“ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಯಾವುದೇ ಹಿಂದು ಭಾವಿಸಿದರೆ, ಅವರು ಹಿಂದುವಾಗಿಯೇ ಉಳಿಯುವುದಿಲ್ಲ” ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಆರ್ಎಸ್ಎಸ್ನ ಶತಮಾನೋತ್ಸವದ ಅಂಗವಾಗಿ ಅಮೆರಿಕದ ನ್ಯೂಯಾರ್ಕ್ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಗವತ್ ಮಾತನಾಡಿದ್ದಾರೆ. “ತಮ್ಮನ್ನು ಹಿಂದು ಎಂದು ಕರೆದುಕೊಳ್ಳಲು ಬಯಸುವವರು ಎಲ್ಲ ಮಾರ್ಗಗಳೂ ಕೊನೆಗೆ ಒಂದೇ ಸತ್ಯದ ಕಡೆಗೆ ಕರೆದೊಯ್ಯುತ್ತವೆ ಎಂಬ ನಂಬಿಕೆಯನ್ನು ಹೊಂದಿರಬೇಕು. ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಘನತೆ ಇದೆ. ಮನುಷ್ಯರ ನಡುವೆ ಮೂಲಭೂತ ವ್ಯತ್ಯಾಸವಿಲ್ಲ ಎಂಬುದು ಭಾರತೀಯ ಚಿಂತನೆಯ ಮೂಲ ಅಂಶ” ಎಂದಿದ್ದಾರೆ.
ತಾವು ಹಿಂದೆ ನೀಡಿದ್ದ ಉಪನ್ಯಾಸವೊಂದನ್ನು ನೆನಪಿಸಿಕೊಂಡ ಭಾಗವತ್, “ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲವು ಮುಸ್ಲಿಮರು ಆರ್ಎಸ್ಎಸ್ ಮತ್ತು ‘ಹಿಂದು ರಾಷ್ಟ್ರ’ದ ಬಗ್ಗೆ ಪ್ರಶ್ನಿಸಿದ್ದರು. ‘ನೀವು ಹಿಂದು ಸಂಘಟನೆ, ಹಿಂದು ರಾಷ್ಟ್ರವೆಂದು ಹೇಳುತ್ತೀರಿ. ಹಾಗಾದರೆ ನಮ್ಮಂತಹ ಮುಸ್ಲಿಮರಿಗೆ ಏನಾಗುತ್ತದೆ? ನಮ್ಮನ್ನು ದೇಶದಿಂದ ಹೊರಹಾಕುತ್ತೀರಾ’ ಎಂಬುದು ಅವರ ಪ್ರಶ್ನೆಯಾಗಿತ್ತು. ನಾನು ‘ಇಲ್ಲ’ ಎಂದು ಹೇಳಿದ್ದೆ. ಅದು ಹಿಂದುತ್ವವಲ್ಲ. ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಯಾವ ಹಿಂದು ಭಾವಿಸಿದರೂ ಆತ ಹಿಂದುವಾಗಿಯೇ ಉಳಿಯುವುದಿಲ್ಲ” ಎಂದು ಹೇಳಿದ್ದಾರೆ.
“ನಾನು ಧಾರ್ಮಿಕ ಪಂಡಿತರಾಗಲೀ ಧಾರ್ಮಿಕ ಅಧಿಕಾರಿಯಾಗಲೀ ಅಲ್ಲ. ಧರ್ಮಗಳು ವಿಭಿನ್ನವಾಗಿರಬಹುದು. ಆದರೆ, ಮಾನವೀಯತೆ ಒಂದೇ. ಸತ್ಯವೂ ಒಂದೇ. ಆ ಸತ್ಯವನ್ನು ವಿವಿಧ ಜನರು ವಿವಿಧ ರೀತಿಯಲ್ಲಿ ವಿವರಿಸಬಹುದು. ಮಾನವೀಯತೆ ಆ ಸತ್ಯದ ಅಭಿವ್ಯಕ್ತಿ” ಎಂದು ಭಾಗವತ್ ಹೇಳಿದ್ದಾರೆ.
