ಕೇಂದ್ರ ಚುನಾವಣಾ ಆಯೋಗ ಜಾರಿಗೆ ತರಲು ಉದ್ದೇಶಿಸಿರುವ ಎಸ್ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ತುಮಕೂರು ಜಿಲ್ಲೆಯ ಪ್ರಗತಿಪರ ಮತ್ತು ಜನಪರ ಸಂಘಟನೆಗಳ ಪ್ರಜಾತಂತ್ರ ಸಂರಕ್ಷಣಾ ವೇದಿಕೆ ಮೇ 30ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
“ಸಂವಿಧಾನ ಪ್ರತಿಯೊಬ್ಬ ಭಾರತೀಯನಿಗೂ ನೀಡಿರುವ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಉದ್ದೇಶವನ್ನು ಚುನಾವಣಾ ಆಯೋಗ ಹೊಂದಿದೆ. ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಸಂವಿಧಾನ ವಿರೋಧಿ ಮತ್ತು ಪ್ರಜಾತಂತ್ರನ್ನು ಬುಡಮೇಲು ಮಾಡುವುದಕ್ಕಾಗಿ ಒಕ್ಕೂಟ ಎಸ್ಐಆರ್ ಪ್ರಕ್ರಿಯೆಯನ್ನು ವಿಶ್ಲೇಷಿಸಿದೆ” ಎಂದು ಪ್ರಜಾತಂತ್ರ ಸಂರಕ್ಷಣಾ ವೇದಿಕೆ ಆರೋಪಿಸಿತು.
“ನಮ್ಮ ದೇಶಕ್ಕೆ ನುಸುಳುಕೋರರು ಸೇರಿಕೊಂಡಿದ್ದಾರೆ, ಅವರನ್ನು ಹೊರಗಿಟ್ಟು ಮತದಾರರ ಪಟ್ಟಿಯನ್ನು ಶುದ್ಧೀಕರಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಮೇಲ್ನೋಟಕ್ಕೆ ಈ ಉದ್ದೇಶ ಸರಿಯಾಗಿ ಕಂಡರೂ, ಚುನಾವಣಾ ಆಯೋಗ ಹೊರಗಿಡುತ್ತಿರುವುದು ಈ ದೇಶದಲ್ಲಿ ಹುಟ್ಟಿ ಬೆಳೆದು ಬದುಕುತ್ತಿರುವ ದಲಿತರು, ಆದಿವಾಸಿಗಳು, ಬುಡಕಟ್ಟು ಜನರು, ಅಲ್ಪಸಂಖ್ಯಾತರು, ಮಹಿಳೆಯರು, ವಿಶೇಷವಾಗಿ ಎಲ್ಲ ಜಾತಿಯ ಬಡವರನ್ನು” ಎಂದು ಕಳವಳ ವ್ಯಕ್ತಪಡಿಸಿತು.
“ಮತದಾರರ ಪಟ್ಟಿಯಿಂದ ಹೊರ ಹೋಗುವ ಜನರಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ ಮತ್ತು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗುವುದು ಎಂಬುದನ್ನು ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ನೂತನವಾಗಿ ಆಯ್ಕೆಯಾಗಿರುವ ಸರ್ಕಾರಗಳು ಸಾಬೀತುಪಡಿಸಿವೆ” ಎಂದಿದೆ.
“ಎಸ್ಐಆರ್ ಪ್ರಕ್ರಿಯೆ ಈಗಾಗಲೇ 13 ರಾಜ್ಯಗಳಿಂದ ಸುಮಾರು 6.5 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಹೊರಹಾಕಿದೆ. ಮತದಾರರ ಪಟ್ಟಿಯಲ್ಲಿ ಕನ್ನಡದಿಂದ ಇಂಗ್ಲಿಷ್ಗೆ ಹೆಸರನ್ನು ಭಾಷಾಂತರಿಸುವಾಗ ಸ್ಪೆಲಿಂಗ್ ತಪ್ಪಾಗಿದ್ದರೆ ಅಥವಾ ಇನ್ಷಿಯಲ್ ಹಿಂದೆ ಮುಂದೆ ಆಗಿದ್ದರೆ, ಅದಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಿಸಿದ ಚುನಾವಣಾ ಆಯೋಗದ ಅಧಿಕಾರಿಗಳೇ ಕಾರಣ” ಎಂದು ಆರೋಪಿಸಿತು.
