ಲೋಕಸಭಾ ಚುನಾವಣೆ | ತನ್ವೀರ್‌ಗೆ ಹಳೇ ಮೈಸೂರು ಭಾಗದ ‘ಜವಾಬ್ದಾರಿ’

Date:

ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ ಅವರಿಗೆ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ ಸಂಘಟನೆಯ ಪ್ರಮುಖ ಜವಾಬ್ದಾರಿ ವಹಿಸಲಾಗಿದೆ. ಆ ಮೂಲಕ‍ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತನ್ವೀರ್ ‘ಕೊಡುಗೆ’ಯನ್ನು ಹೈಕಮಾಂಡ್‌ ಬಯಸಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ತನ್ವೀರ್ ಸೇಠ್ ಅವರನ್ನು ನೇಮಿಸಿದ್ದು, ಪಕ್ಷದ ಸಂಘಟನೆ ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಮೈಸೂರು ವಿಭಾಗದ ಜವಾಬ್ದಾರಿಯನ್ನೂ ಅವರಿಗೆ ನೀಡಲಾಗಿದೆ.

ಮೈಸೂರು ನಗರ, ಮೈಸೂರು ಗ್ರಾಮೀಣ, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ‘ಸಂಘಟನಾತ್ಮಕ ಜಿಲ್ಲೆ’ಗಳ ಉಸ್ತುವಾರಿ ವಹಿಸಲಾಗಿದೆ. ಜತೆಗೆ, ಅಲ್ಪಸಂಖ್ಯಾತರ ವಿಭಾಗ ಮತ್ತು ಸೇವಾದಳದ ಉಸ್ತುವಾರಿಯನ್ನೂ ನೀಡಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ವಹಿಸಿದ್ದಾರೆ. ಅವರು ಶಾಸಕರಾದ ಬಳಿಕ ಪಕ್ಷದ ಮಟ್ಟದಲ್ಲಿ ದೊಡ್ಡದಾದ ಜವಾಬ್ದಾರಿಯನ್ನು ನೀಡಿರುವುದು ಇದೇ ಮೊದಲು. ಕಾರ್ಯತಂತ್ರ ರೂಪಿಸುವ ಭಾಗವನ್ನಾಗಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದರೊಂದಿಗೆ, ಮೈಸೂರು–ಕೊಡಗು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ತಮ್ಮ ‘ಸಾಂಪ್ರದಾಯಿಕ ಮತದಾರರಾದ’ ಅಲ್ಪಸಂಖ್ಯಾತರನ್ನು ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಮನವೊಲಿಸಿಕೊಳ್ಳುವ ಕಾರ್ಯತಂತ್ರ ಪಕ್ಷದ ವರಿಷ್ಠರದ್ದಾಗಿದೆ ಎಂದು ವಿಶ್ಲೇಷಿಸಲಾಗಿದೆ.

“ತನ್ವೀರ್‌ ಅವರು ಹಿಂದೆ ಎನ್‌ಎಸ್‌ಯುಐನಲ್ಲಿ ಕೆಲಸ ಮಾಡಿದ್ದರು. ಕಾಂಗ್ರೆಸ್‌ ಜಿಲ್ಲಾ ಸಮಿತಿಯಲ್ಲಿ ಸದಸ್ಯರಾಗಿದ್ದರು. 6ನೇ ಬಾರಿಗೆ ಶಾಸಕರಾಗಿರುವ ಅವರು ಈವರೆಗೆ ಪಕ್ಷದ ಪ್ರಮುಖ ಪದಾಧಿಕಾರಿಯಾಗಿ ಕೆಲಸ ಮಾಡಿರಲಿಲ್ಲ. ಈಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನವನ್ನು ಅವರು ಕೊಡಲಾಗಿದ್ದು, ಮಹತ್ವದ ಜವಾಬ್ದಾರಿಯನ್ನು ವಹಿಸಲಾಗಿದೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ಹೊಂದಲಾಗಿದೆ” ಎಂದು ಪಕ್ಷದ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಮುಸ್ಲಿಮರು ಹೆಚ್ಚಿನ ಬಾಹುಳ್ಯ ಹೊಂದಿರುವ ನರಸಿಂಹರಾಜ ಕ್ಷೇತ್ರದಲ್ಲಿ 2002ರಲ್ಲಿ ತಂದೆ ಅಜೀಜ್‌ ಸೇಠ್ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ತನ್ವೀರ್ ಸೇಠ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. 2004, 2008, 2013, 2018 ಹಾಗೂ 2023ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಲ್ಲಿ ಗೆಲುವು ಸಾಧಿಸಿದ್ದಾರೆ. ಸಚಿವರಾಗಿ ಕೆಲಸ ಮಾಡಿದ ಅನುಭವವೂ ಇದ್ದು, ಅದನ್ನು ಪಕ್ಷದ ಸಂಘಟನೆಗೆ ಬಳಸಬೇಕಾದ ಸಂದರ್ಭವನ್ನು ಪಕ್ಷ ಅವರಿಗೆ ಸೃಷ್ಟಿಸಿದೆ. ಹಳೆಯ ಮೈಸೂರು ಭಾಗದ ಪ್ರಮುಖ ಜಿಲ್ಲೆಗಳಲ್ಲಿ ಜವಾಬ್ದಾರಿ ಸ್ಥಾನದಲ್ಲಿ ನಿಂತು ಮುನ್ನಡೆಸುವ ಅವಕಾಶ ಅವರಿಗೆ ಒದಗಿಬಂದಿದೆ.

