತಿ ಆದೇಶ, ಸಾಗುವಳಿ ಪತ್ರ, ಆರ್.ಆರ್. ದಾಖಲೆಗಳು ಹಾಗೂ ನಿರಂತರ ಸ್ವಾಧೀನ ಮತ್ತು ಕೃಷಿ ನಡೆಸಿರುವ ದಾಖಲೆಗಳು ಕೂಡ ಪ್ರಮುಖ ಸಾಕ್ಷ್ಯಗಳಾಗುತ್ತವೆ. ಕಂದಾಯ ದಾಖಲೆಗಳಲ್ಲಿ ಅಕ್ರಮವಾಗಿ ಹೆಸರು ಬದಲಾವಣೆ ನಡೆದಿದ್ದರೆ ಸಂಬಂಧಪಟ್ಟ ಉಪವಿಭಾಗಾಧಿಕಾರಿ (Assistant Commissioner), ಜಿಲ್ಲಾಧಿಕಾರಿ ಅಥವಾ ಸಂಬಂಧಿತ ಕಂದಾಯ ಅಧಿಕಾರಿಗಳ ಮುಂದೆ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ದಾಖಲೆಗಳು ನಕಲಿ ಅಥವಾ ಕೃತಕವಾಗಿ ಸೃಷ್ಟಿಸಲಾಗಿದೆ ಎಂಬುದು ಸಾಬೀತಾದರೆ, ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣಗಳಿಗೂ ದೂರು ದಾಖಲಿಸಬಹುದಾಗಿದೆ.

ದಲಿತ ಸಮುದಾಯದವರಿಗೆ ಸರ್ಕಾರ ಮಂಜೂರು ಮಾಡಿದ ಭೂಮಿಯನ್ನು ಅಕ್ರಮವಾಗಿ ಕಬಳಿಸುವುದು ಅಥವಾ ಹಕ್ಕು ಕಸಿಯಲು ಯತ್ನಿಸುವುದು ಸಾಬೀತಾದರೆ, ಪ್ರಕರಣದ ಸಂದರ್ಭಕ್ಕೆ ಅನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ವಿಧಿಗಳ ಅಡಿಯಲ್ಲಿಯೂ ತನಿಖೆ ನಡೆಸುವ ಸಾಧ್ಯತೆ ಇರುತ್ತದೆ.

ಈ ಹಿನ್ನೆಲೆಯಲ್ಲಿ ಪ್ರಕರಣದ ಎಲ್ಲ ಮೂಲ ದಾಖಲೆಗಳನ್ನು ಪರಿಶೀಲಿಸಿ, ಅಕ್ರಮ ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು, ನೈಜ ಫಲಾನುಭವಿಗೆ ನ್ಯಾಯ ಒದಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಈದಿನ.ಕಾಮ್ ಜೊತೆ ಮಾತನಾಡಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ದ.ಸಂ.ಸ) ಮೈಸೂರು ಜಿಲ್ಲಾ ಸಂಘಟನಾ ಸಂಚಾಲಕ ಕೊಳಗಟ್ಟ ಕೃಷ್ಣ, ಸುಮಾರು 70 ವರ್ಷಗಳಿಂದ ದಲಿತ ಕರಿಯಯ್ಯ ಅವರ ಕುಟುಂಬ ಸದರಿ ಜಮೀನಿನ ಸ್ವಾಧೀನ ಹಾಗೂ ಅನುಭವದಲ್ಲಿದ್ದು, ನಿರಂತರವಾಗಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದೆ. ಆದರೆ ಕಂದಾಯ ದಾಖಲೆಗಳಲ್ಲಿ ಅಕ್ರಮವಾಗಿ ಮೇಲ್ವರ್ಗದ ಬಿ.ಎಸ್. ರಮೇಶ್ ಬಿನ್ ಸಿದ್ದರಾಜು ಅವರ ಹೆಸರನ್ನು ದಾಖಲಿಸಿ, ಬಳಿಕ ಅವರ ಪತ್ನಿ ರೇಖಾ ಎಸ್. ಹಾಗೂ ಮಕ್ಕಳಾದ ರಿಷಿಕಾ ಆರ್. ಮತ್ತು ಆಶಿಕಾ ಆರ್. ಅವರ ಹೆಸರನ್ನೂ ಸೇರಿಸಿರುವುದು ಗಂಭೀರ ವಿಷಯವಾಗಿದೆ ಎಂದು ಆರೋಪಿಸಿದರು.

ಈ ದಾಖಲೆ ಬದಲಾವಣೆಗೆ ಬಿಳಿಕೆರೆ ನಾಡ ಕಚೇರಿಯ ಕೆಲವು ಅಧಿಕಾರಿಗಳು ಶಾಮೀಲಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವ ಅನುಮಾನವಿದ್ದು, ಸರ್ಕಾರ ಈ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆಗೆ ಒಳಪಡಿಸಿ, ಮೂಲ ಮಂಜೂರಾತಿ ದಾಖಲೆಗಳು ಮತ್ತು ಕಂದಾಯ ದಾಖಲೆಗಳನ್ನು ಪರಿಶೀಲಿಸಿ ಕರಿಯಯ್ಯ ಅವರ ಕಾನೂನುಬದ್ಧ ವಾರಸುದಾರರಿಗೆ ಭೂಮಿ ಹಕ್ಕನ್ನು ಮರುದಾಖಲಿಸಬೇಕು ಎಂದು ಆಗ್ರಹಿಸಿದರು.

