ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನಾ ಪ್ರಕ್ರಿಯೆಯ ಅವಧಿಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ ಎಂದು ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ತಿಳಿಸಿದ್ದಾರೆ.
ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೃಹಜ್ಯೋತಿ ಯೋಜನೆಯ ದಾಖಲೆಗಳ ಪರಿಶೀಲನೆ ವೇಳೆ ಫಲಾನುಭವಿಗಳು ಮನೆಯಲ್ಲಿ ಲಭ್ಯವಿಲ್ಲದಿರುವುದು, ಮನೆಗಳಿಗೆ ಬೀಗ ಹಾಕಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ನಿಗದಿತ ಅವಧಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಮೆಸ್ಕಾಂ ಸಿಬ್ಬಂದಿ ಮೂರು ಬಾರಿ ಮನೆಗೆ ಭೇಟಿ ನೀಡಿದರೂ ಫಲಾನುಭವಿಗಳು ಲಭ್ಯವಾಗದಿದ್ದಲ್ಲಿ, ಸಂಬಂಧಪಟ್ಟ ಮೆಸ್ಕಾಂ ಕಚೇರಿಗೆ ತೆರಳಿ ಅಗತ್ಯ ಮಾಹಿತಿ ನೀಡಬಹುದು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ
ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿವೆ, ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂಬಂತಹ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡಬಾರದು. ಪಂಚ ಗ್ಯಾರಂಟಿ ಯೋಜನೆಗಳು ಹಿಂದಿನಂತೆಯೇ ಮುಂದುವರಿಯಲಿವೆ. ಗೃಹಲಕ್ಷ್ಮಿ ಯೋಜನೆಯಡಿ ಮೃತಪಟ್ಟ ಫಲಾನುಭವಿಗಳ ಪ್ರಕರಣಗಳ ಪರಿಶೀಲನೆ ಮಾತ್ರ ನಡೆಯುತ್ತಿದ್ದು, ಕುಟುಂಬಸ್ಥರು ಅಗತ್ಯ ಸಹಕಾರ ನೀಡಬೇಕು ಎಂದರು.
ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆಯಾಗುವ ಮಾಸಿಕ ಸಹಾಯಧನವನ್ನು ಹಿಂದಿನ ಸಾಲದ ಕಂತು ಅಥವಾ ಬಡ್ಡಿಯ ನೆಪದಲ್ಲಿ ಬ್ಯಾಂಕುಗಳು ನೇರವಾಗಿ ಕಡಿತಗೊಳಿಸಬಾರದು ಎಂದು ಸರ್ಕಾರ ಆದೇಶಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಗೃಹಲಕ್ಷ್ಮಿ ಯೋಜನೆಯ ₹2,000 ಮಾಸಿಕ ಸಹಾಯಧನ ಐದಾರು ತಿಂಗಳಿಂದ ಪಾವತಿಯಾಗಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಬ್ಯಾಂಕ್ ಖಾತೆಗೆ ಹಣ ಜಮೆಯಾದ ಬಗ್ಗೆ ಸಂದೇಶ ಬಾರದಿರುವುದರಿಂದ ಈ ಗೊಂದಲ ಉಂಟಾಗುತ್ತಿದೆ. ಫಲಾನುಭವಿಗಳು ಆಗಾಗ್ಗೆ ತಮ್ಮ ಬ್ಯಾಂಕ್ ಪಾಸ್ಬುಕ್ ಪರಿಶೀಲಿಸಿ ಹಣ ಜಮೆಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಹಣ ಜಮೆಯಾದಾಗ ಮೊಬೈಲ್ಗೆ ಸಂದೇಶ ರವಾನಿಸುವ ಕುರಿತು ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಅನ್ನಭಾಗ್ಯ ಇ-ಕೆವೈಸಿ ಪೂರ್ಣಗೊಳಿಸಲು ಸೂಚನೆ
ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬ ಪಡಿತರ ಚೀಟಿದಾರರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ಉಡುಪಿ ತಾಲೂಕಿನಲ್ಲಿ ಈಗಾಗಲೇ ಶೇ.81ರಷ್ಟು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಕಾರ್ಯವನ್ನು ಅಕ್ಟೋಬರ್ 20ರೊಳಗೆ ಪೂರ್ಣಗೊಳಿಸಬೇಕು. ಅನ್ನಸೇವೆ ಆ್ಯಪ್ ಮೂಲಕವೂ ಸಾರ್ವಜನಿಕರು ಸ್ವಯಂ ಇ-ಕೆವೈಸಿ ಮಾಡಿಕೊಳ್ಳಬಹುದು. ಪಡಿತರ ವಿತರಣಾ ಕೇಂದ್ರಗಳಿಗೆ ಸಮಿತಿ ಸದಸ್ಯರು ಆಗಾಗ್ಗೆ ಭೇಟಿ ನೀಡಿ, ಸಮಸ್ಯೆಗಳಿದ್ದರೆ ಸಭೆಯ ಗಮನಕ್ಕೆ ತರಬೇಕು ಎಂದು ಸೂಚಿಸಿದರು.
ಬಸ್ ಸಂಚಾರ ಪುನರಾರಂಭಕ್ಕೆ ಒತ್ತಾಯ
ಶಕ್ತಿ ಯೋಜನೆಯಡಿ ಕೊರೊನಾ ನಂತರ ಸ್ಥಗಿತಗೊಂಡ ಕೆಲವು ಮಾರ್ಗಗಳ ಬಸ್ ಸಂಚಾರ ಇನ್ನೂ ಪುನರಾರಂಭಗೊಂಡಿಲ್ಲ. ಬಡಗುಬೆಟ್ಟುವಿಗೆ ನಿಗಮದ ಬಸ್ ಸಂಚಾರ ಕಲ್ಪಿಸುವಂತೆ ಸಮಿತಿ ಸದಸ್ಯರು ಹಲವು ಸಭೆಗಳಲ್ಲಿ ಒತ್ತಾಯಿಸಿದ್ದರೂ ಕ್ರಮ ಕೈಗೊಂಡಿಲ್ಲ. ಈ ಕುರಿತು ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಯುವನಿಧಿ ಯೋಜನೆಯ ಬಗ್ಗೆ ಪದವಿ ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಉದ್ಯೋಗ ದೊರೆಯುವವರೆಗೆ ಆರ್ಥಿಕ ನೆರವು ನೀಡುವ ಈ ಯೋಜನೆಯ ನೋಂದಣಿ ಕುರಿತು ಯುವಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು. ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಬಂದಾಗ ಅಧಿಕಾರಿಗಳು ತಮ್ಮ ಹಂತದಲ್ಲಿಯೇ ಪರಿಹರಿಸಲು ಪ್ರಯತ್ನಿಸಬೇಕು ಎಂದು ಸೂಚಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಅರ್ಹ ಫಲಾನುಭವಿಗಳು ಯೋಜನೆಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರ ಸೇವಕರಾಗಿದ್ದು, ಒತ್ತಡದ ನಡುವೆಯೂ ಸಾರ್ವಜನಿಕರ ಅಹವಾಲುಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು ಎಂದು ರಮೇಶ್ ಕಾಂಚನ್ ಹೇಳಿದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯಾ, ಸಹಾಯಕ ನಿರ್ದೇಶಕಿ ಫರ್ಜಾನಾ ಎಂ., ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.





