ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಅರ್ಹ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಂಘದ ವಾರ್ಷಿಕ ಮಹಾಸಭೆಯನ್ನು ಸೆ.22ರಂದು ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ತಮ್ಮಣ್ಣಯ್ಯ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಬೆಳಗಾವಿ, ಕೊಡಗು, ಹಾಸನ, ದಕ್ಷಿಣ ಕನ್ನಡ ಹಾಗೂ ಕೋಲಾರ ಜಿಲ್ಲೆಗಳ ಬಿಪಿಎಲ್ ಕಾರ್ಡ್ ಹೊಂದಿರುವ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಷೇರುದಾರರ ಮಕ್ಕಳ ಪೈಕಿ 250 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
2025-26ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.75ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ₹1,000 ನಗದು, ಸಂವಿಧಾನದ ಕೈಪಿಡಿ, ನೆನಪಿನ ಕಾಣಿಕೆ, ಫೈಲ್, ಪ್ರಶಸ್ತಿ ಪತ್ರ ಹಾಗೂ ಒಂದು ಹಣ್ಣಿನ ಗಿಡ ನೀಡಲಾಗುವುದು ಎಂದರು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅರ್ಜಿ ನಮೂನೆ, ಬಿಪಿಎಲ್ ಕಾರ್ಡ್ ಜೆರಾಕ್ಸ್ ಪ್ರತಿ, ಇತ್ತೀಚಿನ ಎರಡು ಭಾವಚಿತ್ರಗಳು, ಅಂಕಪಟ್ಟಿ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಹಾಗೂ ಜಾತಿ ಪ್ರಮಾಣಪತ್ರದ ಜೆರಾಕ್ಸ್ ಪ್ರತಿಗಳನ್ನು ಸೆ.10ರೊಳಗೆ ಸಲ್ಲಿಸಬೇಕು. ಅರ್ಜಿಗಳನ್ನು ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ (ರಿ.), ಪಿರಿಯಾಪಟ್ಟಣ ಶಾಖಾ ಕಚೇರಿ, ತಾಲ್ಲೂಕು ಆಡಳಿತ ಭವನದ ಮುಂಭಾಗ, ಶಿವಪ್ಪ ಬಡಾವಣೆ, ಪಿರಿಯಾಪಟ್ಟಣ ಇಲ್ಲಿ ಸಲ್ಲಿಸಬಹುದು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಸಂಘದ ಅಧ್ಯಕ್ಷ ಸಿ.ತಮ್ಮಣ್ಣಯ್ಯ (ಮೊ. 9845527070) ಹಾಗೂ ನಿರ್ದೇಶಕ ಐಲಾಪುರ ರಾಮು (ಮೊ. 9448647771) ಅವರನ್ನು ಸಂಪರ್ಕಿಸುವಂತೆ ಅವರು ಕೋರಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ಮಳೆಗಾಲದಲ್ಲೇ ಬರದ ಛಾಯೆ: ಮೈಸೂರು ಜಿಲ್ಲೆಯ ಕೃಷಿ ಬದುಕಿಗೆ ಕಾಡುತ್ತಿರುವ ಮಳೆ ಕೊರತೆ
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕ ಐಲಾಪುರ ರಾಮು, ಆವರ್ತಿ ಸೋಮಶೇಖರ್, ಕಂಪ್ಯೂಟರ್ ಆಪರೇಟರ್ ವೆಂಕಟೇಶ್ ಹಾಗೂ ಮುಖಂಡ ಕೋಮಲಾಪುರ ಶಿವರಾಜ್ ಇದ್ದರು.




