ಟಿಪ್ಪು ಸುಲ್ತಾನ ಹುತಾತ್ಮರಾದ ದಿನ ಶೋಕಾಚರಣೆಯ ದಿನವಲ್ಲ ಅದು ಭಾರತೀಯರ ಶೌರ್ಯಾಚರಣೆಯ ದಿನ. 4 ಮೇ 1799 ಚರಿತ್ರೆಯ ಪುಟಗಳಲ್ಲಿ ರಕ್ತಾಕ್ಷರಗಳಿಂದ ಬರೆದ ದಿನವಾಗಿದ್ದು, ಅಧಿಕಾರಕ್ಕಿಂತಲೂ ಸ್ವಾಭಿಮಾನವೇ ದೊಡ್ಡದು ಎಂಬುದನ್ನು ಅಂದು ಟಿಪ್ಪು ಸಾಬೀತು ಪಡಿಸಿದ. “ಯುದ್ಧದಲ್ಲಿ ಬ್ರಿಟಿಷರೊಂದಿಗೆ ಹುಲಿಯಂತೆ ಹೋರಾಡಿ ಮಡಿದ ಭರತಮಾತೆಯ ವೀರ ಪುತ್ರ ಟಿಪ್ಪು ಸುಲ್ತಾನ” ಎಂದು ಸಂಶೋಧಕ ನಿಧಿನ್ ಜಿ ಓಲಿಕಾರ್ ಅಭಿಪ್ರಾಯಿಸಿದರು.
ಸಂಜಯ ಪ್ರಕಾಶನದ ಆವರಣದಲ್ಲಿ ಮೇ 4ರಂದು ‘ಟಿಪ್ಪು ಹುತಾತ್ಮ ದಿನ’ದ ಅಂಗವಾಗಿ ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಂದಿನ ಮೈಸೂರು ಸಂಸ್ಥಾನದ ಆಡಳಿತ, ತಂತ್ರಜ್ಞಾನ ಹಾಗೂ ಐತಿಹಾಸಿಕ ದಾಖಲೆಗಳ ಕುರಿತ ವಿಸ್ತೃತ ಚರ್ಚೆ ನಡೆಯಿತು. ಸಂಶೋಧಕ ನಿಧಿನ್ ಜಿ. ಓಲಿಕಾರ್ ಅವರು, ಶ್ರೀರಂಗಪಟ್ಟಣ ಕೋಟೆಯ ಒಳಗಿದ್ದ ಆಡಳಿತ ವ್ಯವಸ್ಥೆಯ ಕುರಿತು ಅಪ್ರಕಟಿತ ಹಾಗೂ ಅಪರೂಪದ ಐತಿಹಾಸಿಕ ದಾಖಲೆಗಳನ್ನು ಸಭೆಯ ಮುಂದಿಟ್ಟರು.
“ಅಂದಿನ ಆಡಳಿತದಲ್ಲಿ ಪಾರ್ಸಿ, ಮರಾಠಿ ಮತ್ತು ಕನ್ನಡ ಭಾಷೆಗಳು ಪ್ರಮುಖವಾಗಿದ್ದವು. ಪಾರ್ಸಿಯ ಗುಲಾಬ್ ರಾಯ್, ಮರಾಠಿಯ ನಾರಾಯಣ ರಾವ್ ಹಾಗೂ ತಿರುಮಲ ವೆಂಕಟರಾಮ ಪಂಡಿತ್ ಮತ್ತು ಕನ್ನಡದ ನಂಜಯ್ಯ, ರಾಮಯ್ಯ, ದಂಕಣಿಕೋಟೆ ದೊಡ್ಡಯ್ಯನಂತಹ ಹಲವು ಸಾಹಿತಿಗಳಿಗೆ ಟಿಪ್ಪು ಆಶ್ರಯ ನೀಡಿದ ಉಲ್ಲೇಖಗಳಿದ್ದು, ಅವರ ವೇತನದ ನಿಖರ ದಾಖಲೆಗಳು ಲಭ್ಯವಿದೆ” ಎಂದು ಅವರು ವಿವರಿಸಿದರು.
“18ನೇ ಶತಮಾನದಲ್ಲಿ ಇಂದಿನ ಇಂಗ್ಲಿಷ್ ನುಡಿಯಂತೆ ಪಾರ್ಸಿ ನುಡಿಯು ಜಾಗತಿಕ ಸಂಪರ್ಕ ಮತ್ತು ಆಡಳಿತ ನುಡಿಯಾಗಿತ್ತು. ಹೀಗಾಗಿಯೇ ಒಡೆಯರ್ ಸೇರಿದಂತೆ ಅಂದಿನ ಬಹುತೇಕ ರಾಜಮನೆತನಗಳ ಅಧಿಕೃತ ಮುದ್ರೆಗಳು ಪಾರ್ಸಿ ನುಡಿಯಲ್ಲಿಯೇ ಇರುತ್ತಿದ್ದವು” ಎಂಬ ಐತಿಹಾಸಿಕ ಅಂಶಗಳನ್ನು ಅವರು ತಿಳಿಯಪಡಿಸಿದರು.
