ಮುಂಡಗೋಡ ತಾಲೂಕಿನಲ್ಲಿ ಸುದೀರ್ಘ ಕಾಲ ಪ್ರಾಮಾಣಿಕ ಹಾಗೂ ನಿಷ್ಠೆಯ ಸೇವೆ ಸಲ್ಲಿಸಿ ಇಬ್ಬರು ಸರ್ಕಾರಿ ನೌಕರರು ಇಂದು (ಜುಲೈ 31, 2026) ವಯೋನಿವೃತ್ತಿ ಹೊಂದುತ್ತಿದ್ದಾರೆ.
ಹಿರಿಯ ಶಿಕ್ಷಕರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮುಂಡಗೋಡ ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ಸುಭಾಸಚಂದ್ರ ಆರ್. ಡೋರಿ ಅವರೂ ಜುಲೈ 31ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ಸುಮಾರು 35 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಅವರು, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ ಶಿಕ್ಷಕರು ಹಾಗೂ ಸರ್ಕಾರಿ ನೌಕರರ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಶ್ರಮಿಸಿ ಸಂಘಟನೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಇವರ ಸೇವಾ ನಿಮಿತ್ತ ಆಗಸ್ಟ್ 1, 2026ರಂದು ಮುಂಡಗೋಡಿನ ದೈವಜ್ಞ ಸಭಾಭವನದಲ್ಲಿ ಅಭಿನಂದನೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಇನ್ನೊಂದೆಡೆ ತಾಲೂಕು ಪಂಚಾಯತಿಯಲ್ಲಿ 32 ವರ್ಷಗಳ ಕಾಲ ಕಚೇರಿಯ ಜವಾನರಾಗಿ ಸೇವೆ ಸಲ್ಲಿಸಿರುವ ನಾಗಾ ಮಂಜ ಪೂಜಾರಿ ಅವರು ಜುಲೈ 31ರಂದು ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದರು. ಪ್ರಾಮಾಣಿಕತೆ, ದಕ್ಷತೆ ಹಾಗೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ ಅವರು, ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸೌಹಾರ್ದಯುತವಾಗಿ ನಡೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಈ ಸುದ್ದಿ ಓದಿದ್ದೀರಾ? ಬನವಾಸಿ | ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ವಶಕ್ಕೆ; ಮಹೇಂದ್ರ ಸುಪ್ರೊ ವಾಹನ ಜಪ್ತಿ
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೈ. ದಾಸನಕೊಪ್ಪ ಅವರು ತಮ್ಮ ಕಚೇರಿಯ ನಾಗಾ ಪೂಜಾರಿ ಅವರಿಗೆ ಶುಭ ಹಾರೈಸಿದ್ದು, ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಅವರ ನಿವೃತ್ತ ಜೀವನ ಸುಖ, ಶಾಂತಿ, ನೆಮ್ಮದಿ ಹಾಗೂ ಉತ್ತಮ ಆರೋಗ್ಯದಿಂದ ಕೂಡಿರಲಿ ಎಂದು ಹಾರೈಸಿದ್ದಾರೆ.
ಇಬ್ಬರೂ ತಮ್ಮ ಸೇವಾ ಅವಧಿಯಲ್ಲಿ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಹಾಗೂ ಜನಪರ ಕಾರ್ಯಶೈಲಿಯಿಂದ ಗುರುತಿಸಿಕೊಂಡಿದ್ದು, ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಸಹೋದ್ಯೋಗಿಗಳು, ಹಿತೈಷಿಗಳು ಹಾಗೂ ಸಾರ್ವಜನಿಕರು ಶುಭ ಹಾರೈಸಿದ್ದಾರೆ.