ಇದಲ್ಲದೆ, ಬಡ ದಲಿತ ರೈತ ಸೋಮಯ್ಯ ಅವರಿಗೆ ಸೇರಿದ ಭೂಮಿಯನ್ನು ವಂಚನೆಯ ಮೂಲಕ ಕಬಳಿಸಲು ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ಬಿ.ಎಸ್. ರಮೇಶ್ ಹಾಗೂ ಅಕ್ರಮ ದಾಖಲೆ ಸೃಷ್ಟಿಸಲು ಸಹಕರಿಸಿದರೆಂದು ಆರೋಪಿಸಲಾಗಿರುವ ಬಿಳಿಕೆರೆ ನಾಡ ಕಚೇರಿಯ ಸಂಬಂಧಪಟ್ಟ ಕಂದಾಯ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ, ಆರೋಪಗಳು ಸಾಬೀತಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದಲಿತ ಸಮುದಾಯದವರ ಭೂ ಹಕ್ಕುಗಳಿಗೆ ಧಕ್ಕೆಯಾಗುವ ಯಾವುದೇ ಅಕ್ರಮವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪ್ರಕರಣದ ವಾಸ್ತವಾಂಶಗಳ ಆಧಾರದ ಮೇಲೆ ಅಗತ್ಯವಿದ್ದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಸೇರಿದಂತೆ ಅನ್ವಯವಾಗುವ ಕಾನೂನುಗಳಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.

ದಲಿತ ರೈತ ಸೋಮಯ್ಯ ಮಾತನಾಡಿ, ಕೊಳಗಟ್ಟ ಗ್ರಾಮದ ಸರ್ವೇ ನಂ. 69/1ರಲ್ಲಿ 1 ಎಕರೆ 35 ಗುಂಟೆ ಜಮೀನು ತಮ್ಮ ಪಿತ್ರಾರ್ಜಿತ ಆಸ್ತಿಯಾಗಿದ್ದು, ಹಲವು ದಶಕಗಳಿಂದ ಅನುಭವದಲ್ಲಿರುವ ಪಿತ್ರಾರ್ಜಿತ ಜಮೀನಿನ ಪಹಣಿಯಲ್ಲಿ ಅಪರಿಚಿತ ವ್ಯಕ್ತಿಯ ಹೆಸರನ್ನು ನಮೂದಿಸಿ ಭೂಮಿ ಕಬಳಿಸಲು ಯತ್ನಿಸಲಾಗಿದೆ, ದಾಖಲೆಗಳ ಸಮಗ್ರ ಪರಿಶೀಲನೆ ನಡೆಸಿ ನ್ಯಾಯ ಒದಗಿಸುವಂತೆ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆಯನ್ನು ಒತ್ತಾಯಿಸಿದರು.

“ಈ ಜಮೀನಿನಲ್ಲಿ ಈಗಲೂ ತೆಂಗಿನ ತೋಟ ಬೆಳೆಸಿದ್ದು, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಇಷ್ಟು ವರ್ಷ ಯಾರೂ ಜಮೀನಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಆದರೆ, ನಾಲ್ಕು ತಿಂಗಳ ಹಿಂದೆ ಕೆಲವರು ಜಮೀನಿನ ಬಳಿ ಬಂದು, ಪಹಣಿಯಲ್ಲಿ ನಮ್ಮ ಹೆಸರು ಇದೆ ಎಂದು ಹೇಳಿ ತೊಂದರೆ ನೀಡಲು ಆರಂಭಿಸಿದರು. ಬಳಿಕ ಪರಿಶೀಲಿಸಿದಾಗ, ಈ ಊರಿಗೆ ಅಥವಾ ಈ ಭೂಮಿಗೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಯೊಬ್ಬರು ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರದಿಂದ ಪಹಣಿಯಲ್ಲಿ ತಮ್ಮ ಹೆಸರನ್ನು ಸೇರಿಸಿಕೊಂಡು, ಅದನ್ನಾಧರಿಸಿ ಬ್ಯಾಂಕ್‌ನಿಂದ ಸಾಲ ಕೂಡ ಪಡೆದಿರುವುದು ತಿಳಿಯಿತು” ಎಂದು ಆರೋಪಿಸಿದರು.

