ಯುವಜನರು ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿದರೆ ಯಶಸ್ಸು ಖಚಿತ. ಉದ್ಯೋಗಕ್ಕಾಗಿ ಅಲೆದಾಡುವ ಯುವಜನರ ಬಳಿಗೇ ಉದ್ಯೋಗಾವಕಾಶಗಳು ಬರುವಂತಹ ವಾತಾವರಣ ಇಂದು ನಿರ್ಮಾಣವಾಗುತ್ತಿದೆ ಎಂದು ಎಂ.ಆರ್.ಜಿ. ಗ್ರೂಪ್ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ಹೇಳಿದರು.
ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ನ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ವತಿಯಿಂದ, ನಿಟ್ಟೆಯ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಯೋಗದಲ್ಲಿ ಹಾಗೂ ಎಂ.ಆರ್.ಜಿ. ಗ್ರೂಪ್‌ನ ಪ್ರಾಯೋಜಕತ್ವದಲ್ಲಿ ಶುಕ್ರವಾರ ಕುಂತಳ ನಗರದ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಸೆಂಟರ್ ಮತ್ತು ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ಆವರಣದಲ್ಲಿ ಆಯೋಜಿಸಿದ್ದ 5ನೇ ಬೃಹತ್ ಉದ್ಯೋಗ ಮೇಳ ಮತ್ತು ಸ್ಟಡಿ ಅಬ್ರಾಡ್ ಎಕ್ಸ್‌ಪೋ-2026 ಉದ್ಘಾಟಿಸಿ ಅವರು ಮಾತನಾಡಿದರು.

ಹುಟ್ಟೂರು, ನೆಲ, ಜಲ ಹಾಗೂ ಮಣ್ಣಿನ ನೆನಪನ್ನು ಎಂದಿಗೂ ಮರೆಯಬಾರದು. ಈ ಭಾವನೆಯಿಂದಲೇ ತಮ್ಮಿಂದ ಸಾಧ್ಯವಾದಷ್ಟು ಸಮಾಜಮುಖಿ ಕಾರ್ಯಗಳಿಗೆ ನೆರವು ನೀಡುತ್ತಾ ಬಂದಿದ್ದೇನೆ. ಕುಂತಳ ನಗರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಇದೇ ಪರಿಸರದಲ್ಲಿ ಉದ್ಯೋಗ ಮೇಳ ಆಯೋಜಿಸಿರುವುದು ಸಂತಸದ ವಿಚಾರವಾಗಿದೆ ಎಂದರು.
ತಾವೂ ಒಂದು ಕಾಲದಲ್ಲಿ ಉದ್ಯೋಗ ಅರಸಿಕೊಂಡು ಹೋದವರು. ಆದರೆ, ಇಂದಿನ ಯುವಜನರು ಅದೃಷ್ಟವಂತರು. ಉದ್ಯೋಗ ಹುಡುಕಿಕೊಂಡು ಹೋಗುವ ಬದಲು ಉದ್ಯೋಗಾವಕಾಶಗಳೇ ಅವರ ಬಳಿಗೆ ಬರುತ್ತಿವೆ. ಯುವಜನರು ತಮ್ಮ ಗುರಿಯನ್ನು ಸ್ಪಷ್ಟಪಡಿಸಿಕೊಂಡು ನಿರಂತರ ಪರಿಶ್ರಮಪಟ್ಟರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಹೇಳಿದರು.

ದೇಶ-ವಿದೇಶಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಉದ್ಯೋಗಕ್ಕಾಗಿ ಬೇರೆಡೆಗೆ ತೆರಳುವ ಪರಿಸ್ಥಿತಿ ಬದಲಾಗಬೇಕು. ಜಿಲ್ಲೆಯಲ್ಲಿಯೇ ಅವರಿಗೆ ಸೂಕ್ತ ಉದ್ಯೋಗಾವಕಾಶಗಳನ್ನು ಕಲ್ಪಿಸಿ, ಇಲ್ಲಿಯೇ ನೆಲೆಸುವಂತೆ ಮಾಡುವ ಪ್ರಯತ್ನಗಳು ನಡೆಯಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಎನ್. ವಿಶಾಲ್ ಹೆಗ್ಡೆ ಅವರು ಸ್ಟಡಿ ಅಬ್ರಾಡ್ ಎಕ್ಸ್‌ಪೋ-2026 ಉದ್ಘಾಟಿಸಿದರು. ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅವರು ‘ಕೌಶಲ್ಯ ಸ್ಕಿಲ್ಸ್-2026’ ಬುಲೆಟಿನ್ ಬಿಡುಗಡೆಗೊಳಿಸಿದರು.

ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಕೆ. ಜಯಪ್ರಕಾಶ್ ಹೆಗ್ಡೆ, ಪ್ರಮೋದ್ ಮಧ್ವರಾಜ್, ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಯೂಂಕರ್, ಹಿರಿಯ ವಕೀಲ ಮಟ್ಟಾರು ರತ್ನಾಕರ ಹೆಗ್ಡೆ, ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್, ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಉದ್ಯಮಿಗಳಾದ ಮುನಿಯಾಲು ಉದಯಕುಮಾರ್ ಶೆಟ್ಟಿ, ವಿಜಯ ಹೆಗ್ಡೆ, ಕಾರ್ತಿಕ್ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಡಾ. ಎಚ್.ಬಿ. ಶೆಟ್ಟಿ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಐಕಳ, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಟ್ರಸ್ಟ್‌ನ ಕೋಶಾಧಿಕಾರಿ ವಿಜಿತ್ ಶೆಟ್ಟಿ ಹಾಗೂ ಟ್ರಸ್ಟಿ ಪದ್ಮನಾಭ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.





