ಬಿಸಿಯೂಟ ನೌಕರರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ, ಅಗತ್ಯ ಸೌಲಭ್ಯಗಳನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಂಸದ ಎಂ.ಮಲ್ಲೇಶ್ ಬಾಬು ಹಾಗೂ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಭರವಸೆ ನೀಡಿದರು.
ರಾಮಸಂದ್ರ ಗಡಿಯಲ್ಲಿ ಕನಿಷ್ಠ ವೇತನ ನಿಗದಿ, ಕ್ಲಸ್ಟರ್ ಕಿಚನ್ ರದ್ದತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ನೌಕರರ ಹೋರಾಟಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ಕ್ಲಸ್ಟರ್ ಕಿಚನ್ ಯೋಜನೆಯಿಂದ ಬಿಸಿಯೂಟ ನೌಕರರ ಉದ್ಯೋಗಕ್ಕೆ ಧಕ್ಕೆಯಾಗುವ ಆತಂಕವಿದ್ದು, ಸರ್ಕಾರ ಈ ಯೋಜನೆಯನ್ನು ಕೈಬಿಡಬೇಕು. ಹಲವು ವರ್ಷಗಳಿಂದ ಅಲ್ಪ ಗೌರವಧನಕ್ಕೆ ದುಡಿಯುತ್ತಿರುವ ಅಡುಗೆ ಮಾತೆಯರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕೇಂದ್ರ ಸರ್ಕಾರದಿಂದ ಗೌರವಧನ ಹೆಚ್ಚಳಕ್ಕೆ ಸಂಬಂಧಿಸಿದ ವಿಚಾರವನ್ನು ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕೇಂದ್ರದ ನೆರವು ಹೆಚ್ಚಳಕ್ಕೆ ರಾಜ್ಯ ಸರ್ಕಾರವೂ ಪ್ರಸ್ತಾವನೆ ಸಲ್ಲಿಸಿ ಒತ್ತಡ ತರಬೇಕಿದ್ದು, ಈ ಕುರಿತು ಮಾಹಿತಿ ಪಡೆದು ನಾಲ್ಕೈದು ದಿನಗಳಲ್ಲಿ ನೌಕರರ ಮುಖಂಡರಿಗೆ ತಿಳಿಸುವುದಾಗಿ ಭರವಸೆ ನೀಡಿದರು.
ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಅಡುಗೆ ಮಾತೆಯರ ಶ್ರಮವನ್ನು ಸರ್ಕಾರ ಗುರುತಿಸಬೇಕು. ಮಹಿಳೆಯರು ಹಗಲು-ರಾತ್ರಿ ಧರಣಿ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ. ಅವರ ಬೇಡಿಕೆ ಈಡೇರುವವರೆಗೂ ಜೆಡಿಎಸ್ ಹಾಗೂ ಮೈತ್ರಿ ಪಕ್ಷಗಳ ಮುಖಂಡರು ಹೋರಾಟಕ್ಕೆ ಬೆಂಬಲ ನೀಡಲಿದ್ದು, ಸರ್ಕಾರದ ಮೇಲೆ ಒತ್ತಡ ತಂದು ಸೌಲಭ್ಯ ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.
ಸಮಿತಿಯ ರಾಜ್ಯ ಸಂಸ್ಥಾಪಕ ಅಧ್ಯಕ್ಷೆ ಕಲ್ಪಮಂಜಲಿ ಸಿ.ಶಿವಣ್ಣ ಮಾತನಾಡಿ, ಮಾಸಿಕ ₹10,500 ಕನಿಷ್ಠ ವೇತನ, ಗ್ರೂಪ್-ಡಿ ಮಾನ್ಯತೆ, ಕ್ಲಸ್ಟರ್ ಕಿಚನ್ ರದ್ದತಿ, ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭ ಸೇರಿದಂತೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಅಂಬೇಡ್ಕರ್ ಪುತ್ಥಳಿ ನಿರ್ಮಾಣದಲ್ಲಿ ಪ್ರತಿಷ್ಠೆಗಿಂತ ಗೌರವ, ರಕ್ಷಣೆಗೆ ಆದ್ಯತೆ: ಕೊತ್ತೂರು ಮಂಜುನಾಥ್
ಪ್ರತಿಭಟನೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್ ವೆಂಕಟೇಶ್, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಸಂಘಟನೆಯ ಮುಖಂಡರಾದ ಜಿ.ಕೆ.ಹಳ್ಳಿ ಸಿ.ನಾರಾಯಣಸ್ವಾಮಿ, ಜಿ.ನಾರಾಯಣಸ್ವಾಮಿ, ರಾಮು ಶಿವಣ್ಣ, ಕೊತ್ತಮೀರಿ ಮಂಜುನಾಥ್ ಸೇರಿದಂತೆ ನೂರಾರು ಅಡುಗೆ ಮಾತೆಯರು, ರೈತ ಸಂಘದ ಮುಖಂಡರು ಇದ್ದರು.