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತದಾರರಲ್ಲಿ ಪರಿಶಿಷ್ಟರು ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಒಕ್ಕಲಿಗ ಸಮುದಾಯವಿದೆ. ಮುಸ್ಲಿಮರು 3ನೇ ಕ್ರಮಾಂಕದಲ್ಲಿದ್ದಾರೆ ಎಂಬುದು ರಾಜಕೀಯ ಪಕ್ಷಗಳ ಲೆಕ್ಕಾಚಾರವಾಗಿದೆ. ಹೀಗಾಗಿ, ರಾಜಕೀಯ ಪಕ್ಷಗಳವರು ಅಹಿಂದ ಮತಗಳ ಮೇಲೆ ಕಣ್ಣಿಟ್ಟು ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ ಎನ್ನಲಾಗಿದೆ.

6ನೇ ಬಾರಿಗೆ ಶಾಸಕರಾಗಿರುವ ತನ್ವೀರ್‌ ಸೇಠ್ ಮುಸ್ಲಿಂ ಸಮಾಜದ ಪ್ರಭಾವಿ ನಾಯಕರಾಗಿದ್ದು, ಅವರ ಅನುಭವ ಬಳಕೆಗೆ ಹೈಕಮಾಂಡ್‌ ಯೋಜಿಸಿದೆ.

ಎರಡು ಪಕ್ಷದಲ್ಲೂ ಮೈಸೂರಿನವರಿಗೇ ‘ಜವಾಬ್ದಾರಿ’!

ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಅಲ್ಪಸಂಖ್ಯಾತರ ಸಂಘಟನೆಯ ಜವಾಬ್ದಾರಿ ಮೈಸೂರಿನವರಿಗೇ ಸಿಕ್ಕಿರುವುದು ವಿಶೇಷ. ಅದರಲ್ಲೂ ಅವರಿಬ್ಬರೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯವರೇ. ಕಾಂಗ್ರೆಸ್‌ನಲ್ಲಿ ತನ್ವೀರ್ ಸೇಠ್ ಅವರಿಗೆ ದೊರೆತಿದ್ದರೆ, ಬಿಜೆಪಿಯಲ್ಲಿ ನರಸಿಂಹರಾಜ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಡಾ ಅನಿಲ್ ಥಾಮಸ್ ಅವರಿಗೆ ಸ್ಥಾನ ಸಿಕ್ಕಿದೆ. ಅವರನ್ನು ಬಿಜೆಪಿ ರಾಜ್ಯ ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ತನ್ವೀರ್‌ ಮುಸ್ಲಿಂ ಹಾಗೂ ಅನಿಲ್‌ ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿದ್ದಾರೆ.