“ಜಗತ್ತಿನಲ್ಲಿ ಹಲವು ಧರ್ಮಗಳಿದ್ದು, ಇಂದಿನ ಸಂದರ್ಭದಲ್ಲಿ ಧರ್ಮವನ್ನು ಬಹುಮಟ್ಟಿಗೆ ಆಚರಣೆಗಳು ಮತ್ತು ಸಂಪ್ರದಾಯಗಳ ಮೂಲಕ ಗುರುತಿಸಲಾಗುತ್ತದೆ. ದೈವತ್ವದ ಕಡೆಗೆ ಸಾಗುವ ಮಾರ್ಗದಲ್ಲಿ ಆಚರಣೆಗಳಿಗೂ ಒಂದು ಶಿಸ್ತು ಮತ್ತು ಸ್ಥಾನವಿದೆ. ಧರ್ಮಗಳ ನಡುವೆ ಆಚರಣೆಗಳು ವಿಭಿನ್ನವಾಗಿರಬಹುದು. ಆದರೆ, ಅವೆಲ್ಲವೂ ಮಾನವನನ್ನು ಉನ್ನತ ಮೌಲ್ಯಗಳ ಕಡೆಗೆ ಕರೆದೊಯ್ಯುವ ಮಾರ್ಗಗಳಾಗಿವೆ” ಎಂದಿದ್ದಾರೆ.
Several RW supporters seem furious and upset with RSS chief Mohan Bhagwat’s remarks during his New York visit: “If any Hindu thinks that there should be no Muslim in Bharat, he will not remain Hindu. If you call yourself Hindu, you must believe all paths are leading to the same… pic.twitter.com/R8vKbJJWV9
— Mohammed Zubair (@zoo_bear) August 29, 2026
ಮೋಹನ್ ಭಾಗವತ್ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹಲವರು ಭಾಗವತ್ ಹೇಳಿಕೆಗಳನ್ನು ಹಂಚಿಕೊಂಡು ಮೋದಿ ಭಕ್ತರು ಮತ್ತು ಹಿಂದುತ್ವವಾದಿ ಕೋಮು ಕಾರ್ಯಕರ್ತರನ್ನು ಟ್ರೋಲ್ ಮಾಡುತ್ತಿದ್ದಾರೆ. “ಭಾರತದಲ್ಲಿ ಆರ್ಎಸ್ಎಸ್ – ನಮಗೆ ಹಿಂದು ರಾಷ್ಟ್ರ ಬೇಕು ಅನ್ನುತ್ತದೆ. ಆದರೆ, ಅಮೆರಿಕದಲ್ಲಿ’ಭಾರತದಲ್ಲಿ ಮುಸ್ಲಿಂ ಇರಬಾರದು ಎಂದು ಯಾವುದೇ ಹಿಂದು ಭಾವಿಸಿದರೆ, ಅವರು ಹಿಂದುವೇ ಅಲ್ಲ’ ಎನ್ನುತ್ತದೆ. ಸಂಘದ ವಿಶೇಷ ಏಜೆಂಟ್ ಮೋಹನ್ ಭಾಗವತ್ ಚೆನ್ನಾಗಿ ಆಟ ಆಡುತ್ತಿದ್ದಾರೆ” ಎಂದು ಹಲವರು ಟೀಕಿಸಿದ್ದಾರೆ.
ವಿಡಿಯೋವನ್ನು ಹಂಚಿಕೊಂಡಿರುವ ಆಲ್ಟ್ನ್ಯೂಸ್ ಸಹಸಂಸ್ಥಾಪಕ ಮೊಹಮದ್ ಝುಬೇರ್, “ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ನ್ಯೂಯಾರ್ಕ್ ಭೇಟಿಯ ಸಂದರ್ಭದಲ್ಲಿ ಹಲವಾರು ಆರ್ಡಬ್ಲ್ಯೂ ಬೆಂಬಲಿಗರು ಕೋಪಗೊಂಡಿದ್ದಾರೆ. ಅಸಮಾಧಾನಗೊಂಡಿದ್ದಾರೆ. ಭಾಗವತ್ ಮಾತಿಗೆ ಭಾರತೀಯ ಸಂಘದ ಕಾರ್ಯಕರ್ತರು ಗಾಬರಿಯಾಗಬೇಕಿಲ್ಲ. ದ್ರೋಹವಾಗಿದೆ ಎಂದು ಭಾವಿಸಬೇಕಾಗಿಲ್ಲ. ಇಂತಹ ಭಾಷಣಗಳೆಲ್ಲವೂ ಕೇವಲ ಪಾಶ್ಚಿಮಾತ್ಯ ಅಂತರಾಷ್ಟ್ರೀಯ ಬಳಕೆಗಾಗಿ ಮಾತ್ರ. ನೀವು ನೋಡುತ್ತಿರುವ ದೇಶೀಯ ಮಾರುಕಟ್ಟೆಗಾಗಿ ಅಲ್ಲ” ಎಂದು ವ್ಯಂಗ್ಯವಾಡಿದ್ದಾರೆ.



