ಜಿಲ್ಲೆಯ ವೈಶಿಷ್ಟ್ಯ, ಜನಜೀವನದ ವಿಶೇಷತೆ, ಇತಿಹಾಸ, ಅಭಿವೃದ್ಧಿ ಹಾಗೂ ಸ್ಥಳೀಯ ಸಂಸ್ಕೃತಿಯನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರಕ್ಕೆ ನವೋದಯ ಶಿಕ್ಷಣ ಸಂಸ್ಥೆಯ ನವೋದಯ 88.4 ಎಫ್ಎಂ ಮಹತ್ವದ ಕೊಡುಗೆಯಾಗಿದೆ ಎಂದು ಲೋಕಸಭೆ ಸದಸ್ಯ ಜಿ. ಕುಮಾರ್ ನಾಯಕ ಹೇಳಿದರು.
ಅವರಿಂದ ನಗರದ ಪ್ರತಿಷ್ಠಿತ ನವೋದಯ ಶಿಕ್ಷಣ ಸಂಸ್ಥೆಯ ಆವರಣದ ಅಂತರಾಷ್ಟ್ರೀಯ ಕ್ರೀಡಾಂಗಣ ಪ್ರಾಂಗಣದಲ್ಲಿ ಖಾಸಗಿ ಕ್ಷೇತ್ರದ ಜಿಲ್ಲೆಯ ಮೊಟ್ಟಮೊದಲ ನವೋದಯ 88.4 ಎಫ್ ಎಂ ವಿಡಿಯೋ ಉದ್ಘಾಟಿಸಿ ಮಾತನಾಡಿದರು.
ರಾಯಚೂರು ಜಿಲ್ಲೆ ತನ್ನದೇ ಆದ ವಿಶಿಷ್ಟತೆ ಹಾಗೂ ವೈವಿಧ್ಯಮಯ ಪರಂಪರೆಯನ್ನು ಹೊಂದಿದೆ. ಜಿಲ್ಲೆಯ ಬಹುಸಂಸ್ಕೃತಿಯ ಇತಿಹಾಸ, ಕೃಷಿ, ತಂತ್ರಜ್ಞಾನ, ಶಿಕ್ಷಣ, ನಗರ ಹಾಗೂ ಗ್ರಾಮೀಣ ಜನಜೀವನ, ಸಾಂಸ್ಕೃತಿಕ ಚಟುವಟಿಕೆಗಳು, ಸಂಗೀತ, ಕ್ರೀಡೆ, ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರಗಳ ಸಾಧನೆಗಳನ್ನು ಜನರಿಗೆ ಪರಿಚಯಿಸುವಲ್ಲಿ ನವೋದಯ 88.4 ಎಫ್ಎಂ ಅತ್ಯುತ್ತಮ ವೇದಿಕೆಯಾಗಲಿದೆ. ಈ ಮೂಲಕ ಜಿಲ್ಲೆಯ ವೈಶಿಷ್ಟ್ಯತೆಗಳನ್ನು ಸಮಾಜಕ್ಕೆ ತಲುಪಿಸುವ ನಿಟ್ಟಿನಲ್ಲಿ ನವೋದಯ 88.4 ಎಫ್ಎಂ ಹೊಸ ಮೈಲುಗಲ್ಲು ಸ್ಥಾಪಿಸಲಿದೆ ಎಂದು ಅವರು ಹೇಳಿದರು.
ನವೋದಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಎಸ್ ಆರ್ ರೆಡ್ಡಿ ಅವರು, ನಮ್ಮ ಜಿಲ್ಲೆಯ ಜನರನ್ನು ಪರಿಚಯಿಸುವ ಜೊತೆಗೆ, ಹೊಸ ವಿಚಾರಗಳು ಹಾಗೂ ಮಾಹಿತಿಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ವೃತ್ತಿಪರತೆಯೊಂದಿಗೆ ನವೋದಯ 88.4 ಎಫ್ಎಂ ಉತ್ತಮ ಸಾಧನೆ ಮಾಡಲಿ. ಏನನ್ನಾದರೂ ಸಾಧಿಸಬೇಕೆಂಬ ಸಂಕಲ್ಪ ಮಾಡಿದರೆ, ಅದನ್ನು ಸಾಕಾರಗೊಳಿಸುವವರೆಗೆ ಪ್ರಯತ್ನಿಸುವ ಛಲ ತಮ್ಮಲ್ಲಿದೆ ಎಂದು ಅವರು ಹೇಳಿದರು.