ನಿವೃತ್ತಿ ಬಯಸಿದ್ದವರಿಗೆ ಮತ್ತೊಂದು ಅವಕಾಶ! : ಹೋದ ವರ್ಷ ವಿಧಾನಸಭೆ ಚುನಾವಣೆಗೂ ಮುನ್ನ ತನ್ವೀರ್‌ ಸೇಠ್‌ ರಾಜಕೀಯ ನಿವೃತ್ತಿ ಬಯಸಿದ್ದರು. 2023ರ ಫೆಬ್ರವರಿ 28ರಂದು “ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಿದ್ದು, ಈ ಬಗ್ಗೆ ಪಕ್ಷದ ವರಿಷ್ಠರಿಗೆ ಪತ್ರ ಬರೆದಿದ್ದೇನೆ. 2019ರ ನವೆಂಬರ್‌ನಲ್ಲಿ ನನ್ನ ಮೇಲಾದ ಗಂಭೀರ ಹಲ್ಲೆಯು ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ಇನ್ನೂ ಚೇತರಿಸಿಕೊಂಡಿಲ್ಲ. ಅನಾರೋಗ್ಯದ ಕಾರಣ ಸ್ಪರ್ಧಿಸುವುದಿಲ್ಲ” ಎಂದು ತನ್ವೀರ್‌ ಸೇಠ್ ಹೇಳಿಕೆ ನೀಡಿದ್ದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಬಿಜೆಪಿ ಅಭ್ಯರ್ಥಿ ಯದುವೀರ್ ರೇಡಿಯೋ ಕಾರ್ಯಕ್ರಮ; ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ತನ್ವೀರ್‌ ಹೇಳಿಕೆಯಿಂದ ಬೆಂಬಲಿಗರು ತೀವ್ರ ಬೇಸರಪಟ್ಟುಕೊಂಡಿದ್ದರು. ಬಳಿಕ ಅವರ ಮನವೊಲಿಸಿದ ಹೈಕಮಾಂಡ್‌ ಚುನಾವಣೆಯಲ್ಲಿ ಕಣಕ್ಕಿಳಿಸಲು ಯಶಸ್ವಿಯಾಗಿತ್ತು. ಅವರು ಬಿಜೆಪಿ ಹಾಗೂ ಎಸ್‌ಡಿಪಿಐ ಪೈಪೋಟಿಯನ್ನು ಎದುರಿಸಿ ಸತತ 6ನೇ ಬಾರಿಗೆ (ಒಂದು ಉಪ ಚುನಾವಣೆ ಸೇರಿ) ಗೆದ್ದಿದ್ದರು. ಕಾಂಗ್ರೆಸ್‌ ಸರ್ಕಾರ ರಚನೆಯಾದ ಬಳಿಕ ಅವರಿಗೆ ಸಚಿವ ಸ್ಥಾನ ತಪ್ಪಿತ್ತು. ಈಗ ಪಕ್ಷದ ಕಾರ್ಯಾಧ್ಯಕ್ಷ ಹುದ್ದೆ ದೊರೆತಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಸ್ಟ್ರಾಂಗ್ ರೂಮ್ ಪರಿಶೀಲಿಸಿದ ಜಿಲ್ಲಾಧಿಕಾರಿ

ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಕ್ಷೇತ್ರ ವ್ಯಾಪ್ತಿಗೆ ಒಳಪಡುವ...

ಚಿಕ್ಕಬಳ್ಳಾಪುರ | ಅನುಚಿತ ಪ್ರಭಾವ, ಲಂಚ, ಭ್ರಷ್ಟಾಚಾರ ಪ್ರಕರಣದಡಿ ಕೆ.ಸುಧಾಕರ್ ವಿರುದ್ಧ ಎಫ್‌ಐಆರ್

ಚುನಾವಣೆಯಲ್ಲಿ ಮತದಾರರಿಗೆ ಲಂಚ ನೀಡಲು ಮನೆಯೊಂದರಲ್ಲಿ ಅಕ್ರಮವಾಗಿ ಹಣ ದಾಸ್ತಾನು ಮಾಡಿದ್ದ...

ದ್ವಿತೀಯ ಪಿಯುಸಿ ಪರೀಕ್ಷೆ-2 ಏಪ್ರಿಲ್ 29 ರಿಂದ ಆರಂಭ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಳೆದ ತಿಂಗಳಷ್ಟೇ ಪಿಯುಸಿ...