ನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಕೋಟೆಯ ಕಂದಕದ ಬಳಿ ಆರೋಗ್ಯ ಇಲಾಖೆಗೆ ಸೇರಿದ ಔಷಧಿಗಳನ್ನು ತಿಪ್ಪೆಗೆ ಎಸೆದಿರುವುದು ಬೆಳಕಿಗೆ ಬಂದಿದೆ. ಬಡ ರೋಗಿಗಳಿಗೆ ವಿತರಿಸಬೇಕಿದ್ದ ಔಷಧಿಗಳು ಕಸದ ರಾಶಿಯಲ್ಲಿ ಪತ್ತೆಯಾಗಿರುವುದು ಸಾರ್ವಜನಿಕರ ಗಮನ ಸೆಳೆದಿದೆ.
ಅವಧಿ ಮೀರಿದ ಔಷಧಿಗಳನ್ನು ನಿಯಮಾನುಸಾರ ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿಯಾಗಿದೆ. ಆದರೆ, ಸಾರ್ವಜನಿಕರು ಹಾಗೂ ಜಾನುವಾರುಗಳ ಓಡಾಟವಿರುವ ಪ್ರದೇಶದಲ್ಲಿ ಔಷಧಿಗಳನ್ನು ಎಸೆಯಲಾಗಿದೆ. ಆರೋಗ್ಯ ಇಲಾಖೆಯಿಂದ ವಿವಿಧ ಆರೋಗ್ಯ ಕೇಂದ್ರಗಳಿಗೆ ಸರಬರಾಜು ಮಾಡಲಾಗಿದ್ದ ಈ ಔಷಧಿಗಳು ಬಳಕೆಯಾಗದೆ ಅವಧಿ ಮೀರಿವೆ ಎನ್ನಲಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಉಚಿತವಾಗಿ ವಿತರಿಸಲು ಸರಬರಾಜು ಮಾಡುವ ಔಷಧಿಗಳು ಬಳಕೆಯಾಗದೆ ಅವಧಿ ಮುಗಿಯಲು ಕಾರಣವೇನು? ಔಷಧಿಗಳ ದಾಸ್ತಾನು ಮತ್ತು ವಿತರಣೆಯಲ್ಲಿ ಲೋಪವಾಗಿದೆಯೇ? ಅಥವಾ ಔಷಧಿಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆಯೇ ಎಂಬ ಪ್ರಶ್ನೆಗಳು ಮೂಡಿವೆ.
ಅವಧಿ ಮೀರಿದ ಔಷಧಿಗಳನ್ನು ಎಸೆದವರ ವಿರುದ್ಧ ಎಫ್ಐಆರ್ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಂದಿತಾ ಎಂ.ಎನ್. ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಿದ್ಯುತ್ ಬಿಲ್ ಬಾಕಿ: ಅಂಬೇಡ್ಕರ್ ವಸತಿ ನಿಲಯದ ವಿದ್ಯುತ್ ಸಂಪರ್ಕ ಕಡಿತ
ಆರೋಗ್ಯ ಇಲಾಖೆಗೆ ಸರಬರಾಜಾಗುವ ಔಷಧಿಗಳನ್ನು ಬಳಕೆ ಮಾಡಿದ ಬಳಿಕ ಅವುಗಳ ಅವಧಿ ಮುಗಿದರೆ, ಸರ್ಕಾರದ ಮಾರ್ಗಸೂಚಿಯಂತೆ ನಿಯಮಾನುಸಾರ ವಿಲೇವಾರಿ ಮಾಡಲಾಗುತ್ತದೆ. ಪ್ರಸ್ತುತ ಪ್ರಕರಣದಲ್ಲಿ ಔಷಧಿಗಳನ್ನು ಎಸೆದವರನ್ನು ಇ-ಔಷಧ ಪೋರ್ಟಲ್ ಮೂಲಕ ಪತ್ತೆಹಚ್ಚಿ, ಸಂಬಂಧಪಟ್ಟವರ ವಿರುದ್ಧ ಎಫ್ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.