27 ವರ್ಷಗಳ ಹಿಂದೆ, ಅಂದರೆ 1999ರಲ್ಲಿ ನಾನು ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ನನ್ನಷ್ಟೇ ವಯಸ್ಸಿನ ಎಸ್.ಆರ್. ರೆಡ್ಡಿ ಅವರು ನನ್ನ ಕಚೇರಿಗೆ ಆಗಮಿಸಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಉದ್ದೇಶದಿಂದ ಕೃಷಿ ಜಮೀನಿಗೆ ಎನ್ಎ (NA) ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಆಗ ಅವರ ಉದ್ದೇಶ ಕೇಳಿದಾಗ, ಇವರಿಂದ ವೈದ್ಯಕೀಯ ಕಾಲೇಜು ನಿರ್ಮಾಣ ಸಾಧ್ಯವೇ ಎಂಬ ಅನುಮಾನ ನನ್ನಲ್ಲಿ ಮೂಡಿತ್ತು. ಆದರೆ ಇಂದು ಕಾಲೇಜಿನ ಆವರಣ ಹಾಗೂ ಇಲ್ಲಿನ ಪರಿಸರವನ್ನು ನೋಡಿದಾಗ, ಎಸ್.ಆರ್. ರೆಡ್ಡಿ ಅವರ ಸಾಮರ್ಥ್ಯ ಮತ್ತು ಸಾಧನೆ ನಿಜಕ್ಕೂ ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಸಾಧನೆ ಮಾಡಲು ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.
ನಂತರ ಮಾತನಾಡಿದ ಮಾಜಿ ಸಚಿವರಾದ ಎನ್ ಎಸ್ ಬೋಸರಾಜು, ನವೋದಯ ಶಿಕ್ಷಣ ಸಂಸ್ಥೆ ರಾಜ್ಯದಲ್ಲಿಯೇ ಒಂದು ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿದೆ.ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಿಸಿ ಈ ಭಾಗಕ್ಕೆ ಮತ್ತೊಂದು ಕೊಡುಗೆ ನೀಡಿದ್ದಾರೆ.
ಈ ಸಂಸ್ಥೆಯಿಂದ ಜಿಲ್ಲೆಗೆ ಅನುಕೂಲವಾಗಲಿದೆ. ಎಸ್.ಆರ್ ರೆಡ್ಡಿ ಅವರು ಕಲ್ಯಾಣ ಮಂಟಪ ನಿರ್ಮಿಸಿ ಜನರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಈ ಕ್ರೀಡಾಂಗಣವನ್ನು ರಾಜ್ಯದ ಮುಖ್ಯಮಂತ್ರಿ ಅವರಿಂದ ಲೋಕಾರ್ಪಣೆ ಮಾಡಿಸುವರ ಆಶಯಕ್ಕೆ ಸಂಪೂರ್ಣವಾಗಿ ಸಹಕರಿಸಿ ಮುಖ್ಯಮಂತ್ರಿಗಳನ್ನು ಕಾರ್ಯಕ್ರಮಕ್ಕೆ ಕಾರ್ಯಕರ್ತರ ಪ್ರಯತ್ನ ನಡೆದಿದೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಭೂಮನಂದ ಹದ್ದಿನಾಳ ಕುಟುಂಬಕ್ಕೆ ಜಿಲ್ಲಾಧಿಕಾರಿ ಭೇಟಿ; ಸಾಂತ್ವನ, ಆಹಾರ ಕಿಟ್ ವಿತರಣೆ
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಾ ನಿರ್ದೇಶಕ ಡಾ.ಅಮೃತ ರೆಡ್ಡಿ, ರಿಜಿಸ್ಟ್ರಾರ್ ಡಾ.ಟಿ ಶ್ರೀನಿವಾಸ್, ಸುರೇಶ್, ವಿಜಯಕುಮಾರ್, ದೊಡ್ಡಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




