ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ದೇವಾಲಯದ ಗದ್ದುಗೆ ಭಾಗದ ಗರ್ಭಗುಡಿ ಪ್ರದೇಶಕ್ಕೆ ಸ್ವಾಮೀಜಿಯೊಬ್ಬರು ಪ್ರವೇಶ ಮಾಡಿದ ಕಾರಣ ಸೋಮವಾರ ಸಂಜೆ ದೇವಾಲಯವನ್ನು ಸ್ವಚ್ಛಗೊಳಿಸಲಾಗಿದೆ.
ಸೋಮವಾರ ಗದಗ ಕಡೆಯಿಂದ ಬಂದಿದ್ದ ಸ್ವಾಮೀಜಿಯೊಬ್ಬರು ಗರ್ಭಗುಡಿ ಪ್ರವೇಶಿಸಿದ್ದರು. ಇದಕ್ಕೆ ಭಕ್ತರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ದೇವಾಲಯದ ಆಡಳಿತಾಧಿಕಾರಿಗಳು ಹೋಮ ನಡೆಸಿದರು. ಹಾಗೂ ಎಡೆ ಸಮರ್ಪಣೆ ಮತ್ತು ಪೂಜಾ ವಿಧಿಗಳು ನಡೆದವು. ದೇವಾಲಯದ ಸಿದ್ದಲಿಂಗೇಶ್ವರ ಸ್ವಾಮಿ ಗದ್ದುಗೆಗೆ ಪೂಜೆ ಮಾಡಲು ಸರದಿ ಅರ್ಚಕರಿಗೆ ಮಾತ್ರ ಅವಕಾಶವಿದೆ.
ಸರದಿ ಅರ್ಚಕರು ಮತ್ತು ಆಗಮಿಕರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಭಕ್ತರ ಭಾವನೆಗೆ ಧಕ್ಕೆಯಾಗಿದೆ. ಸಂಬಂಧಪಟ್ಟ ಅರ್ಚಕರು ಮತ್ತು ಆಗಮಿಕರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಪ್ರತಿಕ್ರಿಯಿಸಿದ್ದಾರೆ




