ಇಲ್ಲಿನ ಸಾಕೇತ್ ಮೆಟ್ರೊ ನಿಲ್ದಾಣದ ಸಮೀಪ ಸಂಭವಿಸಿದ ಭೀಕರ ಕಟ್ಟಡ ಕುಸಿತದಲ್ಲಿ ಆರು ಮಂದಿ ಮೃತಪಟ್ಟು, 10 ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಕಟ್ಟಡವು ಏಕಾಏಕಿ ಕುಸಿದು ಬೀಳುವ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸದ್ಯ ಲಭ್ಯವಾಗಿರುವ ನಿಖರ ಮಾಹಿತಿಯ ಪ್ರಕಾರ, ದುರಂತದಲ್ಲಿ ಈವರೆಗೆ 6 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 10 ಜನರಿಗೆ ಗಾಯಗಳಾಗಿವೆ. ಕುಸಿದಿರುವ ಕಟ್ಟಡದ ಅವಶೇಷಗಳಡಿ ಮತ್ತಷ್ಟು ಜನರು ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ಮುಂದುವರಿದಿದೆ.
ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಹಾಗೂ ವಿಪತ್ತು ನಿರ್ವಹಣಾ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಘಟನೆಗೆ ನಿಖರ ಕಾರಣವೇನೆಂದು ಇನ್ನಷ್ಟೇ ತಿಳಿದುಬರಬೇಕಿದೆ. ಕಟ್ಟಡ ಕುಸಿಯುತ್ತಿರುವ ವಿಡಿಯೊ ದೃಶ್ಯಾವಳಿಗಳು ಘಟನೆಯ ತೀವ್ರತೆಯನ್ನು ಕಟ್ಟಿಕೊಡುತ್ತಿವೆ.