ಶ್ರೀರಂಗಪಟ್ಟಣ ಕೋಟೆಯ ಉಗ್ರಾಣಗಳಲ್ಲಿ ಯಾವೆಲ್ಲಾ ಸಾಮಗ್ರಿಗಳಿದ್ದವು, ಅವುಗಳ ಖರೀದಿ ವೆಚ್ಚ, ಸಂಗ್ರಹಣೆಯ ಪ್ರಮಾಣ ಮತ್ತು ವಿತರಣೆಯ ಕುರಿತಾದ ನಿಖರ ಲೆಕ್ಕಾಚಾರಗಳನ್ನು ಒಳಗೊಂಡಿರುವ ಅತ್ಯಮೂಲ್ಯ ದಾಖಲೆಯೊಂದನ್ನು ಪ್ರದರ್ಶಿಸಿ, ʼಕರ್ನಾಟಕದ ಇತಿಹಾಸದಲ್ಲಿ ಇಷ್ಟು ವ್ಯವಸ್ಥಿತವಾದ ಬೇರೊಂದು ದಾಖಲೆ ಆ ಕಾಲಘಟ್ಟದಲ್ಲಿ ಸಿಗುವುದು ಅಪರೂಪʼ ಎಂದರು.
ಹಿರಿಯ ಗಾಂಧಿವಾದಿ ಹಾಗೂ ವೈದ್ಯರಾದ ಡಾ ಬಿ ಸುಜಯ್‌ಕುಮಾರ್ ಮಾತನಾಡಿ, “ಟಿಪ್ಪು ಮೈಸೂರಿನ ಸುಲ್ತಾನನಾದ ಮೇಲೆ ಮೈಸೂರಿನ ಅಭಿವೃದ್ಧಿಯ ಪಥವೇ ಬದಲಾಯಿತು. ರೇಷ್ಮೆ ಉದ್ಯಮ, ಕರಕುಶಲತೆ, ರಾಕೆಟ್ ತಂತ್ರಜ್ಞಾನ ಹಾಗೂ ನೌಕಾಪಡೆ ತಂತ್ರಜ್ಞಾನ ಅಭಿವೃದ್ಧಿಯ ಜೊತೆಗೆ ಭವಿಷ್ಯದ ಭಾರತದ ಕನಸು ಕಂಡ ಮಹಾನ್ ವ್ಯಕ್ತಿ ಆತ. ಆದರೆ, ಬ್ರಿಟಿಷರ ಪಿತೂರಿಯಿಂದಾಗಿ ತನ್ನ ತಾಯ್ನೆಲಕ್ಕಾಗಿ ರಣರಂಗದಲ್ಲಿ ಪ್ರಾಣ ಸಮರ್ಪಣೆ ಮಾಡಿದ” ಎಂದು ಸ್ಮರಿಸಿದರು.
ಈ ಅರ್ಥಪೂರ್ಣ ಸಂವಾದ ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ಪ್ರಜ್ಞಾವಂತ ವೇದಿಕೆಯ ಸಂಚಾಲಕ ಸಿ ಎಸ್ ವೆಂಕಟೇಶ್, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಪ್ರೊಫೆಸರ್ ಮಹದೇವ್, ಇತಿಹಾಸಕಾರ ಕಲೀಮುಲ್ಲಾ, ವಕೀಲ ಎಸ್ ಆರ್ ಸಿದ್ದೇಶ್, ಗಣಂಗೂರು ನಂಜೇಗೌಡ, ಸಂಜಯ ಪ್ರಕಾಶನದ ಸಂಚಾಲಕ ಎಸ್ ಎಂ ಶಿವಕುಮಾರ್, ಮುಸ್ಲಿಂ ಸೌಹಾರ್ದ ವೇದಿಕೆಯ ಅಧ್ಯಕ್ಷ ಅಪ್ಸರ್ ಖಾನ್, ಐಕ್ಯ ಅಲಯನ್ಸ್ ಸಂಸ್ಥೆಯ ಅಧ್ಯಕ್ಷೆ ಎನ್ ಸರಸ್ವತಿ, ಶ್ರೀ ರಂಗನಾಯಕಿ ಸಮಾಜದ ಅಧ್ಯಕ್ಷೆ ಡಿ ವಿಶಾಲಾಕ್ಷಿ, ರೈತ ಮುಖಂಡರಾದ ಪಾಂಡು, ಅಬ್ದುಲ್ ಬೇಗ್, ಪ್ರೊ. ಇಲಿಯಾಸ್ ಅಹ್ಮದ್ ಖಾನ್, ಚಿಕ್ಕಮರಳಿ ಬೋರೇಗೌಡ, ಕ್ಯಾತನಹಳ್ಳಿ ಚಂದ್ರಣ್ಣ, ಶೀಲಾ ನಂಜುಂಡಯ್ಯ, ಕುಮಾರ್, ಶ್ರೀನಿವಾಸ್, ಚಿಕ್ಕ ತಮ್ಮೇಗೌಡ ಮೊದಲಾದವರು ಇದ್ದರು.





