- ಹತ್ಯೆ ಮಾಡುವ ಹುಚ್ಚುತನದ ಕಡಿವಾಣಕ್ಕೆ ಆಗ್ರಹ
- ಇದ್ರೀಸ್ ಪಾಷಾ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯಲು ಬಿಜೆಪಿ ನೇತೃತ್ವದಲ್ಲಿ ರಾಜ್ಯ ಸರ್ಕಾರವೇ ಕಾರಣ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, “ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತರು ಎಂದು ಹೇಳಿಕೊಂಡು ಅಮಾಯಕನ ಹತ್ಯೆ ಪ್ರಕರಣಕ್ಕೆ ಕಾರಣರಾಗಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ, ಸಮಾಜದ ಶಾಂತಿಗೆ ಮಾರಕ ಆಗುವಂತಹ ಇಂಥ ದುಷ್ಟರ ಹೆಡೆಮುರಿ ಕಟ್ಟಬೇಕು” ಎಂದು ಆಗ್ರಹಿಸಿದ್ದಾರೆ.
“ಕನಕಪುರದ ಬಳಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ತಡೆದು ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರು ಗೂಂಡಾ ವರ್ತನೆ ತೋರಿ ಅಮಾಯಕ ಇದ್ರೀಸ್ ಪಾಷಾ ಸಾವಿಗೆ ಕಾರಣರಾಗಿದ್ದಾರೆ. ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆ, ಕೊಲೆ ಮಾಡುವ ಹುಚ್ಚುತನಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದಕ್ಕೆ ನಿತ್ಯ ನಡೆಯುತ್ತಿರುವ ಇಂಥಹ ಘಟನೆಗಳೇ ಸಾಕ್ಷಿ” ಎಂದು ಆರೋಪಿಸಿದ್ದಾರೆ.
“ಇದ್ರೀಸ್ ಹತ್ಯೆ ಪ್ರಕರಣಕ್ಕೆ ಕಾರಣವಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕು. ರಾಜ್ಯದಲ್ಲಿ ಇಂಥಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು” ಎಂದು ಹುಸೇನ್ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಮನಗರ | ಗೋ ರಕ್ಷಣೆಯ ಹೆಸರಿನಲ್ಲಿ ಮುಸ್ಲಿಂ ವ್ಯಾಪಾರಿಯ ಕೊಲೆ; ಪುನೀತ್ ಕೆರೆಹಳ್ಳಿ ತಂಡದ ಮೇಲೆ ಎಫ್‌ಐಆರ್
“ಕಾನೂನು ವ್ಯವಸ್ಥೆ ಈಗ ಚುನಾವಣಾ ಅಧಿಕಾರಿ ಅವರ ಕೈಯಲ್ಲಿದೆ. ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಸಾಮಾನ್ಯ ಜನರಲ್ಲಿ ಆತಂಕ ಮೂಡಿಸಿದೆ. ಹಾಗಾಗಿ ಚುನಾವಣಾ ಆಯೋಗ ಇದರಲ್ಲಿ ಹಸ್ತಕ್ಷೇಪ ಮಾಡಿ ಕೂಡಲೇ ಪೊಲೀಸ್ ಇಲಾಖೆಗೆ ಆದೇಶ ನೀಡಬೇಕು. ಇಂತಹ ಘಟನೆಗಳು ಮುಂದೆ ನಡೆಯದಂತೆ ಜನರಲ್ಲಿ ಭರವಸೆ ಮೂಡಿಸಬೇಕು” ಎಂದು ಒತ್ತಾಯಿಸಿದರು.