ಜೆಲ್ಲಿ ಕಲ್ಲು ಸಾಗಿಸುತ್ತಿದ್ದ ಲಾರಿಯನ್ನು ಕ್ರೇಟಾ ಕಾರಿನಲ್ಲಿ ಬಂದ ಐವರು ಅಡ್ಡಗಟ್ಟಿ, ಚಾಲಕ ಹಾಗೂ ಆತನ ಸ್ನೇಹಿತನಿಗೆ ಅವಾಚ್ಯವಾಗಿ ಬೈದು, ಲಾರಿಯ ದಾಖಲೆಗಳನ್ನು ಬಲವಂತವಾಗಿ ಪಡೆದು ಜೀವ ಬೆದರಿಕೆ ಹಾಕಿದ ಘಟನೆ ಅಂಕೋಲಾ ತಾಲೂಕಿನ ಹೆಬ್ಬುಳದಲ್ಲಿ ನಡೆದಿದೆ.
ಬೆಳಗಾವಿ ನಿವಾಸಿ, ಲಾರಿ ಚಾಲಕ ಅರ್ಜುನ ಹರಗೆರಿ (39) ಅವರು ನೀಡಿದ ದೂರಿನ ಮೇರೆಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾಗಿ ಗಣೇಶ ಮೊಗೇರ ನೇಮಕ
ದೂರಿನ ಪ್ರಕಾರ, ಅಕ್ಟೋಬರ್ 29ರಂದು ಮಧ್ಯಾಹ್ನ ಲಾರಿ ಮಾಲೀಕರ ಸೂಚನೆಯಂತೆ ತಡಸದಿಂದ 10 ಎಂಎಂ ಜೆಲ್ಲಿ ಕಲ್ಲುಗಳನ್ನು ಲೋಡ್ ಮಾಡಿಕೊಂಡು ಕಾರವಾರದ ಕೈಗಾಕ್ಕೆ ಸಾಗಿಸಲು ಅರ್ಜುನ ಅವರಿಗೆ ಸೂಚಿಸಲಾಗಿತ್ತು. ಅವರೊಂದಿಗೆ ಶಿವರಾಜ ಶಿವಲಿಂಗಪ್ಪ ಎಂಬುವವರನ್ನೂ ಕಳುಹಿಸಲಾಗಿತ್ತು.
ಅದರಂತೆ ಅಕ್ಟೋಬರ್ 29ರಂದು ರಾತ್ರಿ 8.30ರ ಸುಮಾರಿಗೆ ಲಾರಿಗೆ ಜೆಲ್ಲಿ ಕಲ್ಲುಗಳನ್ನು ತುಂಬಿಸಿಕೊಂಡು ಕಲಘಟಗಿ–ಯಲ್ಲಾಪುರ ಮಾರ್ಗವಾಗಿ ಅಂಕೋಲಾದ ಹೆಬ್ಬುಳಕ್ಕೆ ಬಂದಿದ್ದರು. ಅಲ್ಲಿ ಲಾರಿಯನ್ನು ನಿಲ್ಲಿಸಿದ್ದ ವೇಳೆ ಅಕ್ಟೋಬರ್ 30ರ ಬೆಳಗಿನ ಜಾವ 4.20ರಿಂದ 5.30ರ ನಡುವಿನ ಅವಧಿಯಲ್ಲಿ ಕ್ರೇಟಾ ಕಾರಿನಲ್ಲಿ ಬಂದ ಐವರು ಲಾರಿಯನ್ನು ಅಡ್ಡಗಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿತರು ಚಾಲಕ ಅರ್ಜುನ ಹಾಗೂ ಅವರ ಸ್ನೇಹಿತ ಶಿವರಾಜ ಅವರಿಗೆ ಅವಾಚ್ಯವಾಗಿ ಬೈದು, ಲಾರಿಯನ್ನು ಅಂಕೋಲಾ ಕಡೆಗೆ ತೆಗೆದುಕೊಂಡು ಬರುವಂತೆ ಬೆದರಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಲಾರಿಯ ದಾಖಲೆಗಳನ್ನು ಬಲವಂತವಾಗಿ ಪಡೆದುಕೊಂಡು, ಜೆಲ್ಲಿ ಕಲ್ಲಿನ ಲೋಡ್ ಇರುವ ಲಾರಿಯನ್ನು ಅಡ್ಡಗಟ್ಟುವಂತೆ ವಿಶ್ವಜೀತ್ ಹಾಗೂ ಸೂಜಯ್ ಮರಾಠೆ ಸೂಚಿಸಿದ್ದಾರೆ ಎಂದು ಹೇಳಿ ಜೀವ ಬೆದರಿಕೆ ಹಾಕಿ ತೆರಳಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.