“ಚುನಾವಣಾ ಆಯೋಗದ ಅಧಿಕಾರಿಗಳು ಮಾಡಿದ ತಪ್ಪಿಗೆ ಕೋಟ್ಯಂತರ ಜನರ ಬದುಕು ಅತಂತ್ರವಾಗಿದೆ. ಆದುದರಿಂದ ಜನರ ಬದುಕನ್ನು ಕಿತ್ತುಕೊಳ್ಳುವ ಎಸ್ಐಆರ್ ಪ್ರಕ್ರಿಯೆಯನ್ನು ನಾವು ಒಪ್ಪುವುದಿಲ್ಲ. ಎಸ್ಐಆರ್ ರದ್ದಾಗಬೇಕು ಎಂಬುದು ನಮ್ಮ ಪ್ರತಿಭಟನೆಯ ಹಕ್ಕೊತ್ತಾಯ. ಇದು ಬಿಹಾರ ಅಲ್ಲ, ಪಶ್ಚಿಮ ಬಂಗಾಳ ಅಲ್ಲ, ತಮಿಳುನಾಡು ಅಲ್ಲ. ಇದು ಕರ್ನಾಟಕ. ಎಸ್ಐಆರ್ ಅನ್ನು ಕರ್ನಾಟಕ ಒಪ್ಪುವುದಿಲ್ಲ ಎಂಬ ಘೋಷಣೆಗಳೊಂದಿಗೆ ಎಲ್ಲ ಪ್ರಗತಿಪರ ಸಂಘಟನೆಗಳು ಮತ್ತು ವ್ಯಕ್ತಿಗಳು ಮೇ 30ರಂದು ಬೆಳಿಗ್ಗೆ 10.30 ರಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆಯನ್ನು ನಡೆಯಲಿವೆ” ಎಂದು ನಗರದ ಜನ ಚಳವಳಿ ಕೇಂದ್ರದಲ್ಲಿ ನಡೆದ ಸಭೆಯು ತೀರ್ಮಾನಿಸಿದೆ.
ಈ ಸುದ್ದಿ ಓದಿದ್ದೀರಾ? ಕೃಷಿ ವೆಚ್ಚ, ತೈಲ ಏರಿಕೆ ವಿರುದ್ಧ ರೈತ ಸಂಘದ ಆಕ್ರೋಶ: ಹುಣಸೂರಿನಲ್ಲಿ ಧರಣಿ
ಪ್ರಗತಿಪರ ಚಿಂತಕ ಕೆ ದೊರೆರಾಜುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಪರಿಸರವಾದಿ ಹಾಗೂ ತುಮಕೂರು ವಿಜ್ಞಾನ ಕೇಂದ್ರದ ಸಿ. ಯತಿರಾಜು, ಕಸಾಪ ನಿ. ಪೂ. ಅಧ್ಯಕ್ಷರು ಹಾಗೂ ಸಾಹಿತಿ ಬಾ.ಹ.ರಮಾ ಕುಮಾರಿ, ಎದ್ದೇಳು ಕರ್ನಾಟಕದ ಜಿಲ್ಲಾ ಸಂಚಾಲಕಿ ಎನ್ ಇಂದಿರಮ್ಮ, ಕರ್ನಾಟಕ ಜನಶಕ್ತಿಯ ರಾಜ್ಯ ಸಮಿತಿಯ ರಾಮಕೃಷ್ಣಪ್ಪ, ಔಷಧಿ ವ್ಯಾಪಾರಿ ಸಂಘದ ಅಧ್ಯಕ್ಷ ಪಂಡಿತ್ ಜವಾಹರ್, ಸಾವಿತ್ರಿ ಬಾಯಿ ಫುಲೆ ಸಂಘಟನೆಯ ಅನುಪಮ, ಜಮಾತ್ ಇಸ್ಲಾಂ ಹಿಂದ್ ಸಂಘಟನೆಯ ಆನ್ಸ್ರಾರ್ ಅಹಮದ್, ಸ್ಲಂ ಜನಾಂದೋಲನದ ಅರುಣ್, SUCI ಕಲ್ಯಾಣಿ,
SDPIನ ಅಧ್ಯಕ್ಷ ಶಫಿ ಉಲ್ಲಾ ಖಾನ್, CITU ಮುಜೀಬ್, ಸುಬ್ರಹ್ಮಣ್ಯ, ಜಾಗೃತ ಕರ್ನಾಟಕದ ಮಂಜುಳಾ, ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಪುಟ್ಟ ನರಸಯ್ಯ ಸೇರಿದಂತೆ ಹಲವು ಜನಪರ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಇದ್ದರು.