“ನಮ್ಮ ಕುಟುಂಬದ ಭೂಮಿಯನ್ನು ಕಬಳಿಸುವ ಉದ್ದೇಶದಿಂದ ಮೇಲ್ವರ್ಗದ ವ್ಯಕ್ತಿಯೊಬ್ಬರು ತಮ್ಮ ಹೆಸರಿಗೆ ದಾಖಲೆ ಮಾಡಿಸಿಕೊಂಡಿದ್ದರು. ಈಗ ಅವರು ಮತ್ತು ಅವರ ಪುತ್ರ ಇಬ್ಬರೂ ಇಲ್ಲ. ನಂತರ ಅವರ ಪತ್ನಿ ಹಾಗೂ ಮಕ್ಕಳ ಹೆಸರಿಗೆ ದಾಖಲೆ ವರ್ಗಾವಣೆ ಮಾಡಿ ಅನ್ಯಾಯ ಮುಂದುವರಿಸಿದ್ದಾರೆ. ಅವರು ಯಾರು ಎಂಬುದೇ ನಮಗೆ ಗೊತ್ತಿಲ್ಲ. ಅವರು ನಮ್ಮ ಊರಿನವರೂ ಅಲ್ಲ. ಎಲ್ಲಾ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ನಿಜವಾದ ಮಾಲೀಕರು ಯಾರು ಎಂಬುದನ್ನು ಕಾನೂನುಬದ್ಧವಾಗಿ ನಿರ್ಧರಿಸಿ ನಮಗೆ ನ್ಯಾಯ ಒದಗಿಸಬೇಕು” ಎಂದು ಮನವಿ ಮಾಡಿದರು.

ಸೋಮಯ್ಯ ಅವರ ಪುತ್ರ ರವಿಕುಮಾರ್ ಮಾತನಾಡಿ, “ನಮ್ಮ ತಂದೆಯವರು ಹಲವು ವರ್ಷಗಳಿಂದ ಇದೇ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಕುಟುಂಬವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಭೂಮಿಯೇ ನಮ್ಮ ಜೀವನಾಧಾರ. ಕೊಳಗಟ್ಟ ಗ್ರಾಮದಲ್ಲಿ ದಲಿತರ ಭೂಮಿಯ ಮಧ್ಯೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಯ ಹೆಸರನ್ನು ಪಹಣಿಯಲ್ಲಿ ಸೇರಿಸಿ ಅನ್ಯಾಯ ಮಾಡಲಾಗಿದೆ. ದಲಿತರ ಭೂಮಿ ಕಬಳಿಸಲು ಕೆಲ ಅಧಿಕಾರಿಗಳು ಸಹಕರಿಸಿದ್ದಾರೆ ಎಂಬ ಅನುಮಾನವಿದೆ. ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ (ದಸಂಸ) ತಾಲ್ಲೂಕು ಸಂಚಾಲಕ ಡೇವಿಡ್ ರತ್ನಾಪುರಿ ಮಾತನಾಡಿ, “ಸೋಮಯ್ಯ ಅವರು ಹಲವು ವರ್ಷಗಳಿಂದ ಇದೇ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿರುವುದನ್ನು ನಾನು ಸ್ವತಃ ನೋಡಿದ್ದೇನೆ. ಈಗ ಅಪರಿಚಿತ ವ್ಯಕ್ತಿಗಳು ಬಂದು ಅವರಿಗೆ ಅನಗತ್ಯ ತೊಂದರೆ ನೀಡುತ್ತಿರುವುದು ಸರಿಯಲ್ಲ. ಈ ಪ್ರಕರಣದಲ್ಲಿ ಯಾರ ಹಕ್ಕು ಸರಿ, ಯಾರದ್ದು ತಪ್ಪು ಎಂಬುದು ದಾಖಲೆ ಹಾಗೂ ಕಾನೂನಿನ ಆಧಾರದ ಮೇಲೆ ನಿರ್ಧಾರವಾಗಬೇಕು. ಬಡ ದಲಿತ ಕುಟುಂಬದ ಜೀವನಕ್ಕೆ ಧಕ್ಕೆಯಾಗದಂತೆ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಿ, ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ನೆಟ್‌ವರ್ಕ್ ಸಮಸ್ಯೆ ಬಗೆಹರಿಸಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಿ: ಕೋಟ ಶ್ರೀನಿವಾಸ ಪೂಜಾರಿ

ಬಿ.ಎಸ್.ಎನ್.ಎಲ್. ಸಂಸ್ಥೆಯು ನೆಟ್‌ವರ್ಕ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಖಾಸಗಿ ಟೆಲಿಕಾಂ ಕಂಪನಿಗಳಿಗೆ...

ಕಾರವಾರ | ಅಕ್ಟೋಬರ್ 16ರಂದು ಹಾರವಾಡದಿಂದ ಮಾಜಾಳಿವರೆಗೆ ಮೀನುಗಾರಿಕೆಗೆ ನಿರ್ಬಂಧ

ಕಾರವಾರ: ಗೌರವಾನ್ವಿತ ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರು ಅಕ್ಟೋಬರ್ 16ರಂದು ಉತ್ತರ ಕನ್ನಡ...

ಕೋಲಾರ | 108 ಆಂಬ್ಯುಲೆನ್ಸ್ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಿ: ಕೆ.ನಾರಾಯಣಗೌಡ

ಅಪತ್ಬಾಂಧವರೆಂದೇ ಕರೆಯಲಾಗುವ 108 ಆಂಬ್ಯುಲೆನ್ಸ್ ನೌಕರರ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ...