ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಕೀಲರು ಹಾಗೂ ಕಕ್ಷಿದಾರರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಮತ್ತೊಂದು ₹1 ಕೋಟಿ ಅನುದಾನ ನೀಡಲಾಗುವುದು ಎಂದು ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊತ್ತೂರು ಜಿ. ಮಂಜುನಾಥ್ ಘೋಷಿಸಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶಾಸಕರ ಅನುದಾನದಲ್ಲಿ ಸುಮಾರು 15 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಎರಡು ಹೈಮಾಸ್ಟ್ ದೀಪಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಾಲಯದ ಆವರಣದಲ್ಲಿ ಸಿಮೆಂಟ್ ರಸ್ತೆ, ಟೈಲ್ಸ್ ಅಳವಡಿಕೆ, ಆಸನಗಳ ವ್ಯವಸ್ಥೆ ಹಾಗೂ ಗ್ರಂಥಾಲಯ ಅಭಿವೃದ್ಧಿ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಬಳಸಲಾಗುವುದು. ವಕೀಲರ ಸಂಘದ ಪದಾಧಿಕಾರಿಗಳು ಆದ್ಯತೆಯ ಕಾಮಗಾರಿಗಳ ಪಟ್ಟಿ ಸಲ್ಲಿಸಿದರೆ ಅದರಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ನ್ಯಾಯಾಲಯದ ಆವರಣದಲ್ಲಿ ರಾಜಕೀಯ ಬದಿಗಿಟ್ಟು ಎಲ್ಲರೂ ಅಭಿವೃದ್ಧಿಗೆ ಸಹಕರಿಸಬೇಕು. ವ್ಯಕ್ತಿಗಳು ಶಾಶ್ವತವಲ್ಲ, ಆದರೆ ಸಂಸ್ಥೆಗಳ ಮೂಲಕ ಕೈಗೊಂಡ ಅಭಿವೃದ್ಧಿ ಕಾರ್ಯಗಳು ದೀರ್ಘಕಾಲ ಉಳಿಯುತ್ತವೆ ಎಂದರು.
ಜಿಲ್ಲಾ ನ್ಯಾಯಾಲಯದ ನೂತನ ಕಟ್ಟಡ ಸಮುಚ್ಚಯದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಬಾಕಿ ಅನುದಾನ ಬಿಡುಗಡೆಗೊಳಿಸಿ ಪೂರ್ಣಗೊಳಿಸಲಾಗುವುದು. ಡಿಸೆಂಬರ್ ಅಥವಾ ಜನವರಿಯಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಆಹ್ವಾನಿಸಿ ಉದ್ಘಾಟನೆ ನೆರವೇರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ಜಿಲ್ಲಾ ನ್ಯಾಯಾಲಯದ ಅಭಿವೃದ್ಧಿಗೆ ವಿಶೇಷ ಅನುದಾನದಡಿ ₹1 ಕೋಟಿ ನೀಡಲಾಗುವುದು. ವಕೀಲರ ಸಂಘದ ಸಲಹೆ ಪಡೆದು ಶಾಸಕರು ಹಾಗೂ ತಾವು ಅಭಿವೃದ್ಧಿ ಕಾಮಗಾರಿಗಳ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ತಿಳಿಸಿದ ಅವರು ಸರ್ಕಾರಿ ಕಾನೂನು ಕಾಲೇಜಿಗೆ ₹6.80 ಕೋಟಿ ವೆಚ್ಚದ ನೂತನ ಕಟ್ಟಡ ಹಸ್ತಾಂತರವಾಗಿದ್ದು, ಹೆಚ್ಚುವರಿ ಸಂಪರ್ಕ ಕಾಮಗಾರಿಗಳಿಗೆ ₹2.50 ಕೋಟಿ ಅನುದಾನ ನೀಡಲಾಗುವುದು. ಬಡವರು, ಮಹಿಳೆಯರು, ಕಾರ್ಮಿಕರು ಹಾಗೂ ರೈತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ ಎಂದರು.
ಇದನ್ನು ಓದಿದ್ದೀರಾ..?ಕೋಲಾರ | ಅಂಬೇಡ್ಕರ್ ಪುತ್ಥಳಿ ನಿರ್ಮಾಣದಲ್ಲಿ ಪ್ರತಿಷ್ಠೆಗಿಂತ ಗೌರವ, ರಕ್ಷಣೆಗೆ ಆದ್ಯತೆ: ಕೊತ್ತೂರು ಮಂಜುನಾಥ್
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ವಕೀಲರ ಸಂಘದ ಕಾರ್ಯದರ್ಶಿ ಆದರ್ಶ, ಉಪಾಧ್ಯಕ್ಷ ಸುಬ್ರಮಣಿ ಕಾಂಗ್ರೆಸ್ ಮುಖಂಡರು ಗುತ್ತಿದಾರ ಮದನಹಳ್ಳಿ ಮಹೇಶ್, ಗ್ರಾಪಂ ಅಧ್ಯಕ್ಷ ನುಕ್ಕನಹಳ್ಳಿ ಶ್ರೀನಿವಾಸ್ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.



