ಶಾಸಕ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಅವರು ತಮ್ಮ 64 ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೃಹತ್ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿನ ಶಾಸಕರ ಕಾರ್ಯಾಲಯದ ಮುಂದೆ ಅದ್ದೂರಿಯಾಗಿ ಆಯೋಜನೆ ಮಾಡಿದ್ದ ಅಭಿಮಾನಿಗಳು ರಕ್ತದಾನ ಶಿಬಿರವನ್ನು ಆಯೋಜಿಸಿ ನೂರಾರು ಅಭಿಮಾನಿಗಳು ರಕ್ತದಾನ ಮಾಡಿದರು.
ಬೆಳಿಗ್ಗೆಯಿಂದಲೇ ಕ್ಷೇತ್ರದ ಸಾವಿರಾರು ಅಭಿಮಾನಿಗಳು ಅವರ ನಿವಾಸ, ಗೃಹ ಕಚೇರಿ, ಮಣ್ಣಮ್ಮ ದೇವಾಲಯ, ಸೇರ್ವೇಗಾರನ ಪಾಳ್ಯ, ಕಳ್ಳಿಪಾಳ್ಯ, ಸಿಂಗೊನಹಳ್ಳಿ ಹೀಗೆ ಗುಬ್ಬಿ ಮಾರ್ಗ ಮಧ್ಯೆ ಅಭಿಮಾನಿಗಳ ಶುಭಾಷಯದ ಮಹಾಪೂರ ಹರಿಯಿತು.
ಪಟ್ಟಣದ ಕೆಎಂಎಫ್ ಪಶು ಆಹಾರ ಘಟಕ, ಪ್ರವಾಸಿ ಮಂದಿರ ಹಾಗೂ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕಾದಿದ್ದ ನೂರಾರು ಅಭಿಮಾನಿಗಳು ಹಾರ ಹಾಕಿ ಪೇಟ ಧರಿಸಿ ಅಭಿಮಾನ ವ್ಯಕ್ತ ಪಡಿಸಿದರು. ನಂತರ ಬೃಹತ್ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ನನ್ನ ಬೆಂಬಲಿಗರ ಅಭಿಮಾನಕ್ಕೆ ಮಾತು ಬರುತ್ತಿಲ್ಲ. ನನ್ನ ಕಾರ್ಯ ವೈಖರಿಗೆ ಮೆಚ್ಚಿದ ಮತದಾರರು ಐದು ಬಾರಿ ಗೆಲ್ಲಿಸಿ ಶಾಸಕನಾಗಿಸಿದ್ದಾರೆ. ಅವರ ಋಣಕ್ಕೆ ನಿರಂತರ ದೀನ ದಲಿತರ, ಬಡವರ ಪರ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ಹಿನ್ನಲೆ ನನ್ನ ಹುಟ್ಟುಹಬ್ಬಕ್ಕೆ ಸಾವಿರಾರು ಮಂದಿ ಶುಭ ಕೋರಿದ್ದಾರೆ. ನಾನು ಅವರಿಗೆ ಸದಾ ಋಣಿಯಾಗಿರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಾಸಕರ ಪುತ್ರ ಹಾಗೂ ನಟ ದುಷ್ಯಂತ್, ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯಮ್ಮ ಸೇರಿದಂತೆ ಗುಬ್ಬಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು .




