ರಾಯಚೂರು ನಗರದ ಮಂತ್ರಾಲಯ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಪರಿಶಿಷ್ಟ ಜಾತಿ ಬಾಲಕರ ಮೆಟ್ರಿಕ್ ವಸತಿ ನಿಲಯದ ವಿದ್ಯುತ್ ಬಿಲ್ ಪಾವತಿಸದ ಕಾರಣ ಬುಧವಾರ ಮಧ್ಯಾಹ್ನ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಇದರಿಂದ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳು ವಿದ್ಯುತ್ ಇಲ್ಲದೆ ಕತ್ತಲಿನಲ್ಲಿ ದಿನ ಕಳೆಯುವಂತಾಗಿದ್ದು, ಅವರ ಕಲಿಕೆ ಹಾಗೂ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗುವ ಪರಿಸ್ಥಿತಿ ಎದುರಾಗಿದೆ.
ವಸತಿ ನಿಲಯದ ವಿದ್ಯುತ್ ಬಿಲ್ಗೆ ಸಂಬಂಧಿಸಿದ ಲಭ್ಯವಿರುವ ಮಾಹಿತಿಯ ಪ್ರಕಾರ, ಒಟ್ಟು ₹8,76,223 ಬಾಕಿ ಉಳಿದಿದೆ. ಈ ಕುರಿತು ಜೆಸ್ಕಾಂ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದರೂ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ, ಅಧಿಕಾರಿಗಳ ಸಮ್ಮುಖದಲ್ಲಿ ಬುಧವಾರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಇಷ್ಟೊಂದು ಮೊತ್ತದ ವಿದ್ಯುತ್ ಬಿಲ್ ಬಾಕಿ ಉಳಿಯಲು ಕಾರಣವೇನು? ಬಿಲ್ ಪಾವತಿಯಲ್ಲಿ ವಿಳಂಬವಾಗಿದ್ದೇಕೆ? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇದು ಸರ್ಕಾರದ ನಿರ್ಲಕ್ಷ್ಯವೋ ಅಥವಾ ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿಯೋ ಎಂಬುದು ಸ್ಪಷ್ಟವಾಗಬೇಕಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಶಿಕ್ಷಣ, ಜಾಗೃತಿ ಅಗತ್ಯ: ನ್ಯಾಯಾಧೀಶ ಸುರೇಶ್ ಸವದಿ
ಸರ್ಕಾರಿ ವಸತಿ ನಿಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಮೂಲಸೌಕರ್ಯಗಳ ಕೊರತೆಯಿಂದ ತೊಂದರೆ ಅನುಭವಿಸುವಂತಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ವಿದ್ಯುತ್ ಬಿಲ್ ಪಾವತಿಗೆ ಸಂಬಂಧಿಸಿದ ಸಮಸ್ಯೆಯನ್ನು ಶೀಘ್ರ ಬಗೆಹರಿಸಿ, ವಸತಿ ನಿಲಯದ ವಿದ್ಯುತ್ ಸಂಪರ್ಕವನ್ನು ಪುನಃ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ಆಡಳಿತ ವ್ಯವಸ್ಥೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂಬ ಒತ್ತಾಯ ವ್ಯಕ್ತವಾಗಿದೆ.




